28 ಕ್ಷೇತ್ರಗಳಲ್ಲೂ ಬಿಜೆಪಿ- ಜೆಡಿಎಸ್‌ ಮೈತ್ರಿ ಜಯಭೇರಿ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ

| Published : Apr 24 2024, 02:26 AM IST

28 ಕ್ಷೇತ್ರಗಳಲ್ಲೂ ಬಿಜೆಪಿ- ಜೆಡಿಎಸ್‌ ಮೈತ್ರಿ ಜಯಭೇರಿ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಶಿಕಾರಿಪುರದಲ್ಲಿ ಮಂಗಳವಾರ ನಡೆದ ಪ್ರಸಿದ್ದ ಶ್ರೀ ಹುಚ್ಚುರಾಯಸ್ವಾಮಿ ರಥೋತ್ಸವದಲ್ಲಿ ಮಾಜಿ ಸಿ.ಎಂ.ಯಡಿಯೂರಪ್ಪ ಸಂಸದ ರಾಘವೇಂದ್ರ, ಶಾಸಕ ವಿಜಯೇಂದ್ರ ಹಾಗೂ ಕುಟುಂಬವರ್ಗ ಪಾಲ್ಗೊಂಡಿದ್ದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ಇಲ್ಲಿನ ಪ್ರಸಿದ್ಧ ಶ್ರೀ ಹುಚ್ಚುರಾಯಸ್ವಾಮಿ ರಥೋತ್ಸವದ ಅಂಗವಾಗಿ ದೇವಸ್ಥಾನದಲ್ಲಿ ನಡೆದ ಪೂಜಾಕಾರ್ಯದಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪುತ್ರ ಸಂಸದ ರಾಘವೇಂದ್ರ, ಶಾಸಕ ವಿಜಯೇಂದ್ರ ಪಾಲ್ಗೊಂಡಿದ್ದರು. ಇವರಿಗೆ ಯಡಿಯೂರಪ್ಪನವರ ಪುತ್ರಿ ಪದ್ಮಾವತಿ, ಉಮಾದೇವಿ, ಸೊಸೆ ತೇಜಸ್ವಿನಿ, ಪ್ರೇಮಾ ಮತ್ತಿತರರು ಸಾಥ್ ನೀಡಿದ್ದರು.

ನಾಡಿನಲ್ಲಿ ಹಿಂದೆಂದೂ ಕಂಡರಿಯದ ಭೀಕರ ಬರದಿಂದಾಗಿ ರೈತರು ಜನ ಜಾನುವಾರುಗಳು ತತ್ತರಿಸಿ ಹೋಗಿದ್ದಾರೆ. ಆದ್ದರಿಂದ ಸ್ವಾಮಿಯು ಉತ್ತಮ ಮಳೆ ಯನ್ನು ಕರುಣಿಸಿ ನಾಡಿನ ಹಾಗೂ ಲೋಕದ ಸಕಲ ಜೀವರಾಶಿಗಳನ್ನು ಸಂರಕ್ಷಿಸಬೇಕೆಂದು ಪ್ರಾರ್ಥಿಸಿದರು.

ಕಳೆದ 10 ವರ್ಷಗಳಿಂದ ರಾಷ್ಟ್ರವನ್ನು ಸದೃಢವಾಗಿ ಮುನ್ನಡೆಸುತ್ತಿರುವ ಹಾಗೂ ವಿಶ್ವದ ಮುಂದುವರೆದ ರಾಷ್ಟ್ರಗಳಲ್ಲಿ ಭಾರತವನ್ನು ಮುಂಚೂಣಿಗೆ ತೆಗೆದು ಕೊಂಡು ಹೋಗಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಿಂದೆಂದಿಗಿಂತಲೂ ಅಭೂತ ಪೂರ್ವ ಗೆಲುವನ್ನು ತಂದು ಕೊಡಬೇಕೆಂದು ಪ್ರಾರ್ಥಿಸಿದ ಯಡಿಯೂರಪ್ಪ, ರಾಜ್ಯದ 28 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದಾರೆ ಎಂದು ವಿಶ್ವಾಸದಿಂದ ನುಡಿದರು.ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ರಾಜ್ಯದಲ್ಲಿ ಒಳ್ಳೆಯ ವಾತಾವರಣವಿದೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿ.ವೈ. ರಾಘವೇಂದ್ರ ಬಗ್ಗೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. ಅಭಿವೃದ್ಧಿಯ ಹರಿಕಾರ ರಾಘಣ್ಣ ಗೆಲ್ಲಲೇಬೇಕೆಂಬುದು ಕ್ಷೇತ್ರದ ಜನತೆಯ ಅಪೇಕ್ಷೆಯಾಗಿದೆ ಎಂದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಜನತೆ ಅಭಿವೃದ್ದಿ ಕಾರ್ಯಗಳನ್ನು ನೋಡಿ ಮತವನ್ನು ನೀಡುತ್ತಾರೆ. ಹಿಂದಿನ ಎಲ್ಲಾ ಚುನಾವಣೆಗಳಲ್ಲಿ ಈಶ್ವರಪ್ಪನವರ ಆಶೀರ್ವಾದ ನನಗೆ ಸಿಕ್ಕಿತ್ತು. ಆದರೆ ಈ ಬಾರಿ ಅವರ ಆಶೀರ್ವಾದ ಇಲ್ಲವಾಗಿದೆ. ಬಿಜೆಪಿ ಅಧಿಕೃತ ಅಭ್ಯರ್ಥಿಯಾಗಿ ನಾನು ಗೆಲುವು ಸಾಧಿಸಿ ಮೋದಿ ಪರವಾಗಿ ಕೈ ಎತ್ತಬೇಕಾಗಿದೆ. ಆದರೆ ಈಶ್ವರಪ್ಪನವರ ಹೇಳಿಕೆ ನಗೆಪಾಟಲಿಗೆ ಈಡಾಗಿದೆ. ಪ್ರಬುದ್ಧ ಮತದಾರರು ಈ ಬಗ್ಗೆ ಸೂಕ್ತ ಉತ್ತರ ನೀಡುತ್ತಾರೆ ಎಂದು ಹೇಳಿದರು.

ದೇವೇಗೌಡರ ಪ್ರಚಾರದಿಂದ ಆನೆ ಬಲ: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸಂಸದ ರಾಘವೇಂದ್ರರವರು ಹಿಂದಿನ ಎಲ್ಲಾ ದಾಖಲೆಗಳನ್ನು ಮೀರಿ ಜಯ ಸಾಧಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ದೇವೇಗೌಡರು ಒಟ್ಟಾಗಿ ಪ್ರಚಾರ ಮಾಡುತ್ತಿರುವುದರಿಂದ ನಮಗೆ ಆನೆ ಬಲ ಬಂದಂತಾಗಿದೆ. 4೦೦ಕ್ಕೂ ಅಧಿಕ ಸ್ಥಾನಗಳನ್ನು ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.