ಕಾಂಗ್ರೆಸ್‌ ವಿರುದ್ಧ ಹೊನ್ನಾಳಿಯಲ್ಲಿ ಬಿಜೆಪಿ ಧರಣಿ

| Published : Apr 06 2025, 01:46 AM IST

ಸಾರಾಂಶ

ರಾಜ್ಯದ ಕಾಂಗ್ರೆಸ್ ಸರ್ಕಾರ ದಿನನಿತ್ಯ ಉಪಯೋಗಿಸುವ ವಸ್ತುಗಳ ಬೆಲೆಗಳನ್ನು ಏರಿಕೆ ಮಾಡಿರುವುದನ್ನು ಖಂಡಿಸಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ತಾಲೂಕು ಬಿಜೆಪಿ ಘಟಕದಿಂದ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ತಾಲೂಕು ಕಚೇರಿ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಅಗತ್ಯ ವಸ್ತುಗಳ ಬೆಲೆ ಏರಿಕೆ ಬಗ್ಗೆ ಖಂಡನೆ । ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವ

ಕನ್ನಡಪ್ರಭ ವಾರ್ತೆ ಹೊನ್ನಾಳಿ

ರಾಜ್ಯದ ಕಾಂಗ್ರೆಸ್ ಸರ್ಕಾರ ದಿನನಿತ್ಯ ಉಪಯೋಗಿಸುವ ವಸ್ತುಗಳ ಬೆಲೆಗಳನ್ನು ಏರಿಕೆ ಮಾಡಿರುವುದನ್ನು ಖಂಡಿಸಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ನೇತೃತ್ವದಲ್ಲಿ ತಾಲೂಕು ಬಿಜೆಪಿ ಘಟಕದಿಂದ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ಪಟ್ಟಣದ ಸಂಗೊಳ್ಳಿ ರಾಯಣ್ಣ ವೃತ್ತದಿಂದ ತಾಲೂಕು ಕಚೇರಿ ವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿ, ಜನ ಸಾಮಾನ್ಯರು ಉಪಯೋಗಿಸುವ ನಿತ್ಯ ವಸ್ತುಗಳ ಬೆಲೆ ಏರಿಸಿ ಸಾಮನ್ಯ ಜನತೆಯ ಬದುಕನ್ನು ಕಾಂಗ್ರೆಸ್ ಸರ್ಕಾರ ದುಸ್ತರ ಮಾಡಿದೆ, ನಿತ್ಯ ಉಪಯೋಗಿಸುವ ಹಾಲು, ,ಡಿಸೆಲ್,ವಿದ್ಯುತ್. ಬಸ್ ದರ ಹೀಗೆ ಹಲವಾರು ವಸ್ತುಗಳ ಬೆಲೆ ಏರಿಕೆ ಮಾಡಿದೆ, ಕಾಂಗ್ರೆಸ್ ಸರ್ಕಾರ ಬೆಲೆ ಏರಿಕೆ ಗ್ಯಾರಂಟಿ ಭಾಗ್ಯ ನೀಡಿ ಜನ ಸಾಮಾನ್ಯರಿಗೆ ಬರೆ ಎಳೆದಿದೆ ಎಂದು ತರಾಟೆಗೆ ತೆಗೆದುಕೊಂಡರು.

ಅಲ್ಪ ಸಂಖ್ಯಾತರನ್ನು ಓಲೈಸಲು ಮುಸಲ್ಮಾನರಿಗೆ ಧರ್ಮಾಧಾರಿತ ಶೇ.4 ರಷ್ಟು ಮೀಸಲಾತಿ ನೀಡಿ ಸಂವಿಧಾನಕ್ಕೆ ಅಪಚಾರ ಮಾಡಿದೆ, ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಅಭಿವೃದ್ಧಿಗೆ ಮೀಸಲಿಟ್ಟ ಎಸ್‌ಇಪಿ ಹಾಗೂ ಟಿಎಸ್‌ಪಿ ಹಣವನ್ನು ಗ್ಯಾರಂಟಿಗಳಿಗೆ ಬಳಸಿಕೊಂಡು ಪರಿಶಿಷ್ಟ ಹಾಗೂ ಪರಿಶಿಷ್ಟ ಪಂಗಡದವರಿಗೂ ಮೋಸ ಮಾಡಿದೆ. ಯುವನಿಧಿ, ಭಾಗ್ಯಲಕ್ಷ್ಮಿ ಯೋಜನೆಗೆ ಕೂಡಲೇ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಸ್ಟಾಂಪ್ ಡ್ಯೂಟಿಯನ್ನು ಹೆಚ್ಚು ಮಾಡಿದೆ, 10 ರೂ ಇದ್ದುದ್ದು 100, 100 ಇದ್ದುದ್ದು 1000 ಮಾಡಿ, ನೋಂದಣೆ ಶುಲ್ಕವನ್ನು ಕೂಡ ಹೆಚ್ಚು ಮಾಡಿ ಹಗಲು ದರೋಡೆ ಮಾಡಿ ಜನ ಸಾಮಾನ್ಯರು ಬೀದಿಗೆ ಬರುವಂತೆ ಮಾಡುತ್ತಿದೆ ಎಂದರು.

ಕಾಂಗ್ರೆಸ್ ಸರ್ಕಾರದ ದುರಾಡಳಿತದಿಂದ ಜನ ಬೇಸತ್ತಿದ್ದು ಮುಂದಿನ ಯಾವುದೇ ಚುನಾವಣೆಗಳಲ್ಲಿ ಬೆಜೆಪಿ ಪ್ರಚಂಡ ಬಹುತಮತದಿಂದ ಆಯ್ಕೆಯಾಗಿ ಅಧಿಕಾರಕ್ಕೆ ಬರಲಿದೆ ಎಂದರು.

ಏ.6ರ ಭಾನುವಾರ ಬಿಜೆಪಿ ಸಂಸ್ಥಾಪನಾ ದಿನವಾಗಿದ್ದು ಬಿಜೆಪಿ ತಾಲೂಕು ಮಂಡಲ ಅಧ್ಯಕ್ಷರಿಂದ ಪಕ್ಷದ ಬಾವುಟಗಳನ್ನು ಪಡೆದು ಅವಳಿ ತಾಲೂಕುಗಳ ಬೂತ್ ಮಟ್ಟದ ಅಧ್ಯಕ್ಷರುಗಳ ಮನೆಗಳ ಮೇಲೆ ಬಾವುಟಗನ್ನು ಹಾಕಿ ಸಂಸ್ಥಾಪನಾ ದಿನಾಚರಣೆ ಮಾಡಬೇಕು ಎಂದು ಕರೆ ನೀಡಿದರು.

ಏ.17ರಿಂದ ಮೈಸೂರಿನಿಂದ ಜನಾಕ್ರೋಶ ಯಾತ್ರೆ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ನಡೆಯಲಿದೆ ಎಂದು ಮಾಹಿತಿ ನೀಡಿದರು. ಬಿಜೆಪಿ ತಾಲೂಕು ಅಧ್ಯಕ್ಷ ಅರಕೆರೆ ನಾಗರಾಜ್,ಮಾಜಿ ಅಧ್ಯಕ್ಷ ಜೆ.ಕೆ,ಸುರೇಶ್, ಕುಬೇರಪ್ಪ ಮಾತನಾಡಿದರು.

ಬಿಜೆಪಿ ಮುಖಂಡರಾದ ನೆಲಹೊನ್ನೆ ಮಂಜುನಾಥ್, ಶಿವಾನಂದ್, ಮಾರುತಿನಾಯ್ಕ್, ರವಿಕುಮಾರ್, ರಮೇಶ್‌ಗೌಡ, ಉಮೇಶ್, ರಾಜು ಫಲ್ಲವಿ, ಅನಿಲ್ ಕುಂದುರು, ರಂಗನಾಥ್ ಕುಳಗಟ್ಟೆ, ಕೆ.ವಿ.ಶ್ರೀಧರ್ ಸುರೇಂದ್ರನಾಯ್ಕ, ಎಸ್.ಎಸ್.ಬೀರಪ್ಪ ಪಾಲ್ಗೊಂಡಿದ್ದರು.