ಸಾರಾಂಶ
- ಆವತಿಯಲ್ಲಿ ಬಿಜೆಪಿ ಮಹಾಶಕ್ತಿ ಕೇಂದ್ರದ ನೂತನ ಪದಾಧಿಕಾರಿಗಳ ಜವಾಬ್ದಾರಿ ಸ್ವೀಕಾರ ಸಮಾರಂಭ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುದೇಶ ಮೊದಲು ಎನ್ನುವ ಬಿಜೆಪಿ, ಹಿಂದುತ್ವವನ್ನು ಗಟ್ಟಿಗೊಳಿಸುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ ಎಂದು ವಿಧಾನ ಪರಿಷತ್ ಉಪ ಸಭಾಪತಿ ಎಂ.ಕೆ. ಪ್ರಾಣೇಶ್ ಹೇಳಿದರು.
ಮೂಡಿಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆವತಿ ಗ್ರಾಮದಲ್ಲಿ ನಡೆದ ಬಿಜೆಪಿ ಮಹಾಶಕ್ತಿ ಕೇಂದ್ರದ ನೂತನ ಅಧ್ಯಕ್ಷರು ಮತ್ತು ಪದಾಧಿಕಾರಿಗಳ ಜವಾಬ್ದಾರಿ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಹಿಂದೂಗಳನ್ನು ಕಡೆಗಣಿಸುತ್ತಿದೆ. ಇದರ ವಿರುದ್ಧ ಬಿಜೆಪಿ ಹೋರಾಟ ನಡೆಸುತ್ತಾ ಬರುತ್ತಿದೆ. ಮುಂದಿನ ಯುವ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಕಾಂಗ್ರೆಸ್ ತನ್ನ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದೀಪಕ್ ದೊಡ್ಡಯ್ಯ ಮಾತನಾಡಿ, ಕಟ್ಟುವ ಹೊಸ ನಾಡೊಂದನ್ನು ಎಂಬ ಮಾತು ಈ ಶಿಸ್ತುಬದ್ಧ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯಲ್ಲಿ ಜನ ಸೇರಿರುವುದು ಸಾಕ್ಷಿಯಾಗಿದೆ. ಸಿದ್ಧಾಂತ, ತತ್ತ್ವ, ರಾಷ್ಟ್ರ ನಿರ್ಮಾಣಕ್ಕಾಗಿ ಬೆಳೆದು ಬಂದ ಪಕ್ಷ ಬಿಜೆಪಿ. ಪಂಚಾಯಿತಿ ಯಿಂದ ಪಾರ್ಲಿಮೆಂಟ್‌ವರೆಗೆ ಅಧಿಕಾರದಲ್ಲಿದೆ ಎಂದು ಹೇಳಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಪರಾಭವಗೊಳ್ಳಲು ಆಗಿರುವ ತಪ್ಪುಗಳನ್ನು ಸರಿಪಡಿಸಿಕೊಂಡು ಮುಂಬರುವ ತಾಪಂ, ಜಿಪಂ ಸೇರಿ ದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನು ಬಿಜೆಪಿ ಗೆಲ್ಲಬೇಕು. ಅದಕ್ಕೆ ಪಕ್ಷದ ಸಿದ್ಧಾಂತವನ್ನು ಮನೆ ಮನೆಗೆ ತಲುಪಿಸಬೇಕಾಗಿ ಕಾರ್ಯ ಕರ್ತರಲ್ಲಿ ಮನವಿ ಮಾಡಿದರು.ನೂತನ ಅಧ್ಯಕ್ಷ ಕೆರೆಮಕ್ಕಿ ಮಹೇಶ್ ಮಾತನಾಡಿ, ಆಸ್ತಿ, ಹಣ ಗಳಿಸಿದಷ್ಟು ಜನರ ವಿಶ್ವಾಸ ಗಳಿಸುವುದು ಸುಲಭದ ವಿಷಯವಲ್ಲ. ಇಂದು ಬಿಜೆಪಿ ನಾಯಕರು ಅಪಾರವಾದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ನನಗೆ ಇಂದು ಸಿಕ್ಕಿರುವ ಸ್ಥಾನವನ್ನು ಅಧಿಕಾರ ಎಂದು ಭಾವಿಸದೆ ಜವಾಬ್ದಾರಿ ಎಂದು ಪರಿಗಣಿಸಿ ಕೆಲಸ ನಿರ್ವಹಿಸುತ್ತೇನೆಂದು ಭರವಸೆ ನೀಡಿದರು.ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ಮಾತನಾಡಿ, ರತನ್ ಟಾಟಾ ನಿಧನರಾದಾಗ ಇಡೀ ಭಾರತ ಕಂಬನಿ ಮಿಡಿಯಿತು. ರಾಜ್ಯದಲ್ಲಿ ಪುನೀತ್ ರಾಜ್‌ಕುಮಾರ್ ಮೃತಪಟ್ಟಾಗ ಜನ ಮರುಗಿದರು. ಇದನ್ನು ಜನ ನಮ್ಮ ನೋವು ಎಂದು ಭಾವಿಸಿದ್ದರು ಎಂಬುದನ್ನು ಬಿಜೆಪಿ ಮುಖಂಡರಾದಿಯಾಗಿ, ಕಾರ್ಯಕರ್ತರು ಮನನ ಮಾಡಿಕೊಳ್ಳಬೇಕಾದ ಅಗತ್ಯತೆ ಇದೆ. ದೇಶ ಪ್ರೇಮಕ್ಕೆ ಇವರು ಸಾಕ್ಷಿಯಾಗಿದ್ದಾರೆ. ಯಾವುದೇ ಪಕ್ಷದ ಜವಾಬ್ದಾರಿ ಇಟ್ಟುಕೊಳ್ಳದೆ ಜನಸೇವೆ ಮಾಡಿ ತಮ್ಮ ಸ್ವಂತ ಸಾಮ್ರಾಜ್ಯ ಕಟ್ಟಿ ಇತಿಹಾಸ ಸೃಷ್ಟಿಸಿದ್ದಾರೆ ಎಂದು ಹೇಳಿದರು.
ಬಿಜೆಪಿ ಪಕ್ಷದ ಕಾರ್ಯಕರ್ತರು ಪಕ್ಷದ ಸಿದ್ಧಾಂತ ಒಪ್ಪಿಕೊಂಡು ಪಕ್ಷಕ್ಕಾಗಿ, ದೇಶಕ್ಕಾಗಿ ಕೆಲಸ ಮಾಡಬೇಕಾಗಿದೆ. ಎಲ್ಲರನ್ನೂ ಒಪ್ಪಿಕೊಳ್ಳುವವರು ಜನನಾಯಕರಾಗುತ್ತಾರೆ. ದೇಶದ ಅಭಿವೃದ್ಧಿಗೆ ಪೂರಕ ವಾತಾವರಣ ನಿರ್ಮಾಣ ಮಾಡಲು ಕರೆ ನೀಡಿದರು.ಒಬ್ಬ ವ್ಯಕ್ತಿಯಿಂದ ಯಾವುದೇ ಪಕ್ಷ ನಿರ್ಮಾಣ ಆಗಬಾರದು, ಸಿದ್ಧಾಂತ ಮತ್ತು ತತ್ವದ ಮೇಲೆ ಪಕ್ಷದ ಸಂಘಟನೆ ಆಗಬೇಕು, ನಿರಂತರವಾದ ಒಳ್ಳೆಯ ನಾಯಕತ್ವವನ್ನು ನೂತನ ಅಧ್ಯಕ್ಷರು ಕೊಡಲಿ ಎಂದು ಶುಭ ಹಾರೈಸಿದರು.ಆಲ್ದೂರು ಮಂಡಲ ಅಧ್ಯಕ್ಷ ರವಿ ಬಸರವಳ್ಳಿ ಮಾತನಾಡಿ, ಆವತಿ ಹೋಬಳಿ ಬಿಜೆಪಿ ಮುಖಂಡರಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲದೆ ಒಗ್ಗಟ್ಟಿ ನಿಂದ ಕೆಲಸ ಮಾಡುತ್ತಿದ್ದಾರೆ. ನಾಲ್ಕು ವರ್ಷಗಳಿಂದ ಮಾಕೋಡು ಪ್ರಶಾಂತ್ ರವರು ಗುಂಪುಗಾರಿಕೆಗೆ ಅವಕಾಶ ನೀಡದೆ ಸಂಘಟನೆ ಮಾಡಿದ್ದಾರೆಂದು ಶ್ಲಾಘಿಸಿದರು.ಅಧ್ಯಕ್ಷತೆಯನ್ನು ಮಾಕೋಡು ಪ್ರಶಾಂತ್ ವಹಿಸಿದ್ದರು. ವೇದಿಕೆಯಲ್ಲಿ ಬಿಜೆಪಿ ಮುಖಂಡರಾದ ನಾಗೇಶ್ ಗೌಡ, ಪ್ರಧಾನ ಕಾರ್ಯದರ್ಶಿ ಪುಣ್ಯ ಪಾಲ್, ಮಹೇಶ್, ರವಿ, ಪ್ರವೀಣ್, ನಾಗೇಶ್‌ಗೌಡ, ವಿನ್ಸೆಂಟ್, ಅರುಣ್, ಎಂ.ಎನ್. ಮಂಜುನಾಥ್, ನಾಗೇಶ್, ಎಚ್.ಪಿ.ಮಹೇಂದ್ರ, ಶೇಖರ್, ಶಾಂತೇಗೌಡ, ಪೂರ್ಣೇಶ್, ರವೀಂದ್ರ, ವೀಣಾಶೆಟ್ಟಿ, ಮನು ಬಸರವಳ್ಳಿ, ಸಂಪತ್ ಹೆಡದಾಳ್, ಅರವಿಂದ ಉಪಸ್ಥಿತರಿದ್ದರು.20 ಕೆಸಿಕೆಎಂ 1ಮೂಡಿಗೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಆವತಿ ಗ್ರಾಮದಲ್ಲಿ ನಡೆದ ಬಿಜೆಪಿ ಮಹಾಶಕ್ತಿ ಕೇಂದ್ರದ ನೂತನ ಪದಾಧಿಕಾರಿಗಳ ಜವಾಬ್ದಾರಿ ಸ್ವೀಕಾರ ಸಮಾರಂಭವನ್ನು ಎಂ.ಕೆ. ಪ್ರಾಣೇಶ್ ಅವರು ಉದ್ಘಾಟಿಸಿದರು. ದೀಪಕ್ ದೊಡ್ಡಯ್ಯ, ದಿನೇಶ್ ದೇವವೃಂದ ಇದ್ದರು.