ರಾಜ್ಯದಲ್ಲಿ ಬಿಜೆಪಿ ಯಾವ ಸಮುದಾಯಕ್ಕೂ ಟಿಕೆಟ್‌ ನೀಡಿಲ್ಲ: ಸಿಎಂ ಸಿದ್ದರಾಮಯ್ಯ

| Published : Apr 25 2024, 01:05 AM IST

ರಾಜ್ಯದಲ್ಲಿ ಬಿಜೆಪಿ ಯಾವ ಸಮುದಾಯಕ್ಕೂ ಟಿಕೆಟ್‌ ನೀಡಿಲ್ಲ: ಸಿಎಂ ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಸಾಮಾಜಿಕ ನ್ಯಾಯದ ವಿರುದ್ಧವಾಗಿದ್ದವರು ಬಿಜೆಪಿ ಎಂಬುವುದಕ್ಕೆ ಇದೇ ಸಾಕ್ಷಿ. ಎಲ್ಲ ಸಮಾಜವಷ್ಟೇ ಅಲ್ಲ, 6 ಜನ ಮಹಿಳೆಯರಿಗೂ ಟಿಕೆಟ್‌ ನೀಡಿದೆ ಕಾಂಗ್ರೆಸ್‌. ಗ್ಯಾರಂಟಿ ಅಪಹಾಸ್ಯ ಮಾಡಿದ್ದ ಮೋದಿಗೂ ಗ್ಯಾರಂಟಿ ಬೇಕಾಯ್ತು, ನಾಚಿಕೆ ಆಗಲ್ವ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಬೀದರ್‌

ಕರ್ನಾಟಕದಲ್ಲಿ ಮುಸ್ಲಿಂ, ಕ್ರಿಶ್ಚಿಯನ್‌, ಮರಾಠಾ ಹೋಗಲಿ ಕುರುಬ ಸಮುದಾಯದ ಯಾರೊಬ್ಬರಿಗೂ ಟಿಕೆಟ್‌ ನೀಡದ ಬಿಜೆಪಿ ಸಾಮಾಜಿಕ ನ್ಯಾಯದ ವಿರುದ್ಧವಾಗಿದ್ದವರು ಎಂಬುವುದಕ್ಕೆ ಸಾಕ್ಷಿ. ಇಂಥವರನ್ನು ಅಧಿಕಾರದಿಂದ ಕೆಳಗಿಳಿಸುವುದು ರಾಜ್ಯದ ಮತದಾರರ ಜವಾಬ್ದಾರಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಲ್ಲಿನ ಗಣೇಶ ಮೈದಾನದಲ್ಲಿ ಬುಧವಾರ ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಲೋಕಸಭಾ ಕಾಂಗ್ರೆಸ್‌ ಅಭ್ಯರ್ಥಿ ಸಾಗರ್‌ ಖಂಡ್ರೆ ಪರವಾಗಿ ಪ್ರಜಾಧ್ವನಿ -02 ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

6 ಜನ ಮಹಿಳೆಯರಿಗೆ ಕಾಂಗ್ರೆಸ್‌ ಟಿಕೆಟ್‌ ನೀಡುವ ಮೂಲಕ ಮಹಿಳೆಯರಿಗೆ ಆದ್ಯತೆ ನೀಡಿದ್ದಲ್ಲದೆ ಹಿಂದುಳಿದವರಿಗೆ, ಅಲ್ಪಸಂಖ್ಯಾತರಿಗೆ ಮರಾಠಾ ಸಮುದಾಯದವರಿಗೆ ಟಿಕೆಟ್‌ ನೀಡುವ ಪ್ರಯತ್ನ ಮಾಡುವ ಮೂಲಕ ಸರ್ವರಿಗೂ ಸಮಪಾಲು ಸಮ ಬಾಳು ಆಗಬೇಕು ಎಂಬ ಕಳಕಳಿ ನಮ್ಮದು. ದೇಶದ ಎಲ್ಲರಿಗೂ ಅಧಿಕಾರದಲ್ಲಿ ಸಂಪತ್ತಿನಲ್ಲಿ ಪಾಲು ಸಿಗಬೇಕು. ಆಗ ಮಾತ್ರ ದೇಶದ ಸರ್ವತೋಮುಖ ಅಭಿವೃದ್ಧಿ ಸಾಧ್ಯ ಹೊರತು ಕೆಲವೇ ಜನರ ಬಳಿ ಸಂಪತ್ತು ಹಾಗೂ ಅಧಿಕಾರ ಇದ್ದರೆ ಸಾಧ್ಯವಿಲ್ಲ ಎಂದರು.

ಅಧಿಕಾರ ಹಾಗೂ ಸಂಪತ್ತು ಎಲ್ಲವೂ ಬಲಾಢ್ಯರ ಕೈಯಲ್ಲಿದ್ದರೆ ಶೋಷಣೆ ನಿಲ್ಲೋಲ್ಲ. ದೇಶಕ್ಕೆ ರಾಜಕೀಯ ಸ್ವಾತಂತ್ರ್ಯ ಸಿಕ್ಕಿದೆ. ಆದರೆ ಆರ್ಥಿಕ ಮತ್ತು ಸಾಮಾಜಿಕ ಸ್ವಾತಂತ್ರ ಸಿಕ್ಕಿಲ್ಲ ಎಂದು ಅಂದೇ ಡಾ. ಬಿಆರ್‌ ಅಂಬೇಡ್ಕರ್‌ ಹೇಳಿದ್ದರು ಈ ನಿಟ್ಟಿನಲ್ಲಿ ಕಾಂಗ್ರೆಸ್‌ ಮಾತ್ರ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ ಅದಕ್ಕೆ ಇಂದಿರಾ ಗಾಂಧಿ ಅವರ ಗರೀಬಿ ಹಠಾವೋ ಆಂದೋಲನ ಸಾಕ್ಷಿ ಎಂದು ತಿಳಿಸಿದರು.

ಬಿಜೆಪಿ ಯಾವ ಭರವಸೆಗಳನ್ನೂ ಈಡೇರಿಸಿಲ್ಲ:

ನರೇಂದ್ರ ಮೋದಿಯವರು 10 ವರ್ಷಗಳಲ್ಲಿ ನೀಡಿದ್ದ ಯಾವ ಭರವಸೆಗಳನ್ನು ಬಗೆಹರಿಸಿಲ್ಲ. ನಾವು ಹಿಂದೆ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ 165 ರಲ್ಲಿ 158 ಭರವಸೆಗಳನ್ನು ಈಡೇರಿಸಿದ್ದಲ್ಲದೇ 30 ಹೊಸ ಯೋಜನೆಗಳನ್ನು ಜಾರಿ ಮಾಡಿದ್ದೇವೆ. 2023ರಲ್ಲಿ ನಮ್ಮ ಪ್ರಣಾಳಿಕೆಯಲ್ಲಿ ಅನೇಕ ಭರವಸೆ ನೀಡಿ, 82 ಭರವಸೆಗಳನ್ನು ಈಡೇರಿಸಿ 5 ಗ್ಯಾರಂಟಿಗಳನ್ನೂ ಅಧಿಕಾರಕ್ಕೆ ಬಂದ 8 ತಿಂಗಳಲ್ಲಿ ಜಾರಿ ಮಾಡಿದ್ದೇವೆ ಎಂದರು.

ಗ್ಯಾರಂಟಿಗಳಿಗೆ ಅಪಹಾಸ್ಯ ಮಾಡಿದ್ದ ಮೋದಿಗೆ ನಾಚಿಕೆ ಆಗಲ್ವ:

ಕರ್ನಾಟಕದಲ್ಲಿ ಕಾಂಗ್ರೆಸ್‌ನ ಗ್ಯಾರಂಟಿಗಳನ್ನು ಅಪಹಾಸ್ಯ ಮಾಡಿ, ಗ್ಯಾರಂಟಿ ಯೋಜನೆಗಳು ಜಾರಿಯಾಗಲ್ಲ, ಜಾರಿಯಾದ್ರೆ ರಾಜ್ಯದ ಆರ್ಥಿಕ ಸ್ಥಿತಿ ದಿವಾಳಿಯಾಗುತ್ತದೆ ಎಂದವರು ಇದೀಗ ಮೋದಿ ಗ್ಯಾರಂಟಿ ಮೋದಿ ಗ್ಯಾರಂಟಿ ಎಂದು ಘೋಷಿಸುತ್ತ ಸಾಗಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ನಾಚಿಕೆ ಆಗಲ್ವ ಎಂದು ಕಿಡಿ ಕಾರಿದರು.

ಬಸವಾದಿ ಶರಣರ ತತ್ವಾದರ್ಶಗಳಂತೆ ನುಡಿದು ನಡೆಯುವದು ಕಾಂಗ್ರೆಸ್‌ ಮಾತ್ರ. ಬಸವಣ್ಣನನನ್ನು ಸಾಂಸ್ಕೃತಿಕ ನಾಯಕ ಎಂದು ಘೋಷಿಸಿದ್ದಷ್ಟೇ ಅಲ್ಲ ಬಸವಕಲ್ಯಾಣ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿ ಅನುಭವ ಮಂಟಪ ನಿರ್ಮಾಣಕ್ಕೆ ವೇಗ ನೀಡಿದ್ದೇವೆ. ಇದನ್ನು ಬಿಜೆಪಿಯ ಯಡಿಯೂರಪ್ಪ ಅಥವಾ ಬೊಮ್ಮಾಯಿ ಮಾಡಿದ್ರಾ ಎಂದು ಪ್ರಶ್ನಿಸಿ, ಕೇಂದ್ರದಲ್ಲಿ ಒಂದು ದಶಕ ಕಾಲ ಇದ್ದ ಬಿಜೆಪಿಯ ಭಗವಂತ ಖೂಬಾ ಅವರನ್ನು ಮನೆಗೆ ಕಳಿಸಿ ಕಾಂಗ್ರೆಸ್‌ ಅಭ್ಯರ್ಥಿಯನ್ನು ಗೆಲ್ಲಿಸಿ ಎಂದು ಕರೆ ನೀಡಿದರು.

ಯುವ ಜನಾಂಗಕ್ಕೆ ಮೂರು ನಾಮ ಹಾಕಿದ ಮೋದಿ:

ವರ್ಷಕ್ಕೆ 2ಕೋಟಿ ಉದ್ಯೋಗ ಸಿಗುತ್ತದೆ ಎಂದು ಹೇಳಿ ಯುವಕರೆಲ್ಲ ಮೋದಿ ಮೋದಿ ಎನ್ನಲು ಆರಂಭಿಸಿದರು ನಂತರ ಉದ್ಯೋಗ ಕೇಳಲು ಹೋದರೆ ಪಕೋಡಾ ಮಾರಲು ಹೋಗಿ, ಬೋಂಡಾ ಮಾರಲು ಹೋಗಿ ಎಂದು ಹೇಳುವ ಮೂಲಕ ತಿರುಪತಿ ತಿಮ್ಮಪ್ಪನ ಮೂರು ನಾಮ ಹಾಕಿದರು ಇಂಥವರಿಗೆ ಯುವ ಜನಾಂಗ ಮತ ಹಾಕ್ತೀರಾ ಎಂದು ಪ್ರಶ್ನಿಸಿದರು.

ಸಮಾವೇಶದಲ್ಲಿ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಸಚಿವರಾದ ಈಶ್ವರ ಖಂಡ್ರೆ, ರಹೀಮ್‌ ಖಾನ್‌, ಮುಖ್ಯಮಂತ್ರಿಗಳ ಸಲಹೆಗಾರರಾದ ಶಾಸಕ ಬಿಆರ್‌ ಪಾಟೀಲ್‌, ಮಾಜಿ ಸಚಿವ ರಾಜಶೇಖರ ಪಾಟೀಲ್‌, ಶಾಸಕರಾದ ಅಜಯ ಸಿಂಗ್‌, ಅಭ್ಯರ್ಥಿ ಸಾಗರ್‌ ಖಂಡ್ರೆ, ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.