ಭೀಮ ಹೆಜ್ಜೆ ರಥಯಾತ್ರೆಗೆ ಬಿಜೆಪಿಯಿಂದ ಅದ್ದೂರಿ ಸ್ವಾಗತ

| Published : Apr 13 2025, 02:06 AM IST

ಭೀಮ ಹೆಜ್ಜೆ ರಥಯಾತ್ರೆಗೆ ಬಿಜೆಪಿಯಿಂದ ಅದ್ದೂರಿ ಸ್ವಾಗತ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್‌ನವರು ಅಂಬೇಡ್ಕರ್ ಅವರನ್ನು ಅಪಮಾನ ಮಾಡಿದ ಬಗ್ಗೆ ಬಿಜೆಪಿ ನಿರಂತರವಾಗಿ ಕಾರ್ಯಕ್ರಮ ಮಾಡಿಕೊಂಡು ಜನರಿಗೆ ತಿಳಿಸುತ್ತಾ ಬಂದಿದೆ.

ಹಾವೇರಿ: ಡಾ. ಬಿ.ಆರ್.ಅಂಬೇಡ್ಕರ್ ಅವರು ಬೆಳಗಾವಿ ಜಿಲ್ಲೆ ನಿಪ್ಪಾಣಿಗೆ ಭೇಟಿ ನೀಡಿ ನೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ನಿಪ್ಪಾಣಿಗೆ ಬಿಜೆಪಿ ಹಮ್ಮಿಕೊಂಡಿರುವ ಭೀಮ ಹೆಜ್ಜೆ-100 ರಥಯಾತ್ರೆ ಶನಿವಾರ ಸಂಜೆ ನಗರಕ್ಕೆ ಆಗಮಿಸಿದಾಗ ಜಿಲ್ಲಾ ಬಿಜೆಪಿ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತ ಕೋರಿದರು.

ನಗರದ ಸಂಗೂರ ಕರಿಯಪ್ಪ ವೃತ್ತದ ಬಳಿ ರಥಯಾತ್ರೆ ಸ್ವಾಗತಿಸಿದ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು, ಬೈಕ್‌ ರ್‍ಯಾಲಿ ಮೂಲಕ ಪುರಸಿದ್ದೇಶ್ವರ ದೇವಸ್ಥಾನದಿಂದ ಎಂ.ಜಿ. ರಸ್ತೆ ಮೂಲಕ ಹೇರೂರ ಅಂಗಡಿ ಕ್ರಾಸ್, ಸುಭಾಸ್ ಸರ್ಕಲ್ ಮಾರ್ಗವಾಗಿ ಡಾ. ಬಿ.ಆರ್. ಅಂಬೇಡ್ಕರ ವೃತ್ತ ತಲುಪಿದರು.

ನಂತರ ನಡೆದ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಯಾತ್ರೆಯ ನೇತೃತ್ವ ವಹಿಸಿದ್ದ ಮಾಜಿ ಸಂಸದ ಮುನಿಸ್ವಾಮಿ, ಕಾಂಗ್ರೆಸ್‌ನವರು ಅಂಬೇಡ್ಕರ್ ಅವರನ್ನು ಅಪಮಾನ ಮಾಡಿದ ಬಗ್ಗೆ ಬಿಜೆಪಿ ನಿರಂತರವಾಗಿ ಕಾರ್ಯಕ್ರಮ ಮಾಡಿಕೊಂಡು ಜನರಿಗೆ ತಿಳಿಸುತ್ತಾ ಬಂದಿದೆ. ನೂರು ವರ್ಷಗಳ ಹಿಂದೆ ಅಂಬೇಡ್ಕರ್ ಅವರು ನಿಪ್ಪಾಣಿಯಲ್ಲಿ ಹಿತಕಾರಿಣಿ ಸಭಾದ ಅಧಿವೇಶನದಲ್ಲಿ ಭಾಗವಹಿಸಿದ್ದರು. ಶಿಕ್ಷಣ ಮತ್ತು ವಸತಿ ಶಾಲೆಯ ಬಗ್ಗೆ ಮಾತನಾಡಿದ್ದರು. ಈ ಐತಿಹಾಸಿಕ ಭೀಮ ಹೆಜ್ಜೆಗೆ ಈಗ ಶತಮಾನದ ಸಂಭ್ರಮ ಎಂದರು.

ರಾಜ್ಯದ ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃದ್ಧಿಗೆ ಮೀಸಲಾಗಿದ್ದ ₹ 38 ಸಾವಿರ ಕೋಟಿ ನುಂಗಿಹಾಕಿದೆ. ಅಭಿವೃದ್ಧಿ ನಿಗಮಗಳಿಗೂ ಬಿಡಿಗಾಸು ಕೊಟ್ಟಿಲ್ಲ. ಅಂಬೇಡ್ಕರ್ ಹೆಸರು ಹೇಳಿಕೊಂಡು ದಲಿತರ ಮತ ಪಡೆಯುವ ಕಾಂಗ್ರೆಸ್ ದಲಿತ ವರ್ಗದ ಏಳಿಗೆಗೆ ಏನನ್ನೂ ಮಾಡದೆ ಅನ್ಯಾಯ ಮಾಡುತ್ತಲೇ ಬಂದಿದೆ. ಅಂಬೇಡ್ಕರ್‌ಗೆ ಮಾಡಿದ ಅವಮಾನವನ್ನೇ ಕಾಂಗ್ರೆಸ್‌ನವರು ದಲಿತರಿಗೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಅಂಬೇಡ್ಕರ್ ಅವರಿಗೆ ಬಿಜೆಪಿ ಅಂದಿನಿಂದ ಇಂದಿನವರೆಗೂ ಗೌರವ ಕೊಟ್ಟಿದೆ. ದಲಿತರ ಅಭಿವೃದ್ಧಿಗೆ ನರೇಂದ್ರ ಮೋದಿ ಸರ್ಕಾರ ಕಟಿಬದ್ಧವಾಗಿದೆ. ಬೆಳಗಾವಿಯಲ್ಲಿ ಎಐಸಿಸಿ ಅಧಿವೇಶನದ ನೂರನೇ ವರ್ಷದ ನೆನಪು ಮಾಡಿಕೊಂಡ ಕಾಂಗ್ರೆಸ್‌ನವರಿಗೆ ಅಂಬೇಡ್ಕರ್ ಅವರು ನಿಪ್ಪಾಣಿಗೆ ಬಂದ ನೂರು ವರ್ಷದ ನೆನಪು ಮಾಡಿಕೊಳ್ಳಲಿಲ್ಲ, ಅಧಿವೇಶನದಲ್ಲಿ ಬಿಜೆಪಿ ಶಾಸಕರು ಸರ್ಕಾರಕ್ಕೆ ನೆನಪು ಮಾಡಿದರೂ ಕಾಂಗ್ರೆಸ್‌ನವರಿಗೆ ಅಂಬೇಡ್ಕರ್ ಬೇಕಾಗಿರಲಿಲ್ಲ. ಮುಂದಿನ ಜಿಪಂ, ತಾಪಂ, ವಿಧಾನಸಭೆ ಯಾವುದೇ ಚುನಾವಣೆ ಬರಲಿ, ಕಾಂಗ್ರೆಸ್ ಪಕ್ಷ ಅಂಬೇಡ್ಕರ್‌ಗೆ ಮಾಡಿದ ಅಪಮಾನ ಬಗ್ಗೆ ಬಿಜೆಪಿ ಕೊಟ್ಟ ಗೌರವದ ಬಗ್ಗೆ ಹಳ್ಳಿಹಳ್ಳಿಗಳಲ್ಲಿ ತಿಳಿಸಿ ಜನರಲ್ಲಿ ಅರಿವು ಮೂಡಿಸಬೇಕು ಎಂದರು.

ಮುಖಂಡರಾದ ಗವಿಸಿದ್ದಪ್ಪ ದ್ಯಾಮಣ್ಣನವರ ಪ್ರಾಸ್ತಾವಿಕವಾಗಿ ಮಾತನಾಡಿ, ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ 1925 ಏ.10-11ರಂದು ಬೆಳಗಾವಿ ಜಿಲ್ಲೆ ನಿಪ್ಪಾಣಿಗೆ ಬಂದು ಹೋಗಿರುವ ಹಿನ್ನೆಲೆ ಅದರ ಸ್ಮರಣಾರ್ಥ ಭೀಮ ಹೆಜ್ಜೆ ರಥಯಾತ್ರೆ ಮಾಡಲಾಗುತ್ತಿದೆ ಎಂದರು.

ಈ ವೇಳೆ ರಾಜ್ಯ ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಮಹೇಂದ್ರ ಕೌತಾಳ, ರಾಜ್ಯ ಎಸ್ಸಿ ಮೋರ್ಚಾ ಕಾರ್ಯಾಲಯ ಕಾರ್ಯದರ್ಶಿ ಜಿ. ಪ್ರಶಾಂತ ಕುಮಾರ, ಮಾಜಿ ಶಾಸಕರಾದ ವಿರೂಪಾಕ್ಷಪ್ಪ ಬಳ್ಳಾರಿ, ಶಿವರಾಜ ಸಜ್ಜನರ, ಮುಖಂಡ ಮಂಜುನಾಥ ಓಲೇಕಾರ, ಡಾ. ಬಸವರಾಜ ಕೇಲಗಾರ, ವೆಂಕಟೇಶ ನಾರಾಯಣಿ, ರುದ್ರೇಶ ಚಿನ್ನಣ್ಣನವರ, ಪ್ರಭು ಹಿಟ್ನಳ್ಳಿ, ಸಂತೋಷ ಆಲದಕಟ್ಟಿ, ವಿಜಯಕುಮಾರ ಚಿನ್ನಿಕಟ್ಟಿ, ಶಿವಯೋಗಿ ಹುಲಿಕಂತಿಮಠ, ಉಡಚಪ್ಪ ಮಾಳಗಿ, ಎಂ.ಆಂಜನೇಯ, ನಿಖಿಲ್ ಡೊಗ್ಗಳ್ಳಿ, ಕರಬಸಪ್ಪ ಹಳದೂರ, ಚಂದ್ರಪ್ಪ ಹರಿಜನ, ಅಶೋಕ ಮರೆಣ್ಣನವರ, ಲಲಿತಾ ಗುಂಡೇನಹಳ್ಳಿ, ವಿದ್ಯಾ ಶೆಟ್ಟಿ, ರೋಹಿಣಿ ಪಾಟೀಲ ಇತರರು ಇದ್ದರು.