ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕರ್ನಾಟಕವನ್ನು ಮುಸ್ಲಿಂ ಆಸ್ತಿ ಮಾಡಲು ಹೊರಟ ವಕ್ಫ್ ಕಾಯ್ದೆ ವಿರುದ್ಧ ರೈತರ ಜಮೀನು ಉಳಿಸುವುದಕ್ಕಾಗಿ ಬಿಜೆಪಿ ಹೋರಾಟ ಪ್ರಾರಂಭಿಸಿದೆ ಎಂದು ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.ಜಿಲ್ಲಾ ಬಿಜೆಪಿ ವತಿಯಿಂದ ವಕ್ಫ್ ಮಂಡಳಿ ವಿರುದ್ಧ ಸೋಮವಾರ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶಾಂತವಾದ ಕರ್ನಾಟಕದಲ್ಲಿ ಸದ್ದಿಲ್ಲದೆ ನೂರಾರು ವರ್ಷಗಳಿಂದ ಜಮೀನು ಸಾಗುವಳಿ ಮಾಡಿಕೊಂಡು ಬಂದಿರುವ ರೈತರ ಪಹಣಿಯಲ್ಲಿ ವಕ್ಫ್ ಆಸ್ತಿಯೆಂದು ನಮೂದಿಸಿ, ರೈತರಿಗೆ ನೋಟೀಸ್ ನೀಡುತ್ತಿರುವ ಸರ್ಕಾರ ರಾಜ್ಯದ ಮುಜುರಾಯಿ ದೇವಾಲಯಗಳು, ಪುರಾತತ್ವ ಇಲಾಖೆಯ ಆಸ್ತಿಗಳು, ಮಠ ಮಂದಿರಗಳು ಮತ್ತು ಶಾಲಾ ಜಮೀನುಗಳನ್ನು ವಕ್ಫ್ ಆಸ್ತಿ ಮಾಡಲು ಹೊರಟಿದೆ ಎಂದು ದೂರಿದರು.
ಇದಕ್ಕೆ ಮುಖ್ಯ ಕಾರಣ ವಸತಿ ಸಚಿವ ಜಮೀರ್ ಅಹಮ್ಮದ್ ಆಗಿದ್ದು, ಅವರನ್ನು ಕೂಡಲೇ ಬಂಧಿಸಬೇಕು. ಸಂಪುಟದಿಂದ ವಜಾಗೊಳಿಸಬೇಕು. ಇಲ್ಲದಿದ್ದಲ್ಲಿ ರಾಜ್ಯದಾದ್ಯಂತ ದೊಡ್ಡ ಮಟ್ಟದ ಹೋರಾಟ ಬಿಜೆಪಿ ನಡೆಸಲಿದೆ. ಸಿದ್ದರಾಮಯ್ಯನವರದು ಎಲುಬಿಲ್ಲದ ನಾಲಿಗೆ. ನೋಟೀಸ್ ಹಿಂಪಡೆದ ತಕ್ಷಣ ಪಹಣಿಯಲ್ಲಿ ಬದಲಾವಣೆಯಾಗುವುದಿಲ್ಲ. ತಾಕತ್ತಿದ್ದರೆ ವಕ್ಫ್ ಕಾನೂನನ್ನೇ ಬದಲಾವಣೆ ಮಾಡಿ, ಇಲ್ಲವಾದರೆ ಈಗ ನಮ್ಮ ಪ್ರಧಾನಿ ಮಾಡಲು ಹೊರಟಿದ್ದಾರೆ. ಅವರಿಗೆ ಬೇಷರತ್ತು ಬೆಂಬಲ ನೀಡಲಿ. ನಮ್ಮ ಕಾನೂನುಬದ್ಧ ಹೋರಾಟವನ್ನು ತಡೆಯುವ ದುಸ್ಸಾಹಕ್ಕೆ ಕೈಹಾಕಬೇಡಿ ಎಂದು ಎಚ್ಚರಿಕೆ ನೀಡಿದರು.ಮಾಜಿ ಶಾಸಕ ಕೆ.ಬಿ. ಅಶೋಕ್‍ನಾಯ್ಕ್ ಮಾತನಾಡಿ, ಕಾಂಗ್ರೆಸ್ ಬಂದಾಗಿನಿಂದ ರೈತರಲ್ಲಿ ಆತಂಕ ಮೂಡಿಸಿದೆ. ಪ್ರತಿ ಜಿಲ್ಲೆಯಲ್ಲೂ ವಕ್ಫ್ ಸಮಿತಿ ಇದ್ದು, ಪ್ರಧಾನ ಮಸೀದಿಯ ಮೌಲ್ವಿಯೇ ಅದಕ್ಕೆ ಅಧ್ಯಕ್ಷರಾಗಿರುತ್ತಾರೆ. ವಕ್ಫ್ ಸಮಿತಿ ಏನಾದರೂ ಯಾವುದಾದರೂ ಆಸ್ತಿಯನ್ನು ತಮ್ಮದೆಂದು ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿದರೆ ಸಾಕು, 20ದಿನಗಳ ಒಳಗೆ ಜಿಲ್ಲಾಧಿಕಾರಿಗಳು ಆ ಆಸ್ತಿಯ ಅನುಭವದಾರರಿಗೆ ನೋಟೀಸ್ ನೀಡಿ, ಆ ಆಸ್ತಿಯನ್ನು ವಕ್ಫ್ ಸಮಿತಿಗೆ ವರ್ಗಾಹಿಸುತ್ತಾರೆ ಎಂದು ದೂರಿದರು.ಅದನ್ನು ಪ್ರಶ್ನಿಸುವ ಹಕ್ಕು ಯಾರಿಗೂ ಇಲ್ಲ, ಸುಪ್ರೀಂ ಕೋರ್ಟ್‍ನಲ್ಲೂ ಪ್ರಶ್ನಿಸುವ ಆಗಿಲ್ಲ, ವಕ್ಫ್ ಟ್ರಬ್ಯುನಲ್‍ನಲ್ಲಿ ಪ್ರಶ್ನಿಸಬೇಕು. ಅದರಲ್ಲಿ ಅವರದೇ ಸಮಾಜದ ಮುಖಂಡರಿರುತ್ತಾರೆ. ಅಲ್ಲಿ ನ್ಯಾಯ ಸಿಗುವ ಭರವಸೆ ಇಲ್ಲ, ಇದೇ ರೀತಿ ಅನೇಕ ರೈತರ ಮತ್ತು ದೇವಾಲಯಗಳ ಆಸ್ತಿಗಳು ವಕ್ಫ್ ಪಾಲಾಗಿದೆ. ಇದರಿಂದ ಕಾಂಗ್ರೆಸ್ ಕರಾಳ ಮುಖ ಬಯಲಾಗಿದೆ ಎಂದು ಹರಿಹಾಯ್ದರು.ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್ ಮಾತನಾಡಿ, ಉಡುಪಿಯ ಶಿವಪುರ ಈಗ ಸುಲ್ತಾನ್‍ಪುರ ಆಗಿದೆ. ದಯಮಾಡಿ ಜಿಲ್ಲೆಯ ರೈತರು ಬೆಳಿಗ್ಗೆ ಎದ್ದಕೂಡಲೇ ತಮ್ಮ ಜಮೀನಿನ ಪಹಣಿ ಯಾರ ಹೆಸರಿನಲ್ಲಿದೆ ಎಂದು ಪರಿಶೀಲಿಸಿ ರಾತ್ರೋರಾತ್ರಿ ಖಾತೆ ಬದಲಾವಣೆಯಾಗುತ್ತದೆ. "ಹೇ ಸಿದ್ದರಾಮಯ್ಯ ನಿನ್ನ ನಾಟಕ ನಿಲ್ಲಿಸು ಸುಳ್ಳು ಹೇಳಿಕೆಯನ್ನು ಬಿಡು ". ಜಮೀರ್ ಅಹಮ್ಮದ್ ಖಾನ್‍ರವರು ಖುದ್ದಾಗಿ ಹೇಳಿದ್ದಾರೆ. ಸಿದ್ದರಾಮಯ್ಯನವರೇ ವಕ್ಫ್ ಆಸ್ತಿಯೆಂದು ಬದಲಿಸಲು ಸೂಚನೆ ನೀಡಿದ್ದಾರೆ ಎಂದು ಒಪ್ಪಿಕೊಂಡಿದ್ದಾರೆ. ಹಾಗಾಗಿ ದ್ವಿಮುಖ ನೀತಿಯನ್ನು ಕೈಬಿಡಿ ರೈತರ ಶಾಪ ತಟ್ಟುತ್ತದೆ ಎಂದು ಕುಟುಕಿದರು.ಈ ಸಂದರ್ಭದಲ್ಲಿ ಮಹಿಳಾ ಪ್ರಮುಖರಾದ ಸುರೇಖಾ ಮುರಳೀಧರ್, ರಶ್ಮಿ ಶ್ರೀನಿವಾಸ್, ಚೈತ್ರಪೈ, ಯಶೋಧನಾಗರಾಜ್, ದೀಪ, ಗೌರಿ ಶ್ರೀನಾಥ್, ನಿರ್ಮಲಾ ಸೇರಿದಂತೆ ಹಲವರಿದ್ದರು.ಶಾಸಕ ಸೇರಿದಂತೆ ಹಲವರ ಬಂಧನ
ಪ್ರತಿಭಟನೆ ವೇಳೆ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದ ಶಾಸಕ ಎಸ್.ಎನ್. ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯರಾದ ಡಿ.ಎಸ್. ಅರುಣ್, ಡಾ. ಧನಂಜಯ ಸರ್ಜಿ, ಜಿಲ್ಲಾಧ್ಯಕ್ಷ ಟಿ.ಡಿ. ಮೇಘರಾಜ್, ಮಾಜಿ ಶಾಸಕ ಅಶೋಕ್‍ನಾಯ್ಕ್, ಎಸ್.ಎಸ್. ಜ್ಯೋತಿ ಪ್ರಕಾಶ್ ಸೇರಿದಂತೆ ಪ್ರಮುಖರನ್ನು ಪೊಲೀಸರು ವಶಕ್ಕೆ ಪಡೆದರು. ಬಳಿಕ ಸ್ಥಳದಲ್ಲಿ ಹೈಡ್ರಾಮಾ ನಡೆಯಿತು. ಪ್ರಮುಖರನ್ನು ಬಂಧಿಸುತ್ತಿದ್ದಂತೆ ಬಿಜೆಪಿ ಮಹಿಳಾ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿಗೆ ನುಗ್ಗಲು ಯತ್ನಿಸಿದರು. ಈ ಸಂದರ್ಭದಲ್ಲಿ ಮಹಿಳಾ ಕಾರ್ಯಕರ್ತೆಯೊಬ್ಬರಿಗೆ ಸಣ್ಣ ಗಾಯವಾಗಿದ್ದು, ಅದನ್ನೇ ಮುಂದಿಟ್ಟುಕೊಂಡು ಪೊಲೀಸ್ ದೌರ್ಜನ್ಯ ವಿರುದ್ಧ ಮತ್ತೆ ಪ್ರತಿಭಟನೆಗೆ ಇಳಿದರು. ಇದರಿಂದಾಗಿ ಅರ್ಧಗಂಟೆ ಕಾಲ ಬಿಗುವಿನ ವಾತಾವರಣ ಉಂಟಾಯಿತು. ಬಳಿಕ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ತಪ್ಪಿತಸ್ಥರ ಮೇಲೆ ಕ್ರಮಕೈಗೊಳ್ಳುವ ಭರವಸೆ ನೀಡಿದ ಬಳಿಕ ಧರಣಿ ವಾಪಸ್ಸು ಪಡೆದರು.