ರೈಲ್ವೆ ಅಧಿಕಾರಿಗಳ ವಿರುದ್ಧ ಬಿಜೆಪಿ ಗರಂ

| Published : May 22 2025, 11:56 PM IST

ಸಾರಾಂಶ

₹ 18 ಕೋಟಿ ವೆಚ್ಚದಲ್ಲಿ ಕಲ್ಯಾಣ ಕರ್ನಾಟಕದಲ್ಲಿ ನವೀಕೃತಗೊಂಡ ಏಕೈಕ ಮುನಿರಾಬಾದ್ ರೈಲ್ವೆ ನಿಲ್ದಾಣದ ನೂತನ ಕಟ್ಟಡ ಉದ್ಘಾಟನಾ ಸಮಾರಂಭವು ಗೊಂದಲದ ಗೂಡಾಗಿ ಪರಿಣಮಿಸಿತು. ರೈಲ್ವೆ ಅಧಿಕಾರಿಗಳ ವರ್ತನೆಯಿಂದ ಬೇಸತ್ತ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸಭೆಯಿಂದ ಹೊರನಡೆದು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.

ಮುನಿರಾಬಾದ್:

₹ 18 ಕೋಟಿ ವೆಚ್ಚದಲ್ಲಿ ಕಲ್ಯಾಣ ಕರ್ನಾಟಕದಲ್ಲಿ ನವೀಕೃತಗೊಂಡ ಏಕೈಕ ಮುನಿರಾಬಾದ್ ರೈಲ್ವೆ ನಿಲ್ದಾಣದ ನೂತನ ಕಟ್ಟಡ ಉದ್ಘಾಟನಾ ಸಮಾರಂಭವು ಗೊಂದಲದ ಗೂಡಾಗಿ ಪರಿಣಮಿಸಿತು.

ರೈಲ್ವೆ ಅಧಿಕಾರಿಗಳ ವರ್ತನೆಯಿಂದ ಬೇಸತ್ತ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸಭೆಯಿಂದ ಹೊರನಡೆದು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು.

ಬೆಳಗ್ಗೆ 10ಕ್ಕೆ ಸಂಸದ ರಾಜಶೇಖರ ಹಿಟ್ನಾಳ್, ಶಾಸಕ ರಾಘವೇಂದ್ರ ಹಿಟ್ನಾಳ್, ವಿಪ ಸದಸ್ಯೆ ಹೇಮಲತಾ ನಾಯಕ ಹಾಗೂ ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರು, ಕಾರ್ಯಕರ್ತರು ಆಗಮಿಸಿದ್ದರು. ಕಾರ್ಯಕ್ರಮ ನಿರೂಪಕರು ಕಾಂಗ್ರೆಸ್‌ ಮುಖಂಡರು ಹಾಗೂ ಕಾರ್ಯಕರ್ತರನ್ನು ಮಾತ್ರ ವೇದಿಕೆಗೆ ಕರೆದರು. ಆಗ ಹೇಮಲತಾ ನಾಯಕ, ಸ್ಥಳೀಯರಾದ ಬಿಜೆಪಿ ಮುಖಂಡ, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಪ್ರಭುರಾಜ್‌ ಪಾಟೀಲ ಅವರನ್ನು ವೇದಿಕೆಗೆ ಕರೆಯುವಂತೆ ಹೇಳಿದರು. ಆಗ ನಿರೂಪಕರು ಅವರು ಹೆಸರು ಪಟ್ಟಿಯಲ್ಲಿ ಇಲ್ಲವೆಂದರು. ಇದರಿಂದ ಕುಪಿತಗೊಂಡ ಪಾಟೀಲ, ಬಿಜೆಪಿ ಕಾರ್ಯಕರ್ತರು ಸಭೆಯಿಂದ ಹೊರ ನಡೆದು ಅಧಿಕಾರಿಗಳು ಪಕ್ಷಪಾತ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ವೇದಿಕೆ ಮೇಲೆ ಕೇವಲ ಕಾಂಗ್ರೆಸ್ ನಾಯಕರು, ಕಾರ್ಯಕರ್ತರಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಕಾರ್ಯಕ್ರಮವಲ್ಲ. ಸರ್ಕಾರಿ ಕಾರ್ಯಕ್ರಮವಾಗಿದ್ದು ಎಲ್ಲರಿಗೂ ಸಮಾನ ಸ್ಥಾನಮಾನ ನೀಡಬೇಕೆಂದು ಪ್ರಭುರಾಜ್ ಪಾಟೀಲ್ ಆಗ್ರಹಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ್ ದಢೇಸುಗೂರ, ಬಸವರಾಜ್ ಕ್ಯಾವಟರ್, ಪ್ರದೀಪ್ ಪಲ್ಲೇದ, ಮಾರುತಿ ಹಿಟ್ನಾಳ, ವಸಂತ ನಾಯಕ ಹಾಗೂ ಕಾರ್ಯಕರ್ತರು ರೈಲ್ವೆ ಇಲಾಖೆ ಪಕ್ಷಪಾತಿ ಧೋರಣೆ ಅನುಸರಿಸುತ್ತಿದೆ ಎಂದು ದೂರಿದರು.

ಶಿಷ್ಟಾಚಾರ ಉಲ್ಲಂಘನೆ:ಹುಲಿಗಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ರೈಲ್ವೆ ಅಧಿಕಾರಿಗಳು ಶಿಷ್ಟಾಚಾರ ಉಲ್ಲಂಘಿಸುವ ಮೂಲಕ ಕಾಂಗ್ರೆಸ್‌ ಪಕ್ಷದ ಏಜೆಂಟರಂತೆ ವರ್ತಿಸಿದ್ದಾರೆಂದು ಹೇಮಲತಾ ನಾಯಕ ಆರೋಪಿಸಿದ್ದಾರೆ.

ಇದು ಪಕ್ಷಾತೀತ ಕಾರ್ಯಕ್ರಮವಾಗಿದ್ದರೂ ನಿರೂಪಕರು ಕೇವಲ ಒಂದು ಪಕ್ಷದ ಮುಖಂಡರು, ಕಾರ್ಯಕರ್ತರನ್ನು ವೇದಿಕೆ ಕರೆದರು. ನಾನು ಬಿಜೆಪಿಯ ಪ್ರಮುಖರನ್ನು ಕರೆಯುವಂತೆ ಹೇಳಿದರೂ ಕೇಳಲಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ನಿರೂಪಕರ ವಿರುದ್ಧ ಕ್ರಮಕೈಗೊಳ್ಳುವಂತೆ ರೈಲ್ವೆ ಸಚಿವರು ಹಾಗೂ ಪ್ರಧಾನಿಗೆ ದೂರು ನೀಡಲಾಗುವುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾಗಿ:

ನವೀಕೃತಗೊಂಡ 103 ರೈಲ್ವೆ ನಿಲ್ದಾಣವನ್ನು ವರ್ಚುವಲ್ ಮೂಲಕ ಪ್ರಧಾನಿ ದೇಶಕ್ಕೆ ಸಮರ್ಪಣೆ ಮಾಡುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಪ್ರತಿಯೊಬ್ಬ ಬಿಜೆಪಿ ಕಾರ್ಯಕರ್ತ, ಮುಖಂಡರ ಕರ್ತವ್ಯವಾಗಿದೆ ಎಂದು ಹೇಮಲತಾ ಹೇಳಿದಾಗ, ಎಲ್ಲರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.