ಮೈಸೂರು ಚಲೋಗೆ ಹೊರಟಿದ್ದ ಬಿಜೆಪಿಶಾಸಕ ಮುನಿರಾಜು ಪೊಲೀಸ್‌ ವಶಕ್ಕೆ

| Published : Jul 13 2024, 01:36 AM IST

ಸಾರಾಂಶ

ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ವಿರುದ್ಧ ಮೈಸೂರಿನಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಹೊರಟಿದ್ದ ದಾಸರಹಳ್ಳಿ ಕ್ಷೇತ್ರದ ಶಾಸಕ ಎಸ್.ಮುನಿರಾಜು ಮತ್ತು ಮುಖಂಡರನ್ನು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಾಗಲಗುಂಟೆ ವೃತ್ತದಲ್ಲಿ ತಡೆದರು.

ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿ

ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರದ ವಿರುದ್ಧ ಮೈಸೂರಿನಲ್ಲಿ ಬಿಜೆಪಿ ಹಮ್ಮಿಕೊಂಡಿದ್ದ ಪ್ರತಿಭಟನೆಗೆ ಹೊರಟಿದ್ದ ದಾಸರಹಳ್ಳಿ ಕ್ಷೇತ್ರದ ಶಾಸಕ ಎಸ್.ಮುನಿರಾಜು ಮತ್ತು ಮುಖಂಡರನ್ನು ಮುಂಜಾಗ್ರತಾ ಕ್ರಮವಾಗಿ ಪೊಲೀಸರು ಬಾಗಲಗುಂಟೆ ವೃತ್ತದಲ್ಲಿ ತಡೆದರು.

ಇದಕ್ಕೂ ಮೊದಲು ಮೈಸೂರಿನ ಮುಡಾದಲ್ಲಿ ನಡೆದಿರುವ ನಿವೇಶನ ಹಂಚಿಕೆ ಅಕ್ರಮ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಹಗರಣವನ್ನು ಸಿಬಿಐ ತನಿಖೆಗೆ ನೀಡಬೇಕೆಂದು ಒತ್ತಾಯಿಸಿ ಶಾಸಕ ಎಸ್.ಮುನಿರಾಜು ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ರಾಜ್ಯ ಸರ್ಕಾರದ ವಿರುದ್ಧ ದಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.

ಈ ವೇಳೆ ಶಾಸಕ ಎಸ್.ಮುನಿರಾಜು ಸೇರಿದಂತೆ ಪ್ರತಿಭಟನಾನಿರತ ನೂರಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ಬಸ್‌ನಲ್ಲಿ ಬಾಗಲಗುಂಟೆ ಠಾಣೆಗೆ ಕರೆದೊಯ್ದು ನಂತರ ಬಿಡುಗಡೆ ಮಾಡಿದರು.

ನಂತರ ಸುದ್ದಿಗಾರರೊಂದಿಗೆ ಶಾಸಕ ಎಸ್‌.ಮುನಿರಾಜು ಮಾತನಾಡಿ, ಮುಡಾ ಹಗರಣ ಆಚೆ ಬಂದರೆ ತಮ್ಮ ಕುರ್ಚಿಗೆ ಕಂಟಕವಾಗುತ್ತದೆ ಎಂಬ ಏಕೈಕ ಕಾರಣಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಮ್ಮ ಪ್ರತಿಭಟನೆಯನ್ನು ಪೊಲೀಸರ ಮೂಲಕ ಹತ್ತಿಕ್ಕಿದ್ದಾರೆ. ಆದರೆ ಇದನ್ನು ತಾರ್ಕಿಕ ಹಂತಕ್ಕೆ ಕೊಂಡೊಯ್ಯುವವರೆಗೂ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು. ಪ್ರತಿಭಟನೆ ನಮ್ಮ ಹಕ್ಕು. ಅದನ್ನು ಹತ್ತಿಕ್ಕಲು ಸರ್ಕಾರಕ್ಕಾಗಲೀ, ಇಲ್ಲವೇ ಪೊಲೀಸರಿಗಾಗಲೀ ಅವಕಾಶವಿಲ್ಲ. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೋ? ಅಥವಾ ತುಘಲಕ್‌ ದರ್ಬಾರ್‌ ಆಡಳಿತದಲ್ಲಿದ್ದೇವೋ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪ್ರತಿಭಟನೆ ವೇಳೆ ಸೋಮಶೇಖರ್, ಟಿ.ಎಸ್.ಗಂಗರಾಜು, ಶೆಟ್ಟಿಹಳ್ಳಿ ಸುರೇಶ್, ಕೃಷ್ಣಮೂರ್ತಿ, ಬಿ.ಎಂ.ನಾರಾಯಣ್, ಟಿ.ಶಿವಕುಮಾರ್, ಭರತ್ ಸೌಂದರ್ಯ, ಗುರುಪ್ರಸಾದ್, ಎಚ್.ಎಸ್.ಮಂಜುನಾಥ್, ಸಂದೀಪ್ ಸಿಂಗ್, ಅಬ್ಬಿಗೆರೆ ಮಂಜುನಾಥ್ ಗೌಡ, ಪಾಂಡುರಂಗರಾವ್, ವಿನೋದ್ ಗೌಡ, ಉಮಾದೇವಿ ನಾಗರಾಜು, ಭಾಗ್ಯಮ್ಮ, ಸುಜಾತಾ ಇದ್ದರು.