ಸಾರಾಂಶ
ಬೈಂದೂರು ವಿಧಾನಸಭಾ ಕ್ಷೇತ್ರದ ನಾಡ ಗ್ರಾಮದಲ್ಲಿ ಗ್ರಾಮೀಣ ಕಾಂಗ್ರೆಸ್ ಕಾರ್ಯಕರ್ತರ ಸಭೆ ನಡೆಯಿತು. ಸಭೆಯಲ್ಲಿ ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕನ್ನಡಪ್ರಭ ವಾರ್ತೆ ಕುಂದಾಪುರ
ಪ್ರಧಾನಿ ನರೇಂದ್ರ ಮೊದಿ ಅವರ ಸರ್ಕಾರ ಕಾರ್ಪೊರೇಟ್‌ಗಳಿಗೆ ಮಣೆ ಹಾಕಿದೆ. ಅವರ ಆಪ್ತರು, ಸ್ನೇಹಿತರು ಜಗತ್ತಿನ ಅತೀ ಶ್ರೀಮಂತರಾಗಿ ಬೆಳೆಯುತ್ತಿದ್ದಾರೆ. ಅಕ್ರಮ ಸಂಪತ್ತು ಕ್ರೊಢೀಕರಿಸಿಕೊಂಡು ಜಗತ್ತಿನ ಶ್ರೀಮಂತ ಪಕ್ಷವಾಗಿ ಬೆಳೆದು ನಿಂತಿದೆ. ಜಾತಿ, ಧರ್ಮದ ಹೆಸರಿನಲ್ಲಿ ದ್ವೇಷ, ಗಲಭೆ ಹೆಚ್ಚಾಗಿದ್ದು, ಪ್ರಜಾತಾಂತ್ರಿಕ ಮೌಲ್ಯಗಳು ಗಾಳಿಗೆ ತೂರಿದೆ ಎಂದು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಹೇಳಿದ್ದಾರೆ.ಬೈಂದೂರು ವಿಧಾನಸಭಾ ಕ್ಷೇತ್ರದ ನಾಡ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಗ್ರಾಮೀಣ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಅವರು ಮಾತನಾಡಿದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಮಾತನಾಡಿ, ಪ್ರತಿಯೊಬ್ಬರಿಗೂ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳು ತಲುಪುತ್ತಿವೆ. ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ ಅವರು ಬೈಂದೂರು ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ಕ್ಷೇತ್ರದಲ್ಲಿ ಕಾಂಗ್ರೆಸ್ ಹಿಂದುಳಿದಿದೆ ಎನ್ನುವ ಅಳುಕನ್ನು ತೊಡೆದು ಹಾಕಿ, ಬಂಗಾರಪ್ಪ ಅವರ ಚಿಂತನೆಗಳಿಗೆ ಜೀವ ತುಂಬಬೇಕಿದೆ. ಇದಕ್ಕೆ ಮಾಜಿ ಶಾಸಕರಾದ ಕೆ.ಗೋಪಾಲ ಪೂಜಾರಿ ಹಾಗೂ ಬಿ.ಎಂ.ಸುಕುಮಾರ್ ಶೆಟ್ಟಿ ಅವರ ನೆರವು ಅಗತ್ಯ ಎಂದರು.ಮಾಜಿ ಶಾಸಕ ಬಿ.ಎಂ.ಸುಕುಮಾರ್ ಶೆಟ್ಟಿ ಮಾತನಾಡಿ, ದೇಶದಲ್ಲಿ ಬಿಜೆಪಿ ಪಕ್ಷ ನಂಬಿಕೊಂಡು ನಾವು ಮೋಸ ಹೋಗಿದ್ದು ಸಾಕು. ಬಿಜೆಪಿ ಭಾರತವನ್ನು ವಿನಾಶದತ್ತ ಕೊಂಡೊಯ್ಯುತ್ತಿದೆ. ಈ ಹಿನ್ನೆಲೆಯಲ್ಲಿ ದೇಶದ ಪರಿಸ್ಥಿತಿ, ಜನರ ಬದುಕು, ರಾಜಕೀಯ ಅವನತಿ ಗಮನದಲ್ಲಿ ಇಟ್ಟುಕೊಂಡು ಕಾಂಗ್ರೆಸ್ ಬೆಂಬಲಿಸಲು ಮುಂದಾಗಬೇಕು. ಜನ ಸಾಮಾನ್ಯರಿಗೆ ಸುಳ್ಳು ಹೇಳಿ ಅಧಿಕಾರಕ್ಕೆ ಬಂದಿರುವ ಕೇಂದ್ರ ಸರ್ಕಾರದ ಭರವಸೆಗಳು ಹುಸಿಯಾಗಿವೆ. ಮೇಲ್ಜಾತಿಗಳಿಗೆ ಹೆಚ್ಚಿನ ಉತ್ತೇಜನ ನೀಡುವ ಬಿಜೆಪಿಗೆ ಸಾಮಾನ್ಯರ ಬಗ್ಗೆ ಕಾಳಜಿ ಇಲ್ಲ. ಬಿಜೆಪಿ ಸರ್ಕಾರ ಉದ್ಯಮಿಗಳ 11 ಲಕ್ಷ ಕೋಟಿ ಹಣ ಮನ್ನಾ ಮಾಡಿದೆ. ಇದು ಜನ ಸಾಮಾನ್ಯರಿಗೆ ಅರಿವಾಗುತ್ತಿಲ್ಲ ಎಂದರು.ಬೈಂದೂರು ಕ್ಷೇತ್ರದ ಆಲೂರು, ನಾವುಂದ, ಕಾಲ್ತೋಡು, ಕಂಬದ ಕೋಣೆ, ತ್ರಾಸಿ ಗ್ರಾಮಾಂತರ ಪ್ರದೇಶಗಳಲ್ಲಿ ಸಭೆ ನಡೆಸಲಾಯಿತು.ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ತಾಲೂಕಿನ ಮರವಂತೆ ಮಹಾರಾಜ ಸ್ವಾಮಿ ವರಹ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು.ಲೋಕಸಭಾ ಚುನಾವಣೆ ಜಿಲ್ಲಾ ಉಸ್ತುವಾರಿ ಅನಿಲ್ ಕುಮಾರ್ ತಡಕಲ್, ಬೈಂದೂರು ಕ್ಷೇತ್ರದ ಉಸ್ತುವಾರಿ ಕೆಪಿಸಿಸಿ ಕಾರ್ಯದರ್ಶಿ ಜಿ.ಎ.ಬಾವಾ, ನಾಡದ ಗ್ರಾಮ ಪಂಚಾಯಿತಿ ಸದಸ್ಯೆ ಸುಶೀಲಾ ದೇವಾಡಿಗ, ಕಂಬದಕೋಣೆ ರೈತ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಎಸ್.ಪ್ರಕಾಶ್ಚಂದ್ರ ಶೆಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಸ್.ರಾಜು ಪೂಜಾರಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಅರಿವಿಂದ ಪೂಜಾರಿ ಪಡುಕೋಣೆ, ಪ್ರದೀಪ್ ಕುಮಾರ್ ಶೆಟ್ಟಿ ಗುಡಿಬೆಟ್ಟು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಬಾಬು ಶೆಟ್ಟಿ ತಗ್ಗರ್ಸೆ, ಶಂಕರ್ ಪೂಜಾರಿ ಯಡ್ತರೇ, ಪ್ರಮುಖರಾದ ಮದನಕುಮಾರ, ವಿಜಯ್ ಕುಮಾರ್ ಶೆಟ್ಟಿ ಕಾಲ್ತೋಡು, ಅಣ್ಣಪ್ಪ ಶೆಟ್ಟಿ ಇದ್ದರು.ಸುದ್ದಿಗೋಷ್ಠಿಯೊಂದೇ ಸಂಸದರ ಸಾಧನೆ
ಬೈಂದೂರು ಕ್ಷೇತ್ರದಲ್ಲಿ ಸಂಸದ ಬಿ.ವೈ.ರಾಘವೇಂದ್ರ ಅವರು ಸುದ್ದಿಗೋಷ್ಠಿ ನಡೆಸಿರುವುದೇ ದೊಡ್ಡ ಸಾಧನೆ. ಸಾಮಾನ್ಯರ ನೋವು ಸಂಸದ ರಾಘವೇಂದ್ರ ಅವರಿಗೆ ತಿಳಿದಿಲ್ಲ. ಅಭಿವೃದ್ಧಿ ವಿಚಾರದಲ್ಲಿ ಕ್ಷೇತ್ರಕ್ಕೆ ಅನ್ಯಾಯ ಮಾಡಿದ್ದಾರೆ ಎಂದು ಎಂದು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಟೀಕಿಸಿದ್ದಾರೆ.