ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಆರೋಪಿಸಿ ಬಿಜೆಪಿ ಜಿಲ್ಲಾ ಸಮಿತಿಯಿಂದ ದಿವಾಳಿ ಸರ್ಕಾರದ ಶವಯಾತ್ರೆಯನ್ನು ಮಾಡಿ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಕನ್ನಡಪ್ರಭ ವಾರ್ತೆ ರಾಯಚೂರು
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ನೇತೃತ್ವದ ರಾಜ್ಯದ ಕಾಂಗ್ರೆಸ್ ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಆರೋಪಿಸಿ ಬಿಜೆಪಿ ಜಿಲ್ಲಾ ಸಮಿತಿಯಿಂದ ದಿವಾಳಿ ಸರ್ಕಾರದ ಶವಯಾತ್ರೆಯನ್ನು ಮಾಡಿ ಗುರುವಾರ ಪ್ರತಿಭಟನೆ ನಡೆಸಲಾಯಿತು.ಸ್ಥಳೀಯ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಸೇರಿದ ಪಕ್ಷದ ಕಾರ್ಯಕರ್ತರು ರಾಜ್ಯ ಸರ್ಕಾರದ ಪ್ರತಿಕೃತಿಯನ್ನು ರಚಿಸಿ ಅದರ ಮುಂದೆ ಕುಳಿತು ಬಾಯಿ ಬಾಯಿ ಬಡಿದುಕೊಂಡು, ಘೋಷಣೆಗಳನ್ನು ಕೂಗಿದರ ನಂತರ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು, ಸರ್ಕಾರ ವಿವಿಧ ಕ್ಷೇತ್ರಗಳಿಗೆ ಸಾವಿರಾರು ಕೋಟಿ ರು. ಬಾಕಿ ಉಳಿಸಿಕೊಂಡಿದೆ. ರೈತರ ಸಂಕಷ್ಟಕ್ಕೆ ಪರಿಹಾರ ನೀಡಲು ಹಣವಿಲ್ಲದ ಪರಿಸ್ಥಿತಿಯಲ್ಲೂ ಹೊಸ ಹೊಸ ಯೋಜನೆಗಳನ್ನು ಘೋಷಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದ ಆರ್ಥಿಕ ನಿರ್ವಹಣೆಯು ಸಂಪೂರ್ಣವಾಗಿ ಹಳಿ ತಪ್ಪಿದೆ ಎಂದು ದೂರಿದರು.ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ತೀವ್ರ ಬರ ಆವರಿಸಿದೆ ಆದರೆ ರಾಜ್ಯ ಸರ್ಕಾರವು ಇಲ್ಲಿ ತನಕ ಬರ ಪರಿಹಾರದ ಕ್ರಮಗಳನ್ನು ಜಾರಿಗೊಳಿಸಿಲ್ಲ, ಮಳೆ ಕೊರತೆ ಯಿಂದಾಗಿ ರೈತರು ಸಂಕಷ್ಟಕ್ಕೆ ಸಿಲುಕಿದ್ದು, ಗ್ರಾಮೀಣ ಭಾಗದ ಜನರು ಕೆಲಸವಿಲ್ಲದೇ ದೊಡ್ಡ ಪಟ್ಟಣಗಳಿಗೆ ಗುಳೆ ಹೋಗುತ್ತಿದ್ದಾರೆ, ಕುಡಿಯುವ ನೀರಿನ ಹಾಹಾ ಕಾರವು ಸೃಷ್ಟಿಯಾಗುತ್ತಿದೆ, ಅಳಿದುಳಿದ ಬೆಳೆಗಳನ್ನು ಉಳಿಸಿಕೊಳ್ಳಲು ರೈತರು ಪರದಾಡುತ್ತಿದ್ದರು ಅವರಿಗೆ ಸಮರ್ಪಕ ಕರೆಂಟ್ ಸರಬರಾಜು ಮಾಡುವಲ್ಲಿಯೂ ಡಿಕೆಶಿ ನೇತೃತ್ವದ ಸರ್ಕಾರವು ಸೋತು ಹೋಗಿದೆ ಎಂದು ಆರೋಪಿಸಿದರು.
ಬರ ಪರಿಸ್ಥಿತಿಯ ಗಂಭೀರತೆಯನ್ನು ಸರ್ಕಾರ ಅರಿಯುತ್ತಿಲ್ಲ, ವಿವಿಧ ತಾಲೂಕುಗಳ ಬರ ಘೋಷಣೆ ವಿಚಾರದಲ್ಲಿಯೇ ತಾರತಮ್ಯ ಎಸಗಲಾಗುತ್ತಿದ್ದು, ಇದರಿಂದಾ ಗಿಯೇ ಆಡಳಿತರೂಡ ಕಾಂಗ್ರೆಸ್ ಶಾಸಕರೇ ರಾಜೀನಾಮೆ ಕೊಡುವಂತಹ ದುಸ್ಥಿತಿಯು ಸರ್ಕಾರದಲ್ಲಿ ನಿರ್ಮಾಣಗೊಂಡಿದೆ. ಬರ ಕಾಮಗಾರಿ, ಪರಿಹಾರ ಕೊಡದೇ ಕಾಲಹರಣ ಮಾಡುತ್ತಿರುವ ಸಿಎಂ ಡಿಕೆಶಿ ತಮ್ಮ ಖಜಾನೆ ಖಾಲಿಯಾಗಿದ್ದರೂ ಪರಿಹಾರ ನೀಡುವುದಾಗಿ ಸುಳ್ಳು ಹೇಳುತ್ತಿದ್ದಾರೆ. ಗ್ಯಾರಂಟಿ ಯೋಜನೆ ಗಳು, ನಾನಾ ಅಭಿವೃದ್ಧಿ ಕೆಲಸಗಳಿಗೆ ಸರ್ಕಾರದಲ್ಲಿ ದುಡ್ಡಿಲ್ಲ, ಬರೀ ಹೊಸ ಹೊಸ ಯೋಜನೆಗಳನ್ನು ಘೋಷಣೆ ಮಾಡುತ್ತಿರುವ ಕಾಂಗ್ರೆಸ್ ಸರ್ಕಾರವು ಅವುಗಳಿಗೆ ಅನುದಾನವನ್ನು ಹೊಂದಿಸಲು ಸಾಧ್ಯವಾಗಿಲ್ಲ, ಇದಕ್ಕೆ ಆರ್ಥಿಕ ಇಲಾಖೆ ವ್ಯಕ್ತಪಡಿಸಿರುವ ಆಕ್ಷೇಪಣೆಯೇ ಸಾಕ್ಷಿಯಾಗಿದೆ ಎಂದು ಕುಟುಕಿದರು.ನೌಕರರು, ಹೊರಗುತ್ತಿಗೆ ಸಿಬ್ಬಂದಿಗೆ ಸಂಬಳ ಕೊಡದಂತಹ ದುಸ್ಥಿತಿಗೆ ಸರ್ಕಾರ ತಲುಪಿದ್ದು, ಎನ್‌ಡಿಆರ್‌ಎಫ್ ನಿಯಮಗಳಂತೆ ಪರಿಹಾರ ನೀಡುವುದಾಗಿ ಹೇಳುವ ಸರ್ಕಾರ ಹಿಂದೇಟು ಹಾಕುತ್ತಲೇ ಇದೆ. ರಾಜ್ಯದಲ್ಲಿ ವಿದ್ಯುತ್ ಕೊರತೆ ಎದುರಾಗಿದ್ದು, ಎಲ್ಲೆಡೆ ಅನಧಿಕೃತ ಲೋಡ್ ಶೆಡ್ಡಿಂಗ್‌ನಿಂದಾಗಿ ಅನ್ನದಾತರು, ಜನಸಾಮಾನ್ಯರು ರೋಸಿ ಹೋಗಿದ್ದಾರೆ.
ರಾಜ್ಯದ ಜನರ ತೆರಿಗೆ ಹಣವನ್ನು ಸಮರ್ಪಕವಾಗಿ ನಿರ್ವಹಿ ಸದೆ ರೈತರು, ಗುತ್ತಿಗೆದಾರರು, ಸಾರಿಗೆ ಸಂಸ್ಥೆಗಳು, ಆರೋಗ್ಯ ಸಿಬ್ಬಂದಿ, ಅತಿಥಿ ಶಿಕ್ಷಕರು ಸೇರಿದಂತೆ ವಿವಿಧ ವರ್ಗಗಳಿಗೆ ಹಣ ಬಾಕಿ ಉಳಿಸಿರುವ ಸರ್ಕಾರದ ವಿರುದ್ಧ ಈ ಪ್ರತಿಭಟನೆ ನಡೆಸಲಾಗುತ್ತಿದೆ ಎಂದು ಹೇಳಿದರು.ಕಳೆದ ಸೆ.17ರಂದು ಹಣಕಾಸು ಇಲಾಖೆಯೇ ಮುಖ್ಯಮಂತ್ರಿಗಳಿಗೆ ಬರೆದಿರುವ ಪತ್ರ ರಾಜ್ಯದ ಆರ್ಥಿಕ ಪರಿಸ್ಥಿತಿಯ ಗಂಭೀರತೆ ಯನ್ನು ಬಯಲಿಗೆಳೆದಿದೆ. ಹೊಸ ಯೋಜನೆಗಳಿಗೆ ಹಣಕಾಸು ಒದಗಿಸುವುದು ಕಷ್ಟವಾಗಿದ್ದು, ರಾಜ್ಯದ ಸಾಲ ಮಾಡುವ ಸಾಮರ್ಥ್ಯವನ್ನು ಈಗಾಗಲೇ ಬಹುತೇಕ ಬಳಸಿಕೊಳ್ಳಲಾಗಿದೆ ಎಂಬ ಎಚ್ಚರಿಕೆಯನ್ನು ಹಣಕಾಸು ಇಲಾಖೆ ನೀಡಿದೆ ಎಂದರು.
ಇದು ಸಾಮಾನ್ಯ ಪತ್ರವಲ್ಲ. ರಾಜ್ಯದ ಹಣಕಾಸಿನ ಸ್ಥಿತಿಯ ಕುರಿತು ಸರ್ಕಾರದ ಸ್ವಂತ ಇಲಾಖೆಯೇ ನೀಡಿರುವ ಗಂಭೀರ ಎಚ್ಚರಿಕೆ. ಈ ಹಿನ್ನೆಲೆಯಲ್ಲಿ ರಾಜ್ಯದ ಆರ್ಥಿಕ ಪರಿಸ್ಥಿತಿಯ ಕುರಿತು ಸರ್ಕಾರ ತಕ್ಷಣ ಶ್ವೇತಪತ್ರ ಹೊರಡಿಸಬೇಕು ಎಂದು ಅವರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಪಕ್ಷದ ಹಿರಿಯ-ಕಿರಿಯ ಮುಖಂಡರು, ಕಾರ್ಯಕರ್ತರು, ವಿವಿಧ ಮೋರ್ಚಾಗಳ ಪ್ರಮುಖರು ಸೇರಿದಂತೆ ಅನೇಕರು ಇದ್ದರು.---
24ಕೆಪಿಆರ್‌ಸಿಆರ್ 01: ರಾಯಚೂರಿನ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಬಿಜೆಪಿಯಿಂದ ದಿವಾಳಿ ಸರ್ಕಾರದ ಶವಯಾತ್ರೆ ಮಾಡುವುದರ ಮುಖಾಂತರ ಪ್ರತಿಭಟನೆಯನ್ನು ನಡೆಸಲಾಯಿತು.