ದೆಹಲಿಯಲ್ಲಿ ನಮ್ಮಗಳ ತಪ್ಪಿನಿಂದ ಬಿಜೆಪಿಗೆ ಅಧಿಕಾರ : ಕೃಷಿ ಸಚಿವ ಎನ್. ಚಲುವರಾಯಸ್ವಾಮಿ

| N/A | Published : Feb 11 2025, 12:46 AM IST / Updated: Feb 11 2025, 12:28 PM IST

ದೆಹಲಿಯಲ್ಲಿ ನಮ್ಮಗಳ ತಪ್ಪಿನಿಂದ ಬಿಜೆಪಿಗೆ ಅಧಿಕಾರ : ಕೃಷಿ ಸಚಿವ ಎನ್. ಚಲುವರಾಯಸ್ವಾಮಿ
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮಗಳ ಸಣ್ಣ ಪುಟ್ಟ ವ್ಯತ್ಯಾಸದಿಂದ ಅವರು ಅಧಿಕಾರಕ್ಕೆ ಬಂದಿದ್ದರೂ ಕೂಡ ಅಧಿಕಾರ ಸಿಕ್ಕಿರುವುದರಿಂದ ವಾಸ್ತವಾಂಶ ಅರಿಯದೆ ಸಹಜವಾಗಿ ನಮ್ಮದೇ ಲಾಭ ಎನ್ನುವಂತೆ ಮಾತನಾಡುತ್ತಿದ್ದಾರೆ.  

 ನಾಗಮಂಗಲ : ಇಂಡಿಯಾ ಒಕ್ಕೂಟದ ಜೊತೆಯಲ್ಲಿ ಚುನಾವಣೆ ನಡೆಸಿದ್ದರೆ ಹರಿಯಾಣದಲ್ಲಿ ಕಾಂಗ್ರೆಸ್ ಮತ್ತು ದೆಹಲಿಯಲ್ಲಿ ಎಎಪಿ ಪಕ್ಷ ಅಧಿಕಾರಕ್ಕೆ ಬರುತಿತ್ತು. ಆದರೆ, ಕೆಲ ವ್ಯತ್ಯಾಸಗಳ ಲಾಭ ಪಡೆದು ಬಿಜೆಪಿ ಪಕ್ಷ ಅಧಿಕಾರಕ್ಕೆ ಬರುವಂತಾಗಿದೆ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.

ತಾಲೂಕಿನ ಪಿ.ನೇರಲಕೆರೆ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ 3 ಕೋಟಿ ರು. ವೆಚ್ಚದ ರಸ್ತೆ ಅಭಿವೃದ್ಧಿ ಹಾಗೂ ಕೆಲಗೆರೆ ಗ್ರಾಮದಲ್ಲಿ 12.5 ಕೋಟಿ ರು.ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮತನಾಡಿ, ಪ್ರಧಾನಿ ನರೇಂದ್ರ ಮೋದಿಯವರ ಪ್ರಭಾವವೋ, ಆರ್‌ಎಸ್‌ಎಸ್‌ ಅಥವಾ ಸ್ಥಳೀಯ ಮುಖಂಡರ ಪ್ರಭಾವದಿಂದಲೋ ಬಿಜೆಪಿ ಅಧಿಕಾರಕ್ಕೆ ಬಂದಿದೆ ಎಂದರು.

ನಮ್ಮಗಳ ಸಣ್ಣ ಪುಟ್ಟ ವ್ಯತ್ಯಾಸದಿಂದ ಅವರು ಅಧಿಕಾರಕ್ಕೆ ಬಂದಿದ್ದರೂ ಕೂಡ ಅಧಿಕಾರ ಸಿಕ್ಕಿರುವುದರಿಂದ ವಾಸ್ತವಾಂಶ ಅರಿಯದೆ ಸಹಜವಾಗಿ ನಮ್ಮದೇ ಲಾಭ ಎನ್ನುವಂತೆ ಮಾತನಾಡುತ್ತಿದ್ದಾರೆ. ಏನೇ ಆದರೂ ಮತದಾರರ ತೀರ್ಮಾನಕ್ಕೆ ಬದ್ಧರಾಗಿ ಸೋತಿರುವುದನ್ನು ನಾವು ಒಪ್ಪಿಕೊಳ್ಳಬೇಕಾಗುತ್ತದೆ. ಆದರೆ, ಬಿಜೆಪಿಯವರು ನಮ್ಮ ವರ್ಚಸ್ಸಿನಿಂದಲೇ ಗೆದ್ದಿದ್ದೇವೆ ಎನ್ನುವುದು ಸರಿಯಲ್ಲ ಎಂದರು.

ಈ ಹಿಂದೆ ನಾನು ಶಾಸಕನಾಗಿದ್ದ ಅವಧಿಯಲ್ಲಿ ಮಂಜೂರಾಗಿದ್ದ ಹಲವು ಅಭಿವೃದ್ಧಿ ಕಾಮಗಾರಿಗಳನ್ನು 5 ವರ್ಷದಲ್ಲಿ ಪೂರ್ಣಗೊಳಿಸಲು ಆಗಿಲ್ಲ. ಈಗ ನಾನೇ ಪೂರ್ಣಗೊಳಿಸುವಂತಾಗಿದೆ. ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ರಸ್ತೆಗಳು ಹಾಳಾಗಿ ಜನರ ಹಾಗೂ ವಾಹನಗಳ ಓಡಾಟಕ್ಕೆ ತೊಂದೆಯಾಗಿದೆ. ಈ ಪರಿಸ್ಥಿತಿಯನ್ನು ನೋಡಿದರೆ ವೀರಾವೇಶದಿಂದ ಮಾತನಾಡುವ ಯಜಮಾನ್ರು 5 ವರ್ಷ ಕಾಲ ಏನು ಮಾಡುತ್ತಿದ್ದರು ಎಂದು ಪರೋಕ್ಷವಾಗಿ ಮಾಜಿ ಶಾಸಕ ಸುರೇಶ್‌ಗೌಡರನ್ನು ಕುಟುಕಿದರು.

ಗ್ರಾಮೀಣ ಪ್ರದೇಶದ ರಸ್ತೆಗಳೂ ಸಹ ದೀರ್ಘಕಾಲ ಬಾಳಿಕೆ ಬರುವಂತೆ ಉತ್ತಮ ಗುಣಮಟ್ಟದಿಂದ ಕೂಡಿರಬೇಕೆಂಬುದೇ ನನ್ನ ಉದ್ದೇಶ. ಆದ್ದರಿಂದ ಕಳಪೆ ಕಾಮಗಾರಿ ಕಂಡುಬಂದಲ್ಲಿ ಸಂಬಂಧಿಸಿದ ಅಧಿಕಾರಿಗಳು ಮತ್ತು ಗುತ್ತಿಗೆದಾರರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಈ ವೇಳೆ ಜಿಪಂ ಮಾಜಿ ಸದಸ್ಯ ಎಂ.ಪ್ರಸನ್ನ, ಮುಖಂಡರಾದ ಸುನಿಲ್‌ ಲಕ್ಷ್ಮಿಕಾಂತ್, ದೇವರಾಜ್, ಲೋಕೋಪಯೋಗಿ ಇಲಾಖೆ ಎಇಇ ನಂದಕುಮಾರ್, ಎಇಗಳಾದ ಪ್ರಶಾಂತ್, ಅಭಿಷೇಕ್, ಪಿಎಲ್‌ಡಿ ಬ್ಯಾಂಕ್ ಮಾಜಿ ನಿರ್ದೇಶಕ ಮಂಜುನಾಥ್‌ ಸೇರಿದಂತೆ ಹಲವರು ಇದ್ದರು.