ಕನ್ನಡಪ್ರಭ ವಾರ್ತೆ ತಾಳಿಕೋಟೆ ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಭೀಕರ ಬರಗಾಲ ಆವರಿಸಿದೆ. ಬರ ಘೋಷಣೆಯಲ್ಲಿ ರಾಜ್ಯ ಸರ್ಕಾರ ತಾರತಮ್ಯ ಮಾಡಲು ಹೊರಟಿರುವುದನ್ನು ನಾವು ಸಹಿಸಲ್ಲವೆಂದು ಮಾಜಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಹೇಳಿದರು.
ಕನ್ನಡಪ್ರಭ ವಾರ್ತೆ ತಾಳಿಕೋಟೆ
ಮಳೆ ಕೊರತೆಯಿಂದ ಜಿಲ್ಲೆಯಲ್ಲಿ ಭೀಕರ ಬರಗಾಲ ಆವರಿಸಿದೆ. ಬರ ಘೋಷಣೆಯಲ್ಲಿ ರಾಜ್ಯ ಸರ್ಕಾರ ತಾರತಮ್ಯ ಮಾಡಲು ಹೊರಟಿರುವುದನ್ನು ನಾವು ಸಹಿಸಲ್ಲವೆಂದು ಮಾಜಿ ಶಾಸಕ ಸೋಮನಗೌಡ ಪಾಟೀಲ(ಸಾಸನೂರ) ಹೇಳಿದರು.ಪಟ್ಟಣದಲ್ಲಿ ಶುಕ್ರವಾರ ಬಿಜೆಪಿ ರಾಜ್ಯ ರೈತ ಮೋರ್ಚಾ ಹಾಗೂ ಜೆಡಿಎಸ್ ನೇತೃತ್ವದಲ್ಲಿ ತಾಳಿಕೋಟೆಯನ್ನು ಬರಪೀಡಿತ ತಾಲೂಕೆಂದು ಘೋಷಿಸಲು ಆಗ್ರಹಿಸಿ ನಡೆದ ೨ನೇ ದಿನದ ರೈತ ಹೋರಾಟದಲ್ಲಿ ಮಾತನಾಡಿದ ಅವರು, ಬರ ಪರಿಸ್ಥಿತಿಯಿಂದ ಸಂಕಷ್ಟಕ್ಕೀಡಾಗಿರುವ ರೈತರ ನೆರವಿಗೆ ಸರ್ಕಾರ ಮುಂದಾಗಬೇಕು. ಎಕರೆಗೆ ₹ ೫೦ ಸಾವಿರ ಬೆಳೆ ನಷ್ಟ ಪರಿಹಾರ ನೀಡಬೇಕು, ರೈತರ ೫ ಲಕ್ಷದವರೆಗಿನ ಸಾಲ ಮನ್ನಾ ಮಾಡಬೇಕು ಹಾಗೂ ಬೆಳೆ ವಿಮೆಯ ಸಂಪೂರ್ಣ ಪ್ರಯೋಜನ ರೈತರಿಗೆ ದೊರೆಯುವಂತೆ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಮಾತನಾಡಿ, ಬರಗಾಲದಲ್ಲಿ ರಾಜ್ಯ ಸರ್ಕಾರ ನೆರವಿಗೆ ಬರುವದನ್ನು ಬಿಟ್ಟು ಕುಂಟು ನೆಪದ ಮೇಲೆ ಜಾರಿಕೊಳ್ಳುತ್ತಿದೆ. ಬರಗಾಲ ಘೋಷಣೆ ಜೊತೆಗೆ ಮುಂದಿನ ಬೆಳೆ ಬರುವವರೆಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಹೆಚ್ಚಿನ ಕಾಮಗಾರಿಗಳನ್ನು ಕೈಗೊಳ್ಳಬೇಕು. ರೈತರ ಹೊಲಗಳಲ್ಲಿ ಕೃಷಿ ಹೊಂಡ ಹಾಗೂ ಬದುಗಳ ನಿರ್ಮಾಣ, ಕೆರೆಗಳ ಹೂಳೆತ್ತುವುದು ಮತ್ತು ಕಾಲುವೆಗಳ ಅಭಿವೃದ್ಧಿ ಸೇರಿ ವಿವಿಧ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.ಜೆಡಿಎಸ್ ಶಾಸಕ ರಾಜುಗೌಡ ಪಾಟೀಲ ಸಂಪೂರ್ಣ ಬೆಂಬಲ ನೀಡಿದ್ದು, ಈ ಕುರಿತು ಅಧಿವೇಶನದಲ್ಲಿ ಪ್ರಸ್ತಾಪ ಮಾಡುವುದಾಗಿ ಘೋಷಿಸಿದರು. ಬರ ಘೋಷಣೆ ಪರಿಹಾರ ವಿಷಯದಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುವವರೆಗೂ ಹೋರಾಟ ಮಾಡುವುದಾಗಿ ಹೇಳಿದರು. ಹೋರಾಟಕ್ಕೆ ಇನ್ನಷ್ಟು ಶಕ್ತಿ ತುಂಬಲು ೨೧ ರಂದು ನಡೆಯುವ ತಾಳಿಕೋಟೆ ಸಂಪೂರ್ಣ ಬಂದ್‌ಗೆ ಎಲ್ಲರ ಸಹಕರಿಸಬೇಕು ಎಂದರು.ಜೆಡಿಎಸ್ ಮುಖಂಡ ರಾಜುಗೌಡ ಕೊಳೂರ, ಬಸನಗೌಡ ಯಡಿಯಾಪೂರ, ಬಸನಗೌಡ ಮಾಡಗಿ, ಬಸನಗೌಡ ವಣಕ್ಯಾಳ, ಪ್ರಭುಗೌಡ ಅಸ್ಕಿ, ಸಂಗನಗೌಡ ಹೆಗರಡ್ಡಿ ಮಾತನಾಡಿದರು. ಪ್ರತಿಭಟನಾ ಮೆರವಣಿಗೆಯು ಬಸವೇಶ್ವರ ವೃತ್ತದಿಂದ ಎಪಿಎಂಸಿ ಮುಖ್ಯದ್ವಾರದ ವೇದಿಕೆಗೆ ಆಗಮಿಸಿತು.
ಮುಖಂಡರಾದ ರಾಜುಗೌಡ ಗುಂಡಕನಾಳ, ಎಂ.ಎಂ.ಪಾಟೀಲ, ಸುವರ್ಣಾ ಬಿರಾದಾರ ಮೊದಲಾದವರು ಪಾಲ್ಗೊಂಡಿದ್ದರು.---
ಬಾಕ್ಸ್ಇಂದು ಸರ್ಕಾರದ ಶವಯಾತ್ರೆ
ಹೋರಾಟದ ಭಾಗವಾಗಿ ಸೆ.೧೯ರಂದು ಸರ್ಕಾರದ ಪ್ರತಿಕೃತಿಯ ಶವಯಾತ್ರೆ ನಡೆಸಲು ಜೆಡಿಎಸ್-ಬಿಜೆಪಿ ಮುಖಂಡರು ನಿರ್ಧರಿಸಿದ್ದಾರೆಂದು ಜೆಡಿಎಸ್ ತಾಲೂಕಾ ಅಧ್ಯಕ್ಷ ಮಡುಸಾಹುಕಾರ ಬಿರಾದಾರ ತಿಳಿಸಿದ್ದಾರೆ. ಪಟ್ಟಣದಲ್ಲಿ ಜೆಡಿಎಸ್-ಬಿಜೆಪಿ ನೇತೃತ್ವದಲ್ಲಿ ಬರ ಘೋಷಣೆಗಾಗಿ ನಡೆಯುತ್ತಿರುವ ಹೋರಾಟದ ೩ನೇ ದಿನ ಸರ್ಕಾರದ ಶವ ಯಾತ್ರೆ ಮಾಡಲು ನಿರ್ಧರಿಸಲಾಗಿದೆ. ಹಲವು ದಿನಗಳಿಂದ ರೈತರು ಹೋರಾಟ ನಡೆಸುತ್ತಿದ್ದರೂ ಸರ್ಕಾರದಿಂದ ಸಮರ್ಪಕ ಸ್ಪಂದನೆ ದೊರೆತಿಲ್ಲ. ರೈತರ ಸಂಕಷ್ಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ಈ ಹಿನ್ನೆಲೆಯಲ್ಲಿ ಸರ್ಕಾರದ ಗಮನ ಸೆಳೆಯಲು ಸರ್ಕಾರದ ಪ್ರತಿಕೃತಿಯ ಮೆರವಣಿಗೆ ನಡೆಸಿ, ಶವಯಾತ್ರೆ ನಡೆಸಲಾಗುವುದು. ಸೆ.೨೧ರಂದು ತಾಳಿಕೋಟೆ ಬಂದ್ ಕರೆ ನೀಡಲಾಗಿದ್ದು, ಅಷ್ಟರೊಳಗೆ ತಾಳಿಕೋಟೆ ತಾಲೂಕು ಸೇರಿ ಇನ್ನು ೩ ತಾಲೂಕುಗಳನ್ನು ಬರ ಪೀಡಿತ ಎಂದು ಘೋಷಿಸಬೇಕು. ಇಲ್ಲದಿದ್ದರೆ ಅಂದು ಬಸವೇಶ್ವರ ವೃತ್ತದಲ್ಲಿ ಸರ್ಕಾರದ ಶವವನ್ನು ಕ್ರೇನ್ ಮೂಲಕ ನೇತು ಹಾಕಲಾಗುವುದು ಎಂದು ಮಡುಸಾಹುಕಾರ ಬಿರಾದಾರ ತಿಳಿಸಿದರು.