ಬೀಳಗಿ ಪಪಂ ಗದ್ದುಗೆ ಏರಲು ಬಿಜೆಪಿ ಕಾತರ

| Published : Jan 30 2025, 12:33 AM IST

ಸಾರಾಂಶ

ಒಟ್ಟು 18 ಸದಸ್ಯ ಬಲದ ಪಪಂನಲ್ಲಿ ಸದ್ಯ ಬಿಜೆಪಿ 11 ಸದಸ್ಯರ ಬಲ ಹೊಂದಿದೆ. ಕಾಂಗ್ರೆಸ್‌ 6 ಸದಸ್ಯರು ಮತ್ತು ಒಬ್ಬರು ಪಕ್ಷೇತರ ಸದಸ್ಯರಿದ್ದಾರೆ.

ಸಂಗಯ್ಯ (ಆನಂದ) ಜಡಿಮಠ

ಕನ್ನಡಪ್ರಭ ವಾರ್ತೆ ಬೀಳಗಿ

ಇಲ್ಲಿನ ಪಟ್ಟಣ ಪಂಚಾಯಿತಿ ಉಳಿದ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅಧಿಕಾರ ಚುಕ್ಕಾಣಿ ಬಹುತೇಕ ಬಿಜೆಪಿ ಪರವಾಗಿ ಆಗುವ ಎಲ್ಲ ಲಕ್ಷಣ ಗೋಚರಿಸುತ್ತಿವೆ. ಫೆ.3ರಂದು ನೆಡೆಯಲಿರುವ ಚುನಾವಣೆಯಲ್ಲಿ ಮೀಸಲಿನಡಿಯಲ್ಲಿ ಒಮ್ಮತ ಅಭ್ಯರ್ಥಿ ಆಯ್ಕೆ ಮಾತ್ರ ಬಾಕಿ ಇದೆ.

ಒಟ್ಟು 18 ಸದಸ್ಯ ಬಲದ ಪಪಂನಲ್ಲಿ ಸದ್ಯ ಬಿಜೆಪಿ 11 ಸದಸ್ಯರ ಬಲ ಹೊಂದಿದೆ. ಕಾಂಗ್ರೆಸ್‌ 6 ಸದಸ್ಯರು ಮತ್ತು ಒಬ್ಬರು ಪಕ್ಷೇತರ ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಬ ಸ್ಥಾನಕ್ಕೆ ಮೀಸಲಾಗಿದ್ದರೆ, ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಮೀಸಲಿದ್ದು ಬಿಜೆಪಿಯಲ್ಲಿ ಬಹುಮತ ಸಂಖ್ಯೆ ಸದಸ್ಯರು ಇರುವ ಕಾರಣ ಬಹುತೇಕ ಬಿಜೆಪಿ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಿಶ್ಚಿತ ಎಂದೇ ಹೇಳಲಾಗುತ್ತಿದೆ.

ಬಿಜೆಪಿಯಲ್ಲಿಯೇ ನಾಲ್ವರು ಪೈಪೋಟಿ:

ಪಪಂ ಅಧ್ಯಕ್ಷ ಸ್ಥಾನದ ಹಿಂದುಳಿದ ವರ್ಗ ಬ ಸ್ಥಾನದ ಆಕಾಂಕ್ಷಿಗಳಾಗಿ ಬಿಜೆಪಿಯಲ್ಲಿ ನಾಲ್ವರು ಸದಸ್ಯರಿದ್ದಾರೆ. ಹಾಗಾಗಿ ಇಲ್ಲಿ ಒಮ್ಮತದ ಅಭ್ಯರ್ಥಿ ಆಯ್ಕೆ ಕಸರತ್ತು ಬಿಜೆಪಿ ಹಿರಿಯ ನಾಯಕರ ಹೆಗಲಿಗೆ ಬಿದ್ದಿದೆ. ಮೀಸಲಿನಡಿ ಸಿದ್ದಲಿಂಗೇಶ ಗುರುಬಸಪ್ಪ ನಾಗರಾಳ, ಸಂತೋಷ ವಿಠಲ ನಿಂಬಾಳ್ಕರ, ಮೀನಾಕ್ಷಿ ಮಹಾರುದ್ರಯ್ಯ ಕೊತ್ತಲಮಠ ಹಾಗೂ ರಾಮಚಂದ್ರ ಯಲಗುರದಪ್ಪ ಬೊರ್ಜಿ ಪೈಪೋಟಿಯಲ್ಲಿದ್ದು ಇವರಲ್ಲಿ ಈಗಾಗಲೇ ತಲಾ 10 ತಿಂಗಳ ಅವಧಿಗೆ ಅಧ್ಯಕ್ಷರಾಗಿ ಇಬ್ಬರು ಮತ್ತು ಉಪಾಧ್ಯಕ್ಷರಾಗಿ ಒಬ್ಬರು ಅಧಿಕಾರ ಮಾಡಿದ್ದಾರೆ. ಆದರೆ ಅಧಿಕಾರ ಅನುಭವಿಸದ ಪ್ರಬಲ ಆಕಾಂಕ್ಷಿ ರಾಮಚಂದ್ರ ಬೊರ್ಜಿ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಆದರೆ, ಹಿರಿಯರು ಅವರಿಗೆ ಅವಕಾಶ ಕೊಡುತ್ತಾರಾ? ಅಥವಾ ಬಿಜೆಪಿಯಲ್ಲಿಯೇ ಏನಾದರೂ ಬಂಡಾಯ ಏಳಬಹುದಾ ಎನ್ನುವ ಸಂಶಯ ಕೂಡ ಎಡೆ ಮಾಡಿದೆ.

ಮೀಸಲಿನಡಿ ಮರಳಿಯತ್ನ:

ಪಪಂ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕಾಗಿ ಬಿಜೆಪಿಯಲ್ಲಿಯೇ ಮತ್ತೆ ಮೀಸಲಿನಡಿ ಮರಳಿಯತ್ನವ ಮಾಡುವ ಕೆಲಸ ನಡೆದಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಮೀಸಲಿನಡಿ ನಾಲ್ವರು ಸದಸ್ಯರು ಇದ್ದು ಯಾವ ಆಧಾರದಲ್ಲಿ ಆಯ್ಕೆ ಮಾಡಬೇಕು ಎನ್ನುವ ಗೊಂದಲ ಒಂದೆಡೆಯಾದರೆ ಕಳೆದ ಬಾರಿ ಅಧ್ಯಕ್ಷ ಸ್ಥಾನಕ್ಕೆ ತೀವ್ರ ಪೈಪೋಟಿ ನೀಡಿದ್ದ ರಾಮಚಂದ್ರ ಬೊರ್ಜಿಗೆ ಈ ಬಾರಿಯಾದರೂ ಅದೃಷ್ಟ ಒಲಿದು ಬರಲಿದೆಯೇ ಎಂಬ ಪ್ರಶ್ನೆ ಎದುರಾಗಿದೆ.

ಉಪಾಧ್ಯಕ್ಷ ಸ್ಥಾನಕ್ಕೆ ಸಾಮಾನ್ಯ ಮಹಿಳೆ ಇರುವುದರಿಂದ ಮಹಿಳಾ ಸದಸ್ಯರಿದ್ದು ಅದು ಅಷ್ಟೊಂದು ಗೊಂದಲ ಅಲ್ಲದಿದ್ದರು, ಅಧಿಕಾರಕ್ಕಾಗಿ ಪೈಪೋಟಿ ನಡೆಯುವುದರಲ್ಲಿ ಯಾವುದೇ ಸಂದೇಹವಿಲ್ಲ. ಅಧ್ಯಕ್ಷ ಮತ್ತು ಉಪಾಧ್ಯಕ್ಷ ಆಯ್ಕೆಯಲ್ಲಿ ಮಾಜಿ ಸಚಿವ ಮುರುಗೇಶ ನಿರಾಣಿ ಹಾಗೂ ವಿಧಾನ ಪರಿಷತ್‌ ಸದಸ್ಯ ಹಣಮಂತ ನಿರಾಣಿ ಅವರ ತಿರ್ಮಾನ ಅಂತಿಮ ಎಂದು ಹೇಳಲಾಗುತ್ತಿದೆ. ಹೀಗಾಗಿ ಆಕಾಂಕ್ಷಿಗಳು ತಮ್ಮ ಲಾಭಿ ಶುರು ಮಾಡಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್‌ ಬಹುಮತ ಇಲ್ಲದ ಕಾರಣ ಬಿಜೆಪಿಯಲ್ಲಿನ ಆಗು ಹೋಗುಗಳ ಲಾಭ ಪಡೆಯುವಲ್ಲಿ ಕೈ ಹಿಂದೇಟು ಹಾಕುವುದಿಲ್ಲ ಎನ್ನುವ ಮಾತು ಜೋರಾಗಿದೆ.

ಪಟ್ಟಣ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಸ್ಥಾನದ ಆಯ್ಕೆಗಾಗಿ ಫೆ.3ರಂದು ಚುನಾವಣೆ ದಿನಾಂಕ ನಿಗದಿ ಮಾಡಲಾಗಿದೆ. ಅಂದು ಪಟ್ಟಣ ಪಂಚಾಯಿತಿ ಸಭಾಭವನದಲ್ಲಿ ಮಧ್ಯಾಹ್ನ 12ರಿಂದ 1ರವರಿಗೆ ನಾಮಪತ್ರ ಸಲ್ಲಿಕೆ, 3 ಗಂಟೆಗೆ ನಾಮಪತ್ರ ಪರಿಶೀಲನೆ, ನಾಮಪತ್ರ ಹಿಂಪಡೆಯುವುದು ಮತ್ತು ಚುನಾವಣೆ ಜರುಗಿಸುವ ಪ್ರಕ್ರಿಯೆ ನಡೆಯಲಿದೆ.

ವಿನೋದ ಹತ್ತಳ್ಳಿ, ತಹಸೀಲ್ದಾರ್‌ ಬೀಳಗಿ