ಸಾರಾಂಶ
ಹುಬ್ಬಳ್ಳಿ: ಬಿಜೆಪಿ ಎಂದಿಗೂ ಜನಾಶೀರ್ವಾದದಿಂದ ಅಧಿಕಾರಕ್ಕೆ ಬಂದ ಪಕ್ಷವಲ್ಲ. ಈಗಲೂ ಬಿಜೆಪಿಯ ಕೇಂದ್ರ ಮತ್ತು ರಾಜ್ಯದ ನಾಯಕರು ಕಾಂಗ್ರೆಸ್ ಸರ್ಕಾರವನ್ನು ಅಸ್ಥಿರಗೊಳಿಸಲು ನಿರಂತರವಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಗಂಭೀರ ಆರೋಪ ಮಾಡಿದರು. ಇಲ್ಲಿನ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ರಾಜ್ಯಕ್ಕೆ ಹೊಸ ಮುಖ್ಯಮಂತ್ರಿ ಬರಲಿದ್ದಾರೆ ಎಂಬ ಬಿಜೆಪಿ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ಬಿಜೆಪಿ-ಜೆಡಿಎಸ್‌ನವರು ಆರೋಪಿಸಿದ ಕೂಡಲೇ ನಾನು ರಾಜೀನಾಮೆ ನೀಡಬೇಕೆ?. ಮುಡಾ ಹಗರಣದಲ್ಲಿ ನಾನು ತಪ್ಪೇ ಮಾಡಿಲ್ಲ, ಹೇಗೆ ರಾಜೀನಾಮೆ ನೀಡಲಿ. ಅವರು ಆಗ್ರಹಿಸಿದ ಕೂಡಲೇ ರಾಜೀನಾಮೆ ನೀಡಲು ಆಗುವುದಿಲ್ಲ. ಈಗ ನಾನು ಬಿ.ವೈ. ವಿಜಯೇಂದ್ರಗೆ ರಾಜೀನಾಮೆ ನೀಡುವಂತೆ ಆಗ್ರಹಿಸುತ್ತೇನೆ. ಅವರು ತಮ್ಮ ರಾಜ್ಯಾಧ್ಯಕ್ಷರ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಾರೆಯೇ? ಎಂದು ಪ್ರಶ್ನಿಸಿದರು.
ಪ್ರಾಸಿಕ್ಯೂಷನ್ ವಿಚಾರವಾಗಿ ಶನಿವಾರ ವಿಚಾರಣೆ ನಡೆಯಲಿದೆ. ಆಗ ಹೈಕೋರ್ಟ್ ತೀರ್ಮಾನ ಏನು ಎಂಬುದು ಸ್ಪಷ್ಟವಾಗಲಿದೆ. ಈ ಕುರಿತು ರಾಷ್ಟ್ರಪತಿಗಳನ್ನು ಭೇಟಿಯಾಗುವ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಸ್ಪಷ್ಟಪಡಿಸಿದರು.
ಇಂದು ರಾಜ್ಯಪಾಲರ ಭೇಟಿ:
ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಮುರುಗೇಶ ನಿರಾಣಿ, ಶಶಿಕಲಾ ಜೊಲ್ಲೆ ಹಾಗೂ ಶಾಸಕ ಜನಾರ್ದನ ರಡ್ಡಿ ಅವರ ಮೇಲಿರುವ ಪ್ರಾಸಿಕ್ಯೂಷನ್ ತನಿಖೆಗೆ ಆಗ್ರಹಿಸಿ ರಾಜ್ಯದ ಕಾಂಗ್ರೆಸ್ ಸಚಿವರು, ಶಾಸಕರು ಹಾಗೂ ಸಂಸದರು ಸೇರಿಕೊಂಡು ಶನಿವಾರ ರಾಜ್ಯಪಾಲರನ್ನು ಭೇಟಿಯಾಗಲಿದ್ದೇವೆ. ಈ ಎಲ್ಲ ಪ್ರಕರಣಗಳಲ್ಲೂ ದೋಷಾರೋಪಣ ಪಟ್ಟಿ ಸಲ್ಲಿಕೆಯಾಗಿ ತನಿಖೆಯೂ ಪೂರ್ಣಗೊಂಡಿದೆ. ಆದರೆ, ನಮ್ಮ ಪ್ರಕರಣದಲ್ಲಿ ಯಾವುದೇ ವಿಚಾರಣೆ ಆಗಿಲ್ಲ. ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದರೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನದಲ್ಲಿದ್ದಾರೆ ಎಂಬುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ ಎಂದರು.
ಯಶಸ್ಸು ಕಾಣಲ್ಲ:
ಬಿಜೆಪಿ ಹೈಕಮಾಂಡ್ ಹಾಗೂ ಜೆಡಿಎಸ್ ನನ್ನನ್ನು ಮೊದಲಿನಿಂದಲೂ ಟಾರ್ಗೆಟ್ ಮಾಡುತ್ತಿದ್ದಾರೆ. ಬಿಜೆಪಿಯವರು ಎಂದಿಗೂ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬಂದಿಲ್ಲ. ಆಪರೇಷನ್ ಕಮಲದ ಮೂಲಕವೇ ಅಧಿಕಾರಕ್ಕೆ ಬಂದಿದ್ದಾರೆ. ಹೀಗಾಗಿ ಮತ್ತೆ ಆಪರೇಷನ್ ಮಾಡುವ ಪ್ರಯತ್ನಗಳನ್ನು ನಡೆಸಿದ್ದಾರೆ. ಇದು ಯಶಸ್ಸು ಕಾಣುವುದಿಲ್ಲ ಎಂದರು.
₹100 ಕೋಟಿ ಆಮಿಷ ನಿಜ:
ಬಿಜೆಪಿಯಿಂದ ಕಾಂಗ್ರೆಸ್ ಶಾಸಕರಿಗೆ ₹100 ಕೋಟಿ ಬೇಡಿಕೆ ಮಾಡಿರುವ ಕುರಿತು ಶಾಸಕ ರವಿ ಗಣಿಗ ನನ್ನ ಬಳಿಯೂ ಹೇಳಿಕೊಂಡಿದ್ದಾರೆ. ಅವರ ಮಾತುಗಳನ್ನು ಕೇಳಿದರೆ ನನಗೂ ಸತ್ಯವೆನಿಸುತ್ತಿದೆ. ಏಕೆಂದರೆ ಬಿಜೆಪಿ ಎಂದಿಗೂ ಸಂಪೂರ್ಣ ಬಹಮತದಿಂದ ಅಧಿಕಾರಕ್ಕೆ ಬಂದಿಲ್ಲ. ಹಿಂಬಾಗಿಲಿನ ಮೂಲಕವೇ ಅಧಿಕಾರಕ್ಕೆ ಬಂದಿದೆ. ಈ ನಡವಳಿಕೆಯಿಂದ ಅವರು ಬೇಡಿಕೆ ಇಟ್ಟಿರಬಹುದು ಎಂಬುದು ಸ್ಪಷ್ಟವಾಗುತ್ತಿದೆ. ಆದರೆ, ಕಾಂಗ್ರೆಸ್ ಪಕ್ಷದ ಯಾವೊಬ್ಬ ಶಾಸಕರೂ ಅವರು ಹಾಕಿದ ಆಮಿಷಕ್ಕೆ ಬಲಿಯಾಗುವುದಿಲ್ಲ ಎಂದು ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ನಟ ದರ್ಶನ್ಗೆ ಜೈಲಿನಲ್ಲಿ ರಾಜಾತಿಥ್ಯ ಕುರಿತು ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿ, ಈ ವಿಚಾರ ಗೊತ್ತಾದ ಕೂಡಲೇ 9 ಜನರನ್ನು ಅಮಾನತು ಮಾಡಲಾಗಿದೆ. ಜೈಲಿನ ಡಿಜಿಗೂ ಕೂಡ ನೋಟಿಸ್ ನೀಡಲಾಗಿದೆ. ದರ್ಶನ್ ಸೇರಿ ಕೆಲವರನ್ನು ಬೇರೆ ಜೈಲಿಗೆ ಸ್ಥಳಾಂತರ ಮಾಡಿದ್ದೇವೆ ಎಂದರು.
15ನೇ ಹಣಕಾಸು ಆಯೋಗದಲ್ಲಿ ನಮಗೆ ಬರಬೇಕಿದ್ದ ₹ 80 ಸಾವಿರ ಕೋಟಿ ಬಂದಿಲ್ಲ. ಅನುದಾನಕ್ಕಾಗಿ ನಾವು ನ್ಯಾಯಾಲಯದ ಮೊರೆ ಹೋಗಬೇಕಾಯಿತು. ಹೀಗಾಗಿ ಅನ್ಯಾಯ ಸರಿಪಡಿಸುವಂತೆ 16ನೇ ಹಣಕಾಸು ಆಯೋಗಕ್ಕೆ ಮನವಿ ಮಾಡಿದ್ದೇವೆ. ನಮಗೆ ನ್ಯಾಯ ದೊರಕುವ ನಂಬಿಕೆಯಿದೆ ಎಂದರು.
ಈ ವೇಳೆ ಕಾನೂನು ಸಚಿವ ಎಚ್.ಕೆ. ಪಾಟೀಲ, ವಿಧಾನ ಪರಿಷತ್ ಸರ್ಕಾರಿ ಮುಖ್ಯ ಸಚೇತಕ ಸಲಿಂ ಅಹ್ಮದ್, ಶಾಸಕರಾದ ಪ್ರಸಾದ ಅಬ್ಬಯ್ಯ, ಪ್ರಕಾಶ ಕೋಳಿವಾಡ, ಮಹಾನಗರ ಜಿಲ್ಲಾಧ್ಯಕ್ಷ ಅಲ್ತಾಫ ಹಳ್ಳೂರ, ಗ್ರಾಮೀಣ ಅಧ್ಯಕ್ಷ ಅನೀಲಕುಮಾರ ಪಾಟೀಲ ಸೇರಿದಂತೆ ಹಲವರಿದ್ದರು.
;Resize=(690,390))
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))