ಬಿಜೆಪಿ ಓಲೈಕೆಯ ರಾಜಕಾರಣ ಮಾಡಿಲ್ಲ

| Published : Apr 30 2024, 02:08 AM IST

ಸಾರಾಂಶ

ದೇಶದಲ್ಲಿ ಬಿಜೆಪಿ ನೀತಿ, ನೇತೃತ್ವ ಹಾಗೂ ನಿಯತ್ತು ಹೀಗೆ ಮೂರು ವಿಷಯಗಳನ್ನು ಜನರ ಮುಂದಿಟ್ಟು ಮತಯಾಚನೆ ಮಾಡುತ್ತಿದೆ. ಎಲ್ಲಕ್ಕಿಂದ ದೇಶವೇ ಮೊದಲು ಎಂಬ ನಂಬಿಕೆಯಿದೆ.

ಹುಬ್ಬಳ್ಳಿ:

ಕಾಂಗ್ರೆಸ್‌ ಪಕ್ಷದಂತೆ ಬಿಜೆಪಿ ಎಂದಿಗೂ ಓಲೈಕೆಯ ರಾಜಕಾರಣ ಮಾಡಿಲ್ಲ. ಸಬ್‌ ಕಾ ಸಾಥ್‌ ಸಬ್‌ ಕಾ ವಿಕಾಸ ಮೂಲಕ ದೇಶದ ಅಭಿವೃದ್ಧಿ ಸಂಕಲ್ಪದ ಅಡಿ ಕೆಲಸ ಮಾಡುತ್ತಿದೆ ಎಂದು ಬಿಜೆಪಿ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇಶದಲ್ಲಿ ಬಿಜೆಪಿ ನೀತಿ, ನೇತೃತ್ವ ಹಾಗೂ ನಿಯತ್ತು ಹೀಗೆ ಮೂರು ವಿಷಯಗಳನ್ನು ಜನರ ಮುಂದಿಟ್ಟು ಮತಯಾಚನೆ ಮಾಡುತ್ತಿದೆ. ಎಲ್ಲಕ್ಕಿಂದ ದೇಶವೇ ಮೊದಲು ಎಂಬ ನಂಬಿಕೆಯಿದೆ. ವಿದೇಶಾಂಗ ನೀತಿಯಿಂದ ಹಿಡಿದು ಆಂತರಿಕ ಭದ್ರತೆ ವರೆಗೆ ಇದೇ ನೀತಿಯಿದೆ. ಸಬ್ ಕಾ ಸಾಥ್‌ ಸಬ್ ಕಾ ವಿಕಾಸ ಎಂಬುದು ಬಿಜೆಪಿಯ ಮೂಲ ಮಂತ್ರವಾಗಿದೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಹೇಳಿದಂತೆ ಬಿಜೆಪಿಗೆ ನಾಲ್ಕು ಜಾತಿಗಳಿವೆ. ಬಡವರು, ರೈತರು, ಮಹಿಳೆಯರು ಮತ್ತು ಯುವಜನರು. ಇವರನ್ನು ಪ್ರಗತಿಯತ್ತ ಒಯ್ಯುವ ಉದ್ದೇಶದೊಂದಿಗೆ ನಾವು ಲೋಕಸಭಾ ಚುನಾವಣೆಯ ಪ್ರಣಾಳಿಕೆ ಘೋಷಣೆ ಮಾಡಿದ್ದೇವೆ. ಮೀಸಲಾತಿ ವಿಚಾರದಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರವು ಹಿಂದುಳಿದ ವರ್ಗಗಳ ಜನರಿಗೆ ಅನ್ಯಾಯ ಮಾಡುತ್ತಿದೆ. ಹಿಂದುಳಿದ ವರ್ಗಗಳಿಗೆ ನೀಡಲಾಗುತ್ತಿದ್ದ ಮೀಸಲಾತಿಯನ್ನು ಕಡಿತ ಮಾಡಿ ಸರ್ಕಾರವು ಮುಸ್ಲಿಮರಿಗೆ ಕೊಟ್ಟಿದ್ದು ಖಂಡನೀಯ. ಕೂಡಲೇ ಈ ಮೀಸಲಾತಿ ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ಗ್ಯಾರಂಟಿ ಹೆಸರಲ್ಲಿ ವಂಚನೆ:

ಕಾಂಗ್ರೆಸ್ಸಿನವರು ಗ್ಯಾರಂಟಿ ಶಬ್ದಕ್ಕೆ ಪೇಟೆಂಟ್ ಪಡೆದುಕೊಂಡವರಂತೆ ವರ್ತಿಸುತ್ತಿದ್ದಾರೆ. ಉದ್ಧರಣೆಯಲ್ಲಿ ತೀರ್ಥ ಕೊಟ್ಟಂತೆ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದಾರೆ. ಕಾಂಗ್ರೆಸ್‌ ಗ್ಯಾರಂಟಿ ಎಂಬುದು ಮಹಾವಂಚನೆ, ಇದೊಂದು ರಾಜಕೀಯ ಕುತಂತ್ರ ಎಂದು ಆರೋಪಿಸಿದರು.

ಡ್ಯಾಮೇಜ್‌ ಕಂಟ್ರೋಲ್‌:

ನೇಹಾ ಪ್ರಕರಣದಲ್ಲಿ ಇದೀಗ ಕಾಂಗ್ರೆಸ್ ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾಗಿದೆ. ಪರಿಸ್ಥಿತಿ ಗಂಭೀರತೆಯನ್ನು ಅರ್ಥ ಮಾಡಿಕೊಳ್ಳದೇ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರು ನಡೆದುಕೊಂಡಿದ್ದು ಖಂಡನಾರ್ಹ, ಕಾಂಗ್ರೆಸ್ಸಿನವರಿಗೆ ಬದ್ಧತೆ ಇದ್ದರೆ ಇಂತಹ ಕೃತ್ಯ ನಡೆಸುವವರಿಗೆ ಯೋಗಿ ಮಾದರಿಯ ನ್ಯಾಯ ನೀಡಲು ಎಂದು ಆಗ್ರಹಿಸಿದರು.

ಈ ವೇಳೆ ಶಾಸಕ ಮಹೇಶ ಟೆಂಗಿನಕಾಯಿ, ಹು-ಧಾ ಮಹಾನಗರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಮೂರ್ತಿ ಕುಲಕರ್ಣಿ, ರಾಜ್ಯ ಮಾಧ್ಯಮ ಸಹ ಸಂಚಾಲಕ ಪ್ರಶಾಂತ ಕೆಡಂಜೆ, ಗುರು ಪಾಟೀಲ ಸೇರಿದಂತೆ ಹಲವರಿದ್ದರು.