ಸಾರಾಂಶ
ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಬಿಜೆಪಿ ನಿಯೋಜಿತ ಅಭ್ಯರ್ಥಿಗಳು ಹಣದ ಹೊಳೆಯನ್ನೇ ಹರಿಸಿ ವಾಮ ಮಾರ್ಗದಲ್ಲಿ ಚುನಾವಣೆ ಗೆಲ್ಲುವ ಹುನ್ನಾರ ನಡೆಸಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ತಾಲೂಕು ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಸ್.ಪಿ.ನಾಗರಾಜ್ ಗೌಡ ಆರೋಪಿಸಿದರು.
ಕನ್ನಡಪ್ರಭ ವಾರ್ತೆ ಶಿಕಾರಿಪುರ
ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಬಿಜೆಪಿ ನಿಯೋಜಿತ ಅಭ್ಯರ್ಥಿಗಳು ಹಣದ ಹೊಳೆಯನ್ನೇ ಹರಿಸಿ ವಾಮ ಮಾರ್ಗದಲ್ಲಿ ಚುನಾವಣೆ ಗೆಲ್ಲುವ ಹುನ್ನಾರ ನಡೆಸಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಹಾಗೂ ತಾಲೂಕು ಗ್ಯಾರೆಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಎಸ್.ಪಿ.ನಾಗರಾಜ್ ಗೌಡ ಆರೋಪಿಸಿದರು.ಪಟ್ಟಣದ ಸುದ್ದಿ ಮನೆಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಬಾರಿ ಚುನಾವಣೆಯಲ್ಲಿಯೂ ಸಂಸದ ರಾಘವೇಂದ್ರ ಅವರು ತಮ್ಮ ಖಾಸಗಿ ಸಂಸ್ಥೆಗಳಲ್ಲಿ, ಸಹಕಾರಿ ಸಂಸ್ಥೆಯ ಡೆಲಿಗೇಶನ್ ಪಡೆದ ಮತದಾರರನ್ನು ಒಟ್ಟಿಗೆ ಸೇರಿಸಿ ಹಣದ ಆಮಿಷವನ್ನು ಒಡ್ಡಿದ್ದು ಅಲ್ಲದೆ ಆಮಿಷಕ್ಕೆ ಒಳಗಾಗದವರನ್ನು ಬೆದರಿಸಿ ಮತವನ್ನು ಪಡೆಯಲು ಯಶಸ್ವಿಯಾಗಿದ್ದರು. ಈ ಬಾರಿಯೂ ಸಂಸದ ರಾಘವೇಂದ್ರ ಹಾಗೂ ಶಾಸಕ ವಿಜಯೇಂದ್ರ ಅವರು ಅದೇ ರೀತಿಯಲ್ಲಿ ಪುನಃ ಮತದಾರರನ್ನು ಸೇರಿಸಿ ಭಾರಿ ಆಮಿಷ ಒಡ್ಡಿ ವಾಮ ಮಾರ್ಗದಲ್ಲಿ ಮತವನ್ನು ಪಡೆದು ಚುನಾವಣೆ ಗೆಲ್ಲುವ ಹುನ್ನಾರ ನಡೆಸಿದ್ದಾರೆ ಎಂದು ದೂರಿದರು. ಪ್ರತಿ ಐದು ಮತದಾರರಿಗೆ ಒಬ್ಬ ಬಿಜೆಪಿ ಮುಖಂಡನನ್ನು ಉಸ್ತುವಾರಿಯಾಗಿ ನೇಮಕ ಮಾಡಿ, ಉಸ್ತುವಾರಿಯಾಗಿ ನೇಮಕವಾದವರು ಪ್ರತಿ ಐದು ಜನರನ್ನು ಕರೆದುಕೊಂಡು ಬಂದು ಮತದಾನ ಮಾಡಿಸುವ ಜವಾಬ್ದಾರಿಯನ್ನು ವಹಿಸಲಾಗಿದೆ ಈ ಹಂತದಲ್ಲಿ ಹಣ, ಬೆದರಿಸುವ ತಂತ್ರಗಳು ನಡೆಯಲಿದೆ ಎಂದರು. ಆಮಿಷ ಹಾಗೂ ಭಯ ಮುಕ್ತವಾಗಿ ನಿರ್ಭೀತ ಚುನಾವಣೆಗಳು ನಡೆದಾಗ ಮಾತ್ರ ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮತದಾನಕ್ಕೆ ಗೌರವವಿರುತ್ತದೆ. ಸಂಸ್ಥೆಗಳು ಉನ್ನತ ಮಟ್ಟಕ್ಕೆ ಏರಲು ಸಾಧ್ಯವಾಗುತ್ತದೆ. ಚುನಾವಣೆಯಲ್ಲಿ ಹಣದ ಹೊಳೆಯನ್ನೇ ಹರಿಸಿ ಗೆದ್ದ ನಿರ್ದೇಶಕರು ಸಂಸ್ಥೆ ಅಭಿವೃದ್ಧಿಗೆ ಯಾವ ರೀತಿ ಕ್ರಮ ಕೈಗೊಳ್ಳಬಹುದು ಎಂದು ಯೋಚಿಸಬೇಕಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು. ಮುಕ್ತ ಹಾಗೂ ನ್ಯಾಯಯುತ ಮತದಾನಕ್ಕೆ ಒತ್ತಾಯಿಸಿ ಹಣ ಮತ್ತಿತರ ಆಮಿಷ ಒಡ್ಡುವವರ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಹಾಗೂ ಡಿಸಿಸಿ ಬ್ಯಾಂಕ್ ಚುನಾವಣಾ ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಿರುವುದಾಗಿ ತಿಳಿಸಿದರು. ಶಿರಾಳಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೀರನಗೌಡ ಮಾತನಾಡಿ, ಡಿಸಿಸಿ ಬ್ಯಾಂಕ್ ಅತ್ಯಂತ ಪ್ರತಿಷ್ಠಿತ ಹಣಕಾಸು ಸಂಸ್ಥೆಯಾಗಿದ್ದು ಹಣ ಬಲದ ಏಕೈಕ ವಾಮಮಾರ್ಗದ ಮೂಲಕ ಮತದಾರರನ್ನು ಕುರಿಗಳ ರೀತಿ ಎಂದು ತಿಳಿದು ಖರೀದಿಸುವ ಷಡ್ಯಂತ್ರವನ್ನು ಸಂಸದರು ಯೋಜಿಸಿದ್ದಾರೆ. ಪ್ರಜಾಪ್ರಭುತ್ವಕ್ಕೆ ಮಾರಕವಾದ ಇಂತಹ ಧೋರಣೆ ಕೈಬಿಟ್ಟು ಮತದಾರರ ಮನವೊಲಿಕೆ ಮೂಲಕ ಚುನಾವಣೆಯನ್ನು ಎದುರಿಸುವಂತೆ ಸವಾಲು ಹಾಕಿದರು. ಗೋಷ್ಠಿಯಲ್ಲಿ ಶಿಕಾರಿಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶಿವರಾಂ ಪಾರಿವಾಳದ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಮಾರವಳ್ಳಿ ಉಮೇಶ್, ಆರಾಧನಾ ಸಮಿತಿ ಸದಸ್ಯ ಅಶ್ವಿನ್ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.