ಕನ್ನಡಪ್ರಭ ವಾರ್ತೆ ಬೆಂಗಳೂರು

ಸ್ಥಳೀಯ ಮುಖಂಡರ ನಡುವಿನ ಬಗೆಹರಿಯಲಾಗದ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಿ ಭರ್ಜರಿ ಪ್ರಚಾರ ನಡೆಸಿದರೂ ಪ್ರಮುಖ ಪ್ರತಿಪಕ್ಷ ಬಿಜೆಪಿಗೆ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಗೆಲುವು ಸಾಧಿಸಲಾಗಲಿಲ್ಲ.

ಬಾಗಲಕೋಟೆ ಕ್ಷೇತ್ರದ ಬಗ್ಗೆ ಹೆಚ್ಚಿನ ನಿರೀಕ್ಷೆ ಇರದಿದ್ದರೂ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿನ ಬಿಕ್ಕಟ್ಟಿನ ಪರಿಣಾಮ ದಾವಣಗೆರೆ ದಕ್ಷಿಣ ಕ್ಷೇತ್ರದ ಬಗ್ಗೆ ರಾಜ್ಯ ಬಿಜೆಪಿ ನಾಯಕರಲ್ಲಿ ತೀವ್ರ ನಿರೀಕ್ಷೆಯಿತ್ತು. ಕಡಿಮೆ ಮತಗಳ ಅಂತರದಲ್ಲಾದರೂ ಗೆಲ್ಲುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸುತ್ತಿದ್ದರು. ಆದರೆ, ಅಂತಿಮವಾಗಿ ಆ ನಿರೀಕ್ಷೆಯೂ ಹುಸಿಯಾಗಿದೆ.

ಒಂದರಲ್ಲೂ ಗೆಲ್ಲಲಿಲ್ಲ:

ಹಾಗೆ ನೋಡಿದರೆ ಕಳೆದ ಮೂರು ವರ್ಷಗಳಲ್ಲಿ ಆರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನಡೆದಿದೆ. ಸುರಪುರ, ಶಿಗ್ಗಾವಿ, ಚನ್ನಪಟ್ಟಣ, ಸಂಡೂರು, ಇದೀಗ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ಪೈಕಿ ಬಿಜೆಪಿಗೆ ಒಂದರಲ್ಲೂ ಗೆಲ್ಲಲು ಸಾಧ್ಯವಾಗಿಲ್ಲ. ಈ ಪೈಕಿ ಚನ್ನಪಟ್ಟಣ ಕ್ಷೇತ್ರದಲ್ಲಿ ಬಿಜೆಪಿ ಸ್ಪರ್ಧಿಸಿರಲಿಲ್ಲ. ಮಿತ್ರ ಪಕ್ಷ ಜೆಡಿಎಸ್‌ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು.ಇವೆಲ್ಲವೂ ಬಿ.ವೈ.ವಿಜಯೇಂದ್ರ ಅವರು ಪಕ್ಷದ ರಾಜ್ಯಾಧ್ಯಕ್ಷರಾದ ಬಳಿಕ ನಡೆದ ಉಪಚುನಾವಣೆಗಳು. ಉಪಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಿ ತೀವ್ರ ಪ್ರಚಾರ ನಡೆಸಿದರೂ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಅಲೆ ಎದುರು ಗೆಲುವು ಪ್ರಯಾಸದಾಯಕವಾಗಿಯೇ ಪರಿಣಮಿಸಿದೆ.ಪ್ರಸಕ್ತ ಉಪಚುನಾವಣೆ ಘೋಷಣೆಯಾಗುವ ಮೊದಲು ಮತ್ತು ಘೋಷಣೆಯಾದ ಬೆನ್ನಲ್ಲೇ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಕ್ಷೇತ್ರಗಳಲ್ಲಿನ ಸ್ಥಳೀಯ ಮುಖಂಡರ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ವಿಜಯೇಂದ್ರ ಮತ್ತಿತರ ನಾಯಕರು ಪಟ್ಟುಹಿಡಿದು ಮಾತುಕತೆ, ಸಂಧಾನ ಪ್ರಯತ್ನದ ಮೂಲಕ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ನಡೆಸಿ ಸಫಲರಾದರು. ಅದರ ಪರಿಣಾಮ ಅಭ್ಯರ್ಥಿಗಳ ಆಯ್ಕೆಯೂ ಅಷ್ಟಾಗಿ ಗೊಂದಲಕ್ಕೀಡಾಗದೆ ಸುಸೂತ್ರವಾಗಿ ನಡೆಯಿತು. ಒಂದು ವೇಳೆ ಈ ಪ್ರಯತ್ನ ಆಗದೇ ಇದ್ದಲ್ಲಿ ಇಷ್ಟು ಪೈಪೋಟಿ ನೀಡಲು ಆಗುತ್ತಿರಲಿಲ್ಲ. ಕಾಂಗ್ರೆಸ್ ಅಭ್ಯರ್ಥಿಗಳಿಗೆ ಗೆಲುವು ಸುಲ‍ಭವಾಗುತ್ತಿತ್ತು.


ಒಡಕಿಲ್ಲದೆ ಶ್ರಮ:

ಚುನಾವಣೆಯಲ್ಲಿ ಎಲ್ಲ ಸ್ಥಳೀಯ ಮುಖಂಡರೂ ತಮ್ಮ ಶ್ರಮ ಹಾಕಿ ಪ್ರಚಾರ ಮಾಡಿದರು. ಎಲ್ಲಿಯೂ ಒಡಕು ಹೊರಹಾಕಲಿಲ್ಲ. ರಾಜ್ಯ ನಾಯಕತ್ವವೂ ಎರಡು ಕ್ಷೇತ್ರಗಳ ಪ್ರಚಾರವನ್ನು ವ್ಯವಸ್ಥಿತವಾಗಿ ರೂಪಿಸಿತು. ತಂಡಗಳನ್ನು ಮಾಡಿ ಸತತ ಪ್ರಚಾರವನ್ನೂ ಕೈಗೊಂಡರು. ರಾಜ್ಯದ ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಮತದಾರರಿಗೆ ತಲುಪಿಸುವ ಪ್ರಯತ್ನ ಮಾಡಿದರು. ಇದರ ಪರಿಣಾಮವೇ ಎರಡೂ ಕ್ಷೇತ್ರಗಳನ್ನು ಅಲ್ಲದಿದ್ದರೂ ಕಾಂಗ್ರೆಸ್ಸಿನ ಭಿನ್ನಮತದಲ್ಲಿ ಬೆಂದಿದ್ದ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಾದರೂ ಗೆಲುವು ಸಾಧಿಸಬಹುದು ಎಂಬ ನಿರೀಕ್ಷೆ ಮೊಳಕೆಯೊಡೆದಿತ್ತು. ಅಂತಿಮವಾಗಿ ಅದು ಕೂಡ ಹುಸಿಯಾಗಿ ಎರಡರಲ್ಲೂ ಸೋಲು ಅನುಭವಿಸಬೇಕಾಯಿತು.ಗೆಲ್ಲದಿದ್ರೂ ಜನರ ವಿಶ್ವಾಸ ಗಳಿಸಲು ಯಶಸ್ವಿ:

ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಗೆಲುವಿನ ಗೆರೆ ದಾಟದಿದ್ದರೂ ಗಣನೀಯ ಪ್ರಮಾಣದಲ್ಲಿ ಜನರ ವಿಶ್ವಾಸ ಪಡೆಯಲು ಯಶಸ್ವಿಯಾಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಎರಡೂ ಕ್ಷೇತ್ರಗಳಲ್ಲಿ ನಮ್ಮ ಪಕ್ಷದ ಕಾರ್ಯಕರ್ತರ ಅವಿರತ ಪರಿಶ್ರಮ ಹಾಗೂ ದಿಟ್ಟ ಹೋರಾಟದ ಫಲವಾಗಿ ಪಕ್ಷದ ಅಭ್ಯರ್ಥಿಗಳು ಗೆಲುವಿನ ಸಮೀಪ ಬಂದಿದ್ದಾರೆ. ಇದು ಮುಂದಿನ ದಿನಗಳ ಗೆಲುವಿಗೆ ಮೆಟ್ಟಿಲಾಗಲಿದೆ. ನಮ್ಮ ಕಾರ್ಯಕರ್ತರ ಪ್ರಾಮಾಣಿಕ ಪರಿಶ್ರಮ ನಿಷ್ಫಲವಾಗುವುದಿಲ್ಲ, ಮುಂಬರುವ ಚುನಾವಣೆಯಲ್ಲಿ ಜನಾಶೀರ್ವಾದ ಪಡೆಯುವ ನಿಟ್ಟಿನಲ್ಲಿ ನಮ್ಮ ನಿರಂತರ ಪ್ರಯತ್ನಗಳನ್ನು ಮುಂದುವರಿಸೋಣ ಎಂದರು.ಎರಡೂ ಕ್ಷೇತ್ರಗಳಲ್ಲಿ ಯಾವುದೇ ಸಣ್ಣ ಒಡಕಿಲ್ಲದೇ, ಸ್ಥಳೀಯ ಮುಖಂಡರು ತಮ್ಮ ಸಮಸ್ಯೆಗಳನ್ನು ಬದಿಗಿಟ್ಟು ಪಕ್ಷದ ಅಭ್ಯರ್ಥಿ ಪರವಾಗಿ ಒಟ್ಟಾಗಿ, ಒಂದಾಗಿ ಎಲ್ಲರೂ ಶ್ರಮ ಹಾಕಿದ್ದಾರೆ. ಪಕ್ಷದ ನಾಯಕರು ಸಂಘಟಿತರಾಗಿ ಶ್ರಮ ಹಾಕಿದ್ದಾರೆ. ನಾವು ಕೂಡ ಕೈಜೋಡಿಸಿದ್ದೇವೆ. ಕಾರ್ಯಕರ್ತರೂ ಹಗಲೂ ರಾತ್ರಿ ಶ್ರಮ ಹಾಕಿದ್ದಾರೆ ಎಂದು ತಿಳಿಸಿದರು.ಈ ಹಿನ್ನಡೆಯಿಂದ ಧೃತಿಗೆಡುವ ಅವಶ್ಯಕತೆಯಿಲ್ಲ. ನಮ್ಮ ಅಭ್ಯರ್ಥಿಗಳೂ ಸೇರಿದಂತೆ ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದ ಎಲ್ಲಾ ನಮ್ಮ ಕಾರ್ಯಕರ್ತರು ಹಾಗೂ ಪ್ರಮುಖರೆಲ್ಲರಿಗೂ ಕೃತಜ್ಞತೆಗಳನ್ನು ಸಲ್ಲಿಸುವ ಜೊತೆಗೆ ಪಕ್ಷ ಎಂದೆಂದಿಗೂ ನಿಮ್ಮೊಂದಿಗೆ ನಿಂತಿದೆ. ಪಕ್ಷವನ್ನು ಬೆಂಬಲಿಸಿ ಆಶೀರ್ವದಿಸಿದ ಎರಡೂ ಕ್ಷೇತ್ರಗಳ ಸಮಸ್ತ ಮತದಾರ ಬಂಧುಗಳಿಗೂ ಕೃತಜ್ಞತಾಪೂರ್ವಕ ವಂದನೆಗಳು. ನಿಮ್ಮ ನಿರೀಕ್ಷೆಗೆ ತಕ್ಕಂತೆ, ನಮ್ಮ ಸೇವೆ, ಸಂಘಟನೆ ಮತ್ತು ಹೋರಾಟಗಳನ್ನು ಮತ್ತಷ್ಟು ಹೆಚ್ಚು ಶಕ್ತಿ ಹಾಗೂ ಹುಮ್ಮಸ್ಸಿನಿಂದ ಮುಂದುವರಿಸುತ್ತೇವೆ ಎಂದರು.