ಯುವಕರನ್ನು ತಪ್ಪುದಾರಿಗೆ ಎಳೆಯುತ್ತಿರುವ ಬಿಜೆಪಿ: ಡಾ. ಅಂಜಲಿ ನಿಂಬಾಳ್ಕರ್‌

| Published : Apr 01 2024, 12:53 AM IST

ಯುವಕರನ್ನು ತಪ್ಪುದಾರಿಗೆ ಎಳೆಯುತ್ತಿರುವ ಬಿಜೆಪಿ: ಡಾ. ಅಂಜಲಿ ನಿಂಬಾಳ್ಕರ್‌
Share this Article
  • FB
  • TW
  • Linkdin
  • Email

ಸಾರಾಂಶ

ಈ ಚುನಾವಣೆಯು ಬಡವರು, ಯುವಕರು, ಮಹಿಳೆಯರಿಗೆ ಸಿಗಬೇಕಾದ ನ್ಯಾಯದ ಹೋರಾಟಕ್ಕಾಗಿ ನಡೆಯಲಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ತಿಳಿಸಿದರು.

ದಾಂಡೇಲಿ: ಕೇವಲ ಸುಳ್ಳು ಹೇಳುವವರು ಬಿಜೆಪಿಗರು. ಸಂತ, ಮಹಾತ್ಮರ ಹೆಸರನ್ನು ದುರುಪಯೋಗಪಡಿಸಿಕೊಂಡು ಹಿಂದುತ್ವದ ಹೆಸರಿನಲ್ಲಿ ಯುವಕರನ್ನು ತಪ್ಪುದಾರಿಗೆ ಎಳೆಯುವ ಕೆಲಸ ಬಿಜೆಪಿಯಿಂದ ಆಗುತ್ತಿದೆ ಎಂದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್ ತಿಳಿಸಿದರು.

ನಗರದಲ್ಲಿ ಹಮ್ಮಿಕೊಂಡಿದ್ದ ಉತ್ತರಕನ್ನಡ ಲೋಕಸಭಾ ಚುನಾವಣಾ ಸಿದ್ಧತಾ ಸಭೆಯಲ್ಲಿ ಮಾತನಾಡಿ, ಈ ಚುನಾವಣೆಯು ಬಡವರು, ಯುವಕರು, ಮಹಿಳೆಯರಿಗೆ ಸಿಗಬೇಕಾದ ನ್ಯಾಯದ ಹೋರಾಟಕ್ಕಾಗಿ ನಡೆಯಲಿದೆ ಎಂದರು.

ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷರೂ ಆದ ಆರ್.ವಿ.ದೇಶಪಾಂಡೆ ಮಾತನಾಡಿ, ಯಾವುದೇ ಪರಿಸ್ಥಿತಿಯಲ್ಲಿ ಈ ಚುನಾವಣೆಯನ್ನು ಶತಾಯಗತಾಯವಾಗಿ ಗೆಲ್ಲಲೇಬೇಕಿದೆ. ಹಿಂದೆ ಮಹಿಳೆ ಮಾರ್ಗರೇಟ್ ಆಳ್ವ ಈ ಕ್ಷೇತ್ರದಲ್ಲಿ ಸಂಸದರಾಗಿದ್ದರು. ಈ ಬಾರಿಯೂ ಮಹಿಳೆ ಡಾ. ಅಂಜಲಿ ನಿಂಬಾಳ್ಕರ್ ಗೆದ್ದೇ ಗೆಲ್ಲುತ್ತಾರೆ. ಇದು ದೇಶಪಾಂಡೆ ಗ್ಯಾರಂಟಿ ಎಂದ ಅವರು, ಭಿನ್ನಾಭಿಪ್ರಾಯ ಮರೆತು ಪಕ್ಷದ ಅಭ್ಯರ್ಥಿ ಗೆಲುವಿಗೆ ಶ್ರಮಿಸಬೇಕು. ೬ ಬಾರಿ ಬಿಜೆಪಿ ಸಂಸದರು ಆಯ್ಕೆಯಾದರೂ ಏನೂ ಅಭಿವೃದ್ಧಿ ಆಗಿಲ್ಲ. ಸೀಬರ್ಡ್, ಕೈಗಾ ಬಂದಿದ್ದು, ಪ್ರವಾಸೋದ್ಯಮ ಅಭಿವೃದ್ಧಿ ಆಗಿದ್ದು ನನ್ನ ಅವಧಿಯಲ್ಲಿ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಮಾತನಾಡಿ, ಜನರಿಗೆ ಏನು ಬೇಕೆಂಬುದನ್ನು ಯೋಚಿಸಲು ಕಾಂಗ್ರೆಸ್‌ಗೆ ಮಾತ್ರ ಸಾಧ್ಯ. ಬಿಜೆಪಿ ಸುಳ್ಳು ಹೇಳುವುದನ್ನು ಬಿಟ್ಟರೆ ಬೇರೇನೂ ಮಾಡಿಲ್ಲ. ಈಗ ಮತ್ತೆ ಸುಳ್ಳನ್ನೇ ಹೇಳಿಕೊಂಡು ಜನರ ಬಳಿ ಬರುತ್ತಾರೆ. ಜಿಲ್ಲೆಯಲ್ಲಿ ೩೦ ವರ್ಷಗಳಿಂದ ನಮ್ಮ ಸಂಸದರು ಈ ಜಿಲ್ಲೆಯಲ್ಲಿ ಇಲ್ಲವೆಂಬುದು ನಮ್ಮ ಕೊರತೆಯಾಗಿದೆ. ಹೀಗಾಗಿ ಅರಣ್ಯ ಅತಿಕ್ರಮಣ ಸೇರಿದಂತೆ ಜಿಲ್ಲೆಯಲ್ಲಿರುವ ಬಹುದೊಡ್ಡ ಸಮಸ್ಯೆಗಳ ಬಗ್ಗೆ ಸಂಸತ್‌ನಲ್ಲಿ ಮಾತನಾಡಬೇಕಿದೆ. ಈ ಸಮಸ್ಯೆಗಳನ್ನು ಖಂಡಿತ ಡಾ.ಅಂಜಲಿ ನಿಂಬಾಳ್ಕರ್ ಸಂಸದರಾದರೆ ಬಗೆಹರಿಸಿಕೊಡುತ್ತಾರೆ ಎಂಬ ವಿಶ್ವಾಸವಿದೆ ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವ್ಕರ್ ಮಾತನಾಡಿದರು. ಬ್ಲಾಕ್ ಕಾಂಗ್ರೆಸ್ ವತಿಯಿಂದ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ರಾಜ್ಯ ಆಡಳಿತ ಸುಧಾರಣಾ ಆಯೋಗದ ಅಧ್ಯಕ್ಷ ಆರ್.ವಿ. ದೇಶಪಾಂಡೆ, ಕಾಂಗ್ರೆಸ್ ಅಭ್ಯರ್ಥಿ ಡಾ. ಅಂಜಲಿ ನಿಂಬಾಳ್ಕರ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಾಯಿ ಗಾಂವ್ಕರ್ ಅವರನ್ನು ಸನ್ಮಾನಿಸಲಾಯಿತು. ತಾಲೂಕು ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಸದಸ್ಯರಿಗೆ ಪ್ರಮಾಣಪತ್ರ ವಿತರಿಸಲಾಯಿತು. ಬ್ಲಾಕ್ ಕಾಂಗ್ರೆಸ್ ಮಹಿಳೆಯರಿಂದ ಡಾ. ಅಂಜಲಿ ನಿಂಬಾಳ್ಕರ್ ಅವರಿಗೆ ಅರಿಶಿಣ- ಕುಂಕುಮ ನೀಡುವ ಕಾರ್ಯಕ್ರಮವೂ ನಡೆಯಿತು

ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಸತೀಶ್ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಹಲವಾಯಿ, ಸೇರಿದಂತೆ ಅನೇಕ ಮುಖಂಡರು ಇದ್ದರು.