ಡಾ. ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ, ಬಿಜೆಪಿ ಗಾಜನೂರು ಮಹಾಶಕ್ತಿ ಕೇಂದ್ರ ಹಾಲಲಕ್ಕವಳಿಯಿಂದ ಆಯೋಜಿಸಿದ್ದ ಪಾದಯಾತ್ರೆಯಲ್ಲಿ ಬಿಜೆಪಿ ನಾಯಕರು ಹೆಜ್ಜೆ ಹಾಕಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಡಾ. ಕಸ್ತೂರಿ ರಂಗನ್ ವರದಿ ಜಾರಿ ವಿರೋಧಿಸಿ, ಬಿಜೆಪಿ ಗಾಜನೂರು ಮಹಾಶಕ್ತಿ ಕೇಂದ್ರ ಹಾಲಲಕ್ಕವಳಿಯಿಂದ ಆಯೋಜಿಸಿದ್ದ ಪಾದಯಾತ್ರೆಯಲ್ಲಿ ಬಿಜೆಪಿ ನಾಯಕರು ಹೆಜ್ಜೆ ಹಾಕಿದರು.

2014ರಲ್ಲಿ ಕೇಂದ್ರ ಸರ್ಕಾರ ಜಾರಿಗೆ ತಂದ ಕಸ್ತೂರಿ ರಂಗನ್ ವರದಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಇದೀಗ ಏಳನೇ ಅಧಿಸೂಚನೆ ಹೊರಡಿಸಿರುವುದು ಮಲೆನಾಡಿನ ಜನರಲ್ಲಿ ಗೊಂದಲ ಹಾಗೂ ಆತಂಕಕ್ಕೆ ಕಾರಣವಾಗಿದೆ. ರೈತರು ಮತ್ತು ಸಾರ್ವಜನಿಕರ ಅಹವಾಲುಗಳನ್ನು ಆಲಿಸುವ ವ್ಯವಸ್ಥೆಯೇ ಇಲ್ಲದಂತಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಗಾಜನೂರು ಗ್ರಾಪಂ ವ್ಯಾಪ್ತಿಯ 10 ರಿಂದ 15 ಗ್ರಾಮಗಳನ್ನು ಪರಿಸರ ಸೂಕ್ಷ್ಮ ವಲಯ (ಇಎಸ್‌ಎ) ಎಂದು ಗುರುತಿಸಿರುವುದು ಸ್ಥಳೀಯರ ಆತಂಕಕ್ಕೆ ಪ್ರಮುಖ ಕಾರಣವಾಗಿದೆ. ಈ ಪ್ರದೇಶದಲ್ಲಿ ಹಲವು ದಶಕಗಳಿಂದ ವಾಸವಾಗಿರುವ ರೈತರು ಹಾಗೂ ಸಾಗುವಳಿದಾರರ ಹಕ್ಕುಗಳನ್ನು ಮೊದಲು ಕೇಂದ್ರ ಸರ್ಕಾರ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ಮುಳುಗಡೆ ಸಂತ್ರಸ್ತರನ್ನು ಅಂದಿನ ಸರ್ಕಾರವೇ 1963ರಲ್ಲಿ ಈ ಪ್ರದೇಶಗಳಿಗೆ ಪುನರ್ವಸತಿ ಕಲ್ಪಿಸಿತ್ತು. ಬಳಿಕದ ಸರ್ಕಾರಗಳು ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆಗೆ ಸಂಬಂಧಿಸಿದ ಹಲವು ಕಾನೂನುಗಳನ್ನು ಜಾರಿಗೊಳಿಸಿ ದರೂ, ಇಲ್ಲಿನ ಜನರು ಸಂಕಷ್ಟಗಳ ನಡುವೆಯೇ ಬದುಕು ಕಟ್ಟಿಕೊಂಡಿದ್ದಾರೆ. ಇದೀಗ ಬ್ರಿಟಿಷರ ಕಾಲದ ಕಾನೂನಿನ ಆಧಾರದಲ್ಲಿ ಈ ಪ್ರದೇಶ ಅರಣ್ಯ ಇಲಾಖೆಗೆ ಸೇರಿದ್ದು ಎಂದು ಹೇಳಿ ಸಾಗುವಳಿದಾರರನ್ನು ಒಕ್ಕಲೆಬ್ಬಿಸುವ ಪ್ರಯತ್ನ ನಡೆಯುತ್ತಿದೆ. ಮೊದಲು ರೈತರ ಹಕ್ಕುಗಳನ್ನು ಪ್ರತಿಷ್ಠಾಪಿಸಬೇಕು ಎಂದು ಆಗ್ರಹಿಸಿದರು.

ಅರಣ್ಯ ಸಮಸ್ಯೆ ಪರಿಹಾರಕ್ಕೆ ರಾಜ್ಯ ಸರ್ಕಾರ ಸರ್ವಪಕ್ಷ ನಿಯೋಗ ವನ್ನು ಕೇಂದ್ರಕ್ಕೆ ಕೊಂಡೊಯ್ಯಬೇಕು. ಕೇವಲ ರಾಜಕೀಯ ಹೇಳಿಕೆಗಳಿಗೆ ಸೀಮಿತವಾಗದೆ ಶಾಶ್ವತ ಪರಿಹಾರಕ್ಕೆ ಕ್ರಮ ಕೈಗೊಳ್ಳಬೇಕು. ಅರಣ್ಯ ಮತ್ತು ಕಂದಾಯ ಇಲಾಖೆಗಳ ನಡುವಿನ ಸಮನ್ವಯದ ಕೊರತೆಯೇ ಇಂದಿನ ಸಮಸ್ಯೆಗೆ ಕಾರಣವಾಗಿದೆ ಎಂದು ಪ್ರತಿಭಟನಾನಿರತರು ಆಕ್ರೋಶ ಹೊರಹಾಕಿದರು.

ಹಾಲಿ ಸಾಗುವಳಿ ಮಾಡುತ್ತಿರುವ ರೈತರು ಹಾಗೂ ಸಾರ್ವಜನಿಕರನ್ನೇ ಆ ಪ್ರದೇಶದ ಕಾನೂನು ಬದ್ಧ ವಾರಸುದಾರರು ಎಂದು ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯರಾದ ಆರ್ ಕೆ ಸಿದ್ದರಾಮಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಳಾದ ಹರಿಕೃಷ್ಣ, ಜಿಲ್ಲಾ ಉಪಾಧ್ಯಕ್ಷರಾದ ಪದ್ಮಿನಿ ರಾವ್, ಕಾರ್ಯದರ್ಶಿಗಳಾದ ಶಾಂತ ಸುರೇಂದ್ರ, ತೀರ್ಥಹಳ್ಳಿ ಮಂಡಲದ ಅಧ್ಯಕ್ಷರು ನವೀನ್ ಹೆದ್ದೂರ್, ಗಾಜನೂರು ಮಹಾಶಕ್ತಿ ಕೇಂದ್ರ ಅಧ್ಯಕ್ಷರಾದ ಕುಮಾರ್, ಹಿರಿಯರಾದ ಶಿವನಂಜಪ್ಪ, ಜಿಲ್ಲೆಯ ಪ್ರಮುಖರಾದ ಕುಪೇಂದ್ರ, ಪೆರುಮಳ್, ಹಾಲ ಲಕ್ಕವಳ್ಳಿಯ ಹಿರಿಯರಾದ ಜಯರಾಮ್, ಸತೀಶ್ ಶಿವಮೊಗ್ಗ ಜಿಲ್ಲೆ ಹಾಗೂ ನಗರದ ಮೋರ್ಚಾಗಳ ಪದಾಧಿಕಾರಿಗಳು, ಪ್ರಮುಖರು ಉಪಸ್ಥಿತರಿದ್ದರು.

ಇಂದು ತೋಟದಕೆರೆಯಿಂದ: ಹಾಲ ಲಕ್ಕವಳ್ಳಿಯಿಂದ ಪ್ರಾರಂಭವಾದ ಪಾದಯಾತ್ರೆ ಕಡೇಕಲ್, ಕುಸ್ಕೂರು, ಯರಗನಾಳ್, ಸಂಜೆ 5ಕ್ಕೆ ಲಕ್ಕಿನಕೊಪ್ಪ ಸರ್ಕಲ್ ತಲುಪಿತು. ಸೆ.11 ರಂದು ಬೆಳಗ್ಗೆ 8.30ಕ್ಕೆ ತೋಟದಕೆರೆಯಿಂದ ಆರಂಭವಾಗುವ ಪಾದಯಾತ್ರೆ ಹುರಳಿಹಳ್ಳಿ, ಗಣಿದಾಳ್ ಮಾರ್ಗವಾಗಿ 11.30ಕ್ಕೆ ಉಂಬ್ಳೆ ಬೈಲು ತಲುಪಿ ಅಲ್ಲಿ ಸಾರ್ವಜನಿಕ ಸಭೆ ಏರ್ಪಡಿಸಲಾಗಿದೆ. ನಂತರ ಸಾರಿಗೆರೆ, ಕೈದೊಟ್ಲು, ಸಿದ್ದಮಾಜಿ ಹೊಸೂರು ಮಾರ್ಗವಾಗಿ ಲಿಂಗಾಪುರ ಬಳಿಕ ಸಂಜೆ 5.30ಕ್ಕೆ ಕಾಕನಹಸೂಡಿ ತಲುಪಲಿದೆ.