ಸಾರಾಂಶ
ಬಿಜೆಪಿ1980ರಲ್ಲಿ ಸ್ಥಾಪನೆಯಾದ ನಂತರ ವರ್ಷದಿಂದ ವರ್ಷಕ್ಕೆ ಬಲಗೊಳ್ಳುತ್ತಾ ಬಂದು ಇಂದು ವಿಶ್ವದಲ್ಲಿಯೇ ಅತ್ಯಂತ ಬಲಿಷ್ಠ ರಾಜಕೀಯ ಪಕ್ಷವಾಗಿ ಬೆಳೆದಿದೆ ಎಂದು ವಿಪ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
ಗದಗ: ಬಿಜೆಪಿ1980ರಲ್ಲಿ ಸ್ಥಾಪನೆಯಾದ ನಂತರ ವರ್ಷದಿಂದ ವರ್ಷಕ್ಕೆ ಬಲಗೊಳ್ಳುತ್ತಾ ಬಂದು ಇಂದು ವಿಶ್ವದಲ್ಲಿಯೇ ಅತ್ಯಂತ ಬಲಿಷ್ಠ ರಾಜಕೀಯ ಪಕ್ಷವಾಗಿ ಬೆಳೆದಿದೆ ಎಂದು ವಿಪ ಸದಸ್ಯ ಎಸ್.ವಿ. ಸಂಕನೂರ ಹೇಳಿದರು.
ನಗರದ ಬಿಜೆಪಿ ಜಿಲ್ಲಾ ಕಾರ್ಯಾಲಯದಲ್ಲಿ ನಡೆದ ಬಿಜೆಪಿ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಪ್ರಥಮ ಬಾರಿ ಅಟಲ್‌ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾದ ನಂತರ ಅನೇಕ ಯೋಜನೆಗಳ ಜಾರಿಗೆ ತಂದರು. ರಾಷ್ಟ್ರೀಯ ಹೆದ್ದಾರಿಗಳನ್ನು ನಿರ್ಮಾಣ ಮಾಡುವುದರಲ್ಲಿ ದಾಖಲೆ ಮಾಡಿದರು. ಸರ್ವ ಶಿಕ್ಷಣ ಅಭಿಯಾನದ ಮುಖಾಂತರ ಶಿಕ್ಷಣದ ಮಹತ್ವವನ್ನು ತಿಳಿಸಿ ಗ್ರಾಮೀಣ ಸಡಕ್ ಯೋಜನೆ ಅಲ್ಲದೆ ನೂರಾರು ಯೋಜನೆಗಳನ್ನು ಜಾರಿಗೆ ತಂದರು. ಅಟಲ್ ಬಿಹಾರಿ ವಾಜಪೇಯಿರವರು ಬಿಜೆಪಿ ಪ್ರಥಮ ಅಧ್ಯಕ್ಷರಾಗಿ ನೇಮಕಗೊಂಡು ಪಕ್ಷವನ್ನು ಕಟ್ಟಿ ಬೆಳೆಸಿದರು ಎಂದರು.ಬಿಜೆಪಿ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ ಮಾತನಾಡಿ, ಎರಡು ಸಂಸದರಿಂದ ಇವತ್ತು 240 ಸಂಸದರು ಬಿಜೆಪಿಯಿಂದ ಆಯ್ಕೆಯಾಗಿದ್ದಾರೆ. 2019ರ ಚುನಾವಣೆಯಲ್ಲಿ 303 ಸಂಸದರು ಆಯ್ಕೆಯಾಗಿ ದೇಶದ ಅನೇಕ ರಾಜ್ಯಗಳಲ್ಲಿ ಇವತ್ತು ಬಿಜೆಪಿ ಅಧಿಕಾರ ನಡೆಸುತ್ತಿದ್ದು ಜನಪರ ಯೋಜನೆಗಳು ಪ್ರತಿಯೊಬ್ಬರ ಮನೆಯ ಬಾಗಿಲಿಗೆ ಮುಟ್ಟುತ್ತಿರುವವು. ಪ್ರಧಾನಿ ನರೇಂದ್ರ ಮೋದಿಯವರು ಅನೇಕ ಯೋಜನೆಗಳನ್ನು ಜಾರಿಗೆ ತಂದು ನಿರುದ್ಯೋಗ ಸಮಸ್ಯೆಯನ್ನ ಬಗೆಹರಿಸುವುದರಲ್ಲಿ ಯಶಸ್ವಿಯಾಗಿದ್ದಾರೆ. ಆರ್ಟಿಕಲ್ 370 ರದ್ದತಿ, ಸಿಎಎ ಜಾರಿ, ತ್ರೀವಳಿ ತಲಾಖ್ ನಿಷೇಧ ಈಗ ವಕ್ಫ್ ಕಾಯ್ದೆಗೆ ತಿದ್ದುಪಡಿ ತಂದಿರುವರು. ನೂರಾರು ಯೋಜನೆಗಳನ್ನು ಎಲ್ಲ ಸಮಾಜದ ವರ್ಗಕ್ಕೂ ಮುಟ್ಟುವ ಹಾಗೆ ಕಾರ್ಯವನ್ನು ಮಾಡಿ ಇಂದು ಭಾರತ ವಿಶ್ವ ಗುರು ಆಗಿ ಮೆರೆಯುತ್ತಿದೆ ಎಂದರು.ಜಿಲ್ಲಾ ಬಿಜೆಪಿ ವಕ್ತಾರ ಎಂ.ಎಂ. ಹಿರೇಮಠ ಮಾತನಾಡಿ, 1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಬಂದ ನಂತರ ಅಂದಿನ ಪ್ರಧಾನಿ ಜವಾಹರಲಾಲ್ ನೇಹರು ಅವರು ಜಮ್ಮು ಕಾಶ್ಮೀರವನ್ನು ದೇಶದ ಭಾಗವಾಗಿ ಗುರುತಿಸಲಿಲ್ಲಾ. ಇದನ್ನು ಖಂಡಿಸಿ ಒಂದು ದೇಶದಲ್ಲಿ 2 ಕಾನೂನುಗಳು ನಡೆಯುವದಿಲ್ಲಾ ಎಂದು ಅಂದಿನ ಕೈಗಾರಿಕಾ ಸಚಿವ ಶ್ಯಾಮಪ್ರಸಾದ ಮುಖರ್ಜಿಯವರು ನೆಹರು ಮಂತ್ರಿ ಮಂಡಲಕ್ಕೆ ರಾಜೀನಾಮೆ ನೀಡಿ ಜನಸಂಘ ಎಂಬ ರಾಜಕೀಯ ಪಕ್ಷವನ್ನು ಸ್ಥಾಪನೆ ಮಾಡಿದರು. ವ್ಯಕ್ತಿಗಿಂತ ಪಕ್ಷ ಮುಖ್ಯ, ಪಕ್ಷಕ್ಕಿಂತ ದೇಶ ಮೊದಲು ಎಂಬಂತೆ 1980 ಏ.6ರಂದು ಮುಂಬೈಯಲ್ಲಿ ಬಿಜೆಪಿ ಸ್ಥಾಪನೆಯಾಯಿತು. ಅಂದಿನಿಂದ ಇಂದಿನವರೆಗೆ ಪಕ್ಷ ಹೆಮ್ಮರವಾಗಿ ಬೆಳೆದಿದೆ ಎಂದರು.ಹಿರಿಯರಾದ ಜಗನ್ನಾಥಸಾ ಭಾಂಡಗೆ ಹಾಗೂ ವಿಜಯಲಕ್ಷ್ಮೀ ಮಾನ್ವಿ ಮಾತನಾಡಿದರು. 1980ರ ಬಿಜೆಪಿ ಸಂಸ್ಥಾಪನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜಗನ್ನಾಥಸಾ ಭಾಂಡಗೆ ಅವರನ್ನು ಸನ್ಮಾನಿಸಲಾಯಿತು.ನಗರ ಘಟಕದ ಅಧ್ಯಕ್ಷರಾದ ಸುರೇಶ ಮರಳಪ್ಪನವರ, ಅಶೋಕ ಸಂಕಣ್ಣವರ, ಅಪ್ಪಣ್ಣ ಟೆಂಗಿನಕಾಯಿ, ಸಂತೋಷ ಅಕ್ಕಿ, ಬಸವರಾಜ ಇಟಗಿ, ರಾಘವೇಂದ್ರ ಭಾಂಡಗೆ, ಮಂಜುನಾಥ ಶಾಂತಗೇರಿ, ಪದ್ಮಿನಿ ಮುತ್ತಲದಿನ್ನಿ, ರವಿ ಮಾನ್ವಿ, ಮೋಹನ ಕೋರಿ, ವಿನಾಯಕ ಹೊರಕೇರಿ, ಕಟವಟೆ, ವಿನೋದ ಹಂಸನೂರ ಹಾಗೂ ಕಾರ್ಯಕರ್ತರು ಇದ್ದರು. ಅನಿಲ ಅಬ್ಬಿಗೇರಿ ಸ್ವಾಗತಿಸಿ, ನಿರೂಪಿಸಿದರು, ಬಸವರಾಜ ಇಟಗಿ ವಂದಿಸಿದರು.