ಸಾರಾಂಶ
ಕನ್ನಡಪ್ರಭ ವಾರ್ತೆ ಚನ್ನಪಟ್ಟಣ
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಘೋಷಿಸಿದಾಗ ಬಿಜೆಪಿ-ಜೆಡಿಎಸ್‌ನವರು ಸರ್ಕಾರ ದಿವಾಳಿಯಾಗುತ್ತದೆ ಎಂದು ಹುಯಿಲ್ಲೆಬಿಸಿದರು. ಗ್ಯಾರಂಟಿ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ನಂತರ ಹೆಣ್ಣು ಮಕ್ಕಳು ದಾರಿ ತಪ್ಪುತ್ತಿದ್ದಾರೆ ಎನ್ನುತ್ತಿದ್ದಾರೆ. ಜನರಿಗೆ ಒಳಿತು ಮಾಡುವುದು ಬಿಜೆಪಿ-ಜೆಡಿಎಸ್‌ನವರಿಗೆ ಸಹಿಸಲು ಆಗುತ್ತಿಲ್ಲ ಎಂದು ಸಂಸದ ಡಿ.ಕೆ.ಸುರೇಶ್ ವಾಗ್ದಾಳಿ ನಡೆಸಿದರು.ತಾಲೂಕಿನ ದೊಡ್ಡಮಳೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಜನರಿಗೆ ಉಚಿತ ವಿದ್ಯುತ್ ನೀಡಿದ್ದು, ಮಹಿಳೆಯರಿಗೆ ೨ ಸಾವಿರ ನೀಡುತ್ತಿರುವುದು, ಉಚಿತ ಬಸ್ ಸೌಲಭ್ಯ ಕಲ್ಪಿಸಿರುವುದು ಇವರಿಗೆ ಸಹಿಸಲು ಆಗುತ್ತಿಲ್ಲ. ಅವರು ಮಾಡದ ಯೋಜನೆಗಳನ್ನು ನಾವು ಮಾಡಿದ್ದು ಕಂಡು ಭಯ ಬಂದಿದೆ. ನಮ್ಮ ಯೋಜನೆಗಳಿಂದ ಮಹಿಳೆಯರು ಪ್ರಭಾವಿತರಾಗಿ ಎಲ್ಲಿ ಕಾಂಗ್ರೆಸ್‌ಗೆ ಮತ ನೀಡುವರೋ ಎಂದು ಈ ರೀತಿ ಕೆಟ್ಟ ಆರೋಪ ಮಾಡುತ್ತಿದ್ದಾರೆ. ಇಂಥ ಆರೋಪ ಮಾಡಿದವರಿಗೆ ತಕ್ಕ ಪಾಠ ಕಲಿಸಿ ಎಂದು ಕರೆ ನೀಡಿದರು.
ನಾನು ಜಿಲ್ಲೆಯ ಮಗ:ನಾನು ಈ ಜಿಲ್ಲೆಯ ಮಗ, ಅವರು ಹಾಸನದಿಂದ ಬಂದಿದ್ದಾರೆ. ಚುನಾವಣೆಗೆ ನಿಲ್ಲಿಸಲು ಇಲ್ಲಿನ ಕಾರ್ಯಕರ್ತರು ಇರಲಿಲ್ಲವೇ. ಇವರು ಬಂದ ಮೇಲೆ ಯಾವ ಕಾರ್ಯಕರ್ತರಿಗೆ ಅವಕಾಶ ನೀಡಿದ್ದಾರೆ. ಇವರ ಕುಟುಂಬದವರು ಬಿಟ್ಟು, ಯಾರೂ ಬದುಕುವ ಹಾಗಿಲ್ಲ. ಮಗ ಆಯಿತು, ಸೊಸೆ ಆಯಿತು, ಮೊಮ್ಮಗ ಆಯಿತು ಈಗ ಅಳಿಯನನ್ನು ನಿಲ್ಲಿಸಿದ್ದಾರೆ. ಇಲ್ಲಿ ಯಾರು ಇರಲಿಲ್ಲವೇ? ಈ ಕುರಿತು ನೀವು ಚಿಂತನೆ ಮಾಡಬೇಕು ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದರು.
ಇನ್ನು ೧೦ ವರ್ಷ ಗ್ಯಾರಂಟಿ:ಕೊಟ್ಟ ಮಾತಿನಂತೆ ನಾವು ಎಲ್ಲ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಾಗುತ್ತದೆ ಎಂದು ಬಿಜೆಪಿಯವರು ಅಪಪ್ರಚಾರ ಮಾಡುತ್ತಿದ್ದಾರೆ. ಮುಂದಿನ 10 ವರ್ಷಗಳ ಕಾಲ ಗ್ಯಾರಂಟಿ ಯೋಜನೆಗಳು ಮುಂದುವರಿಯಲಿವೆ ಎಂದು ಘೋಷಿಸಿದರು.
ನನಗೆ ಆಶಿರ್ವಾದ ಮಾಡಿ:ಯಾವುದೋ ಜಿಲ್ಲೆಯವರಿಗೆ ಪದೇ ಪದೇ ಆಶಿರ್ವಾದ ಮಾಡುವುದು ಬೇಡ. ಈ ಬಾರಿ ಚುನಾವಣೆಯಲ್ಲಿ ಯೋಗೇಶ್ವರ್ ಸ್ಪರ್ಧಿಸಿಲ್ಲ. ಆದ್ದರಿಂದ ಬಿಜೆಪಿಗೆ ಮತ ನೀಡಿದರೆ ಪ್ರಯೋಜನವಿಲ್ಲ. ರಾಮನಗರ, ಚನ್ನಪಟ್ಟಣ ಎರಡು ಕಣ್ಣು ಎನ್ನುತ್ತಿದ್ದ ಕುಮಾರಸ್ವಾಮಿ ಮಂಡ್ಯಕ್ಕೆ ಹೋಗಿದ್ದಾರೆ. ಈಗ ಉಳಿದಿರುವ ನನಗೆ ನೀವು ಈ ಬಾರಿಯ ಚುನಾವಣೆಯಲ್ಲಿ ಆಶೀರ್ವಾದ ಮಾಡಿ ಎಂದು ಮನವಿ ಮಾಡಿದರು.
ಸುರೇಶ್ ತಾಲೂಕಿನ ಕೂಡ್ಲೂರು, ಸೋಗಾಲ, ಇಗ್ಗಲೂರು, ಕೋಡಂಬಳ್ಳಿ ಸೇರಿ ಸಾಕಷ್ಟು ಗ್ರಾಮಗಳಲ್ಲಿ ಪ್ರಚಾರ ನಡೆಸಿದರು.ಮಾಜಿ ಶಾಸಕ ಎಂ.ಸಿ.ಅಶ್ವತ್ಥ, ಬಿಎಂಎಸಿಎಪಿಎ ಅಧ್ಯಕ್ಷ ರಘುನಂದನ್ ರಾಮಣ್ಣ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಎಸ್.ಗಂಗಾಧರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಸ್.ಆರ್.ಪ್ರಮೋದ್, ಸುನೀಲ್, ಮುಖಂಡರಾದ ಎಂ.ಸಿ.ಕರಿಯಪ್ಪ. ಬೋರ್‌ವೆಲ್ ರಂಗನಾಥ್ ಇತರರು ಇದ್ದರು.ಉದ್ಯೋಗ ಹುಡುಕಿಕೊಂಡು ಗುಜುರಾತ್‌ಗೆ ಹೋಗಬೇಕಾಗುತ್ತದೆ:
ಉದ್ಯೋಗ ಸೃಷ್ಟಿಸುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಪ್ರಧಾನಿ ನರೇಂದ್ರ ಮೋದಿ ಉದ್ಯೋಗ ಸೃಷ್ಟಿಸಲಿಲ್ಲ. ರಾಜ್ಯದ ತೆರಿಗೆ ಹಣವನ್ನು ಅವರು ಗುಜುರಾತ್, ಉತ್ತರಪ್ರದೇಶಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಇದರಿಂದ ರಾಜ್ಯದ ಅಭಿವೃದ್ಧಿ ಕುಂಠಿತಗೊಂಡಿದ್ದು, ಉದ್ಯೋಗವಕಾಶಗಳು ಕಡಿಮೆಯಾಗಿವೆ. ಇದು ಹೀಗೆ ಮುಂದುವರಿದರೆ, ಮುಂದೆ ನಿಮ್ಮ ಮಕ್ಕಳು ಉದ್ಯೋಗ ಹುಡುಕಿಕೊಂಡು ಗುಜುರಾತ್‌ಗೆ ಹೋಗಬೇಕಾಗುತ್ತದೆ ಎಂದು ಸಂಸದ ಡಿ.ಕೆ.ಸುರೇಶ್ ಎಚ್ಚರಿಸಿದರು.ಶಿವಕುಮಾರ್‌ಗೆ ಸಿಎಂ ಆಗುವ ಅವಕಾಶವಿದೆ: ಪುಟ್ಟಣ್ಣಡಿಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಮುಂದೆ ಮುಖ್ಯಮಂತ್ರಿಯಾಗುವ ಅವಕಾಶವಿದೆ. ಸಂಸದ ಡಿ.ಕೆ.ಸುರೇಶ್ ರನ್ನು ಕಟ್ಟಿಹಾಕಿದರೆ, ಶಿವಕುಮಾರ್ ಅವರಿಗೆ ಸಿಗುವ ಅವಕಾಶ ತಪ್ಪಿಸಬಹುದು ಎಂದು ವಿರೋಧಿಗಳು ಚಿಂತಿಸಿ, ಸುರೇಶ್ ಅವರ ಹಿಂದೆ ಬಿದ್ದಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಪುಟ್ಟಣ್ಣ ಆರೋಪಿಸಿದರು. ತಾಲೂಕಿನ ದೊಡ್ಡ ಮಳೂರು ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ರಾಮನಗರ ಜಿಲ್ಲೆಯಿಂದ ಇಬ್ಬರನ್ನು ಮುಖ್ಯಮಂತ್ರಿ ಮಾಡಿದ್ದೇವೆ. ಮತ್ತೆ ಬೇರೆ ಜಿಲ್ಲೆಯವರನ್ನು ಗೆಲ್ಲಿಸುವ ಅಗತ್ಯವಿಲ್ಲ. ನಮ್ಮ ಸ್ವಾಭಿಮಾನದ ಸಂಕೇತವಾದ ಡಿ.ಕೆ.ಸುರೇಶ್ ಅವರನ್ನು ಗೆಲ್ಲಿಸಿ ಎಂದು ಮನವಿ ಮಾಡಿದರು.