ಸಾರಾಂಶ
ಭಟ್ಕಳ: ಜಿಲ್ಲೆಯಲ್ಲಿ ಮರಳು ಸಮಸ್ಯೆ ತಲೆದೋರಲು ಬಿಜೆಪಿಯವರೇ ನೇರ ಕಾರಣರಾಗಿದ್ದಾರೆ ಎಂದು ಹೊನ್ನಾವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋವಿಂದ ನಾಯ್ಕ ಆರೋಪಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಬಿಜೆಪಿಯವರು ಜನತೆಯನ್ನು ರಾಜ್ಯ ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯರ ವಿರುದ್ಧ ಸಿಡಿದೇಳಿಸುವ ಮತ್ತು ಕೆಟ್ಟ ಹೆಸರು ತರುವ ಉದ್ದೇಶದಿಂದಲೇ ಮರಳಿನ ಆರಾಜಕತೆ ಸೃಷ್ಟಿಸಿದ್ದಾರೆ. ಬಿಜೆಪಿಯವರು ಶರಾವತಿ ನದಿಯಲ್ಲಿ ಮರಳು ತೆಗೆಯದಂತೆ ಚೆನ್ನೈ ಹಸಿರು ಪೀಠ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರಿಂದಲೇ ಇಷ್ಟೆಲ್ಲ ಸಮಸ್ಯೆ ಉಂಟಾಗಲು ಕಾರಣವಾಗಿದೆ.ಬಿಜೆಪಿಯವರಿಂದಾಗಿ ಜಿಲ್ಲೆಯಲ್ಲಿ ಜನರು ಮರಳಿಗೆ ತೊಂದರೆ ಪಡುವ ಪರಿಸ್ಥಿತಿ ಎದುರಾಗಿದೆ. ಮರಳಿಲ್ಲದೇ ಮನೆ, ಕಟ್ಟಡ ಮುಂತಾದ ಅಭಿವೃದ್ಧಿ ಕಾಮಗಾರಿಗಳಿಗೆ ಹಿನ್ನಡೆಯಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯರು ಮರಳಿನ ಸಮಸ್ಯೆಯಿಂದ ಜನರಿಗೆ ತೊಂದರೆಯಾಗಬಾರದು ಎನ್ನುವ ಉದ್ದೇಶದಿಂದ ಮುಖ್ಯಮಂತ್ರಿಯವರ ಜತೆಗೆ ಮಾತನಾಡಿ ಶರಾವತಿ ನದಿ ತೀರದಲ್ಲಿ ಮರಳುಗಾರಿಕೆಗೆ ಮತ್ತು ಮರಳು ಸಾಗಾಟಕ್ಕೆ ಪರವಾನಗಿ ಕೊಡಿಸಿದ್ದರು. ಆದರೆ ಕುಮಟಾದ ಬಿಜೆಪಿ ಶಾಸಕ ದಿನಕರ ಶೆಟ್ಟಿಯವರು ವಿಧಾನಸಭಾ ಕಲಾಪದಲ್ಲಿ ಇದನ್ನು ಪ್ರಶ್ನಿಸಿ ಮರಳುಗಾರಿಕೆಯ ಪರವಾನಗಿ ಬಗ್ಗೆ ತನಿಖೆ ಆಗಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದರು. ಈಗ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಹಾಗು ಶಕ್ತಿ ಕೇಂದ್ರದ ಅಧ್ಯಕ್ಷ ಸೇರಿದಂತೆ ಬಿಜೆಪಿಯ11 ಮಂದಿ ಪ್ರಮುಖರು ಮರಳುಗಾರಿಕೆ ನಡೆಸದಂತೆ ಚೆನ್ನೈ ಹಸಿರು ಪೀಠದಲ್ಲಿ ದಾವೆ ಹೂಡಿದ್ದಾರೆ. ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡಿರವ ಹಸಿರು ಪೀಠ ನ. 4ಕ್ಕೆ ಮುಂದೂಡಿ ಅಲ್ಲಿಯ ತನಕ ಯಥಾಸ್ಥಿತಿ ಕಾಪಾಡುವಂತೆ ಸೂಚಿಸಿದೆ. ವಿಪರ್ಯಾಸವೆಂದರೆ ಮರಳುಗಾರಿಕೆ ನಿಲ್ಲಿಸಬೇಕು ಎಂದು ಹಸಿರು ಪೀಠದಲ್ಲಿ ದಾವೆ ಹೂಡಿದ ಬಿಜೆಪಿಯ ರೈತ ಮೋರ್ಚಾ ಅಧ್ಯಕ್ಷರೇ ಇನ್ನೊಂದು ಕಡೆ ಮರಳು ಸಾಗಾಟಕ್ಕೆ ಅನುಮತಿ ನೀಡುವಂತೆ ಪ್ರತಿವರ್ಷ ಜಿಲ್ಲಾಡಳಿತಕ್ಕೆ ಮನವಿ ಮಾಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ, ಪ್ರಧಾನ ಕಾರ್ಯದರ್ಶಿ ಸುರೇಶ ನಾಯ್ಕ, ಮುಖಂಡರಾದ ವಿಷ್ಣು ದೇವಡಿಗ, ನಾರಾಯಣ ನಾಯ್ಕ ಮುಂತಾದವರಿದ್ದರು.