ಬಿಜೆಪಿ, ಜೆಡಿಎಸ್ ಮೈತ್ರಿಯಿಂದ 28 ಸ್ಥಾನಗಳಲ್ಲಿಯೂ ಗೆಲುವು: ಬಿ.ವೈ. ವಿಜಯೇಂದ್ರ

| Published : Apr 21 2024, 02:21 AM IST

ಸಾರಾಂಶ

ರಕ್ತದಲ್ಲಿ ಹಿಂದುತ್ವದ ಕಣಗಳಿರುವ ದ.ಕ. ಜಿಲ್ಲೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ‌ಅವರನ್ನು 3 ಲಕ್ಷಗಿಂತಲೂ ಅಧಿಕ ಮತಗಳಿಂದ ಗೆಲ್ಲಿಸಿ ಕೊಡುತ್ತಾರೆ ಎಂಬ ವಿಶ್ವಾಸವಿದೆ ಎಂದು ವಿಜಯೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಬಂಟ್ವಾಳ

ರಾಜ್ಯದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದಾಗಿ ಎಲ್ಲ 28 ಸ್ಥಾನಗಳಲ್ಲಿಯೂ ಗೆಲುವು ಸಾಧಿಸುವುದು ನಿಶ್ವಿತ, ಇದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು.

ಬಿ.ಸಿ. ರೋಡಿನ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಗುರು ಮಂದಿರದಲ್ಲಿ ಶನಿವಾರ ನಡೆದ ಚುನಾವಣಾ ಪ್ರಚಾರ ಸಭೆಯಲ್ಲಿ ಅವರು ಮಾತನಾಡಿದರು.

ರಕ್ತದಲ್ಲಿ ಹಿಂದುತ್ವದ ಕಣಗಳಿರುವ ದ.ಕ. ಜಿಲ್ಲೆಯಲ್ಲಿ ಕ್ಯಾ.ಬ್ರಿಜೇಶ್ ಚೌಟ ‌ಅವರನ್ನು 3 ಲಕ್ಷಗಿಂತಲೂ ಅಧಿಕ ಮತಗಳಿಂದ ಗೆಲ್ಲಿಸಿ ಕೊಡುತ್ತಾರೆ ಎಂಬ ವಿಶ್ವಾಸವಿದೆ ಎಂದ ವಿಜಯೇಂದ್ರ, ದೇಶದಲ್ಲಿ ವಯಸ್ಸಿನ ಇತಿಮಿತಿ‌ ಇಲ್ಲದೆ ಮೋದಿಯವರ ಪರ ಒಲವು , ವಿಶ್ವಾಸ ಹೆಚ್ಚಾಗುತ್ತಿದೆ, ಮೋದಿ ಮೇಲಿನ ಅಭಿಮಾನದಿಂದಲೇ ಬೇರೆ ಬೇರೆ ಪಕ್ಷಗಳ ಮುಖಂಡರು ಸ್ವಯಂಪ್ರೇರಿತರಾಗಿ ಬಿಜೆಪಿ ಸೇರ್ಪಡೆಯಾಗುತ್ತಿದ್ದಾರೆ ಎಂದರು.ಕಾಂಗ್ರೆಸ್‌ನಿಂದ ಅಲ್ಪಸಂಖ್ಯಾತರ ತುಷ್ಟೀಕರಣ: ವಿಧಾನ ಸಭೆಯಲ್ಲಿ ಪಾಕಿಸ್ತಾನಕ್ಕೆ ಜೈಕಾರ ಕೂಗುವ ದೇಶದ್ರೋಹಿಗಳನ್ನು ರಕ್ಷಣೆ ಮಾಡುವ ಕೆಲಸ ಕಾಂಗ್ರೆಸ್‌ನಿಂದ ನಡೆಯುತ್ತಿದ್ದು, ಜನತೆ ಆತಂಕದಲ್ಲಿರುವಂತಾಗಿದೆ, ಹುಬ್ಬಳ್ಳಿ ಘಟನೆಯ ಬಗ್ಗೆ ಮುಖ್ಯಮಂತ್ರಿಗಳು ಹಾಗೂ ಗೃಹಮಂತ್ರಿಗಳು ನೀಡಿದ ಹೇಳಿಕೆಯ ಬಗ್ಗೆ ಆಕ್ರೋಶ ವ್ಯಕ್ತವಾಗಿದೆ. ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಬಗ್ಗೆ ಒಲವು ತೋರಿಸುವ ತುಷ್ಟೀಕರಣದ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿದರು.

ಲೋಕಸಭಾ ಅಭ್ಯರ್ಥಿ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ, ನರೇಂದ್ರ ಮೋದಿಯವರು ಕಳೆದ 10 ವರ್ಷಗಳಲ್ಲಿ ಭಾರತವನ್ನು ಬೆಳೆಸಿದ ರೀತಿ ಅದ್ಭುತವಾಗಿದೆ. ಚುನಾವಣೆ ‌ನಡೆಯುವವರೆಗೂ ಬಿಜೆಪಿಯ ವಿಚಾರವನ್ನು ಪ್ರತಿ ಮನ, ಮನೆಗೂ ತಿಳಿಸುವ ಕಾರ್ಯ ಮಾಡಿ. ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಯಾವುದೇ ರೀತಿಯಲ್ಲಿ ಚ್ಯುತಿ ಬಾರದಂತೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಭರವಸೆ ನೀಡಿದರು.

ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಮಾತನಾಡಿ, ದೇಶದ ಭದ್ರತೆಗಾಗಿ, ಮುಂದಿನ ಪೀಳಿಗೆಗಾಗಿ ನಡೆಯುವ ಚುನಾವಣೆ ಇದಾಗಿದ್ದು, ಬಹಳಷ್ಟು ಪರಿವರ್ತನೆಗಳಿಗೆ ಕಾರಣವಾಗುವ ಚುನಾವಣೆಯಲ್ಲಿ ಬಿಜೆಪಿಯನ್ನು ಗೆಲ್ಲಿಸಿ ಎಂದು ‌ಮನವಿ ಮಾಡಿದರು.

ಮಾಜಿ ಸಚಿವ ಬಿ.ನಾಗರಾಜ ಶೆಟ್ಟಿ,‌ ಮಾಜಿ ಶಾಸಕ ಎ. ರುಕ್ಮಯ ಪೂಜಾರಿ, ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ್ ಮಾತನಾಡಿದರು. ವೇದಿಕೆಯಲ್ಲಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಶಾಸಕರಾದ ವೈ. ಭರತ್ ಶೆಟ್ಟಿ, ಹರೀಶ್ ಪೂಂಜ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಕೆ. ಪದ್ಮನಾಭ ಕೊಟ್ಟಾರಿ, ಜಿಲ್ಲಾ ಕಾರ್ಯದರ್ಶಿ ಕಿಶೋರ್ ಭಂಡಾರಿ ಪುತ್ತೂರು, ಬಂಟ್ವಾಳ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಭಾರಿಗಳಾದ ಜಗದೀಶ ಶೇಣವ, ಪೂಜಾ ಪೈ, ಮಂಗಳೂರು ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ಯುವ ಜನತಾದಳದ ಜಿಲ್ಲಾಧ್ಯಕ್ಷ ಅಕ್ಷಿತ್ ಸುವರ್ಣ, ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ನಂದನ್ ಮಲ್ಯ ಮತ್ತಿತರರು ಉಪಸ್ಥಿತರಿದ್ದರು.

ಮಂಡಲದ ಅಧ್ಯಕ್ಷ ಚೆನ್ನಪ್ಪ ಆರ್. ಕೋಟ್ಯಾನ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಳ ವಂದಿಸಿದರು. ಡೊಂಬಯ್ಯ ಅರಳ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೆ ಮುನ್ನ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಬ್ರಹ್ಮಶ್ರೀನಾರಾಯಣ ಗುರು ಮಂದಿರಕ್ಕೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.ಬಿಜೆಪಿಗೆ ಸೇರ್ಪಡೆ: ಮಂಗಳೂರು ಮಹಾನಗರ ಪಾಲಿಕೆ ಕಾಂಗ್ರೆಸ್‌ ಸದಸ್ಯೆ ಕವಿತಾ ಸನಿಲ್ ಹಾಗೂ ಬಂಟ್ವಾಳ ‌ಪುರಸಭಾ ಸದಸ್ಯ ಗಂಗಾಧರ್ ಪೂಜಾರಿ ಅವರು ಬಿಜೆಪಿಗೆ ಸೇರ್ಪಡೆಯಾದರು. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪಕ್ಷದ ಧ್ವಜವನ್ನು ನೀಡಿ ಬರಮಾಡಿಕೊಂಡರು.

ನೇಹಾ ಪ್ರಕರಣ ರಾಜಕೀಯಕ್ಕೆ ಬಳಸುವ ಉದ್ದೇಶ ಬಿಜೆಪಿಗಿಲ್ಲ: ವಿಜಯೇಂದ್ರ

ಬಂಟ್ವಾಳ: ರಾಜ್ಯದ ಮುಖ್ಯಮಂತ್ರಿಯವರು ದೇಶದ್ರೋಹಿಗಳಿಗೆ, ಕೊಲೆಗಡುಕರಿಗೆ ಕುಮ್ಮಕ್ಕು ನೀಡುವ ರೀತಿಯ ವರ್ತನೆ ತೋರುತ್ತಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು. ಬಿ.ಸಿ. ರೋಡಿನಲ್ಲಿ ಶನಿವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನೇಹಾ ಕೊಲೆ ಪ್ರಕರಣವನ್ನು ಬಿಜೆಪಿ ಯಾವುದೇ ಕಾರಣಕ್ಕೂ ರಾಜಕೀಯವಾಗಿ ಬಳಸುವ ಉದ್ದೇಶ ಹೊಂದಿಲ್ಲ ಆದರೆ ರಾಜ್ಯ ಸರ್ಕಾರದ ನಡೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಡುತ್ತಿದೆ ಎಂದರು.ಕಾಂಗ್ರೆಸ್ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ನಂಬಿಕೊಂಡು ಚುನಾವಣೆಗೆ ಧುಮುಕಿದೆ, ಆದರೆ ದೇಶದ ಪ್ರಜ್ಞಾವಂತ ಮತದಾರರು ದೇಶದ ಭದ್ರತೆ ಸುಭದ್ರತೆ ಮತ್ತು ನರೇಂದ್ರ ಮೋದಿ ಆಡಳಿತ ವೈಖರಿಯನ್ನ ಮೆಚ್ಚಿಕೊಂಡು ಬಿಜೆಪಿ ಪರ ಮತ ಚಲಾಯಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.