ಸಾರಾಂಶ
ಹಿರಿಯೂರು: ಸಂವಿಧಾನ ಬದಲಿಸುತ್ತೇವೆ ಎನ್ನುವ ಬಿಜೆಪಿಗರು ಮೀಸಲಾತಿ ವಿರೋಧಿಗಳು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಆರೋಪಿಸಿದರು.
ನಗರದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಲೋಕಸಭಾ ಚುನಾವಣೆ ಪ್ರಯುಕ್ತ ಆಯೋಜಿಸಿದ್ದ ಕಾರ್ಯಕರ್ತರ ಪೂರ್ವಭಾವಿ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ಚಿತ್ರದುರ್ಗ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವಿಗೆ ಪೂರಕ ವಾತಾವರಣವಿದ್ದು, ಪಕ್ಷದ ಅಭ್ಯರ್ಥಿ ಗೆಲ್ಲುವುದರಲ್ಲಿ ಸಂದೇಹವಿಲ್ಲ.
ಸರ್ಕಾರದ ಗ್ಯಾರಂಟಿ ಯೋಜನೆಗಳೇ ನಮಗೆ ಶ್ರೀರಕ್ಷೆಯಾಗಿದ್ದು, ಶೇ.76ಕ್ಕೂ ಹೆಚ್ಚಿನ ಜನರು ಗ್ಯಾರಂಟಿ ಯೋಜನೆಗಳನ್ನು ಪ್ರಶಂಸಿದ್ದಾರೆ ಮತ್ತು ಒಪ್ಪಿದ್ದಾರೆ. ಕಾರ್ಯಕರ್ತರು ಈ ಚುನಾವಣೆಯನ್ನು ಗಂಭೀರವಾಗಿ ತೆಗೆದುಕೊಂಡು ಕೆಲಸ ಮಾಡಿ. ನಿಮ್ಮ ನಿಮ್ಮ ಬೂತ್‌ಗಳಿಗೆ ನೀವೇ ಜವಾಬ್ದಾರರು. ಭೀಕರ ಬರಗಾಲವಿದೆ. ಕುಡಿಯುವ ನೀರಿನ ತೊಂದರೆಗಳು ಕಾಣಿಸಿಕೊಳ್ಳುತ್ತಿವೆ. ಇನ್ನೊಂದು ವರ್ಷದೊಳಗೆ ಮಾರಿಕಣಿವೆ ಕೆರೆಗೆ ನೀರು ತರಲಾಗುವುದು. ಕಾಡುಗೊಲ್ಲರನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸುವ ಬೇಡಿಕೆಯಿದ್ದು, ಆ ಬೇಡಿಕೆ ಈಡೇರಿಕೆಗೆ ಕೇಂದ್ರದಲ್ಲಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬರಲೇಬೇಕಾಗಿದೆ. ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಬಡವರ ಪರ ಯೋಜನೆಗಳು ಜಾರಿಯಾಗಲು ಸಾಧ್ಯ. ಬಿಜೆಪಿಯವರು ಬಡವರ ಪರ ಕಾರ್ಯಗಳನ್ನು ಮಾಡುವುದಿಲ್ಲ. ಹಾಗಾಗಿ ಕಾರ್ಯಕರ್ತರು ಎಲ್ಲೂ ಮೈಮರೆಯದೆ ಕೆಲವೇ ದಿನಗಳ ಸಮಯ ಇರುವುದರಿಂದ ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು ಕಾರ್ಯಕರ್ತರಲ್ಲಿ ಸ್ಪೂರ್ತಿ ತುಂಬಿದರು.ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಮಾಜಿ ಸಂಸದ ಬಿ.ಎನ್.ಚಂದ್ರಪ್ಪ ಮಾತನಾಡಿ, ನಾನು ಈ ಹಿಂದೆ ಸಂಸದನಾಗಿದ್ದಾಗ ಬರುವ ಅಲ್ಪ ಅನುದಾನದಲ್ಲಿಯೇ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೇನೆ. ನಂಬಿಕೆಗೆ ಚ್ಯುತಿ ತರದಂತೆ ಈ ಹಿಂದೆ ಕೆಲಸ ಮಾಡಿದ್ದೇನೆ. ಅಂಗವಿಕಲರಿಗೆ ಸ್ಕೂಟರ್, ಹೈಮಾಸ್ಕ್ ದೀಪಗಳು, ಸಮುದಾಯ ಭವನಗಳು, ತಾಲೂಕಿಗೆ ಎರಡೆರಡು ಕುಡಿಯುವ ನೀರಿನ ಟ್ಯಾಂಕರ್‌ಗಳು ಹೀಗೆ ಇರುವ ಅನುದಾನದಲ್ಲಿ ಒಂದಿಷ್ಟೂ ಅಪವ್ಯಯವಾಗದಂತೆ ಕಾರ್ಯನಿರ್ವಹಿದ್ದೇನೆ.
ನಿಜಲಿಂಗಪ್ಪ, ಕೆ.ಎಚ್.ರಂಗನಾಥ್, ಎನ್.ವೈ.ಹನುಮಂತಪ್ಪರಂತಹ ಹಿರಿಯರು ಗೆದ್ದ ಕ್ಷೇತ್ರವಿದು. ಅವರ ಸ್ಥಾನಕ್ಕೆ ನಾನು ಆಯ್ಕೆಯಾದಾಗ ಎಲ್ಲೂ ಲೋಪವಾಗದಂತೆ ಕೆಲಸ ಮಾಡಿದ್ದೇನೆ. ಸಾಮಾನ್ಯ ಕಾರ್ಯಕರ್ತನನ್ನು ಸಂಸದನನ್ನಾಗಿ ಮಾಡಿದ್ದರು ಎಂಬ ಕಾರಣಕ್ಕೆ ಕಳೆದ ಬಾರಿ ಸೋತರೂ ನಾನು ಕ್ಷೇತ್ರ ಬಿಡಲಿಲ್ಲ. ಆದರೆ ಈಗಿನ ಬಿಜೆಪಿ ಅಭ್ಯರ್ಥಿ 500 ಕಿಮೀ ದೂರದಿಂದ ಸಂಸದರಾಗಲು ಬಂದಿದ್ದಾರೆ. ದೂರದವರು, ಹೊರಗಿನವರು ಯಾರು ಎಂದು ನೀವೇ ಊಹಿಸಿಕೊಳ್ಳಿ. ಬಡವರ ಹೊಟ್ಟೆ ತುಂಬಿಸಿದ್ದಾರೆ ಎಂದು ಮತ್ತೊಮ್ಮೆ ಮೋದಿ ಎನ್ನುತ್ತಾರೋ ಗೊತ್ತಿಲ್ಲ. ಸುಳ್ಳಿನ ಕಂತೆಯನ್ನೇ ಸರಪಳಿಯಂತೆ ಹರಿಬಿಡುತ್ತಾ ಬಂದವರಿಗೆ ಮತ್ತೇಕೆ ಮತ ಕೊಡಬೇಕು ಎಂದು ಯೋಚಿಸಿ. ಈ ಬಾರಿ ಕೇಂದ್ರದಲ್ಲಿ ಮೋದಿ ಸರ್ಕಾರ ಯಾವುದೇ ಕಾರಣಕ್ಕೂ ಬರುವುದಿಲ್ಲ. ಜನ ಪ್ರಜ್ಞಾವಂತರಾಗಿದ್ದಾರೆ. ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟ ಅಧಿಕಾರಕ್ಕೆ ಬರಲಿದ್ದು, ಬಡವರ ಪರವಾದ ಆಡಳಿತ ನಡೆಯಲಿದೆ. ಹಾಗಾಗಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು ಎಂದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ತಾಜ್ ಪೀರ್, ಮಾಜಿ ಶಾಸಕ ಉಮಾಪತಿ, ಅಸಂಘಟಿತ ಕಾರ್ಮಿಕ ಘಟಕದ ರಾಜ್ಯಾಧ್ಯಕ್ಷ ಜಿ.ಎಸ್.ಮಂಜುನಾಥ್, ವಿಧಾನ ಪರಿಷತ್ ಅಭ್ಯರ್ಥಿ ಡಿ.ಟಿ.ಶ್ರೀನಿವಾಸ್, ಮುಖಂಡರಾದ ವಿಜಯ್ ಕುಮಾರ್, ವೆಂಕಟೇಶ್, ಗೀತಾ ನಂದಿನಿ ಗೌಡ, ಕಲ್ಲಟ್ಟಿ ತಿಪ್ಪೇಸ್ವಾಮಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಖಾದಿ ರಮೇಶ್, ಈರಲಿಂಗೇಗೌಡ, ಬಿ.ಎಚ್.ಮಂಜುನಾಥ್, ಕೃಷ್ಣಮೂರ್ತಿ, ಯಲ್ಲದಕೆರೆ ಮಾರುತಪ್ಪ, ನಾಗೇಂದ್ರ ನಾಯ್ಕ, ಬಿ.ಎನ್.ಪ್ರಕಾಶ್, ಚಂದ್ರಶೇಖರ್, ಕಲ್ಲಟ್ಟಿ ಹರೀಶ್, ತಿಪ್ಪಮ್ಮ, ಜಿ.ಎಲ್.ಮೂರ್ತಿ, ರಂಗಸ್ವಾಮಿ, ಮಹಲಿಂಗಪ್ಪ ಮುಂತಾದವರು ಹಾಜರಿದ್ದರು.