ಸಾರಾಂಶ
ಹಿಂದಿನ 2 ಲೋಕಸಭಾ ಚುನಾವಣೆಗೂ ಮುಂಚೆ ಯುವ ಮತದಾರರನ್ನು ಸೆಳೆಯಲು 2 ಕೋಟಿ ಉದ್ಯೋಗ ಸೃಷ್ಠಿಸುವ ಭರವಸೆ ನೀಡಿದ್ದ ಬಿಜೆಪಿ ತನ್ನ 10 ವರ್ಷದ ಅವಧಿಯಲ್ಲಿ ಮಾತು ಉಳಿಸಿಕೊಳ್ಳಲಾಗದೆ, ತಪ್ಪಿದೆ ಎಂದು ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಯುವ ಕಾಂಗ್ರೆಸ್ ಆಶ್ರಯದಲ್ಲಿ ಬಿ.ಎಚ್.ಕೈಮರದಿಂದ ಬೈಕ್ ಜಾಥಾ। ಅಂಬೇಡ್ಕರ್ ವೃತ್ತದಲ್ಲಿ ಪ್ರಚಾರ ಸಭೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಹಿಂದಿನ 2 ಲೋಕಸಭಾ ಚುನಾವಣೆಗೂ ಮುಂಚೆ ಯುವ ಮತದಾರರನ್ನು ಸೆಳೆಯಲು 2 ಕೋಟಿ ಉದ್ಯೋಗ ಸೃಷ್ಠಿಸುವ ಭರವಸೆ ನೀಡಿದ್ದ ಬಿಜೆಪಿ ತನ್ನ 10 ವರ್ಷದ ಅವಧಿಯಲ್ಲಿ ಮಾತು ಉಳಿಸಿಕೊಳ್ಳಲಾಗದೆ, ತಪ್ಪಿದೆ ಎಂದು ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಹೇಳಿದರು.
ಮಂಗಳವಾರ ಯುವ ಕಾಂಗ್ರೆಸ್ ಆಯೋಜಿಸಿದ್ದ ಬೈಕ್ ಜಾಥಾ- ಚುನಾವಣಾ ಪ್ರಚಾರ ಸಭೆಯಲ್ಲಿ ಖಾಲಿ ಚೊಂಬು ಪ್ರದರ್ಶಿಸಿ ಮಾತನಾಡಿದರು. 2 ಕೋಟಿ ಉದ್ಯೋಗ ಸೃಷ್ಠಿಸುವ ಭರವಸೆ ನೀಡಿದ್ದ ಮೋದಿ ಸರಕಾರ ಉದ್ಯೋಗ ನೀಡುವ ಉದ್ಯಮಿಗಳಿಗೂ ಅವಕಾಶ ನೀಡದೆ, ಯುವಕರನ್ನು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ. ಪ್ರಧಾನಿ ಕಾಂಗ್ರೆಸ್ ಗೆದ್ದರೆ ಮಹಿಳೆಯರ ಮಂಗಳ ಸೂತ್ರ ಕಳೆದುಕೊಳ್ಳುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ. ಇದು ಅವರಿಗೆ ಶೋಭೆಯಲ್ಲ. ಅಧಿಕಾರ ಕಳೆದುಕೊಳ್ಳುವ ಭಯದಲ್ಲಿ ಹತಾಶರಾಗಿದ್ದಾರೆ ಎಂದರು. ಈ ಕ್ಷೇತ್ರದ ಮಾಜಿ ಶಾಸಕರು ತಮ್ಮ ಸೋಲಿನ ಆಘಾತದಿಂದ ಹೊರಬರಲಾರದೆ ತಮ್ಮ ಸ್ಥಿಮಿತ ಕಳೆದುಕೊಂಡು ಮಾತನಾಡುತ್ತಿದ್ದಾರೆ. ಈಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಇದೆ. ಶೃಂಗೇರಿ ಕ್ಷೇತ್ರದಲ್ಲಿ 3 ನಿಗಮ ಮಂಡಳಿ ಅಧ್ಯಕ್ಷ ರಿದ್ದಾರೆ. ನನ್ನ ಕರ್ತವ್ಯ, ನನ್ನ ಕೆಲಸ ಏನು ? ಎಂದು ಹೇಳಬೇಕಾಗಿಲ್ಲ. ಮತದಾರರು ಹೇಳುತ್ತಾರೆ. ತಾವು ಪಟ್ಟಣವನ್ನು ಹಾಳು ಮಾಡಿ ಪಟ್ಟಣದ ಜನರ ನೆಮ್ಮದಿ ಕೆಡಿಸಿ ಈಗ ಕಾಂಗ್ರೆಸ್‌ನವರು ಸರಿಪಡಿಸಿ ಎಂದು ಪಲಾಯಾನ ಮಾಡುವ ಮನೋಭಾವನೆ ಬಿಡಬೇಕು. ಬಸ್ತಿಮಠದಿಂದ ಪ್ರವಾಸಿಮಂದಿರದ ವರೆಗೆ ರಸ್ತೆ ಆಗಲಿಕರಣ ಮಾಡಿ ಪಟ್ಟಣದ ಜನರು ನೆಮ್ಮದಿಯಾಗಿ ಉಸಿರಾಡುವಂತೆ ನಾವು ಮಾಡುತ್ತೇವೆ.ಶಾಶ್ವತ ಕುಡಿಯುವ ನೀರಿಗೆ ಯೋಜನೆ ರೂಪಿಸಲಾಗುತ್ತಿದೆ ಎಂದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಅಂಶುಮಂತ್ ಮಾತನಾಡಿ, ಮಾಜಿ ಶಾಸಕರು ನಿರಂತರವಾಗಿ ಅನ್ಯಾಯ ಮಾಡಿಕೊಂಡು ಬಂದಿದ್ದಾರೆ. ಈ ಕ್ಷೇತ್ರದಲ್ಲಿ ಭೂಮಿ ಹಕ್ಕನ್ನು ಕಸಿದುಕೊಳ್ಳುವಂತೆ ಮಾಡಿ ರೈತರಿಗೆ ಭೂಗಳ್ಳರು ಎಂಬ ಪಟ್ಟ ಕಟ್ಟಿದ್ದಾರೆ. ಹೊನ್ನೇಕೊಡಿಗೆ- ನರಸಿಂಹರಾಜಪುರಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಕೆಲಸ ನಡೆಯುತ್ತಿದೆ. ಸ್ಥಳೀಯವಾಗಿ ಯುವಕರಿಗೆ ಉದ್ಯೋಗ ಸೃಷ್ಠಿಸುವ ಉದ್ಯಮಿಗಳಿಗೆ ಪ್ರೋತ್ಸಾಹ ನೀಡುತ್ತಿದ್ದೇವೆ ಎಂದರು.ಸಭೆಗೂ ಮುನ್ನಾ ಕೈಮರದಿಂದ ಟಿ.ಬಿ.ಸರ್ಕಲ್ ವರೆಗೆ ಯುವ ಕಾಂಗ್ರೆಸ್ ಕಾರ್ಯಕರ್ತರು ಬೈಕ್ ಜಾಥ ನಡೆಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರಾದ ಗೇರ್‌ಬೈಲ್ ನಟರಾಜ್, ಪಿ.ಅರ್.ಸದಾಶಿವ, ಕೆ.ಎಂ. ಸುಂದರೇಶ್, ಸಾಜು, ಪ್ರಶಾಂತಶೆಟ್ಟಿ, ಎಲ್ದೋಸ್, ಉಪೇಂದ್ರ ಮುಂತಾದವರು ಉಪಸ್ಥಿತರಿದ್ದರು.