ಹಿಂದಿನ ಚುನಾವಣೆಯಲ್ಲಿ ಸುಮಾರು 1,800 ಮತ ತಿರಸ್ಕೃತಗೊಂಡಿದ್ದವು. ಆದ್ದರಿಂದ ಮತದಾರರು ಮತ ಚಲಾಯಿಸುವಾಗ ಎಚ್ಚರಿಕೆ ವಹಿಸಬೇಕು.
ಕುಷ್ಟಗಿ: ಶಿಕ್ಷಕರ ಸಮಸ್ಯೆಗಳ ಬಗ್ಗೆ ಬಿಜೆಪಿಗೆ ಕಾಳಜಿಯಿಲ್ಲ. ಶಿಕ್ಷಕರ ಹಿತಾಸಕ್ತಿ ಕಾಪಾಡುವ ಹಾಗೂ ಅವರ ಬೇಡಿಕೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ಬದ್ಧವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಆರೋಪಿಸಿದರು.
ಪಟ್ಟಣದ ಎನ್ಸಿಎಚ್ ಪ್ಯಾಲೇಸ್ನಲ್ಲಿ ಕುಷ್ಟಗಿ ಮತ್ತು ಹನುಮಸಾಗರ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ಈಶಾನ್ಯ ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು ಪರ ಹಮ್ಮಿಕೊಂಡಿದ್ದ ಪ್ರಚಾರ ಸಭೆಯಲ್ಲಿ ಮಾತನಾಡಿದರು.ಹಿಂದಿನ ಚುನಾವಣೆಯಲ್ಲಿ ಸುಮಾರು 1,800 ಮತ ತಿರಸ್ಕೃತಗೊಂಡಿದ್ದವು. ಆದ್ದರಿಂದ ಮತದಾರರು ಮತ ಚಲಾಯಿಸುವಾಗ ಎಚ್ಚರಿಕೆ ವಹಿಸಬೇಕು. ಮತಪತ್ರದಲ್ಲಿ ಮೊದಲ ಪ್ರಾಶಸ್ತ್ಯದ ಮತ ಸರಿಯಾಗಿ ನಮೂದಿಸುವ ಮೂಲಕ ಮತ ತಿರಸ್ಕೃತವಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.ಮಾಜಿ ಸಚಿವ ಅಮರೇಗೌಡ ಪಾಟೀಲ ಬಯ್ಯಾಪುರ ಮಾತನಾಡಿ, ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಹಾಗೂ ಅವರ ಬೇಡಿಕೆ ಸರ್ಕಾರದ ಗಮನಕ್ಕೆ ತಂದು ಪರಿಹಾರಕ್ಕಾಗಿ ಪ್ರಯತ್ನಿಸುವ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಅಗತ್ಯವಾಗಿದೆ. ಶಿಕ್ಷಕರ ವೃತ್ತಿ ಸಂಬಂಧಿತ ಸಮಸ್ಯೆ, ಸೇವಾ ಸೌಲಭ್ಯ ಮತ್ತು ಹಕ್ಕುಗಳ ಕುರಿತು ವಿಧಾನ ಪರಿಷತ್ತಿನಲ್ಲಿ ಧ್ವನಿ ಎತ್ತುವ ಪ್ರತಿನಿಧಿಯ ಅವಶ್ಯಕತೆಯಿದೆ. ಈ ಹಿನ್ನೆಲೆ ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು ಅವರನ್ನು ಬೆಂಬಲಿಸಿ ಮೊದಲ ಪ್ರಾಶಸ್ತ್ಯದ ಮತ ನೀಡುವಂತೆ ಮನವಿ ಮಾಡಿದರು.
ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರು ಮಾತನಾಡಿ, ಹಿಂದಿನ ವಿಧಾನಪರಿಷತ್ ಅವಧಿಯಲ್ಲಿ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಲು ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ. ಶಿಕ್ಷಕರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಹಲವು ವಿಚಾರ ಸದನದಲ್ಲಿ ಪ್ರಸ್ತಾಪಿಸಿದ್ದೇನೆ ಎಂದ ಅವರು, ಹಳೆಯ ಪಿಂಚಣಿ ಯೋಜನೆ ಜಾರಿ, ಬಾಕಿ ಇರುವ ಬಡ್ತಿ ಪ್ರಕ್ರಿಯೆ, ಹಿಂದಿ ಭಾಷೆ ವಿಚಾರ, 371ನೇ ವಿಧಿಯ ಅನುಷ್ಠಾನ ಹಾಗೂ ಮೊರಾರ್ಜಿ ವಸತಿ ಶಾಲೆಗಳ ಶಿಕ್ಷಕರ ಸಮಸ್ಯೆಗಳ ಕುರಿತು ಧ್ವನಿ ಎತ್ತಿದ್ದೇನೆ. ಸರ್ಕಾರಿ ಪದವಿ ಕಾಲೇಜುಗಳ ಅತಿಥಿ ಉಪನ್ಯಾಸಕರಿಗೆ ತೆಲಂಗಾಣ ಮಾದರಿಯಲ್ಲಿ ಸೇವಾ ಭದ್ರತೆ ಒದಗಿಸುವ ಬೇಡಿಕೆ ಮುಂದಿಟ್ಟುಕೊಂಡು ಹೋರಾಟ ಮುಂದುವರಿಸುವುದಾಗಿ ತಿಳಿಸಿದರು.ಮಾಜಿ ಸಂಸದ ಸಂಗಣ್ಣ ಕರಡಿ ಮಾತನಾಡಿ, ಶರಣಪ್ಪ ಮಟ್ಟೂರು ಹಿಂದಿನ ಅವಧಿಯಲ್ಲಿ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ. ರಾಜ್ಯ ಕಾಂಗ್ರೆಸ್ ಸರ್ಕಾರ 15 ಸಾವಿರ ಶಿಕ್ಷಕರ ನೇಮಕಾತಿಗೆ ಮುಂದಾಗಿದೆ. ಸರ್ಕಾರಿ ಶಿಕ್ಷಣ ವ್ಯವಸ್ಥೆ ಬಲಪಡಿಸುವ ನಿಟ್ಟಿನಲ್ಲಿ ಕೆಪಿಎಸ್ ಶಾಲೆಗಳನ್ನು ಆರಂಭಿಸಲಾಗಿದೆ. ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸುವ ಅಭ್ಯರ್ಥಿಗೆ ಬೆಂಬಲ ನೀಡಬೇಕು ಎಂದು ಮನವಿ ಮಾಡಿದರು.ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ನಾಗಪ್ಪ, ಹನುಮಸಾಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಾಂತೇಶ ಅಗಸಿಮುಂದಿನ, ಮಾನಪ್ಪ ತಳವಾರ, ಲಾಡ್ಲೆಮಷಾಕ್ ದೋಟಿಹಾಳ, ಅಮರೇಗೌಡ ವಕೀಲರು, ಚಂದ್ರು ನಲತವಾಡ, ಶೇಖರಗೌಡ ಮಾಲಿಪಾಟೀಲ, ಲಿಂಗೇಶ ಕಲ್ಗುಡಿ ಸೇರಿದಂತೆ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.