ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಮೈಸೂರು ಮುಡಾ, ವಾಲ್ಮೀಕಿ ಹಗರಣಗಳನ್ನು ಖಂಡಿಸಿ, ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ- ಜೆಡಿಎಸ್ ಪಕ್ಷಗಳು ಜೊತೆಯಾಗಿ ನಡೆಸುತ್ತಿರುವ ಮೈಸೂರು ಚಲೋ ಪಾದಯಾತ್ರೆ 7ನೇ ದಿನವಾದ ಶುಕ್ರವಾರ ಶ್ರೀರಂಗಟಪ್ಟಣದಿಂದ ಮೈಸೂರು ಕಡೆಗೆ ನಾಯಕರು, ಸಹಸ್ರಾರು ಕಾರ್ಯಕರ್ತರು, ಬೆಂಬಲಿಗರೊಂದಿಗೆ ಸಾಗಿತು.ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಮಾಜಿ ಸಿಎಂ, ಸಂಸದ ಜಗದೀಶ್ ಶೆಟ್ಟರ್, ಮಾಜಿ ಡಿಸಿಎಂ ಡಾ. ಅಶ್ವತ್ಥನಾರಾಯಣ, ಮೈಸೂರು ಸಂಸದ ಯದುವೀರ್ ಒಡೆಯರ್, ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಶಾಸಕ ಎಚ್ .ಟಿ.ಮಂಜು, ಮಾಜಿ ಸಂಸದ ಆರ್.ಅಶೋಕ್, ಶ್ರೀರಾಮುಲು, ಲಕ್ಷ್ಮೀನಾರಾಯಣ್, ವಿಧಾನ ಪರಿಷತ್ ಸದಸ್ಯ ಸಿ.ಟಿ ರವಿ ಸೇರಿದಂತೆ ಹಲವು ನಾಯಕರ ನೇತೃತ್ವದಲ್ಲಿ ಸಾಗಿದ ಪಾದಯಾತ್ರೆಗೆ ಕೀಲೋಮೀಟರ್ ಉದ್ದದವರೆಗೂ ಸಾವಿರಾರು ಕಾರ್ಯಕರ್ತರು ಹಾಗೂ ಅಭಿಮಾನಿಗಳು ಭಾಗಿಯಾಗಿ ಪಾದಯಾತ್ರೆಗೆ ಶಕ್ತಿ ತುಂಬಿದರು.
ಗುರುವಾರ ಮಂಡ್ಯದ ತೂಬಿನಕೆರೆಯಿಂದ ಆರಂಭಗೊಂಡು ಶ್ರೀರಂಗಟಪ್ಟಣ ಕ್ಷೇತ್ರದ ಗ್ರಾಮಗಳ ಮೂಲಕ ಸಂಚರಿಸಿ ರಾತ್ರಿ ವೇಳೆಗೆ ಪಟ್ಟಣದಲ್ಲಿ ಪಾದಯಾತ್ರೆ ಸ್ಥಗಿತಗೊಂಡಿತ್ತು. ಶುಕ್ರವಾರ ಬೆಳಗ್ಗೆ 10 ಗಂಟೆ ಸುಮಾರಿಗೆ ಪಟ್ಟಣದ ಟಿಎಪಿಸಿಎಂಎಸ್ ಕಲ್ಯಾಣ ಮಂಟಪದ ಬಳಿ 7ನೇ ದಿನದ ಮೈಸೂರು ಚಲೋ ಪಾದಯಾತ್ರೆಗೆ ಚಾಲನೆ ನೀಡಲಾಯಿತು.ಬಿಜೆಪಿ- ಜೆಡಿಎಸ್ ನಾಯಕರು ಪಾದಯಾತ್ರೆಯಲ್ಲಿ ಹೆಜ್ಜೆ ಹಾಕುತ್ತಿದ್ದಂತೆ ಸಹಸ್ರಾರು ಮಂದಿ ಕಾರ್ಯಕರ್ತರು ಆಗಮಿಸಿ, ನಾಯಕರೊಂದಿಗೆ ಶ್ರೀರಂಗಟಪ್ಟಣ, ಪಶ್ಚಿಮವಾಹಿನಿ ವೃತ್ತ, ಬೊಮ್ಮೂರು ಅಗ್ರಹಾರ ಗ್ರಾಮದ ಹೆದ್ದಾರಿ, ನಗುವಿನಹಳ್ಳಿ ಗೇಟ್ ಸೇರಿದಂತೆ ಕಳಸ್ತವಾಡಿ ಗ್ರಾಮಕ್ಕೆ ತೆರಳುವ ಮೂಲಕ ಮೈಸೂರು ಜಿಲ್ಲೆಗೆ ಪಾದರ್ಪಾಣೆ ಮಾಡಿದರು.
ತಲೆಬಾಗಿ ನಮಸ್ಕಾರ:ಮೈಸೂರು ಚಲೋ 7ನೇ ದಿನದ ಪಾದಯಾತ್ರೆ ಮಂಡ್ಯ ಜಿಲ್ಲೆಯಿಂದ ಮೈಸೂರು ಜಿಲ್ಲೆಗೆ ಪ್ರವೇಶವಾಗುತ್ತಿದ್ದಂತೆ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಈಡುಗಾಯಿ ಒಡೆದು ತಲೆ ಬಾಗಿ ಹೆದ್ದಾರಿಗೆ ನಮಸ್ಕರಿಸಿದರು. ಪಾದಯಾತ್ರೆ ವೇಳೆ ಜೆಡಿಎಸ್ ಅಭಿಮಾನಿ ಯುವಕರು ನಿಖಿಲ್ ಭಾವಚಿತ್ರವನ್ನು ತಮ್ಮ ಎದೆ ಮೇಲೆ ಟ್ಯಾಟೂ ಹಾಕಿಸಿಕೊಂಡು ಗಮನ ಸೆಳೆದರು.
ಕೊಬ್ಬರಿ, ಬೆಲ್ಲ, ಮೋಸುಂಬಿ ಹಾರದಿಂದ ಸ್ವಾಗತ :ಪಟ್ಟಣ ಹೊರವಲಯದ ಪಶ್ಚಿಮವಾಹಿನಿ ಹಾಗೂ ನಗುವಿನಹಳ್ಳಿ ಗೇಟ್ ಬಳಿ ಗ್ರಾಮಸ್ಥರು ಬೃಹದಾಕಾರದ ಬೆಲ್ಲ, ಕೊಬ್ಬರಿ ಹಾಗೂ ಮೋಸುಂಬಿ ಹಾರ ಹಾಕುವ ಮೂಲಕ ಅದ್ದೂರಿಯಾಗಿ ಸ್ವಾಗತ ಕೋರಿದರು. ಪಾದಯಾತ್ರೆ ಮಧ್ಯೆ ವಿಕಲಚೇತನನ್ನು ಗಮನಿಸಿದ ನಿಖಿಲ್, ಅವರ ಬಳಿ ತೆರಳಿ ಹೆದ್ದಾರಿಯಲ್ಲಿ ಅವರ ಪಕ್ಕದಲ್ಲಿ ಕುಳಿತು ಅವರಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.
ರಾರಾಜಿಸಿದ್ದ ಫ್ಲೆಕ್ಸ್, ಕಟೌಟ್ಸ್ :ಪಟ್ಟಣದ ಹೆದ್ದಾರಿಯ ಎರಡೂ ಕಡೆಗಳಲ್ಲಿ ಬಿಜೆಪಿ- ಜೆಡಿಎಸ್ ನಾಯಕರ ಬೃಹದಾಕಾರದ ಕಟೌಟ್‌ಗಳು, ಪಕ್ಷಗಳ ಚಿಹ್ನೆಯ ಬಾವುಟಗಳು ರಾರಾಜಿಸುತ್ತಿದ್ದವು. ಪಾದಯಾತ್ರೆ ವೇಳೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಗೆ ಅಲ್ಲಲ್ಲಿ ಮಜ್ಜಿಗೆ ಸೇರಿದಂತೆ ತಂಪುಪಾನೀಯ, ಸೌತೆಕಾಯಿ ಸೇರಿದಂತೆ ಇತರೆ ತಿನಿಸುಗಳನ್ನು ವಿತರಣೆ ಮಾಡುವ ಮೂಲಕ ಪಾದಯಾತ್ರೆಯಲ್ಲಿ ಯಾರೂ ಬಳಲದಂತೆ ನೋಡಿಕೊಂಡರು.