ಸಾರಾಂಶ
ಇತ್ತೀಚಿನ ದಿನಗಳಲ್ಲಿ ಬಿಜೆಪಿ ಅಭ್ಯರ್ಥಿ ಮತ್ತು ಮುಖಂಡರ ಹೇಳಿಕೆಯಿಂದ ನಮ್ಮ ಪಕ್ಷ ಭ್ರಮನಿರಸನಗೊಳ್ಳುವುದಿಲ್ಲ. ಬಿಜೆಪಿಯ ಸುಳ್ಳು ಹೇಳಿಕೆಗೆ ಮತದಾರರು ಈ ಚುನಾವಣೆಯಲ್ಲಿ ತಿಲಾಂಜಲಿ ಹಾಡಲಿದ್ದಾರೆ ಎಂದು ಕೆಪಿಸಿಸಿ ಸದಸ್ಯ ದೀಪಕ ಹೆಗಡೆ ದೊಡ್ಡೂರ ಹೇಳಿದರು.
ಶಿರಸಿ: ಬಿಜೆಪಿಯ ನಾಟಕವನ್ನು ೩ ದಶಕಗಳಿಂದ ಜಿಲ್ಲೆಯ ಜನರು ಗಮನಿಸಿದ್ದಾರೆ. ಮುಗ್ಧತೆ ಬಂಡವಾಳವನ್ನಾಗಿ ಮಾಡಿಕೊಂಡ ಸಂಸದರು ಹಾಗೂ ಬಿಜೆಪಿಯ ನಾಯಕರು ಜನರನ್ನು ದಾರಿತಪ್ಪಿಸುವ ಕೆಲಸ ಮಾಡಿದ್ದಾರೆ ಎಂದು ಕೆಪಿಸಿಸಿ ಸದಸ್ಯ ದೀಪಕ ಹೆಗಡೆ ದೊಡ್ಡೂರ ಹೇಳಿದರು.
ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಬಿಜೆಪಿ ಅಭ್ಯರ್ಥಿ ಮತ್ತು ಮುಖಂಡರ ಹೇಳಿಕೆಯಿಂದ ನಮ್ಮ ಪಕ್ಷ ಭ್ರಮನಿರಸನಗೊಳ್ಳುವುದಿಲ್ಲ. ಬಿಜೆಪಿಯ ಸುಳ್ಳು ಹೇಳಿಕೆಗೆ ಮತದಾರರು ಈ ಚುನಾವಣೆಯಲ್ಲಿ ತಿಲಾಂಜಲಿ ಹಾಡಲಿದ್ದಾರೆ. ಚುನಾವಣೆ ಬಂದ ಮೇಲೆ ಅದೇ ರಾಗ ಅದೇ ಹಾಡು ಎಂಬಂತಾಗಿದೆ ಬಿಜೆಪಿಯ ಸ್ಥಿತಿ. ಸೌಹಾರ್ದತೆ ಕೆಡಿಸುವ ಕೆಲಸ ಮಾಡುತ್ತಿದ್ದು, ಸಂವಿಧಾನದ ಮೇಲೆ ಪ್ರಮಾಣವಚನ ಸ್ವೀಕರಿಸುತ್ತೇವೆ. ಸಂವಿಧಾನದಲ್ಲಿ ಹೇಳಿರುವಂತೆ ಸಮಾಜದಲ್ಲಿ ಶಾಂತಿ, ಸೌಹಾರ್ದತೆ, ಏಕತೆ ಮೂಡಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ. ಕೇವಲ ಚುನಾವಣಾ ಸಂದರ್ಭದಲ್ಲಿ ಅನೇಕ ವಿಚಾರ ಮುನ್ನೆಲೆ ತಂದು ಅದನ್ನೇ ಬಿಜೆಪಿ ಬಂಡವಾಳವನ್ನಾಗಿ ಮಾಡಿಕೊಳ್ಳುತ್ತದೆ ಎಂದು ಆರೋಪಿಸಿದರು.ಕಾಂಗ್ರೆಸ್ ಮನಮೋಹನ ಸಿಂಗ್ ಪ್ರಧಾನಿಯಾಗಿದ್ದ ಅವಧಿಯಲ್ಲಿ ನರೇಗಾ, ಮಾಹಿತಿ ಹಕ್ಕು, ಆಧಾರ್, ₹೭೨ ಸಾವಿರ ಕೋಟಿ ರೈತರ ಸಾಲಮನ್ನಾ, ವಿದೇಶಿ ಹೂಡಿಕೆಯಂತಹ ಹಲವು ಕಾರ್ಯಕ್ರಮಗಳ ಮೂಲಕ ಅಭಿವೃದ್ಧಿಗೆ ಕಾರಣರಾಗಿದ್ದರು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಜಗದೀಶ ಗೌಡ, ಉಪಾಧ್ಯಕ್ಷ ಗಣೇಶ ದಾವಣಗೆರೆ, ಪ್ರಮುಖರಾದ ಬಸವರಾಜ ದೊಡ್ಮನಿ, ಬಾಳಾ ರೇವಣಕರ, ರಘು ಕಾನಡೆ, ಶ್ರೀಪಾದ ಹೆಗಡೆ ಕಡವೆ, ಜ್ಯೋತಿ ಪಾಟೀಲ ಮತ್ತಿತರರು ಇದ್ದರು.