ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರು
ತುಮಕೂರಿನ ಹನುಮಂತಪುರದ ಕೊಲ್ಲಾಪುರದಮ್ಮ ಸಮುದಾಯ ಭವನದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಸಮನ್ವಯ ಸಭೆ ನಡೆಯಿತು. ಎರಡೂ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದ ಸಭೆಯಲ್ಲಿ ಜಿಲ್ಲೆಯ ರಾಜಕೀಯ ಬೆಳವಣಿಗೆ ಬಗ್ಗೆ ಚರ್ಚಿಸಲಾಯಿತು.ಬಿಜೆಪಿ ಹಾಗೂ ಜೆಡಿಎಸ್ ಸಮನ್ವಯ ಸಭೆಯಲ್ಲಿ ಮಾತನಾಡಿದ ವಿ.ಸೋಮಣ್ಣ, ತುಮಕೂರು ನಗರ ಬೆಂಗಳೂರಿನ ಉಪನಗರವಾಗಿ ಬೆಳವಣಿಗೆಯಾಗುತ್ತಿದೆ, ಈ ನಗರಕ್ಕೆ ಪೂರಕವಾದ ಅಭಿವೃದ್ಧಿ ಯೋಜನೆಗಳನ್ನು ತಂದು ಸರ್ವಾಂಗೀಣ ಅಭಿವೃದ್ಧಿ ಮಾಡಲು ಸಂಕಲ್ಪ ಮಾಡುತ್ತೇನೆ ಎಂದರು.
ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನೀಲಿ ನಕಾಶೆ ಸಿದ್ಧಪಡಿಸಿ ಕೇಂದ್ರ ಸರ್ಕಾರದಿಂದ ಯಾವ ರೀತಿ ಅನುದಾನ ತರಬೇಕು ಎನ್ನುವ ಸಂದೇಶ ಕೊಡುತ್ತೇನೆ. ಇದಲ್ಲದೆ ಜಿಲ್ಲೆಯ ಕುಡಿಯುವ ನೀರಿನ ಯೋಜನೆಗಳು, ಸುಸಜ್ಜಿತ ಹೆದ್ದಾರಿಗಳು, ಕೈಗಾರಿಕೆಗಳ ಅಭಿವೃದ್ಧಿ, ತುಮಕೂರು-ದಾವಣಗೆರೆ, ತುಮಕೂರು-ರಾಯದುರ್ಗ ರೈಲ್ವೆ ಯೋಜನೆಗಳಿಗೆ ಚಾಲನೆ ನೀಡಲು ಆದ್ಯತೆ ನೀಡಲಾಗುವುದು ಎಂದು ವಿ.ಸೋಮಣ್ಣ ಹೇಳಿದರು.ತುಮಕೂರಿನಲ್ಲಿ ಐಎಎಸ್, ಐಪಿಎಸ್, ಐಎಫ್‌ಎಸ್‌ನಂತಹ ಸ್ಪರ್ಧಾತ್ಮಕ ಪರೀಕ್ಷೆಗಳ ಕೇಂದ್ರ ಸ್ಥಾಪನೆ ಮಾಡುವುದು, ತುಮಕೂರುವರೆಗೆ ಮೆಟ್ರೋ ವಿಸ್ತರಿಸಲು ಕೇಂದ್ರ ಸರ್ಕಾರದಿಂದ ಅಗತ್ಯ ಅನುದಾನ ತರುವ ಭರವಸೆ ನೀಡಿದರು.
ಶಾಸಕ ಜಿ.ಬಿ.ಜ್ಯೋತಿ ಗಣೇಶ್ ಮಾತನಾಡಿ, ತುಮಕೂರಿನಲ್ಲಿ ಬಿಜೆಪಿ, ಜೆಡಿಎಸ್ ಒಂದಾಗಿ ಲೋಕಸಭಾ ಚುನಾವಣೆಯಲ್ಲಿ ಎನ್.ಡಿ.ಎ ಅಭ್ಯರ್ಥಿ ವಿ.ಸೋಮಣ್ಣ ಅವರಿಗೆ ಒಂದು ಲಕ್ಷ ಹದಿನೈದು ಸಾವಿರ ಮತಗಳನ್ನು ದೊರಕಿಸಿಕೊಡುವ ಮೂಲಕ ಅವರ ಗೆಲುವಿಗೆ ತುಮಕೂರಿನಲ್ಲಿ ಮುನ್ನುಡಿ ಬರೆಯುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.ಸ್ಮಾರ್ಟ್ ಸಿಟಿ ಸೇರಿದಂತೆ ವಿವಿಧ ಕೇಂದ್ರ ಸರ್ಕಾರದ ಯೋಜನೆಗಳು ನಗರದಲ್ಲಿ ಅನುಷ್ಠಾನಗೊಂಡಿವೆ, ಮೋದಿ ಸರ್ಕಾರ ನಗರದ ಜನರಿಗೆ ಏನು ಕೊಡುಗೆ ಕೊಟ್ಟಿದೆ ಎಂಬ ಅರಿವು ನಗರದ ಜನರಿಗೆ ಗೊತ್ತಿದೆ. ಹೀಗಾಗಿ ನಗರದ ಮತದಾರರು ಮೋದಿಯವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲೆಂದು ವಿ.ಸೋಮಣ್ಣ ಅವರಿಗೆ ಮತ ನೀಡಿ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.
ಲೋಕಸಭಾ ಕ್ಷೇತ್ರದ ಬಿಜೆಪಿ ಉಸ್ತುವಾರಿ, ಮಾಜಿ ಸಚಿವ ಗೋಪಾಲಯ್ಯ ಮಾತನಾಡಿ, ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಜೊತೆ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದ ಮಾಜಿ ಪ್ರಧಾನಿ ದೇವೇಗೌಡರನ್ನು ಕಾಂಗ್ರೆಸ್‌ನವರು ಕುತಂತ್ರ ಮಾಡಿ ಸೋಲಿಸಿದರು ಎಂದು ದೇವೇಗೌಡರೇ ಹೇಳಿದ್ದಾರೆ, ದೇವೇಗೌಡರೇ ಸೂಚಿಸಿ ಅಯ್ಕೆ ಮಾಡಿರುವ ಸೋಮಣ್ಣ ಅವರನ್ನು ಗೆಲ್ಲಿಸಿ, ಆ ಗೆಲುವನ್ನು ದೇವೇಗೌಡರಿಗೆ ಕಾಣಿಕೆಯಾಗಿ ನೀಡಬೇಕು ಎಂದು ಕೋರಿದರು.ಶಾಸಕ ಸುರೇಶ್ ಗೌಡ ಮಾತನಾಡಿ, ಜೆಡಿಎಸ್ ಹಾಗೂ ಬಿಜೆಪಿ ಮೈತಿ ಸಂಬಂಧ ಹಾಲು ಜೇನಿನಂತೆ ಒಂದಾಗಿದೆ. ಈ ಸಂಬಂಧ ಮುಂದುವರೆದು ಮುಂದೆ ಈ ರಾಜ್ಯದ ಚುಕ್ಕಾಣಿ ಹಿಡಿಯಬೇಕು ಎಂದ ಅವರು, ರಾಜ್ಯದ ಕಾಂಗ್ರೆಸ್ ಸರ್ಕಾರದ ದುರಾಡಳಿತವನ್ನು ಕೊನೆಗಾಣಿಸಬೇಕು ಎಂದರು.
ವಿಧಾನ ಪರಿಷತ್ ಸದಸ್ಯ ತಿಪ್ಪೇಸ್ವಾಮಿ, ಜೆಡಿಎಸ್ ಮುಖಂಡ ಗೋವಿಂದರಾಜು ಮಾತನಾಡಿದರು. ಜಿಲ್ಲಾ ಜೆಡಿಎಸ್ ಅಧ್ಯಕ್ಷ ಆರ್.ಸಿ.ಆಂಜನಪ್ಪ, ಕಾರ್ಯಾಧ್ಯಕ್ಷ ಟಿ.ಆರ್.ನಾಗರಾಜು, ಮಾಜಿ ಶಾಸಕರಾದ ಮಸಾಲೆ ಜಯರಾಂ, ತಿಮ್ಮರಾಯಪ್ಪ, ಮುಖಂಡರಾದ ಎಸ್.ಪಿ.ಚಿದಾನಂದ್, ಡಾ.ಪರಮೇಶ್, ಶಿವಪ್ರಸಾದ್, ರವೀಶ್ ಜಹಂಗೀರ್, ಹನುಮಂತರಾಜು, ರುದ್ರೇಶ್, ಟಿ.ಎಲ್.ಕುಂಭಯ್ಯ, ಟಿ.ಕೆ.ನರಸಿಂಹಮೂರ್ತಿ, ಎ.ಶ್ರೀನಿವಾಸ್, ಟಿ.ಎಚ್.ಜಯರಾಂ, ಶ್ರೀನಿವಾಸ ಪ್ರಸಾದ್, ಬಿ.ಎಸ್.ನಾಗೇಶ್, ಬೆಳ್ಳಿ ಲೋಕೇಶ್, ಕೃಷ್ಣಮೂರ್ತಿ, ವಿಜಯ್‌ಗೌಡ ಸೇರಿ ನಗರಪಾಲಿಕೆ ಮಾಜಿ ಸದಸ್ಯರು ಮತ್ತಿತರ ಮುಖಂಡರು ಭಾಗವಹಿಸಿದ್ದರು.)
;Resize=(128,128))
;Resize=(128,128))
;Resize=(128,128))
;Resize=(128,128))