ಸಾರಾಂಶ
ಗುತ್ತಲ: ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ಮೋದಿ ಹತಾಶರಾಗಿ ರಾಜ್ಯ ಸರ್ಕಾರವನ್ನು ಟೀಕಿಸುವಲ್ಲಿ ನಿರತವಾಗಿದೆ ಎಂದು ಸಂಸದೀಯ ವ್ಯವಹಾರಗಳ ಹಾಗೂ ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ಹೇಳಿದರು.ಪಟ್ಟಣದ ಉರ್ದು ಶಾಲಾ ಮೈದಾನದಲ್ಲಿ ನಡೆದ ಹಾವೇರಿ-ಗದಗ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಪರವಾಗಿ ನಡೆದ ಮತಯಾಚನೆ ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಜಿಎಸ್‌ಟಿ ಪಾಲನ್ನು ಕೊಡದೆ ತಾರತಮ್ಯ ಮಾಡುತ್ತಿದೆ. ಹತ್ತು ವರ್ಷಗಳ ಹಿಂದೆ ಸ್ವಿಸ್ ಬ್ಯಾಂಕ್‌ನಲ್ಲಿ ದೇಶದಲ್ಲಿನ ಕಪ್ಪು ಹಣ ಇದೆ. ಅದನ್ನು ತಂದು ಭಾರತದ ಪ್ರತಿಯೊಬ್ಬ ಪ್ರಜೆಗೆ ೧೫ ಲಕ್ಷ ರು. ಹಾಕುತ್ತೇನೆ ಎಂದು ಸುಳ್ಳು ಭರವಸೆಯಿಂದ ಗೆದ್ದು ಬಂದ ಪ್ರಧಾನಿ ನರೇಂದ್ರ ಮೋದಿ ಅವರು ಇಲ್ಲಿಯವರೆಗೂ ೧೫ ಲಕ್ಷ ರು. ಅಲ್ಲ, ೧೫ ಪೈಸೆ ಸಹ ಹಾಕಿಲ್ಲ. ೧೫ ಲಕ್ಷ ರು.ಗಳನ್ನು ಯಾವಾಗ ಹಾಕುವಿರಿ ಎಂದು ಕೇಳಿದಾಗ ಜನಧನ ಖಾತೆ ಮೂಲಕ ಹಾಕುವುದಾಗಿ ಮತ್ತೇ ಸುಳ್ಳು ಹೇಳಿ ಹಗಲು-ರಾತ್ರಿ ಜನರು ಬ್ಯಾಂಕ್ ಮುಂದೆ ನಿಂತು ಖಾತೆಗಳನ್ನು ಮಾಡಿಸಿಕೊಂಡಿದ್ದರೂ ಸಹ ಇಲ್ಲಿಯವರೆಗೂ ಯಾವುದೇ ಹಣ ಹಾಕಿಲ್ಲ ಎಂದು ಟೀಕಿಸಿದರು.ಶಾಸಕ ವಿನಯ ಕುಲಕರ್ಣಿ ಮಾತನಾಡಿ, ಕಾಂಗ್ರೆಸ್ ದೇಶದ ಅಭಿವೃದ್ಧಿ ಬಗ್ಗೆ ಏನ್ ಮಾಡಿದೆ ಎಂದು ಕೇಳುವ ಬಿಜೆಪಿಯವರೆ ನೀವು ಕಲಿತ ಶಾಲೆ, ಚಿಕಿತ್ಸೆ ಪಡೆದ ಆಸ್ಪತ್ರೆಗಳು, ಕಾಲೇಜುಗಳು, ಡ್ಯಾಂಗಳು, ಬಾಹ್ಯಾಕಾಶ ಸಂಸ್ಥೆ, ರೈಲ್ವೆ ಕಾರ್ಖಾನೆ, ರಸಗೊಬ್ಬರ ಘಟಕಗಳು, ವಿಮಾನ ನಿಲ್ದಾಣಗಳು, ಭದತ್ರಾ ಸಂಸ್ಥೆಗಳು ಒಂದೆ ಎರಡೇ ಇವೆಲ್ಲವೂ ಕಾಂಗ್ರೆಸ್ ಸರ್ಕಾರ ಇದ್ದಾಗ ಸ್ಥಾಪನೆಯಾಗಿವೆ. ಇಂದು ತಾವು ಖಾಸಗಿಯವರಿಗೆ ಒಂದೊಂದಾಗಿ ಮಾರುತ್ತಿರುವುದು ಕಾಂಗ್ರೆಸ್ ಸರ್ಕಾರ ಇದ್ದಾಗ ಸ್ಥಾಪನೆ ಮಾಡಿದ್ದು ಎಂಬುದು ತಾವು ಮರೆಯಬಾರದು ಎಂದರು.
ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ಮಾತನಾಡಿ, ಸಿದ್ದರಾಮಯ್ಯನವರ ಹಾಗೂ ಡಿಕೆ ಶಿವಕುಮಾರ ಅವರ ನೇತೃತ್ವದ ನಮ್ಮ ಕಾಂಗ್ರೆಸ್ ಪಕ್ಷದ ರಾಜ್ಯ ಸರ್ಕಾರ ಈಗಾಗಲೇ ೫ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿ ಜನರ ಪ್ರೀತಿಗೆ ಪಾತ್ರವಾಗಿದೆ. ಇದರಂತೆ ಇನ್ನೂ ೨೫ ಗ್ಯಾರಂಟಿಗಳನ್ನು ಕೊಡುತ್ತೇವೆ. ಕೇಂದ್ರದಲ್ಲಿ ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬರಲು ನನಗೆ ನೀವು ಮತ ನೀಡಿ ಗೆಲ್ಲಿಸಬೇಕೆಂದು ಮನವಿ ಮಾಡಿದರು.ಶಾಸಕರಾದ ರುದ್ರಪ್ಪ ಲಮಾಣಿ, ಶಾಸಕ ಬಸವರಾಜ ಶಿವಣ್ಣನವರ ಮಾತನಾಡಿದರು. ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಂ. ಹಿರೇಮಠ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವಕುಮಾರ ನೀರಲಗಿ, ಕೆಸಿಸಿ ಬ್ಯಾಂಕ್ ನಿರ್ದೇಶಕ ಕೊಟ್ರೇಶಪ್ಪ ಬಸೇಗಣ್ಣಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಎಂ.ಎಂ. ಮೈದೂರ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪ್ರೇಮಾ ಪಾಟೀಲ, ಹಾವೇರಿ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್‌ಎಫ್‌ಎನ್ ಗಾಜೀಗೌಡ್ರ, ಕಾಂಗ್ರೆಸ್ ನಗರ ಘಟಕ ಅಧ್ಯಕ್ಷ ಪ್ರಭುಗೌಡ ಬಿಷ್ಟನಗೌಡ್ರ, ಮುಖಂಡರಾದ ಸಿ.ಬಿ. ಕುರವತ್ತಿಗೌಡ್ರ, ಈರಪ್ಪ ಲಮಾಣಿ, ಶಹಜಾನಸಾಬ ಅಗಡಿ, ಪ.ಪಂ ಮಾಜಿ ಉಪಾಧ್ಯಕ್ಷ ನಾಗರಾಜ ಎರಿಮನಿ, ಜಿಲ್ಲಾ ಕಾಂಗ್ರೆಸ್ ವಕ್ತಾರ ಸಂಜಯಗಾಂಧೀ ಸಂಜೀವಣ್ಣನವರ ಇದ್ದರು. ಪ.ಪಂ. ಸದಸ್ಯ ಪ್ರದೀಪ ಸಾಲಗೇರಿ ಕಾರ್ಯಕ್ರಮ ನಿರೂಪಿಸಿದರು.ಇದಕ್ಕೂ ಮುನ್ನ ಪಟ್ಟಣದ ಕಲ್ಮಠದಿಂದ ಆರಂಭವಾದ ಬೃಹತ್ ರೋಡ ಶೋ ಪಟ್ಟಣದ ಪ್ರಮುಖ ಬೀದಿಗಳಲ್ಲಿ ವಿವಿಧ ವಾದ್ಯಗಳ ಮೂಲಕ ಸಾಗಿ ಉರ್ದು ಶಾಲಾ ಮೈದಾನಕ್ಕೆ ಆಗಮಿಸಿತು.