ಬಿಜೆಪಿ - ಜೆಡಿಎಸ್ ನಾಯಕರು ಸಿಎಂ ಸಿದ್ದರಾಮಯ್ಯ ಆಡಳಿತವನ್ನು ಸಹಿಸುತ್ತಿಲ್ಲ : ಭರತೇಶ್

| Published : Aug 06 2024, 12:31 AM IST

ಬಿಜೆಪಿ - ಜೆಡಿಎಸ್ ನಾಯಕರು ಸಿಎಂ ಸಿದ್ದರಾಮಯ್ಯ ಆಡಳಿತವನ್ನು ಸಹಿಸುತ್ತಿಲ್ಲ : ಭರತೇಶ್
Share this Article
  • FB
  • TW
  • Linkdin
  • Email

ಸಾರಾಂಶ

ಸಿದ್ದರಾಮಯ್ಯ ಸರ್ಕಾರಕ್ಕೆ ಧಕ್ಕೆ ತರಲು ಮುಂದಾದರೆ ಹಿಂದುಳಿದ ಜನಾಂಗದವರು ಸೇರಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ರಾಜಕೀಯ ಮಾಡುವುದಾದರೆ ಜನ ಬೆಂಬಲದಿಂದ ಆಯ್ಕೆಗೊಂಡು ಅಧಿಕಾರ ನಡೆಸಲಿ. ಅದನ್ನು ಬಿಟ್ಟು ರಾಜ್ಯಪಾಲರನ್ನು ಕೈಗೊಂಬೆಯನ್ನಾಗಿ ಮಾಡಿಕೊಂಡು ಸಂವಿಧಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ.

ಕನ್ನಡಪ್ರಭ ವಾರ್ತೆ ಭಾರತೀನಗರ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತ ವೈಖರಿ ಸಹಿಸಲಾಗದೆ ಬಿಜೆಪಿ ಮತ್ತು ಜೆಡಿಎಸ್ ನಾಯಕರು ಕಾಂಗ್ರೆಸ್ ಸರ್ಕಾರದ ಮೇಲೆ ಇಲ್ಲದ ಸಲ್ಲದ ಆರೋಪ ಮಾಡುತ್ತಿದ್ದಾರೆ ಎಂದು ತಾಪಂ ಮಾಜಿ ಸದಸ್ಯ ಭರತೇಶ್ ಆರೋಪಿಸಿದರು.

ಸಂಗೊಳ್ಳಿರಾಯಣ್ಣ ಗ್ರಾಮೀಣಾಭಿವೃದ್ಧಿ ಸಂಘದ ಕಚೇರಿಯಲ್ಲಿ ನಡೆದ ಕುರುಬರ ಸಂಘದ ಸಭೆಯಲ್ಲಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಸಿದ್ದರಾಮಯ್ಯ ಅವರ ಸರ್ಕಾರವನ್ನು ಪಥನಗೊಳಿಸಲು ಜೆಡಿಎಸ್ ಮತ್ತು ಬಿಜೆಪಿ ನಾಯಕರು ಸಂಚು ರೂಪಿಸುತ್ತಿದ್ದಾರೆ. ಬಿಜೆಪಿ ಸರ್ಕಾರವಿದ್ದಾಗ ಸಾಕಷ್ಟು ಹಗರಣಗಳನ್ನು ಬಿಜೆಪಿ ನಾಯಕರು ಮಾಡಿದ್ದಾರೆ. ಅವುಗಳೆಲ್ಲವನ್ನು ಜನರ ಮುಂದಿಡಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂದರು.

ಸಿದ್ದರಾಮಯ್ಯ ಸರ್ಕಾರಕ್ಕೆ ಧಕ್ಕೆ ತರಲು ಮುಂದಾದರೆ ಹಿಂದುಳಿದ ಜನಾಂಗದವರು ಸೇರಿ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ರಾಜಕೀಯ ಮಾಡುವುದಾದರೆ ಜನ ಬೆಂಬಲದಿಂದ ಆಯ್ಕೆಗೊಂಡು ಅಧಿಕಾರ ನಡೆಸಲಿ. ಅದನ್ನು ಬಿಟ್ಟು ರಾಜ್ಯಪಾಲರನ್ನು ಕೈಗೊಂಬೆಯನ್ನಾಗಿ ಮಾಡಿಕೊಂಡು ಸಂವಿಧಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ ಎಂದರು.

ಸಂಗೊಳ್ಳಿರಾಯಣ್ಣ ಗ್ರಾಮೀಣಾಭಿವೃದ್ಧಿ ಸಂಘದ ಅಧ್ಯಕ್ಷ ಎಚ್.ರಂಗಸ್ವಾಮಿ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡುತ್ತಿರುವ ಜನೋಪಯೋಗಿ ಕೆಲಸ ಸಹಿಸಲಾಗದೆ ವಿಪಕ್ಷದವರು ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ರಾಜ್ಯದ ಜನತೆಯೇ ನಿಮಗೆ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಉತ್ತರ ನೀಡುತ್ತಾರೆ ಎಂದು ಎಚ್ಚರಿಸಿದರು.

ಈ ವೇಳೆ ಸಂಘದ ಗೌರವಾಧ್ಯಕ್ಷ ಕೆ.ಕಾಳಯ್ಯ, ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಸಹಕಾರ ಸಂಘದ ಅಧ್ಯಕ್ಷ ಎಚ್.ಎಂ.ಜೋಗಯ್ಯ, ಗುತ್ತಿಗೆದಾರ ಅಪ್ಪಾಜಿ, ಜಿಲ್ಲಾ ಕುರುಬರ ಸಂಘಟನಾ ಕಾರ್ಯದರ್ಶಿ ಪೂಜಾರಿ ಮಹೇಶ್, ಗ್ರಾಪಂ ಮಾಜಿ ಅಧ್ಯಕ್ಷ ರವಿಚಂದ್ರ, ಮಾಜಿ ಸದಸ್ಯ ಪುಟ್ಟರಾಜು, ಜಿಲ್ಲಾ ನಿರ್ದೇಶಕ ಬೀರೇಶ್, ಕುರುಬರ ಸಂಘದ ತಾಲೂಕು ನಿರ್ದೇಶಕ ಪುಟ್ಟಸ್ವಾಮಿ, ಭಾರತೀ ಕಾಲೇಜು ಉಪನ್ಯಾಸಕ ಎಚ್.ಕೆ.ದೊಡ್ಡಯ್ಯ ಸೇರಿದಂತೆ ಹಲವರಿದ್ದರು.