ಬಿಜೆಪಿ ಮುಖಂಡ, ಉದ್ಯಮಿ ಕೃಷ್ಣರಾಜ್ ಹೆಗ್ಡೆ ಆತ್ಮಹತ್ಯೆ

| Published : Aug 20 2025, 02:00 AM IST

ಸಾರಾಂಶ

ಸೋಮವಾರ ರಾತ್ರಿ ಬೈಲೂರಿನಿಂದ ಕಾರಿನಲ್ಲಿ ಒಬ್ಬಂಟಿಯಾಗಿ ಗುತ್ತಿನ ಮನೆಗೆ ತೆರಳಿದ್ದ ಅವರು, ಮುಂಜಾನೆ ಮನೆಗೆ ಹಿಂತಿರುಗದ ಕಾರಣ ಕುಟುಂಬದವರು ಹಾಗೂ ಸ್ಥಳೀಯರು ಹುಡುಕಾಟ ನಡೆಸಿದರು. ಹುಡುಕಾಟದ ವೇಳೆ ಅವರ ಕಾರು ಬೀಡಿನ ಹಳೆಯ ಮನೆಯಿಂದ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿ ಪತ್ತೆಯಾದರೆ, ಮನೆಯಲ್ಲಿ ಕೃಷ್ಣರಾಜ್ ಹೆಗ್ಡೆ ಶವ ಪತ್ತೆಯಾಯಿತು.

ಕಾರ್ಕಳ: ತಾಲೂಕಿನ ಬೈಲೂರು ನಿವಾಸಿ, ಬಿಜೆಪಿ ಮುಖಂಡ ಹಾಗೂ ಹೊಟೇಲ್‌ ಉದ್ಯಮಿ ಕೃಷ್ಣರಾಜ್ ಹೆಗ್ಡೆ (46) ಅವರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ನಡೆದಿದೆ. ಅವರು ಆತ್ರಾಡಿಯ ತನ್ನ ಕುಟುಂಬದ ಬೀಡಿನ ಮನೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸೋಮವಾರ ರಾತ್ರಿ ಬೈಲೂರಿನಿಂದ ಕಾರಿನಲ್ಲಿ ಒಬ್ಬಂಟಿಯಾಗಿ ಗುತ್ತಿನ ಮನೆಗೆ ತೆರಳಿದ್ದ ಅವರು, ಮುಂಜಾನೆ ಮನೆಗೆ ಹಿಂತಿರುಗದ ಕಾರಣ ಕುಟುಂಬದವರು ಹಾಗೂ ಸ್ಥಳೀಯರು ಹುಡುಕಾಟ ನಡೆಸಿದರು. ಹುಡುಕಾಟದ ವೇಳೆ ಅವರ ಕಾರು ಬೀಡಿನ ಹಳೆಯ ಮನೆಯಿಂದ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿ ಪತ್ತೆಯಾದರೆ, ಮನೆಯಲ್ಲಿ ಕೃಷ್ಣರಾಜ್ ಹೆಗ್ಡೆ ಶವ ಪತ್ತೆಯಾಯಿತು.

ಉಡುಪಿ ಹಾಗೂ ಮಣಿಪಾಲದಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿದ್ದ ಕೃಷ್ಣರಾಜ್ ಹೆಗ್ಡೆ, ಬಿಜೆಪಿ ಪಕ್ಷದ ಮುಖಂಡರಾಗಿದ್ದರು. ಬೈಲೂರು ಗಣೇಶೋತ್ಸವ ಹಾಗೂ ಮಾರಿಯಮ್ಮ ದೇವರ ಉತ್ಸವ ಸೇರಿದಂತೆ ಹಲವಾರು ಧಾರ್ಮಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು.

ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೂಲಗಳ ಪ್ರಕಾರ ಅವರು ಉದ್ಯಮದಲ್ಲಿ ಆರ್ಥಿಕ ನಷ್ಟ ಅನುಭವಿಸಿದ್ದರಿಂದ ಈ ಕೃತ್ಯ ಎಸಗಿರಬಹುದೆಂದು ಶಂಕಿಸಲಾಗಿದೆ. ಹಿರಿಯಡ್ಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕಾರ್ಕಳ ಶಾಸಕ ವಿ.ಸುನೀಲ್ ಕುಮಾರ್ ಹಾಗೂ ಕಾಂಗ್ರೆಸ್ ಮುಖಂಡ ಮುನಿಯಾಲು ಉದಯ್ ಕುಮಾರ್ ಶೆಟ್ಟಿ‌ ಸೇರಿದಂತೆ ಪ್ರಮುಖರು ಸಂತಾಪ ಸೂಚಿಸಿದ್ದಾರೆ.