ಅಂಬೇಡ್ಕರ್‌ ಬಗ್ಗೆ ಪ್ರಶ್ನಿಸುವ ನೈತಿಕತೆ ಬಿಜೆಪಿಗಿಲ್ಲ

| Published : Jan 01 2025, 12:00 AM IST

ಅಂಬೇಡ್ಕರ್‌ ಬಗ್ಗೆ ಪ್ರಶ್ನಿಸುವ ನೈತಿಕತೆ ಬಿಜೆಪಿಗಿಲ್ಲ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಕಾಂಗ್ರೆಸ್ ಡಾ.ಬಾಬಾಸಾಹೇಬ್ ಅಂಬೇಡ್ಕರ ಅವರ ಅಂತ್ಯಕ್ರಿಯೆಗೆ ಜಾಗ ನೀಡಿಲ್ಲ, ಭಾರತರತ್ನ ಗೌರವ ಕೊಟ್ಟಿಲ್ಲ ಎಂದು ಹಲವಾರು ವಿಚಾರಗಳ ಬಗ್ಗೆ ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಅಂಬೇಡ್ಕರ ಅವರ ಕುರಿತು ಪ್ರಶ್ನಿಸುವ ನೈತಿಕತೆ ಬಿಜೆಪಿಯವರಿಗೆ ಇಲ್ಲ ಎಂದು ಮಾಜಿ ಶಾಸಕ ಪ್ರೊ.ರಾಜು ಅಲಗೂರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಕಾಂಗ್ರೆಸ್ ಡಾ.ಬಾಬಾಸಾಹೇಬ್ ಅಂಬೇಡ್ಕರ ಅವರ ಅಂತ್ಯಕ್ರಿಯೆಗೆ ಜಾಗ ನೀಡಿಲ್ಲ, ಭಾರತರತ್ನ ಗೌರವ ಕೊಟ್ಟಿಲ್ಲ ಎಂದು ಹಲವಾರು ವಿಚಾರಗಳ ಬಗ್ಗೆ ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಆಧಾರ ರಹಿತ ಆರೋಪ ಮಾಡುತ್ತಿದ್ದಾರೆ. ಅಂಬೇಡ್ಕರ ಅವರ ಕುರಿತು ಪ್ರಶ್ನಿಸುವ ನೈತಿಕತೆ ಬಿಜೆಪಿಯವರಿಗೆ ಇಲ್ಲ ಎಂದು ಮಾಜಿ ಶಾಸಕ ಪ್ರೊ.ರಾಜು ಅಲಗೂರ ಹೇಳಿದರು.

ನಗರದ ಜಿಲ್ಲಾ‌ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಅಂಬೇಡ್ಕರ್‌ ಅವರು ನಿಧನರಾದಾಗ ನಾವ್ಯಾರು ಹುಟ್ಟಿರಲಿಲ್ಲ. ಆಗಿನ ಸತ್ಯಾಸತ್ಯತೆ ಗೊತ್ತಿಲ್ಲ. ಅಂಬೇಡ್ಕರ ಅವರ ಹಿನ್ನೆಲೆ ಕುರಿತು ನಾವು ಮಾಹಿತಿ ಸಂಗ್ರಹಿಸಿದಾಗ ಅವರ ಕರ್ಮಭೂಮಿ, ಜನ್ಮಭೂಮಿ‌ ಮಹಾರಾಷ್ಟ್ರ ಆಗಿದ್ದವು. ಅವರ ಕುಟುಂಬಸ್ಥರ ಅಪೇಕ್ಷೆಯಂತೆ ಮುಂಬೈನಲ್ಲೇ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು ಎಂಬುದು ತಿಳಿದುಬಂದಿದೆ. ಆದರೆ ಬಿಜೆಪಿ ಪದೇ ಪದೇ ಇಂತಹ ಅನೇಕ ಆಧಾರ ರಹಿತ ಆರೋಪಗಳನ್ನು ಮಾಡುತ್ತ ಬಂದಿದೆ ಎಂದರು.

ಕಾಂಗ್ರೆಸ್ ಅಂಬೇಡ್ಕರ ಅವರನ್ನು ಚುನಾವಣೆಯಲ್ಲಿ ಸೋಲಿಸಿತು. ಅವಿರೋಧ ಆಯ್ಕೆ ಮಾಡಬೇಕಿತ್ತು ಎಂಬ ಮಾತು ನಾನು ಒಪ್ಪುತ್ತೇವೆ. ಆದರೆ ಆ ಸಂದರ್ಭದಲ್ಲಿ ಜನಸಂಘದ‌ ಮುಖಾಂತರ ಅಸ್ತಿತ್ವದಲ್ಲಿದ್ದ ಬಿಜೆಪಿಯವರು ಯಾಕೆ ಅಂಬೇಡ್ಕರ್‌ ಅವರಿಗೆ ಚುನಾವಣೆಯಲ್ಲಿ ಗೆಲ್ಲಿಸಲು ಸಹಾಯ ಮಾಡಲಿಲ್ಲ? ನೀವು ಬೆಂಬಲಿಸಿದ್ದರೆ, ಗೆಲ್ಲಿಸಲು ಪ್ರಯತ್ನಿಸಿದ್ದರೆ ನಿಮ್ಮ‌ ಪ್ರಶ್ನೆಗೆ ನೈತಿಕ‌ ಬೆಲೆ‌ ಸಿಗುತ್ತಿತ್ತು. ಇನ್ನು ಅಂಬೇಡ್ಕರ ಅವರಿಗೆ ಭಾರತ ರತ್ನ ಕೊಟ್ಟಿದ್ದು ಬಿಜೆಪಿ ಎಂಬುದು ಅತ್ಯಂತ ಸುಳ್ಳು. ಬಿಜೆಪಿ ಆಗಿನ ವಿ.ಪಿ.ಸಿಂಗ್ ಅವರ ಸರ್ಕಾರದ ಒಂದು‌ ಭಾಗವಾಗಿತ್ತಷ್ಟೇ. ಅಂಬೇಡ್ಕರ ಅವರಿಗೆ ಭಾರತ ರತ್ನ ನೀಡಬೇಕೆಂದು ವೈಯಕ್ತಿಕವಾಗಿ ಆಗಿನ ಸರ್ಕಾರಕ್ಕೆ ಒತ್ತಡ ತಂದವರು ರಾಮವಿಲಾಸ ಪಾಸ್ವಾನ್ ಎಂದು ಸ್ಪಷ್ಟಪಡಿಸಿದರು.

ಇನ್ನು ನನ್ನ ರಾಜೀನಾಮೆಗೆ ಆಗ್ರಹಿಸುವ ಅವರು ನನಗೆ ಮತ ಹಾಕಿದ್ದಾರಾ? ಎಂಬ ರಮೇಶ ಜಿಗಜಿಣಗಿ ಅವರ ದುರಾಹಂಕಾರದ ಮಾತು ಖಂಡನೀಯ ಎಂದರು.

ಮುಖಂಡ ಚಂದ್ರಶೇಖರ ಕೊಡಬಾಗಿ ಮಾತನಾಡಿ, ಸಂಸದ ರಮೇಶ ಜಿಗಜಿಣಗಿ ಖುದ್ಧು ಮನುಸೃತಿ ಪ್ರತಿಪಾದಿಸುತ್ತಿರುವುದು ದೊಡ್ಡ ದುರಂತ ಹಾಗೂ ವಿಜಯಪುರ ಜನರ ದುರ್ದೈವ. ಇಂತಹ ವ್ಯಕ್ತಿಯನ್ನು‌ ಚುನಾಯಿಸಿರುವ ವಿಜಯಪುರದ ಜನತೆ ನಾಚಿಕೆಯಿಂದ ತೆಲೆಬಾಗಬೇಕಾದ ಸ್ಥಿತಿ ಬಂದಿದೆ. ರಮೇಶ ಜಿಗಜಿಣಗಿ ಅಂಬೇಡ್ಕರರ ವಿಚಾರಧಾರೆ, ಚಿಂತನೆಗಳನ್ನು ಎಂದಿಗೂ ಪಾಲಿಸಿಲ್ಲ, ಬದಲಿಗೆ ಸದಾ ಮನುವಾದ ಪ್ರತಿಪಾದಿಸುತ್ತ ಅಂಬೇಡ್ಕರ ವಿಚಾರಗಳ ವಿರೋಧಿಯಾಗಿದ್ದಾರೆ ಎಂದು ಆರೋಪಿಸಿದರು.

ಜಿಲ್ಲೆಯ ದಲಿತ ಬಲಗೈ ಸಮುದಾಯದ ಜನ ಎರಡು ಬಾರಿ ಬೆಂಬಲಿಸಿದ್ದರೂ ಅವರು ನನಗೆ ಮತ ಹಾಕಿಲ್ಲ ಎಂದು ಜಿಗಜಿಣಗಿ ಹೇಳುತ್ತಿದ್ದಾರೆ. ಇದಕ್ಕೆ ಕಾಲವೇ ಉತ್ತರ ನೀಡಲಿದೆ. ಇಡೀ ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಜಿಗಜಿಣಗಿ, ಅವರು ಮತ ಹಾಕಿಲ್ಲ, ಇವರು ಹಾಕಿದ್ದಾರೆಂದು ಭಿನ್ನಮತ ತೋರಬಾರದು. ಒಮ್ಮೆ ತಮ್ಮನ್ನು ತಾವು ಪರಾಮರ್ಶಿಸಿಕೊಳ್ಳುವಂತೆ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಅಬ್ದುಲ್ ಹಮೀದ್ ಮುಶ್ರೀಫ್, ಗಂಗಾಧರ ಸಂಬಣ್ಣಿ, ಸೋಮನಾಥ ಕಳ್ಳಿಮನಿ ಉಪಸ್ಥಿತರಿದ್ದರು.