ಸಾರಾಂಶ
ಬೀದರ್ : ಹೋರಾಟ ಮಾಡುವ ಯಾವುದೇ ನೈತಿಕತೆ ಬಿಜೆಪಿಯವರಿಗೆ ಇಲ್ಲ. ರಾಜಕೀಯ ಪ್ರೇರಿತ ಹೋರಾಟವನ್ನು ಬಿಜೆಪಿ ಮಾಡುತ್ತಿದೆ. ಸಿಐಡಿ ತನಿಖೆ ಮಾಡ್ತಿದೆ, ವರದಿ ಬರುವವರೆಗೂ ಕಾಯುವ ತಾಳ್ಮೆ ಇಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಆರೋಪಿಸಿದರು.ಅವರು ನಗರದಲ್ಲಿ ಭೇಟಿಯಾದ ಸುದ್ದಿಗಾರರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ, ಬಿಜೆಪಿಯವರು ಅಭಿವೃದ್ಧಿ ವಿರೋಧಿಗಳು.
ಪ್ರತಿಯೊಂದರಲ್ಲೂ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಅಪರಾಧ ಮಾಡುವವರು ಅವರೇ, ದೂರು ಕೊಡುವವರು ಅವರೇ ಆಗಿದ್ದಾರೆ ಅಷ್ಟೇ ಅಲ್ಲ ತನಿಖೇನೂ, ತೀರ್ಪನ್ನೂ ನಾವೇ ಮಾಡ್ತೀವಿ ಅಂತಾ ವರ್ತಿಸುತ್ತಿದ್ದಾರೆ ಎಂದರು.ಈಶ್ವರಪ್ಪ ಅವರೇ ನನ್ನ ಸಾವಿಗೆ ಕಾರಣ ಎಂದು ಸಂತೋಷ ಪತ್ರದಲ್ಲಿ ಉಲ್ಲೇಖ ಮಾಡಿದ್ರು. ಸಚಿನ ಪತ್ರದಲ್ಲಿ ಆ ರೀತಿ ಇದೆಯಾ, ಈಶ್ವರಪ್ಪ ಅವರ ಪ್ರಕರಣ ಬೇರೆ ಇದೇ ಬೇರೆ. ಪ್ರಿಯಾಂಕ ಖರ್ಗೆ ವಿರುದ್ಧ ರಾಜಕೀಯ ದ್ವೇಷದಿಂದ ಹೋರಾಟ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದರು.
ತನಿಖೆ ಚುರುಕು, ಬಾರ್‌ನಲ್ಲಿ ವಿಚಾರಣೆ :
ಡಿವೈಎಸ್‌ಪಿ ಸುಲೇಮಾನ್ ತಹಸೀಲ್ದಾರ್ ನೇತೃತ್ವದ ಸಿಐಡಿ ತಂಡದಿಂದ ಸಿಐಡಿ ತನಿಖೆ ಚುರುಕುಗೊಳಿಸಿದ್ದು, ಗುತ್ತಿಗೆದಾರ ಸಚಿನ ಸಾವಿಗೂ ಮುನ್ನಾ ದಿನ 2 ಗಂಟೆ ಕಾಲ ಇದ್ದ ಪ್ರತಾಪನಗರದ ಬಾರ್‌ಗೆ ಭೇಟಿ ನೀಡಿ ವಿಚಾರಣೆ ನಡೆಸಿದ್ದಾರೆ. ಬೀದರ್‌ಗೆ ಆಗಮಿಸಿ ತನಿಖೆ ಆರಂಭಿಸಿರುವ ಸಿಐಡಿ ತಂಡ, ಬಾರ್‌ನಲ್ಲಿನ ಸಿಸಿಟಿವಿ ದೃಶ್ಯ ಪರಿಶೀಲಿಸಿ ವಿಚಾರಣೆ ನಡೆಸಿದೆ. ಕ್ಯಾಶ ಕೌಂಟರ್ ಹಾಗೂ ಸಚಿನಗೆ ಅಡುಗೆ ಬಡಿಸಿದ್ದ ವೇಟರ್‌ನಿಂದಲೂ ಮಾಹಿತಿಯನ್ನು ಕಲೆಹಾಕಿದೆ.
ಜೆಡಿಎಸ್ ಶಾಸಕರೇ ಕೈ ತೆಕ್ಕೆಗೆ, ‘ಆಪರೇಶನ್ ಹಸ್ತ’ಹಾಸ್ಯಾಸ್ಪದ
ಬೀದರ್ : ಪಾಪ ಎಚ್‌ಡಿ ಕುಮಾರಸ್ವಾಮಿ ಅವರರದ್ದೆ ಶಾಸಕರು, ಅವರದ್ದೇ ಕಾರ್ಯಕರ್ತರು ಹಿಂಡು ಹಿಂಡಾಗಿ ಬರ್ತಾ ಇದ್ದಾರೆ. ಕಾಂಗ್ರೆಸ್ ಸೇರ್ತಾ ಇದ್ದಾರೆ. ಬೇರೆಯವರ ಮೇಲೆ ಆರೋಪ ಹೊರಿಸುವ ಮೊದಲು ಆತ್ಮಾವಲೋಕನ ಮಾಡಿಕೊಳ್ಳಲಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಖಂಡ್ರೆ ಎಂದು ತಿಳಿಸಿದರು.
ಆಪರೇಷನ್ ಹಸ್ತ ಎಂಬ ಕೇಂದ್ರ ಸಚಿವ ಎಚ್‌ಡಿಕೆ ಹೇಳಿಕೆ ವಿಚಾರವಾಗಿ ಪತ್ರಕರ್ತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿ, ಕುಮಾರಸ್ವಾಮಿ ಪರಿಸ್ಥಿತಿ ಏನಾಗಿದೆ ಅನ್ನೋದನ್ನ ನೋಡಿದ್ದೀರಿ. ಕಾಂಗ್ರೆಸ್ ಅವಧಿಯಲ್ಲಿ ರಾಜ್ಯದಾದ್ಯಂತ ಅಭಿವೃದ್ಧಿ ಆಗುತ್ತಿದೆ ಜನ ಅದನ್ನು ನೋಡ್ತಿದ್ದಾರೆ ಎಂದರು.
ಯಾವ ಡಿನ್ನರ್ ಮೀಟಿಂಗ್ ಇಲ್ಲ :
ಸಚಿವ ಸತೀಶ ಜಾರಕಿಹೊಳಿ ಮನೆಯಲ್ಲಿ ಡಿನ್ನರ್ ಮೀಟಿಂಗ್ ವಿಚಾರವಾಗಿ ಪ್ರತಿಕ್ರಿಯಿಸಿ, ಯಾವ ಡಿನ್ನರ್ ಮೀಟಿಂಗ್ ಇಲ್ಲ. ಸರ್ಕಾರ ಬಹಳ ಸುಭದ್ರವಾಗಿದೆ, ಐದು ವರ್ಷ ಉತ್ತಮ ಆಡಳಿತ ಕೊಡುತ್ತೇವೆ ಅದಾದ ಮೇಲೂ ಐದು ವರ್ಷ ನಾವೇ ಸರ್ಕಾರ ರಚಿಸಿ ಜನರ ಸೇವೆ ಮಾಡ್ತೇವೆ ಇದನ್ನರಿತಿರುವ ಬಿಜೆಪಿಯವರಿಗೆ ಸಂಕಟ ಆರಂಭವಾಗಿ ಅದಕ್ಕೆ ಬಿಜೆಪಿಯವರು ಮೈಕೈ ಪರಚಿಕೊಳ್ಳುತ್ತಿದ್ದಾರೆ ಎಂದರು.
ಕೆಪಿಸಿಸಿ ಅಧ್ಯಕ್ಷ ಸ್ಥಾನ ಖಾಲಿಯಿಲ್ಲ:ಕೆಪಿಸಿಸಿ ಅಧ್ಯಕ್ಷ ಸ್ಥಾನ ಆಕಾಂಕ್ಷಿ ವಿಚಾರವಾಗಿ ಪ್ರತಿಕ್ರಿಯಿಸಿದ ಈಶ್ವರ ಖಂಡ್ರೆ, ಸಧ್ಯಕ್ಕೆ ಯಾವ ಹುದ್ದೆಗಳೂ ಖಾಲಿ ಇಲ್ಲ, ಖಾಲಿ ಆದಾಗ ಆಲೋಚನೆ ಮಾಡೋಣ. ಕಾಂಗ್ರೆಸ್ ಪಕ್ಷದಲ್ಲಿ ಯಾರು ನಿಷ್ಠಾವಂತರು, ಸಂಘಟನಾತ್ಮಕವಾಗಿ ಕೆಲಸ ಮಾಡುವವರನ್ನ ಹೈಕಮಾಂಡ್ ಗಮನಿಸುತ್ತಿದೆ. ನಾನು ಕಾಂಗ್ರೆಸ್ ಪಕ್ಷದ ಶಿಸ್ತಿನ ಸಿಪಾಯಿ. ಅರಣ್ಯ ಸಚಿವನಾಗಿ ಪ್ರಾಮಾಣಿಕ, ನಿಷ್ಠೆಯಿಂದ ಕೆಲಸ ಮಾಡುತ್ತಿದ್ದೇನೆ ಎಂದರು.
ಹೈಕಮಾಂಡ್ ನನ್ನ ಅಭಿಪ್ರಾಯವನ್ನೂ ತೆಗೆದುಕೊಳ್ಳುತ್ತಾರೆ. ನನ್ನ ಅಭಿಪ್ರಾಯ ಕೇಳಿದಾಗ ಪಕ್ಷದ ಚೌಕಟ್ಟಿನಲ್ಲಿ ಹೇಳುತ್ತೇನೆ. ಅದನ್ನು ಬಹಿರಂಗವಾಗಿ ನಾನು ಹೇಳಲ್ಲ ಎಂದು ಪರೋಕ್ಷವಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂಬುವ ವಿಚಾರವನ್ನು ಸಚಿವ ಈಶ್ವರ ಖಂಡ್ರೆ ಹೊರಹಾಕಿದರು.