ಬಿಜೆಪಿ - ಜೆಡಿಎಸ್‌ ಮೈತ್ರಿ ತಾಪಂ,ಗ್ರಾಪಂನಲ್ಲೂ ಆಗುತ್ತೆ

| Published : Oct 13 2023, 12:15 AM IST / Updated: Oct 13 2023, 12:16 AM IST

ಸಾರಾಂಶ

ರಾಜ್ಯಕ್ಕೆ ಹತ್ತು ಹಲವು ನಾಯಕರನ್ನು ನೀಡಿರುವ ಜೆಡಿಎಸ್ ಎಲ್ಲ ಭಾಗದಲ್ಲಿಯೂ ಬಲಿಷ್ಠವಾಗಿದೆ. ಹಾಗಾಗಿ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಹಾಗೂ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಪಕ್ಷದ ಕಾರ್ಯಕರ್ತರು ಪಣತೊಡಬೇಕು ಎಂದು ಶಾಸಕ ಹಾಗೂ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ಕರೆ ನೀಡಿದರು.ಈ ಮೈತ್ರಿ ಬರೀ ಲೋಕಸಭೆ ಚುನಾವಣೆಗಷ್ಟೇ ಸೀಮಿತವಲ್ಲ ತಾಪಂ ಹಾಗೂ ಗ್ರಾಪಂ ಮಟ್ಟದವರೆಗೂ ಮುಂದುವರಿಯಲಿದೆ ಎಂದು ಇದೇ ವೇಳೆ ಹೇಳಿದರು.
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ ರಾಜ್ಯಕ್ಕೆ ಹತ್ತು ಹಲವು ನಾಯಕರನ್ನು ನೀಡಿರುವ ಜೆಡಿಎಸ್ ಎಲ್ಲ ಭಾಗದಲ್ಲಿಯೂ ಬಲಿಷ್ಠವಾಗಿದೆ. ಹಾಗಾಗಿ ನರೇಂದ್ರ ಮೋದಿ ಅವರನ್ನು ಪ್ರಧಾನಿಯನ್ನಾಗಿ ಹಾಗೂ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲು ಪಕ್ಷದ ಕಾರ್ಯಕರ್ತರು ಪಣತೊಡಬೇಕು ಎಂದು ಶಾಸಕ ಹಾಗೂ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ಕರೆ ನೀಡಿದರು. ಈ ಮೈತ್ರಿ ಬರೀ ಲೋಕಸಭೆ ಚುನಾವಣೆಗಷ್ಟೇ ಸೀಮಿತವಲ್ಲ ತಾಪಂ ಹಾಗೂ ಗ್ರಾಪಂ ಮಟ್ಟದವರೆಗೂ ಮುಂದುವರಿಯಲಿದೆ ಎಂದು ಇದೇ ವೇಳೆ ಹೇಳಿದರು. ಇಲ್ಲಿಯ ವಾಸವಿ ಮಹಲ್ ಸಭಾಭವನದಲ್ಲಿ ಗುರುವಾರ ನಡೆದ ಧಾರವಾಡ, ಹಾವೇರಿ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಗಳ ಜೆಡಿಎಸ್ ಪುನಶ್ಚೇತನ ಪರ್ವ ಸಮಾವೇಶದಲ್ಲಿ ಮಾತನಾಡಿದರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಒಂದೇ ಒಂದೂ ಸ್ಥಾನ ಗೆಲ್ಲಲು ಅವಕಾಶ ನೀಡದಂತೆ ಮೈತ್ರಿಯೊಂದಿಗೆ ಚುನಾವಣೆ ಎದುರಿಸಲಿದ್ದೇವೆ. ಈ ಮೈತ್ರಿಯು ತಾಪಂ ಹಾಗೂ ಗ್ರಾಪಂ ಮಟ್ಟದವರೆಗೂ ಮುಂದುವರಿಯಲಿದೆ. ಹಾಗಾಗಿ ಈ ಮೈತ್ರಿಯಲ್ಲಿ ಕಾರ್ಯಕರ್ತರು ಅತ್ಯಂತ ಹುಮ್ಮಸ್ಸಿನಿಂದ ಪಕ್ಷ ಸಂಘಟನೆ ಕಾರ್ಯದಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಈ ಭಾಗದಲ್ಲಿ ಜನತಾ ಪರಿವಾರದಿಂದಲೂ ಇಲ್ಲಿ ಗಟ್ಟಿ ನೆಲೆಯಿದೆ. ಈಗ ಪುನಃ ಪಕ್ಷ ಬಲಪಡಿಸಲು ಪುನಶ್ಚೇತನ ಪರ್ವ ಸಮಾವೇಶ ಹಮ್ಮಿಕೊಳ್ಳಲಾಗಿದೆ. ಹುಬ್ಬಳ್ಳಿಯ ಈದ್ಗಾ ಮೈದಾನದ ಗಲಭೆಯನ್ನು ಎಚ್.ಡಿ. ದೇವೇಗೌಡರು ಸೌಹಾರ್ದಯುತವಾಗಿ ಬಗೆಹರಿಸಿ ಹಿಂದೂ- ಮುಸ್ಲಿಂ ನಡುವೆ ಸಾಮರಸ್ಯ ಮೂಡಿಸಿದ್ದಾರೆ. ಮುಸ್ಲಿಮರು ನಮ್ಮ ಪಕ್ಷ ಬಿಟ್ಟು ಹೋಗಿಲ್ಲ. ಈ ಬಗ್ಗೆ ಕಾಂಗ್ರೆಸ್ ಅಪಪ್ರಚಾರ ಮಾಡುತ್ತಿದೆ ಎಂದರು. ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ಹೇಳಿದಂತೆ ಯಾವ ಗ್ಯಾರಂಟಿ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಿಲ್ಲ. ರಾಜ್ಯದಲ್ಲಿ ಭೀಕರ ಬರಗಾಲದ ಸಂದರ್ಭದಲ್ಲಿ ಸರ್ಕಾರ ನೆರವಿಗೆ ಬಾರದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವುದೊಂದೇ ರೈತರಿಗೆ ಉಳಿದಿರುವ ದಾರಿ. ರೈತರ ಆತ್ಮಹತ್ಯೆ ಇದು ಕಾಂಗ್ರೆಸ್ ಸರ್ಕಾರದ 6ನೇ ಗ್ಯಾರಂಟಿ ಯೋಜನೆಯಾದಂತಾಗಿದೆ ಎಂದರು. ವೈ.ಎಸ್.ವಿ.ದತ್ತಾ ಮಾತನಾಡಿ, ದೇವೇಗೌಡರು ಏನು ಪ್ಲಾನ್ ಮಾಡುತ್ತಾರೆ ಎನ್ನುವುದು ಯಾರಿಗೂ ಗೊತ್ತಾಗುವುದಿಲ್ಲ. ಅವರ ಜೊತೆ 50 ವರ್ಷ ಇದ್ದೇನೆ. ಆದರೆ ಅವರು ಏನು ಮಾಡುತ್ತಾರೆ ಎಂಬುದೇ ನನಗೆ ಗೊತ್ತಾಗುವುದಿಲ್ಲ. ಅವರು ಏನು ತಂತ್ರ, ಮಂತ್ರ ಮಾಡುತ್ತಾರೆ ಎನ್ನುವುದನ್ನು ನಾವು ಯೋಚಿಸುವುದು ಬೇಡ. ಅವರು ರಾಜ್ಯದ ಪರ ಇರುತ್ತಾರೆ ಎನ್ನುವ ವಿಶ್ವಾಸ ಇರಲಿ. ಅವರ ತೀರ್ಮಾನಕ್ಕೆ ಎಲ್ಲರೂ ಬದ್ಧರಾಗಿರೋಣ ಎಂದರು. ಮಾಜಿ ಶಾಸಕ ಬಂಡೆಪ್ಪ ಕಾಶಂಪೂರ ಮಾತನಾಡಿ, ದೇಶದ ರಾಜಕಾರಣ ನೋಡಿದರೆ ಯಾವಾಗ ಏನು ಆಗುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಮತ್ತೆ ಕರ್ನಾಟಕದಲ್ಲಿ ಪ್ರಾದೇಶಿಕ ಪಕ್ಷ ಪುಟಿದೇಳಲಿದೆ. ಕಾಂಗ್ರೆಸ್ ನಮ್ಮ ರಾಜ್ಯಕ್ಕಿಂತಲೂ ಪಕ್ಕದ ತೆಲಂಗಾಣಕ್ಕೆ ಹೆಚ್ಚಿನ ನೆರವು ನೀಡುವುದಾಗಿ ಘೋಷಿಸಿದೆ. ನಮ್ಮಲ್ಲಿ 5 ಗ್ಯಾರಂಟಿ ನೀಡಿದ್ದರೆ, ಅಲ್ಲಿ 6 ಗ್ಯಾರಂಟಿ ನೀಡಿದೆ. ಆ ಮೂಲಕ ರಾಜ್ಯದ ರೈತರಿಗೆ ಅನ್ಯಾಯ ಮಾಡಿದೆ ಎಂದು ಕಿಡಿಕಾರಿದರು. ಮಾಜಿ ಸಚಿವ ಅಲ್ಕೋಡ್ ಹನುಮಂತಪ್ಪ, ಸುಧಾಕರ ಶೆಟ್ಟಿ, ಕೃಷ್ಣ ರೆಡ್ಡಿ, ವೀರಭದ್ರಪ್ಪ ಹಾಲಹರವಿ, ಗದಗ ಜಿಲ್ಲೆಯ ಮೆಹಬೂಬಸಾಬ ಸೋಮಪುರ, ಹಾವೇರಿ ಜಿಲ್ಲೆಯ ಆರ್.ಬಿ. ಪಾಟೀಲ, ಉತ್ತರ ಕನ್ನಡ ಜಿಲ್ಲೆಯ ಸೂರಜ್ ನಾಯ್ಕ, ರಾಣೆಬೆನ್ನೂರಿನ ಮಂಜುನಾಥ ಗೌಡರ ಮಾತನಾಡಿದರು. ಜೆಡಿಎಸ್ ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಬಿ. ಗಂಗಾಧರಮಠ, ಜೆಡಿಎಸ್ (ಗ್ರಾಮೀಣ) ಜಿಲ್ಲಾ ಘಟಕದ ಅಧ್ಯಕ್ಷ ಗುರುರಾಜ ಹುಣಸಿಮರದ, ನವೀನಕುಮಾರ್ ಸೇರಿದಂತೆ ಇತರರು ಇದ್ದರು. ಬಾಕ್ಸ್‌. ಬಿಜೆಪಿ ಜತೆ ಮೈತ್ರಿ ಮಾಡಿಕೊಂಡರೆ ನಮ್ಮನ್ನು ಕೋಮುವಾದಿ ಎಂದು ಜರೆಯುವ ಕಾಂಗ್ರೆಸ್, ಶಿವಸೇನೆ ಹಾಗೂ ಮುಸ್ಲಿಂ ಲೀಗ್ ಜತೆ ಮೈತ್ರಿ ಮಾಡಿಕೊಂಡಿರುವುದಕ್ಕೆ ಏನು ಹೇಳಬೇಕು? ಜೆಡಿಎಸ್ ಬಿಟ್ಟು ಕಾಂಗ್ರೆಸ್‌ಗೆ ಯಾರೂ ಹೋಗಲ್ಲ. ಬದಲಾಗಿ ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಅನೇಕರು ಬರಲಿದ್ದಾರೆ ಎಂದು ಶಾಸಕ ಜಿ.ಟಿ. ದೇವೇಗೌಡ ಹೇಳಿದರು. ----- ಕೋಟ್... ಕಾವೇರಿ ಹಾಗೂ ಬರದ ವಿಚಾರದಲ್ಲಿ ಸರ್ಕಾರ ಜನರಿಗೆ ಸುಳ್ಳು ಹೇಳುತ್ತಿದೆ. ಭೀಕರವಾದ ಬರಗಾಲ ಆವರಿಸಿದೆ.ಯಾವುದೇ ಬರ ಕಾಮಗಾರಿ ಆಗಿಲ್ಲ. ಸ್ವ ಹಿತಾಸಕ್ತಿಗೆ ಕಾಂಗ್ರೆಸ್ ಸರ್ಕಾರ ರಾಜ್ಯವನ್ನು ಬಲಿ ಕೊಟ್ಟಿದೆ.ಯಾವುದೇ ಅಭಿವೃದ್ಧಿ ಕಾಮಗಾರಿ ಇಲ್ಲ. ಪದೇ ಪದೇ ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಲಾಗುತ್ತದೆ.ಲೋಕಸಭಾ ಚುನಾವಣೆಯಲ್ಲಿ 20 ಸ್ಥಾನ ಪಡೆಯವುದೊಂದೇ ಕಾಂಗ್ರೆಸ್ ಉದ್ದೇಶ. ಆದರೆ ಅದು ಸಫಲವಾಗಲ್ಲ. ಅನ್ನಭಾಗ್ಯ ಯೋಜನೆಯಲ್ಲಿ ಒಂದು ಕಾಳೂ ಕೊಡಲಿಲ್ಲ. ಜಿ.ಟಿ. ದೇವೇಗೌಡ, ಜೆಡಿಎಸ್‌ ಕೋರ್‌ಕಮಿಟಿ ಅಧ್ಯಕ್ಷರು ಫೋಟೋ: 12ಎಚ್‌ಯುಬಿ2: ಜೆಡಿಎಸ್‌ ಪಕ್ಷದ ಪುನಶ್ಚೇತನ ಕಾರ್ಯಕ್ರಮವನ್ನು ಜೆಡಿಎಸ್‌ ಕೋರ್‌ ಕಮಿಟಿ ಅಧ್ಯಕ್ಷ ಜಿ.ಟಿ. ದೇವೇಗೌಡ ಉದ್ಘಾಟಿಸಿದರು.