ಪ್ರಶಸ್ತಿ ಹಿಂಪಡೆದ ಬಗ್ಗೆ ಬಿಜೆಪಿ ನಾಯಕರ ಹೇಳಿಕೆ ನಾಚಿಕೆಗೇಡು: ರಮೇಶ್ ಕಾಂಚನ್

| Published : Sep 09 2024, 01:39 AM IST

ಪ್ರಶಸ್ತಿ ಹಿಂಪಡೆದ ಬಗ್ಗೆ ಬಿಜೆಪಿ ನಾಯಕರ ಹೇಳಿಕೆ ನಾಚಿಕೆಗೇಡು: ರಮೇಶ್ ಕಾಂಚನ್
Share this Article
  • FB
  • TW
  • Linkdin
  • Email

ಸಾರಾಂಶ

ಒಂದು ಶಿಕ್ಷಣ ಸಂಸ್ಥೆ ಅದು ಕೇವಲ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಸೀಮಿತವಾಗಿರಬೇಕು, ಹೊರತು ಅಲ್ಲಿ ಧರ್ಮ, ಜಾತಿಯ ವಿಚಾರಗಳನ್ನು ವಿದ್ಯಾರ್ಥಿಗಳ ಮನಸ್ಸಿನಲ್ಲಿ ತುಂಬಿಸುವ ಕೆಲಸವಾಗಬಾರದು ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಉಡುಪಿ

ಶಿಕ್ಷಕರಾದವರು ತಮ್ಮ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಮನಸ್ಸಿನಲ್ಲಿ ಭವಿಷ್ಯ ರೂಪಿಸುವ ವಿಚಾರಗಳನ್ನು ಹೇಳುವ ಬದಲು ಕೋಮು ಪ್ರಚೋದನೆಯ ವಿಚಾರಗಳನ್ನು ತುಂಬಿಸುವುದು ಸರಿಯಲ್ಲ. ಇದು ನಮ್ಮ ಜಿಲ್ಲೆಯ ಸಂಸದರು ಮತ್ತು ಶಾಸಕರೂ ಕೂಡ ಅರ್ಥ ಮಾಡಿಕೊಂಡು ಜನಸೇವೆ ಮಾಡಲಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್ ಹೇಳಿದ್ದಾರೆ.

ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಿಗೆ ನೀಡಲಾಗಿರುವ ಉತ್ತಮ ಪ್ರಾಂಶುಪಾಲ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ತಡೆ ಹಿಡಿದಿರುವ ಕುರಿತು ಬಿಜೆಪಿ ನಾಯಕರು ಒಬ್ಬರ ನಂತರ ಒಬ್ಬರು ಅಸಮರ್ಪಕ ಹೇಳಿಕೆ ನೀಡುತ್ತಿರುವುದು ವಿಷಾದನೀಯ ಸಂಗತಿ. ಸರ್ಕಾರ ಹಾಗೂ ಪ್ರಶಸ್ತಿ ಆಯ್ಕೆ ಸಮಿತಿ ಈ ಬಗ್ಗೆ ನಿರ್ಧಾರ ಕೈಗೊಳ್ಳುತ್ತದೆ. ಅನಾವಶ್ಯಕ ಗೊಂದಲ ಸೃಷ್ಠಿಸಿ ಸಮಾಜದ ಸ್ವಾಸ್ಥ್ಯವನ್ನು ಕೆಡಿಸುವುದೇ ಬಿಜೆಪಿಯ ಚಾಳಿ ಎಂಬಂತೆ ವರ್ತಿಸುತ್ತಿರುವುದು ನಾಚಿಕೇಗೇಡಿನ ಸಂಗತಿ ಎಂದವರು ಪ್ರತಿಕ್ರಿಯಿಸಿದ್ದಾರೆ.ಒಂದು ಶಿಕ್ಷಣ ಸಂಸ್ಥೆ ಅದು ಕೇವಲ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಸೀಮಿತವಾಗಿರಬೇಕು, ಹೊರತು ಅಲ್ಲಿ ಧರ್ಮ, ಜಾತಿಯ ವಿಚಾರಗಳನ್ನು ವಿದ್ಯಾರ್ಥಿಗಳ ಮನಸ್ಸಿನಲ್ಲಿ ತುಂಬಿಸುವ ಕೆಲಸವಾಗಬಾರದು. ಹಿಜಾಬ್ ವಿಚಾರದ ಮೂಲಕ ಹಿಂದಿನ ಬಿಜೆಪಿ ಸರ್ಕಾರ ಇಡೀ ಜಿಲ್ಲೆ ಮಾತ್ರವಲ್ಲದೇ ರಾಜ್ಯದಾದ್ಯಂತ ಗೊಂದಲ ಸೃಷ್ಠಿ ಮಾಡಿದ್ದು ಇದರಿಂದ ಸಮಸ್ಯೆಗೊಳಗಾಗಿರುವವರು ಬಡ ವಿದ್ಯಾರ್ಥಿಗಳಾಗಿದ್ದಾರೆ. ಇತ್ತೀಚೆಗೆ ದೇಶದ ಸುಪ್ರಿಂ ಕೋರ್ಟ್ ಹಿಜಾಬ್ ವಿಚಾರದ ಕುರಿತಂತೆ ಮುಂಬೈ ಕಾಲೇಜೊಂದರ ಪ್ರಕರಣದಲ್ಲಿ ಸರಿಯಾದ ತೀರ್ಪು ನೀಡಿರುವುದನ್ನು ಬಿಜೆಪಿಗರು ಮರೆತಂತೆ ಕಾಣುತ್ತಿದೆ.ಶಿಕ್ಷಣ ಸಂಸ್ಥೆಗಳನ್ನು ಕೋಮು ದ್ವೇಷದ ಪ್ರಯೋಗ ಶಾಲೆ ಮಾಡುವುದೇ ಬಿಜೆಪಿಗರ ಮುಖ್ಯ ಉದ್ದೇಶವಾಗಿದೆ. ತಾವು ಮಾಡಿದ ತಪ್ಪುಗಳನ್ನು ಮುಚ್ಚಿಹಾಕಲು ದಿನಕ್ಕೊಂದು ವಿಚಾರಗಳನ್ನು ಎತ್ತಿಕೊಂಡು ಸಮಾಜದಲ್ಲಿ ಅಶಾಂತಿ ಸೃಷ್ಠಿಸುವ ಕೆಲಸ ಮಾಡುತ್ತಿರುವ ಬಿಜೆಪಿಗೆ ಜನ ತಕ್ಕ ಪಾಠ ಕಲಿಸುವ ದಿನಗಳು ದೂರವಿಲ್ಲ. ಬಿಜೆಪಿ ಸಾಸಕರು ಸಮಾಜದ ಮುಂದೆ ಸಾಚಾ ಎನ್ನುವಂತೆ ಪೋಸ್ ನೀಡುವುದನ್ನು ಬಿಟ್ಟು ತಮ್ಮನ್ನು ಜನರು ಕ್ಷೇತ್ರದ ಅಭಿವೃದ್ಧಿ ಮಾಡಲು ಆಯ್ಕೆ ಮಾಡಿದ್ದಾರೆ ಎನ್ನುವುದನ್ನು ಅರಿತು ಕೆಲಸ ಮಾಡುವ ಕೆಲಸ ಬಿಜೆಪಿ ಶಾಸಕರು ಮತ್ತು ಸಂಸದರು ಮಾಡಬೇಕಾಗಿದೆ.ಪ್ರಶಸ್ತಿ ವಿಚಾರದಲ್ಲಿ ಸರ್ಕಾರ ಮತ್ತು ಆಯ್ಕೆ ಸಮಿತಿ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತದೆ, ಅದರ ಬಗ್ಗೆ ವೃಥಾ ಚರ್ಚೆ ಮಾಡುವ ಬದಲು ಜಿಲ್ಲೆಯನ್ನು ಶೈಕ್ಷಣಿಕವಾಗಿ ಹೇಗೆ ಅಭಿವೃದ್ಧಿಪಡಿಸಬಹುದು ವಿದ್ಯಾರ್ಥಿಗಳ ಶಿಕ್ಷಣದ ಗುಣಮಟ್ಟದಲ್ಲಿ ಯಾವ ರೀತಿಯ ಹೊಸ ಆಲೋಚನೆಗಳನ್ನು ತರಬಹುದು ಎನ್ನುವ ಕುರಿತು ಉಡುಪಿಯ ಶಾಸಕರು ಮತ್ತು ಸಂಸದರು ಮೊದಲು ಗಮನ ಹರಿಸಲಿ ಎಂದವರು ಸಲಹೆ ಮಾಡಿದ್ದಾರೆ.