ಸಾರಾಂಶ
ಸಂಡೂರು: ಅಖಂಡ ಬಳ್ಳಾರಿ ಜಿಲ್ಲೆಯಲ್ಲಿದ್ದ ೧೦ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಹಿಂದೆ ೯ ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತ್ತು. ದೃಷ್ಟಿ ಚುಕ್ಕಿಯಂತೆ ಸಂಡೂರು ಕ್ಷೇತ್ರ ಬಿಜೆಪಿಗೆ ಒಲಿದಿರಲಿಲ್ಲ. ಈ ಬಾರಿಯ ಕ್ಷೇತ್ರದ ಉಪ ಚುನಾವಣೆಯಲ್ಲಿ ಈ ದೃಷ್ಟಿ ಚುಕ್ಕೆಯನ್ನು ಅಳಿಸಿ, ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಶ್ರಮಿಸುವೆ ಎಂದು ಶಾಸಕ ಜಿ. ಜನಾರ್ದನ ರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು..
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪ ಚುನಾವಣೆಯಲ್ಲಿ ೧೯ ಮಂದಿ ಪಕ್ಷದ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಅಭ್ಯರ್ಥಿಯನ್ನು ಪಕ್ಷದ ವರಿಷ್ಠರು ತೀರ್ಮಾನಿಸಲಿದ್ದಾರೆ. ಯಾರೇ ಅಭ್ಯರ್ಥಿಯಾಗಲಿ, ಅವರ ಗೆಲುವಿಗೆ ಶ್ರಮಿಸಲಾಗುವುದು. ಕಾರ್ಯಕರ್ತರಲ್ಲಿ ಮನೋಸ್ಥೈರ್ಯ ತುಂಬಲು, ಅಭ್ಯರ್ಥಿಯ ಗೆಲುವಿಗೆ ಶ್ರಮಿಸಲು ಸೂಚಿಸಿ ಪಕ್ಷದ ಮುಖಂಡರು ನನ್ನನ್ನು ಇಲ್ಲಿಗೆ ಕಳುಹಿಸಿದ್ದಾರೆ ಎಂದರು.ಗಣಿ ಬಾಧಿತ ಪ್ರದೇಶಾಭಿವೃದ್ಧಿಗಾಗಿ ರೂಪಿಸಲಾದ ಕೆಎಂಇಆರ್‌ಸಿ ಅಲ್ಲಿ ₹೨೫೦೦೦ ಕೋಟಿ ಹಣವಿದೆ. ಜತೆಗೆ ಜಿಲ್ಲಾ ಖನಿಜ ನಿಧಿ ಹಣವಿದೆ. ಇದರಿಂದ ಕ್ಷೇತ್ರವನ್ನು ಸ್ವರ್ಗವನ್ನಾಗಿಸಬಹುದಿತ್ತು. ಜಿಲ್ಲೆಯಲ್ಲಿ ಐವರು ಕಾಂಗ್ರೆಸ್ ಶಾಸಕರಿದ್ದಾರೆ. ಕೆಎಂಇಆರ್‌ಸಿ ಹಣದ ವಿನಿಯೋಗಕ್ಕೆ ಸಂಬಂಧಿಸಿದಂತೆ ಒಂದೂವರೆ ವರ್ಷದಲ್ಲಿ ಒಂದು ತೀರ್ಮಾನ ತೆಗೆದುಕೊಳ್ಳಲಾಗಿಲ್ಲ. ಸಂಡೂರು ಕ್ಷೇತ್ರವು ಹಿಂದೆ ಹೇಗಿತ್ತೋ, ಈಗಲೂ ಹಾಗೆಯೇ ಇದೆ ಎಂದು ಆರೋಪಿಸಿದರು.
ಮಾಜಿ ಶಾಸಕ ಜಿ.ಸೋಮಶೇಖರ ರೆಡ್ಡಿ, ಬಿಜೆಪಿ ರಾಜ್ಯ ಕಾರ್ಯದರ್ಶಿ ಶರಣು ತಳ್ಳಿಕೇರಿ, ಎಸ್.ಟಿ. ಮೋರ್ಚಾ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ಜಿಲ್ಲಾಧ್ಯಕ್ಷ ಅನಿಲ್‌ಕುಮಾರ್ ಮೋಕಾ, ಉಪಾಧ್ಯಕ್ಷ ಜಿ.ಟಿ. ಪಂಪಾಪತಿ, ಪ್ರಧಾನ ಕಾರ್ಯದರ್ಶಿಗಳಾದ ಉಡೇದ ಸುರೇಶ್, ಸೋಮನಗೌಡ, ಸಂಡೂರು ಮಂಡಲ ಅಧ್ಯಕ್ಷ ನಾನಾ ಸಾಹೇಬ್ ನಿಕ್ಕಂ, ಕಾರ್ಯದರ್ಶಿ ಆರ್.ಟಿ. ರಘುನಾಥ್, ಎಸ್.ಟಿ. ಮೋರ್ಚಾ ಅಧ್ಯಕ್ಷ ಪರಶುರಾಮ್, ವಾಡಾ ಮಾಜಿ ಅಧ್ಯಕ್ಷ ಕರಡಿ ಯರಿಸ್ವಾಮಿ ಸೇರಿದಂತೆ ಪಕ್ಷದ ಹಲವು ಮುಖಂಡರು ಉಪಸ್ಥಿತರಿದ್ದರು.ನಾಗೇಂದ್ರ ಹಾಕಿದ ಕಣ್ಣೀರು ಪಶ್ಚಾತಾಪದ್ದು. ಮಂತ್ರಿಸ್ಥಾನ ಉಳಿಸಿಕೊಳ್ಳಲು ವಾಲ್ಮೀಕಿ ನಿಗಮದ ಖಜಾನೆಗೆ ಕೈಹಾಕಿದರು. ಇಡಿ ತನಿಖೆ ಮಾಡಿದೆ. ಸಿಬಿಐ ತನಿಖೆ ಬಾಕಿ ಇದೆ. ಸಿಬಿಐ ತನಿಖೆ ಆರಂಭವಾದರೆ ಎಲ್ಲವೂ ಬಯಲಿಗೆ ಬರಲಿದೆ. ಹಗರಣಕ್ಕೆ ಸಂಬಂಧಿಸಿ ಹಲವರು ಸಾಕ್ಷಿ ನುಡಿದಿದ್ದಾರೆ. ಅವುಗಳನ್ನು ಇನ್ನೆರಡು ದಿನಗಳಲ್ಲಿ ತೆರೆದಿಡುವೆ ಎನ್ನುತ್ತಾರೆ ಶಾಸಕ ಜನಾರ್ದನ ರೆಡ್ಡಿ.