ಬಿಜೆಪಿ ಮುಖಂಡ ಕೆ.ಎಸ್‌.ಈಶ್ವರಪ್ಪ ಪ್ರತಿಕೃತಿ ದಹಿಸಿ ಹಾಸನದಲ್ಲಿ ಕಾಂಗ್ರೆಸ್ ಪ್ರತಿಭಟನೆ

| Published : Feb 11 2024, 01:45 AM IST

ಬಿಜೆಪಿ ಮುಖಂಡ ಕೆ.ಎಸ್‌.ಈಶ್ವರಪ್ಪ ಪ್ರತಿಕೃತಿ ದಹಿಸಿ ಹಾಸನದಲ್ಲಿ ಕಾಂಗ್ರೆಸ್ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಸಂಸದ ಡಿ.ಕೆ.ಸುರೇಶ್ ಬಗ್ಗೆ ಹಗುರವಾಗಿ ಮಾತನಾಡಿರುವ ಬಿಜೆಪಿ ಮುಖಂಡ ಕೆ.ಎಸ್‌.ಈಶ್ವರಪ್ಪ ವಿರುದ್ಧ ಹಾಸನದಲ್ಲಿ ಯುವ ಕಾಂಗ್ರೆಸ್ ಪ್ರತಿಭಟಿಸಿ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಪಕ್ಷದ ಯುವ ಕಾಂಗ್ರೆಸ್‌ ಪ್ರತಿಭಟನಾ ಮೆರವಣಿಗೆ

ಕನ್ನಡಪ್ರಭ ವಾರ್ತೆ ಹಾಸನ

ಕಾಂಗ್ರೆಸ್ ಪಕ್ಷದ ಮುಖಂಡ ಹಾಗೂ ಸಂಸದ ಡಿ.ಕೆ.ಸುರೇಶ್ ಬಗ್ಗೆ ಹಗುರವಾಗಿ ಮಾತನಾಡಿರುವ ಬಿಜೆಪಿ ಮುಖಂಡ ಕೆ.ಎಸ್‌.ಈಶ್ವರಪ್ಪ ವಿರುದ್ಧ ಯುವ ಕಾಂಗ್ರೆಸ್ ಪ್ರತಿಭಟಿಸಿ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಬಿ.ಎಂ.ರಸ್ತೆ, ಜಿಲ್ಲಾಧಿಕಾರಿ ಕಚೇರಿ ಎದುರು ವೃತ್ತದಲ್ಲಿ ರಸ್ತೆ ತಡೆ ಮಾಡಿ ಮೆರವಣಿಗೆಯಲ್ಲಿ ತರಲಾಗಿದ್ದ ಕೆ.ಎಸ್‌.ಈಶ್ವರಪ್ಪ ಅವರ ಪ್ರತಿಕೃತಿಯನ್ನು ರಸ್ತೆ ಮಧ್ಯೆ ಇಟ್ಟು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು. ಅವರ ವಿರುದ್ಧ ಘೋಷಣೆ ಕೂಗಿ ಕೆಲ ಸಮಯ ಪ್ರತಿಭಟನೆ ನಡೆಸಿದರು.

ನಂತರ ಯುವ ಕಾಂಗ್ರೆಸ್ ಅಧ್ಯಕ್ಷ ರಂಜಿತ್ ಗೊರೂರು ಮಾಧ್ಯಮದೊಂದಿಗೆ ಮಾತನಾಡಿ, ‘ಮಾನಸಿಕ ಅಸ್ವಸ್ಥನಾಗಿ ಇಡೀ ಕರ್ನಾಟಕದಲ್ಲಿ ಹುಚ್ಚನಂತೆ ವರ್ತಿಸುವ ಏಕೈಕ ರಾಜಕಾರಣಿ ಎಂದರೆ ಈಶ್ವರಪ್ಪ. ಹರಕು ಬಾಯಿ ಈಶ್ವರಪ್ಪ ಅವರು ಬೆಂಗಳೂರು ಗ್ರಾಮಾಂತರ ಸಂಸದ ಡಿ.ಕೆ. ಸುರೇಶ್ ಅವರ ಬಗ್ಗೆ ಬಹಳ ಹಗುರವಾಗಿ ಮಾತನಾಡಿದ್ದು, ಅವರನ್ನು ಗುಂಡಿಕ್ಕಿ ಕೊಲ್ಲುವಂತೆ ಪ್ರೇರೇಪಣೆಯನ್ನು ಬಿಜೆಪಿ ಕಾರ್ಯಕರ್ತರಿಗೆ ಮತ್ತು ಅವರ ನಾಯಕರಿಗೆ ಸಂದೇಶವನ್ನು ಕೊಟ್ಟಿದ್ದಾರೆ’ ಎಂದು ಸಿಟ್ಟನ್ನು ಹೊರ ಹಾಕಿದರು.

ಇಂತಹ ಹೇಳಿಕೆಯನ್ನು ಹಾಸನ ಯುವ ಕಾಂಗ್ರೆಸ್ ನಿಂದ ಖಂಡಿಸಿ ಹುಚ್ಚ ಈಶ್ವರಪ್ಪರವರ ಪ್ರತಿಕೃತಿಯನ್ನು ದಹಿಸಿ ಅವರ ವಿರುದ್ಧ ಆಕ್ರೋಶವನ್ನು ಹೊರ ಹಾಕುತ್ತಿದ್ದೇವೆ ಎಂದರು.

ಬಿಜೆಪಿಯ ಸಂಸ್ಕೃತಿಯನ್ನು ಈಶ್ವರಪ್ಪ ಪದೇ ಪದೇ ಹೊರ ಹಾಕುತ್ತಿರುತ್ತಾರೆ. ನಾಡು ನುಡಿಗಾಗಿ ಇಡೀ ಕರ್ನಾಟಕದ ಪರವಾಗಿ ಧ್ವನಿ ಎತ್ತಿದಂತಹ ಡಿ.ಕೆ.ಸುರೇಶ್ ವಿರುದ್ಧವಾಗಿ ಅವರ ಹತ್ಯೆಯನ್ನು ಮಾಡುವುದಕ್ಕೆ ಸಂದೇಶ ರವಾನೆ ಮಾಡುತ್ತಿರುವುದು ನೋಡಿದರೆ ಇದು ಬಿಜೆಪಿಯ ಅತ್ಯಂತ ಹೀನಾಯ ಸ್ಥಿತಿಯಾಗಿದೆ ಎಂದು ಖಂಡಿಸುತ್ತೇವೆ ಎಂದು ಕಿಡಿಕಾರಿದರು.

ಬಿಜೆಪಿಯು ಯಾರೇ ಹೋರಾಟಗಾರರಾಗಿದ್ದರೂ ಕೂಡ ಹತ್ತಿಕ್ಕುವ ಕೆಲಸ ಮಾಡುತ್ತಿದ್ದು, ಕಾಂಗ್ರೆಸ್ ಪಕ್ಷದ ಧೀಮಂತ ಸಂಸದ ಡಿ.ಕೆ. ಸುರೇಶ್ ಕರ್ನಾಟಕದ ಪರವಾಗಿ ರಾಜ್ಯಕ್ಕೆ ಬರಬೇಕಾಗಿರುವ ತಮ್ಮ ಪಾಲಿನ ತೆರಿಗೆ ಹಣವನ್ನು ನೀಡಬೇಕೆಂದು ಧ್ವನಿ ಎತ್ತಿದರು, ಆದರೆ ಅವರಿಗೆ ಬಿಜೆಪಿಯವರು ಯಾವ ರೀತಿ ಸಹಕರಿಸಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಮುಂದಿನ ದಿನಗಳಲ್ಲಿ ರಾಜ್ಯದ ಪರವಾಗಿ ಕಾಂಗ್ರೆಸ್ ಪಕ್ಷ ನಿರಂತರವಾಗಿ ಧ್ವನಿಯಾಗಿರುತ್ತದೆ. ಬಿಜೆಪಿಯವರು ಕಾಂಗ್ರೆಸ್ ಪಕ್ಷದ ನಾಯಕರ ವಿರುದ್ಧ ಇಂತಹ ಹೇಳಿಕೆಯನ್ನು ನೀಡಿದರೆ ಯುವ ಕಾಂಗ್ರೆಸ್ ವತಿಯಿಂದ ಉಗ್ರವಾದ ಹೋರಾಟ ಮಾಡುವುದಾಗಿ ಬಿಜೆಪಿ ಪಕ್ಷದ ನಾಯಕರಿಗೆ ಎಚ್ಚರಿಕೆ ಕೊಡುತ್ತಿದ್ದೇವೆ ಎಂದು ಹೇಳಿದರು.

ಯುವ ಕಾಂಗ್ರೆಸ್ ಮುಖಂಡರಾದ ಅವಿನಾಶ್, ವಿವೇಕ್, ಪ್ರವೀಣ್, ಲಿಖಿತ್, ರಘು, ಕುಮಾರ್ ಇದ್ದರು.ಬಿಜೆಪಿ ಮುಖಂಡ ಕೆ.ಎಸ್‌. ಈಶ್ವರಪ್ಪ ಅವರ ಪ್ರತಿಕೃತಿ ದಹಿಸಿ ಯುವ ಕಾಂಗ್ರೆಸ್‌ ಹಾಸನದಲ್ಲಿ ಪ್ರತಿಭಟನೆ ನಡೆಸಿತು.