ಸಾರಾಂಶ
ಬಿಜೆಪಿ ಮುಖಂಡರಿಗೆ ಸಿದ್ದರಾಮಯ್ಯರನ್ನು ಕಂಡರೆ ಭಯ. ಹೀಗಾಗಿ ಸುಖಾಸುಮ್ಮನೆ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.
ಕಾಗವಾಡ: ಬಿಜೆಪಿ ಮುಖಂಡರಿಗೆ ಸಿದ್ದರಾಮಯ್ಯರನ್ನು ಕಂಡರೆ ಭಯ. ಹೀಗಾಗಿ ಸುಖಾಸುಮ್ಮನೆ ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಕಾಗವಾಡ ಶಾಸಕ ರಾಜು ಕಾಗೆ ಹೇಳಿದರು.
ಭಾನುವಾರ ಮಂಗಸೂಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಸಿದ್ದರಾಮಯ್ಯನವರು ಹಿಂದುಳಿದ ವರ್ಗದಿಂದ ಬಂದು ಎರಡು ಬಾರಿ ಮುಖ್ಯಮಂತ್ರಿಯಾಗಿ 7 ಬಜೆಟ್ ಮಂಡಿಸಿ ಆರ್ಥಿಕ ತಜ್ಞರಾಗಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ಪೂರ್ವದಲ್ಲಿ ಮತದಾರರಿಗೆ ನೀಡಿದ ಪಂಚ ಗ್ಯಾರಂಟಿಗಳನ್ನು ಜಾರಿಗೊಳಿಸಿ ಯಶಸ್ವಿ ಆಡಳಿತ ನಡೆಸುತ್ತಿದ್ದಾರೆ ಎಂದರು.
ಕೇಂದ್ರ ಸರ್ಕಾರ ರಾಜ್ಯಪಾಲರನ್ನು ಬಳಸಿಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೆದರಿಸುತ್ತಿದೆ. ಸಿದ್ದರಾಮಯ್ಯ ದುರ್ಬಲ ವ್ಯಕ್ತಿ ಅಲ್ಲ, ಇಂತದ್ದಕ್ಕೆಲ್ಲ ಭಯ ಪಡೋದಿಲ್ಲ. ಹೈಕಮಾಂಡ್ ಮತ್ತು ಪಕ್ಷದ ಎಲ್ಲ ಶಾಸಕರು, ಸಚಿವರು ಬೆಂಬಲವಾಗಿ ನಿಂತಿದ್ದೇವೆ ಎಂದ ಅವರು, ಬಿಜೆಪಿ ನಾಯಕರ ಮೇಲೂ ಎಫ್‌ಐಆರ್ ಆಗಿದೆ. ಅದರ ಬಗ್ಗೆ ಬಿಜೆಪಿ ಮಾತನಾಡುತ್ತಿಲ್ಲ. ತಪ್ಪೇ ಮಾಡದ ಸಿದ್ದರಾಮಯ್ಯ ಅವರ ರಾಜೀನಾಮೆ ಕೇಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ಅವರು ರಾಜೀನಾಮೆ ಕೊಡುವ ಪ್ರಮೇಯವೇ ಬರಲ್ಲ ಎಂದು ಹೇಳಿದರು.