ಜೆಡಿಎಸ್ ನಾಮಾವಶೇಷವಾಗಲಿದೆ: ಸೊರಕೆ

| Published : May 05 2024, 02:00 AM IST

ಸಾರಾಂಶ

ಸಂವಿಧಾನದ ವಿರುದ್ಧ ದ್ವೇಷದ ಮನೋಭಾವ ಬೆಳೆದಿದೆ. ಬೆಲೆ ಏರಿಕೆ, ನಿರುದ್ಯೋಗ ತಾಂಡವವಾಡುತ್ತಿದೆ. ಸಮಾಜದಲ್ಲಿ ಸಾಮರಸ್ಯ ಇಲ್ಲದಂತಾಗಿದೆ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ರಾಜ್ಯ ಅಧ್ಯಕ್ಷ ವಿನಯಕುಮಾರ ಸೊರಕೆ ಹೇಳಿದರು.

ಕಾರವಾರ: ಈ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆದ್ದರೆ ದೇವೇಗೌಡ, ಎಸ್.ಆರ್. ಬೊಮ್ಮಾಯಿ, ಸಿದ್ದರಾಮಯ್ಯ ಮೊದಲಾದವರು ಕಟ್ಟಿದ್ದ ಜನತಾದಳ ಸಂಪೂರ್ಣ ನಾಮಾವಶೇಷವಾಗಲಿದೆ ಎಂದು ಕಾಂಗ್ರೆಸ್ ಪಕ್ಷದ ಕರ್ನಾಟಕ ಪ್ರಚಾರ ಸಮಿತಿ ಅಧ್ಯಕ್ಷ ವಿನಯಕುಮಾರ ಸೊರಕೆ ಭವಿಷ್ಯ ನುಡಿದರು.ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಈಗಾಗಲೇ ಹಲವು ಕಡೆ ಚುನಾವಣೆ ಆಗಿದೆ. ಮಂಡ್ಯ, ಹಾಸನ, ಬೆಂಗಳೂರು ಗ್ರಾಮಾಂತರ, ಕೋಲಾರ ನಾಲ್ಕು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ. ಎರಡನೇ ಹಂತದ ಚುನಾವಣೆಯಲ್ಲೂ ಸಾಕಷ್ಟು ಕ್ಷೇತ್ರ ಕೈವಶವಾಗಲಿದೆ. ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಜನರಿಗೆ ಸಾಕಷ್ಟು ಅನುಕೂಲವಾಗಿದೆ. ಇದರಿಂದ ಶೇ. ೧೦ರಿಂದ೧೫ ರಷ್ಟು ಬಿಜೆಪಿಯ ಮತ ಕಾಂಗ್ರೆಸ್‌ಗೆ ಬರಲಿದೆ. ರಾಹುಲ್ ಗಾಂಧಿ ಭಾರತ ಜೋಡೋ ಯಾತ್ರೆ ಮೂಲಕ ಮಹಿಳೆಯರ, ರೈತರ, ಯುವಕರನ್ನು ಭೇಟಿ ಮಾಡಿ ಅವರ ಭಾವನೆ ತಿಳಿದುಕೊಂಡು ಎಐಸಿಸಿ ಮೂಲಕ ಗ್ಯಾರಂಟಿ ಪ್ರಸ್ತಾಪ ಮಾಡಿದ್ದಾರೆ ಎಂದರು.ಮನಮೋಹನ ಸಿಂಗ್ ಅವಧಿಯಲ್ಲಿ ರೈತರ ₹೭೨ ಸಾವಿರ ಕೋಟಿ ಸಾಲಮನ್ನಾ ಮಾಡಿದ್ದರು. ಆದರೆ ನರೇಂದ್ರ ಮೋದಿ ಬಂಡವಾಳಶಾಹಿಗಳ ಸಾಲ ಮನ್ನಾ ಮಾಡುತ್ತಿದ್ದಾರೆ. ರೈತರ ಬಗ್ಗೆ ಗಮನ ನೀಡಿಲ್ಲ. ರೈತ ಚಳವಳಿ ಹಿಮ್ಮೆಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಶಾಸಕರನ್ನು ಖರೀದಿ ಮಾಡಿ ಸರ್ಕಾರ ಬೀಳಿಸುವ ಹೊಸ ಪದ್ಧತಿಯನ್ನು ಬಿಜೆಪಿ ಮಾಡುತ್ತಿದೆ. ಯುವಕರಲ್ಲಿ ದ್ವೇಷದ ಮನೋಭಾವ ಬೆಳೆಸಿ ರಾಜಕೀಯ ಲಾಭ ಪಡೆಯುತ್ತಿದೆ ಎಂದು ಹೇಳಿದರು.

ಉತ್ತರ ಕನ್ನಡದಲ್ಲೂ ಕಾಂಗ್ರೆಸ್‌ಗೆ ಪೂರಕ ವಾತಾವಣವಿದೆ. ಇಲ್ಲಿನ ಅಭ್ಯರ್ಥಿ ಡಾ. ಅಂಜಲಿ ನಿಂಬಾಳಕರ ವಿದ್ಯಾವಂತೆಯಾಗಿದ್ದಾರೆ. ಸಾಮಾಜಿಕ ಜವಾಬ್ದಾರಿ ನಿರ್ವಹಿಸಿಸಿದವರಾಗಿದ್ದಾರೆ. ಇಲ್ಲಿನ ಸಮಸ್ಯೆಗಳನ್ನು ಅರಿತು ಬಗೆಹರಿಸುವ ಭರವಸೆ ನೀಡಿದ್ದಾರೆ. ಬಿಜೆಪಿ ಸಂಸದ ಅನಂತಕುಮಾರ ಹೆಗಡೆ ೬ ಬಾರಿ ಸಂಸದರಾಗಿ ಜಿಲ್ಲೆಯ ಸಮಸ್ಯೆ ಬಗೆಹರಿಸಿಲ್ಲ. ಹಾಲಿ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಶಾಸಕರಾಗಿ, ಸಚಿವರಾಗಿ, ಸಭಾಧ್ಯಕ್ಷರಾಗಿ ಜಿಲ್ಲೆಗೆ ಏನೂ ಕೊಡುಗೆ ನೀಡಿಲ್ಲ ಎಂದು ಲೇವಡಿ ಮಾಡಿದರು.ರವೀಂದ್ರನಾಥ ನಾಯ್ಕ, ಶಂಭು ಶೆಟ್ಟಿ, ಜಿ.ಪಿ.ನಾಯ್ಕ ಇದ್ದರು.

ಆಶ್ವಾಸನೆಗಳನ್ನು ಬಿಜೆಪಿ ಈಡೇರಿಸಿಲ್ಲ: ಸೊರಕೆ

ಕೇಂದ್ರ ಬಿಜೆಪಿ ನೇತೃತ್ವದ ಸರ್ಕಾರ ಆಶ್ವಾಸನೆಗಳನ್ನು ಈಡೇರಿಸಿಲ್ಲ ಎಂದು ಕಾಂಗ್ರೆಸ್ ಪ್ರಚಾರ ಸಮಿತಿ ರಾಜ್ಯ ಅಧ್ಯಕ್ಷ ವಿನಯಕುಮಾರ ಸೊರಕೆ ಹೇಳಿದರು.

ಶನಿವಾರ ಕುಮಟಾದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳಿಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಅನ್ಯಾಯವಾಗಿದೆ. ತೆರಿಗೆ ಪಾಲು ಕೊಡುತ್ತಿಲ್ಲ. ಬರ ಪರಿಹಾರಕ್ಕಾಗಿ ಕೋರ್ಟ ಮೆಟ್ಟಿಲು ಹತ್ತಬೇಕಾಯಿತು ಎಂದರು.

ಸಂವಿಧಾನದ ವಿರುದ್ಧ ದ್ವೇಷದ ಮನೋಭಾವ ಬೆಳೆದಿದೆ. ಬೆಲೆ ಏರಿಕೆ, ನಿರುದ್ಯೋಗ ತಾಂಡವವಾಡುತ್ತಿದೆ. ಸಮಾಜದಲ್ಲಿ ಸಾಮರಸ್ಯ ಇಲ್ಲದಂತಾಗಿದೆ. ಮಹದಾಯಿ, ಮೇಕೆದಾಟು, ಭದ್ರಾ ಮೇಲ್ದಂಡೆ, ಕಾವೇರಿ ನೀರು ಮುಂತಾದ ಯೋಜನೆಗಳಲ್ಲಿ ಕೇಂದ್ರ ಮಲತಾಯಿ ಧೋರಣೆ ತೋರುತ್ತಿದೆ. ಇಡಿ, ಐಡಿ, ಸಿಬಿಐ ಮುಂತಾದವುಗಳನ್ನು ಬಳಸಿ ವಿರೋಧ ಪಕ್ಷಗಳನ್ನು ದಮನ ಮಾಡಲಾಗುತ್ತಿದೆ. ಮತಗೆದ್ದು ಆಯ್ಕೆಯಾದ ಶಾಸಕರನ್ನೇ ಖರೀದಿಸಿ ಆಡಳಿತ ಹಿಡಿಯುವ ಷಡ್ಯಂತ್ರಗಳನ್ನು ಮಾಡುತ್ತಾರೆ. ಇದೆಲ್ಲವನ್ನೂ ಗಮನಿಸಿರುವ ಮತದಾರರು ರಾಜ್ಯದಲ್ಲಿ ೨೦ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರಚಾರ ಸಮಿತಿಯ ಅಧ್ಯಕ್ಷನಾಗಿ ರಾಜ್ಯದ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಬಂದಿದ್ದೇನೆ. ಎಲ್ಲೆಡೆ ಕಾಂಗ್ರೆಸ್ ಪಾಲಿಗೆ ಉತ್ತಮ ವಾತಾವರಣ ಕಂಡಿದ್ದೇನೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಭುವನ್ ಭಾಗ್ವತ, ನಿವೇದಿತ್ ಆಳ್ವ, ಎ. ರವೀಂದ್ರ ನಾಯ್ಕ, ಹೊನ್ನಪ್ಪ ನಾಯಕ, ಸಚಿನ್ ನಾಯ್ಕ, ರತ್ನಾಕರ ನಾಯ್ಕ ಇತರರು ಇದ್ದರು.