ನಾಥುರಾಮ್ ಗೋಡ್ಸೆ ಮಹಾತ್ಮಾ ಗಾಂಧಿ ಅವರನ್ನು ಕೊಂದರು. ಆದರೆ, ಬಿಜೆಪಿಯವರು ಗಾಂಧೀಜಿ ಸಿದ್ಧಾಂತವನ್ನೇ ಕೊಲೆ ಮಾಡಿದ್ದಾರೆ. ಅವರು ಗಾಂಧೀಜಿ ಪ್ರತಿಮೆ ಎದುರು ಪ್ರತಿಭಟನೆ ಮಾಡುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದು ವಿಧಾನ ಪರಿಷತ್ ಮುಖ್ಯಸಚೇತಕ ಸಲೀಂ ಅಹ್ಮದ್ ಹೇಳಿದರು.

ವಿಶೇಷ ಅಧಿವೇಶನದಲ್ಲಿ ವಿಪಕ್ಷಗಳ ಪಾಲ್ಗೊಂಡು ಚರ್ಚಿಸಬೇಕುಕನ್ನಡಪ್ರಭ ವಾರ್ತೆ ಹಾವೇರಿ

ನಾಥುರಾಮ್ ಗೋಡ್ಸೆ ಮಹಾತ್ಮಾ ಗಾಂಧಿ ಅವರನ್ನು ಕೊಂದರು. ಆದರೆ, ಬಿಜೆಪಿಯವರು ಗಾಂಧೀಜಿ ಸಿದ್ಧಾಂತವನ್ನೇ ಕೊಲೆ ಮಾಡಿದ್ದಾರೆ. ಅವರು ಗಾಂಧೀಜಿ ಪ್ರತಿಮೆ ಎದುರು ಪ್ರತಿಭಟನೆ ಮಾಡುವ ನೈತಿಕತೆ ಕಳೆದುಕೊಂಡಿದ್ದಾರೆ ಎಂದು ವಿಧಾನ ಪರಿಷತ್ ಮುಖ್ಯಸಚೇತಕ ಸಲೀಂ ಅಹ್ಮದ್ ಹೇಳಿದರು.

ಭಾನುವಾರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ಮನರೇಗಾ ಒಳ್ಳೆಯ ಯೋಜನೆ. ಕೇಂದ್ರ ಸರ್ಕಾರದವರು ಏಕಾಏಕಿ ಹೆಸರಿನೊಂದಿಗೆ ಯೋಜನೆಯಲ್ಲಿ ಸಾಕಷ್ಟು ಬದಲಾವಣೆ ಮಾಡಿದ್ದಾರೆ. ಇಂದಿರಾ ಗಾಂಧಿ, ರಾಜೀವ್‌ ಗಾಂಧಿ ಹೆಸರು ಬದಲಾಯಿಸಿದ್ದರು. ಈಗ ಮಹಾತ್ಮಾ ಗಾಂಧಿ ಹೆಸರೂ ತೆಗೆಯುತ್ತಿದ್ದಾರೆ. ಇದೊಂದು ದುರ್ದೈವದ ಸಂಗತಿ. ಮಹಾತ್ಮಾ ಗಾಂಧಿ ಅವರ ಬಗ್ಗೆ ಬಿಜೆಪಿಯವರು ವಿಶ್ವಾಸ ಕಳೆದುಕೊಂಡಿದ್ದಾರೆ. ಮನ್ರೇಗಾ ಯೋಜನೆ ಕುರಿತು ಚರ್ಚಿಸಲು ಸರ್ಕಾರ ಜ. 22ರಿಂದ ಒಂದು ವಾರ ವಿಧಾನ ಮಂಡಲ ವಿಶೇಷ ಅಧಿವೇಶನ ಕರೆದಿದ್ದು, ವಿಪಕ್ಷಗಳು ಈ ಅಧಿವೇಶನದಲ್ಲಿ ಪಾಲ್ಗೊಂಡು ಚರ್ಚೆ ನಡೆಸಬೇಕು ಎಂದು ಹೇಳಿದರು.

ಕೇಂದ್ರ ಸರ್ಕಾರ ಮನರೇಗಾ ಯೋಜನೆ ಹೆಸರು ಬದಲಾವಣೆ ಮಾಡಿದ್ದು, ಈ ಬಗ್ಗೆ ವಿಶೇಷ ಅಧಿವೇಶನದಲ್ಲಿ ಚರ್ಚಿಸಲಾಗುವುದು. ವಿಪಕ್ಷಗಳು ಈ ಅಧಿವೇಶನದಲ್ಲಿ ಕಾಲಹರಣ ಮಾಡದೇ ಚರ್ಚೆ ಮಾಡಬೇಕು. ಸದನದಲ್ಲಿ ಎಲ್ಲರೂ ಭಾಗವಹಿಸಬೇಕು. ಜನರ ಸಮಸ್ಯೆಗೆ ಸ್ಪಂದಿಸಬೇಕು. ಸದನದ ಸಮಯ ಹಾಳಾಗದಂತೆ ಆಡಳಿತ ಪಕ್ಷ, ವಿರೋಧಪಕ್ಷದವರು ಕುಳಿತುಕೊಂಡು ಜನರ ಸಮಸ್ಯೆಗಳ ಬಗ್ಗೆ ಚರ್ಚಿಸಬೇಕು. ವಿಶೇಷವಾಗಿ ಮನರೇಗಾ ಬಗ್ಗೆ ಚರ್ಚೆ ನಡೆಯುತ್ತದೆ. ಅಲ್ಲಿ ರಾಜಕಾರಣ ಮಾಡುವ ಅಗತ್ಯವಿಲ್ಲ, ಎಲ್ಲರೂ ಸಹಕಾರ ನೀಡಬೇಕು ಎಂದರು.

ಮನರೇಗಾ ಕುರಿತು ದೇಶದಾದ್ಯಂತ ಕಾಂಗ್ರೆಸ್ ಬೃಹತ್ ಆಂದೋಲನ ಶುರು ಮಾಡಿದೆ. ರಾಜ್ಯದಲ್ಲಿ ಸಹ ಜ. 10ರಿಂದ ಮನರೇಗಾ ಬಚಾವೋ ಸಂಗ್ರಾಮ್ ಆರಂಭಿಸಿದ್ದು, ಗ್ರಾಪಂ, ತಾಪಂ ಹಾಗೂ ಜಿಲ್ಲಾ ಮಟ್ಟದಲ್ಲಿ ಪ್ರತಿಭಟನೆ ಮಾಡಿ ಕಾಯ್ದೆ ವಾಪಸ್ ಪಡೆಯಲು ಒತ್ತಾಯಿಸುತ್ತಿದ್ದೇವೆ. ಗ್ರಾಮೀಣ ಭಾಗದ ಜನರ ಕಷ್ಟಕ್ಕೆ ಅನುಕೂಲವಾಗುವ ದೃಷ್ಟಿಯಿಂದ ಮನರೇಗಾ ಮಾಡಲಾಗಿತ್ತು. ಬೃಹತ್ ಹೋರಾಟ ಮಾಡುವ ಮೂಲಕ ಜನರಿಗೆ ಈ ಬಗ್ಗೆ ತಿಳಿಸುವ ಕೆಲಸ ಮಾಡುತ್ತೇವೆ. ಮಹಾತ್ಮಾಗಾಂಧಿ ಅವರ ಹೆಸರು ತೆಗೆಯುವಂತಹ ಕೆಲಸ ಮಾಡಿದ ನಿಮ್ಮನ್ನು ದೇಶದ ಜನರು ಕ್ಷಮಿಸುವುದಿಲ್ಲ, ತಕ್ಕಪಾಠ ಕಲಿಸಲಿದ್ದಾರೆ ಎಂದರು.

ಸ್ಥಳೀಯ ಸಂಸ್ಥೆಗಳ ಚುನಾವಣೆ ಎದುರಿಸಲು ತಯಾರಿ ನಡೆಸಿದ್ದೇವೆ. ಗ್ಯಾರಂಟಿಗಳೇ ನಮ್ಮ ಪಕ್ಷದ ಗೆಲುವಿಗೆ ಶ್ರೀರಕ್ಷೆಯಾಗಿವೆ. ನಮ್ಮ ಸರ್ಕಾರದ ಸಾಧನೆ, ಬಿಜೆಪಿ ವೈಫಲ್ಯ ತಿಳಿಸುವ ಕೆಲಸ ಮಾಡುತ್ತೇವೆ ಎಂದ ಅವರು, ಫೆ.13ರಂದು ಹಾವೇರಿಯಲ್ಲಿ ಸಾಧನಾ ಸಮಾವೇಶ ಆಯೋಜನೆಗೆ ಸಿದ್ಧತೆ ನಡೆದಿದೆ. ಈ ಬೃಹತ್ ಸಮಾವೇಶದಲ್ಲಿ 1 ಲಕ್ಷಕ್ಕೂ ಅಧಿಕ ಫಲಾನುಭವಿಗಳಿಗೆ ಪಟ್ಟಾ ಕೊಡುವ ಕೆಲಸ ಮಾಡುತ್ತಿದ್ದು, ಕಾರ್ಯಕ್ರಮದ ರೂಪುರೇಷೆಗಳ ತಯಾರಿ ನಡೆಸಿದ್ದೇವೆ. ಜ. 24ರಂದು ಹುಬ್ಬಳಿಯಲ್ಲಿ ಸುಮಾರು 42 ಸಾವಿರ ಮನೆ ಕೊಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಪದವೀಧರ ಕ್ಷೇತ್ರದ ಆಕಾಂಕ್ಷಿಗಳ ಅಸಮಾಧಾನದ ಕುರಿತು ಪ್ರತಿಕ್ರಿಯಿಸಿದ ಅವರು, ನಾಲ್ಕು ಜಿಲ್ಲೆಯ ಜನರ ಅಭಿಪ್ರಾಯ ಪಡೆದು ಹೈಕಮಾಂಡ್ ನಾಯಕರು ತೀರ್ಮಾನ ಮಾಡಿ ಪಶ್ಚಿಮ ಪದವೀಧರರ ಕ್ಷೇತ್ರಕ್ಕೆ ಅಭ್ಯರ್ಥಿ ಆಯ್ಕೆ ಮಾಡಿದ್ದಾರೆ. ಎಲ್ಲರ ಬೆಂಬಲದೊಂದಿಗೆ ಪಕ್ಷದ ಅಭ್ಯರ್ಥಿ ಗೆಲ್ಲುವ ವಿಶ್ವಾಸ ಇದೆ ಎಂದರು.

ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಸೋಮಣ್ಣ ಬೇವಿನಮರದ, ಎಸ್.ಎಫ್.ಎನ್. ಗಾಜೀಗೌಡ್ರ, ಕೊಟ್ರೇಶಪ್ಪ ಬಸೇಗಣ್ಣಿ, ಎಂ.ಎಂ. ಮೈದೂರ, ಪ್ರೇಮಾ ಪಾಟೀಲ, ಪಿ.ಡಿ. ಬಸನಗೌಡ್ರ, ಪ್ರಸನ್ನ ಹಿರೇಮಠ ಇತರರು ಇದ್ದರು.

ಕೇಂದ್ರದಲ್ಲಿ ರಾಜ್ಯದವರು ಐವರು ಮಂತ್ರಿಗಳಿದ್ದರೂ ರಾಜ್ಯದ ಯಾವುದೇ ಸಮಸ್ಯೆಗೂ ಅವರು ಸ್ಪಂದಿಸುತ್ತಿಲ್ಲ. ರಾಜ್ಯದ ಹಿತದೃಷ್ಟಿಯಿಂದ ರಾಜಕಾರಣ ಬಿಟ್ಟು ಜನರ ಸಮಸ್ಯೆಗೆ ಸ್ಪಂದಿಸಬೇಕು. ಪ್ರಧಾನಿ ಮೋದಿ ಅವರ ಮುಂದೆ ರಾಜ್ಯಕ್ಕೆ ಅನುದಾನ ಕೊಡಿ ಎಂದು ಬಾಯಿ ತೆರೆಯುವ ಧೈರ್ಯ ಯಾವ ಮಂತ್ರಿಯೂ ಮಾಡುತ್ತಿಲ್ಲ ಎಂದು ವಿಪ ಮುಖ್ಯಸಚೇತಕ ಸಲೀಂ ಅಹ್ಮದ್ ಹೇಳಿದರು.