ಆಡಳಿತ ವೈಫಲ್ಯ ಖಂಡಿಸಿ ಪಾಲಿಕೆ ಕಚೇರಿಗೆ ಬಿಜೆಪಿ ಮುತ್ತಿಗೆ

| Published : Jun 25 2024, 12:32 AM IST

ಸಾರಾಂಶ

ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಆಸ್ತಿ ತೆರಿಗೆ ಹೆಚ್ಚಳ, ನಿಯಮಬಾಹಿರವಾಗಿ ಜಲಸಿರಿ ಬಿಲ್ ನೀಡುತ್ತಿರುವುದು, ಮಿತಿಮೀರಿದ ಭ್ರಷ್ಟಾಚಾರ ಖಂಡಿಸಿ ವಿಪಕ್ಷ ಬಿಜೆಪಿ ಸದಸ್ಯರು ಸೋಮವಾರ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

- ಆಸ್ತಿ ತೆರಿಗೆ ಹೆಚ್ಚಳ, ಜಲಸಿರಿ ಯೋಜನೆಯಡಿ ಸುಲಿಗೆ, ಮಿತಿಮೀತಿದ ಭ್ರಷ್ಟಾಚಾರ: ಕೆ.ಪ್ರಸನ್ನ ಕುಮಾರ ಆರೋಪ

- ಮಾಜಿ ಮೇಯರ್‌ಗಳು, ಪಾಲಿಕೆ ಸದಸ್ಯರು, ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರಿಂದ ಕಚೇರಿಗೆ ಮುತ್ತಿಗೆ

- - -

ಕನ್ನಡಪ್ರಭ ವಾರ್ತೆ, ದಾವಣಗೆರೆ

ಮಹಾನಗರ ಪಾಲಿಕೆಯಲ್ಲಿ ಆಸ್ತಿ ತೆರಿಗೆ ಹೆಚ್ಚಳ, ನಿಯಮಬಾಹಿರವಾಗಿ ಜಲಸಿರಿ ಬಿಲ್ ನೀಡುತ್ತಿರುವುದು, ಮಿತಿಮೀರಿದ ಭ್ರಷ್ಟಾಚಾರ ಖಂಡಿಸಿ ವಿಪಕ್ಷ ಬಿಜೆಪಿ ಸದಸ್ಯರು ಸೋಮವಾರ ಪಾಲಿಕೆ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದರು.

ನಗರದ ಪಾಲಿಕೆ ಆವರಣದಲ್ಲಿ ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ, ಮಾಜಿ ಮೇಯರ್‌ಗಳಾದ ಡಿ.ಎಸ್.ಉಮಾ ಪ್ರಕಾಶ, ಎಶ್‌.ಟಿ. ವೀರೇಶ ಇತರರ ನೇತೃತ್ವದಲ್ಲಿ ಪಾಲಿಕೆ ಸದಸ್ಯರು, ಮುಖಂಡರು, ಕಾರ್ಯಕರ್ತರು, ಸಾರ್ವಜನಿಕರು ಕಚೇರಿಗೆ ಮುತ್ತಿಗೆ ಹಾಕಿ, ಆಡಳಿತ ಪಕ್ಷದ ವೈಫಲ್ಯ, ಹಳಿ ತಪ್ಪಿರುವ ಆಡಳಿತ ವಿರುದ್ಧ ಘೋಷಣೆ ಕೂಗಿದರು.

ಪಾಲಿಕೆಯಿಂದ ಸುಲಿಗೆ ತಂತ್ರ:

ಕೆ.ಪ್ರಸನ್ನಕುಮಾರ ಮಾತನಾಡಿ, ದಿನದ 24 ನೀರು ಪೂರೈಸುವ ಜಲಸಿರಿ ಯೋಜನೆಯಡಿ ಸಮರ್ಪಕ ಶುದ್ಧ ನೀರು ಪೂರೈಸಬೇಕು. ಆದರೆ, ಇಂದಿಗೂ 45 ವಾರ್ಡ್‌ ಪೈಕಿ ಬಹುತೇಕ ವಾರ್ಡ್‌ಗೆ ವಾರಕ್ಕೊಮ್ಮೆ ನೀರು ಬಿಡಲಾಗುತ್ತಿದೆ. 2 ತಿಂಗಳಿನಿಂದ ಪ್ರತಿ ಮನೆಗೆ ಅಗತ್ಯಕ್ಕೆ ತಕ್ಕಷ್ಟು ನೀರು ಪೂರೈಸುವಲ್ಲೂ ಪಾಲಿಕೆ ಆಡಳಿತ ಯಂತ್ರ ವಿಫಲವಾಗಿದೆ. ವಾಸ್ತವ ಹೀಗಿದ್ದರೂ, ಜನರನ್ನು ಜಲಸಿರಿ ಯೋಜನೆ ಹೆಸರಿನಲ್ಲಿ ಸುಲಿಗೆ ಮಾಡುವ ಕೆಲಸಕ್ಕೆ ಪಾಲಿಕೆ ಕೈ ಹಾಕಿದೆ ಎಂದು ಆರೋಪಿಸಿದರು.

ದಿನದ 24 ಗಂಟೆ ನೀರು ಕೊಡಬೇಕೆಂಬ ನಿಯಮ ಜಯಸಿರಿ ಕಾಮಗಾರಿ ಗುತ್ತಿಗೆ ಒಪ್ಪಂದದಲ್ಲೇ ಇದೆ. ಆದರೆ, ಇಂದಿಗೂ ಹಿಂದೆ ನೀಡುತ್ತಿದ್ದಂತೆ ಕೆಲ ಮನೆಗಳಿಗೆ 300-500 ಲೀಟರ್ ನೀರನ್ನು ನಾಲ್ಕೈದು ದಿನಕ್ಕೊಮ್ಮೆ ನೀಡಲಾಗುತ್ತಿದೆ. ಪ್ರತಿ ಮನೆಗೆ ಅಗತ್ಯವಿರುವಷ್ಟು ನೀರು ಪೂರೈಸದೇ, ಪದೇಪದೇ ನೀರಿನ ಕರ ಕಟ್ಟುವಂತೆ ಒತ್ತಡ ಹೇರಲಾಗುತ್ತಿದೆ. ಕಾಮಗಾರಿ ಪೂರ್ಣಗೊಳ್ಳುವವರೆಗೂ, ನಿಯಮಾನುಸಾರ ನೀರು ಪೂರೈಸುವವರೆಗೂ ಯಾವುದೇ ಕಾರಣಕ್ಕೂ ಬಿಲ್ ನೀಡಬಾರದು ಎಂದು ಪ್ರಸನ್ನ ತಾಕೀತು ಮಾಡಿದರು.

ಮಾಜಿ ಮೇಯರ್, ಹಾಲಿ ಸದಸ್ಯೆ ಡಿ.ಎಸ್.ಉಮಾ ಪ್ರಕಾಶ ಮಾತನಾಡಿ, ಪಾಲಿಕೆಯಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಕಂದಾಯ ವಿಭಾಗದಲ್ಲಿ ಇ-ಆಸ್ತಿ ಸೇರಿದಂತೆ ಇತರೆ ಸಾರ್ವಜನಿಕರ ಕೆಲಸಕ್ಕೆ ಸಾವಿರಾರು ರು. ಲಂಚ ಪಡೆಯುತ್ತಿದ್ದಾರೆ. ಮೊನ್ನೆಯಷ್ಟೇ ಪ್ರಭಾರ ಕಂದಾಯ ಅಧಿಕಾರಿ, ಎಸ್‌ಡಿಒ ಲಂಚ ಪಡೆಯುವಾಗ ಸಿಕ್ಕಿ ಬಿದ್ದಿರುವುದೇ ಇದಕ್ಕೆ ಸಾಕ್ಷಿ. ಭ್ರಷ್ಟಾಚಾರ ವಿರುದ್ಧ ಕಾಂಗ್ರೆಸ್ಸಿನ ಸದಸ್ಯರ ಮೌನ ಗಮನಿಸಿದರೆ, ಅಧಿಕಾರಿಗಳ ಲಂಚದ ಹಣದಲ್ಲಿ ಆಡಳಿತ ಪಕ್ಷದವರಿಗೂ ಪಾಲಿದೆಯೋ ಏನೋ ಎಂಬ ಅನುಮಾನ ಕಾಡುತ್ತಿದೆ. ಪಾಲಿಕೆಯ ಭ್ರಷ್ಟ ಅಧಿಕಾರಿಗಳ ವಿರುದ್ಧ ಜಿಲ್ಲಾಧಿಕಾರಿ ಸೂಕ್ತ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು.

ಸದಸ್ಯ, ಮಾಜಿ ಮೇಯರ್ ಎಸ್.ಟಿ.ವೀರೇಶ ಮಾತನಾಡಿ, ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ಆಸ್ತಿ ತೆರಿಗೆ ದುಪ್ಪಟ್ಟುಗೊಳಿಸುವ ಕೆಲಸ ಕಾಂಗ್ರೆಸ್ ಸರ್ಕಾರ ಮಾಡಿದೆ. ಪಾಲಿಕೆ ಆಯುಕ್ತರು, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಸ್ಪಂದನೆ ಇಲ್ಲ. ಗ್ಯಾರಂಟಿ ನೆಪದಲ್ಲಿ ಜನರನ್ನು ಲೂಟಿ ಮಾಡುತ್ತಿರುವ ಕಾಂಗ್ರೆಸ್ಸಿನ ಪಾಲಿಕೆ ಸದಸ್ಯರು ತಾವು ಆಸ್ತಿ ತೆರಿಗೆ ಹೆಚ್ಚಳದ ಪರ ಇದ್ದಾರೋ ಅಥ‍ಾ ವಿರುದ್ಧವೇ ಎಂಬುದನ್ನು ಜನತೆಗೆ ಬಹಿರಂಗಪಡಿಸಲಿ. ಹಳೆಯ ದರದಂತೆ ಆಸ್ತಿ ತೆರಿಗೆ ಪಾವತಿಸಿಕೊಳ್ಳಲು ಸರ್ಕಾರದ ಮೇಲೆ ಒತ್ತಡ ಹೇರಲಿ ಎಂದರು.

ಉಪ ಮೇಯರ್ ಯಶೋಧ ಯೋಗೇಶ, ಸದಸ್ಯರಾದ ಆರ್.ಶಿವಾನಂದ, ಕೆ.ಎಂ. ವೀರೇಶ, ಆರ್.ಎಲ್. ಶಿವಪ್ರಕಾಶ, ಗಾಯತ್ರಿ ಬಾಯಿ ಖಂಡೋಜಿರಾವ್‌, ಗೀತಾ ದಿಳ್ಯಪ್ಪ, ರೇಣುಕಾ ಶ್ರೀನಿವಾಸ, ವೀಣಾ ನಂಜಪ್ಪ, ಶಿಲ್ಪಾ ಜಯಪ್ರಕಾಶ, ಬಿಜೆಪಿ ಮುಖಂಡರಾದ ಸುರೇಶ ಗಂಡಗಾಳೆ, ವಿನಯ್ ದಿಳ್ಯಪ್ಪ, ಜಯಪ್ರಕಾಶ, ಎಸ್.ಟಿ.ಯೋಗೇಶ್ವರ ಇತರರು ಇದ್ದರು.

- - - ಬಾಕ್ಸ್‌

3 ತಿಂಗಳಿಂದ ಸಾಮಾನ್ಯ ಸಭೆ ನಡೆದಿಲ್ಲ

ದಾವಣಗೆರೆ ಪಾಲಿಕೆಯಲ್ಲಿ ಆಡಳಿತ ಪಕ್ಷವಿದ್ದರೂ ಇಲ್ಲದ ಸ್ಥಿತಿ ಇದೆ. ಜನರ ಸಮಸ್ಯೆಗೆ ಸ್ಪಂದಿಸದ ನಿಷ್ಕ್ರಿಯ ಅಧಿಕಾರಿಶಾಹಿಗಳ ಆಡಳಿತ ಇಲ್ಲಿದೆ. ಜನಪ್ರತಿನಿಧಿಗಳಿಗೆ ಬೆಲೆಯೇ ಇಲ್ಲದಂತಹ ಸ್ಥಿತಿ ಬಂದೊದಗಿದೆ. 3 ತಿಂಗಳಾದರೂ ಸಾಮಾನ್ಯ ಸಭೆ ಕರೆಯಲು ಮೇಯರ್‌, ಆಯುಕ್ತರು ಕ್ರಮ ಕೈಗೊಳ್ಳದಿರುವುದು ಪ್ರಜಾತಂತ್ರಕ್ಕೆ ಮಾರಕವಾಗಿದೆ. ಕರ್ನಾಟಕ ಪೌರ ನಿಗಮದ ಅಧಿನಿಯಮ 1976, ಅಧ್ಯಾಯ 3 ನಿಯಮ 2ರ ಅಡಿಯಲ್ಲಿ ಮೇಯರ್ ಆಯ್ಕೆಯಾಗುವವರೂ ಹಾಲಿ ಮೇಯರ್ ಅಧಿಕಾರದಲ್ಲಿರಬಹುದು. ಯಾವುದೇ ಸಬೂಬು ಹೇಳದೇ, ಜನರ ಸಮಸ್ಯೆ ಆಲಿಸಲು ತುರ್ತು ಸಾಮಾನ್ಯ ಸಭೆ ಕರೆಯಲಿ. ಇಲ್ಲವಾದರೆ ತೀವ್ರ ಸ್ವರೂಪದ ಹೋರಾಟ ನಡೆಸಬೇಕಾದೀತು ಎಂದು ಡಿ.ಎಸ್.ಉಮಾ ಪ್ರಕಾಶ ಆಗ್ರಹಿಸಿದರು.

- - -

-24ಕೆಡಿವಿಜಿ3, 4:

ದಾವಣಗೆರೆ ಪಾಲಿಕೆಗೆ ಬಿಜೆಪಿ ಸದಸ್ಯರು ವಿಪಕ್ಷ ನಾಯಕ ಕೆ.ಪ್ರಸನ್ನಕುಮಾರ, ಎಸ್.ಟಿ.ವೀರೇಶ, ಉಮಾ ಪ್ರಕಾಶ ಇತರರ ನೇತೃತ್ವದಲ್ಲಿ ಮುತ್ತಿಗೆ ಹಾಕಿ ಪ್ರತಿಭಟಿಸಿದರು.