ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಕಾಂಗ್ರೆಸ್ ಪಕ್ಷದ ಭ್ರಷ್ಟ ಸರ್ಕಾರದ ವಿರುದ್ಧ ಹಮ್ಮಿಕೊಂಡಿರುವ ಬಿಜೆಪಿ ಜನಾಕ್ರೋಶ ಯಾತ್ರೆ ಏ.17 ರಂದು ಬೆಳಗ್ಗೆ 10 ಗಂಟೆಗೆ ಬಾಗಲಕೋಟೆಗೆ ಆಗಮಿಸಲಿದೆ ಎಂದು ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು.ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ನಡೆಯುವ ಯಾತ್ರೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಬಿಜೆಪಿ ಪ್ರತಿಪಕ್ಷದ ನಾಯಕ ಆರ್.ಅಶೋಕ, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಪಕ್ಷದ ರಾಜ್ಯ ನಾಯಕರು ಭಾಗವಹಿಸುವರು. ಜಿಲ್ಲೆಯಿಂದ 10 ಸಾವಿರ ಜನ ಯಾತ್ರೆಯಲ್ಲಿ ಭಾಗವಹಿಸಲಿದ್ದಾರೆ ಎಂದರು.ನಗರದ ಡಾ.ಅಂಬೇಡ್ಕರ ಪುತ್ಥಳಿಗೆ ನಾಯಕರು ಮಾಲಾರ್ಪಣೆ ಮಾಡಿದ ಬಳಿಕ ನಂತರ ವೆಂಕಟಪೇಟೆ ರಸ್ತೆ ಮೂಲಕ ವಲ್ಲಭಬಾಯಿ ವೃತ್ತ, ಎಂ.ಜಿ.ರಸ್ತೆ ಮಾರ್ಗವಾಗಿ ಬಸವೇಶ್ವರ ವೃತ್ತಕ್ಕೆ ಸಮಾಪ್ತಿಗೊಂಡು ಅಲ್ಲಿಯೇ ಬಹಿರಂಗ ಸಭೆ ಉದ್ದೇಶಿಸಿ ತೆರೆದ ವಾಹನದಲ್ಲಿ ನಾಯಕರು ಮಾತನಾಡಲಿದ್ದಾರೆ ಎಂದು ತಿಳಿಸಿದರು.ಸರ್ಕಾರಿ ಆಸ್ಪತ್ರೆಗಳಲ್ಲಿ ಕಳಪೆ ಔಷಧ ನೀಡಿ ಬಾಣಂತಿಯರ ಮತ್ತು ನವಜಾತ ಶಿಶುಗಳ ಸಾವು, ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ₹187 ಕೋಟಿ ಹಗರಣ, ಕಾರ್ಮಿಕ ಇಲಾಖೆಯ ಖರೀದಿಯಲ್ಲಿ ₹2 ಸಾವಿರ ಕೋಟಿ ಹಗರಣ, ಇಂಧನ ಇಲಾಖೆಯ ಸ್ಮಾರ್ಟ್ ಮೀಟರ್ ಖರೀದಿಯಲ್ಲಿ ₹15 ಸಾವಿರ ಕೋಟಿ ಹಗರಣ, ಅಬಕಾರಿ ಇಲಾಖೆಯಲ್ಲಿ ₹700 ಕೋಟಿ ಹಗರಣ ಹೀಗೆ ರಾಜ್ಯ ಸರ್ಕಾರ ಭ್ರಷ್ಟಾಚಾರ, ಹಗರಣದಲ್ಲಿ ಮುಳುಗಿದ್ದು ಇದನ್ನು ಜನರಿಗೆ ತಿಳಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ ಎಂದರು. ಕರ್ನಾಟಕ ಭ್ರಷ್ಟಾಚಾರದಲ್ಲಿ ನಂ.1 ಸ್ಥಾನಕ್ಕೆ ಬಂದಿದೆ. ಅಭಿವೃದ್ಧಿಯಲ್ಲಿ ದೇಶದಲ್ಲಿ ರಾಜ್ಯ ಮೂರನೇ ಸ್ಥಾನಕ್ಕೆ ಇದ್ದಿದ್ದು ಈಗ ಹತ್ತನೇ ಸ್ಥಾನಕ್ಕೆ ಕುಸಿದಿದೆ. ರಾಜ್ಯದಲ್ಲಿ ಸಾಕಷ್ಟು ಭ್ರಷ್ಟಾಚಾರ ನಡೆದಿದೆ. ಇದನ್ನು ವಿರೋಧಿಸಿ ರಾಜ್ಯಾದ್ಯಂತ ಬಿಜೆಪಿ ಜನಾಕ್ರೋಶ ಹಮ್ಮಿಕೊಂಡಿದೆ ಎಂದರು.ಜಾತಿ ಗಣತಿ ಅವೈಜ್ಞಾನಿಕವಾಗಿದೆ:
ಜಾತಿ ಗಣತಿ ಅವೈಜ್ಣಾನಿಕವಾಗಿದೆ. ಜಾತಿಜಾತಿಗಳ ನಡುವೆ ವಿಷಬೀಜ ಬಿತ್ತಲು ರಾಜಕೀಯ ಲಾಭಕ್ಕಾಗಿ ಜಾತಿಗಣತಿ ಬಗ್ಗೆ ವರದಿ ಬಹಿರಂಗ ಪಡಿಸಿದ್ದಾರೆ. ಮುಸ್ಲಿಂ ಸಮುದಾಯ ಓಲೈಸಿಕೊಳ್ಳಲು ಗಣತಿ ಮಾಡಿದೆ ಎಂದರು.ರಾಜ್ಯದಲ್ಲಿ ಜಾತಿಗಣತಿ ಕುರಿತು ಅಂಕಿ ಸಂಖ್ಯೆ ಬಹಿರಂಗಗೊಂಡಿರುವುದು ಇದೊಂದು ಅವೈಜ್ಞಾನಿಕ ಗಣತಿಯಾಗಿದೆ. ಯಾವ ಕಾಲದಲ್ಲಿ ಗಣತಿಯಾಗಿದೆ ಗೊತ್ತಿಲ್ಲ. ಆದರೆ ಅಂಕಿ ಸಂಖ್ಯೆ ಮಾತ್ರ ಜಾತಿಗಣತಿಗೆ ಸಂಬಂಧಿಸಿದ್ದು ಸುಳ್ಳು. ಇದೊಂದು ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದರು.ಈ ವೇಳೆ ಬಸವರಾಜ ಹುನಗುಂದ, ಉಮೇಶ ಹಂಚಿನಾಳ, ಮಲ್ಲಪ್ಪ ಭಗಬತಿ, ಮಲ್ಲೇಶ ವಿಜಾಪುರ, ಶ್ರೀಧರ ನಾಗರಬೆಟ್ಟ ಪತ್ರಿಕಾಗೋಷ್ಠಿಯಲ್ಲಿದ್ದರು.