ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ಶ್ರೀ ಕ್ಷೇತ್ರ ಧರ್ಮಸ್ಥಳದ ವಿರುದ್ಧ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಬಿಜೆಪಿ ಕೃಷ್ಣರಾಜ ಕ್ಷೇತ್ರದ ಮುಖಂಡರು ಹಾಗೂ ಕಾರ್ಯಕರ್ತರು ಕುವೆಂಪುನಗರದ ಕಾಂಪ್ಲೆಕ್ಸ್ ಪ್ರಸನ್ನ ಆಂಜನೇಯಸ್ವಾಮಿ ದೇವಸ್ಥಾನದ ಬಳಿ ಶುಕ್ರವಾರ ಪ್ರತಿಭಟಿಸಿದರು.ಈ ವೇಳೆ ಬಿಜೆಪಿ ನಗರಾಧ್ಯಕ್ಷ ಎಲ್. ನಾಗೇಂದ್ರ ಮಾತನಾಡಿ, ಧರ್ಮಸ್ಥಳ ದೇವಸ್ಥಾನವನ್ನು ಕಿತ್ತುಕೊಳ್ಳಲು ಕಳ್ಳ ಸರ್ಕಾರ ಎಸ್‌ಐಟಿ ರಚನೆ ಮಾಡಿದೆ. ಬಹುಸಂಖ್ಯಾತ ಹಿಂದೂಗಳ ಧಾರ್ಮಿಕ ಕೇಂದ್ರವನ್ನು ದುರ್ಬಲಗೊಳಿಸುವ ಕೆಲಸ ನಡೆಯುತ್ತಿದೆ. ಇದಕ್ಕೆ ನಾವು ಅವಕಾಶ ನೀಡುವುದಿಲ್ಲ. ಈ ಹೋರಾಟ ಉಗ್ರ ರೂಪ ಪಡೆಯಲಿದೆ ಎಂದು ಎಚ್ಚರಿಸಿದರು.
ಅನಾಮಿಕ ದೂರುದಾರನ ಮಾತಿನಿಂತೆ 14 ದಿನ ಅಗೆದರೂ ಸಿಕ್ಕಿದ್ದು ಬರೀ ಮಣ್ಣು. ಇನ್ನೂ 100 ಕಡೆ ಅಗೆದರೂ ಬರೀ ಮಣ್ಣೆ ಸಿಗುತ್ತದೆ. ಹೀಗಾಗಿ, ಸರ್ಕಾರ ಕೂಡಲೇ ಎಸ್‌ಐಟಿ ರದ್ದು ಮಾಡಬೇಕು. ಧರ್ಮಸ್ಥಳದ ಬಗ್ಗೆ ಅಪಪ್ರಚಾರ ಮಾಡುತ್ತಿರುವ ಯುಟ್ಯೂಬರ್ ಗಳನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.ಮಾಜಿ ಮೇಯರ್ ಶಿವಕುಮಾರ್ ಮಾತನಾಡಿ, ಸರ್ಕಾರ ಎಡಪಂಕ್ತೀಯರ ಮಾತು ಕೇಳಿ ಎಸ್‌ಐಟಿ ರಚಿಸಿ, ಬಹುಸಂಖ್ಯಾತ ಹಿಂದೂಗಳ ಭಾವನೆಗೆ ಧಕ್ಕೆ ತಂದಿದ್ದಾರೆ. ಕಾಂಗ್ರೆಸ್ ಹಿಂದಿನಿಂದಲೂ ಹಿಂದೂಗಳ ಧಾರ್ಮಿಕ ಭಾವನೆಯನ್ನು ಕೆಡಿಸುವ ಪ್ರಯತ್ನ ಮಾಡುತ್ತಲೇ ಇದೆ. ಜನ ಬೀದಿಗಿಳಿಯುವ ಮುನ್ನ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದು ಆಗ್ರಹಿಸಿದರು.
ಧರ್ಮಸ್ಥಳದ ಬಗ್ಗೆ ಅಪಪ್ರಚಾರಗಳು ಎಗ್ಗಿಲ್ಲದೆ ನಡೆದರೂ, ಸರ್ಕಾರ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಿಲ್ಲ. ಆದರೆ ಹಿಂದೂ ಸಂಘಟನೆಗಳ ನಾಯಕರ ವಿರುದ್ಧ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ಪ್ರಕರಣ ದಾಖಲಿಸುತ್ತಿದ್ದಾರೆ. ಸುಳ್ಳು ಕಥೆ ಸೃಷ್ಟಿಸಿ ಜನರಿಗೆ ತಪ್ಪು ಮಾಹಿತಿ ನೀಡಿದ ಯೂಟ್ಯೂಬರ್ ಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.ಬಿಜೆಪಿ ಕೆ.ಆರ್. ಕ್ಷೇತ್ರದ ಅಧಕ್ಷ ಗೋಪಾಲ್ ರಾಜೇ ಅರಸ್, ಮುಖಂಡರಾಧ ಹರೀಶ್, ಕೇಬಲ್ ಮಹೇಶ್, ಗಿರಿಧರ್, ಗೋಕುಲ್ ಗೋವರ್ಧನ್, ವಿಶ್ವ, ಈಶ್ವರ್, ಬಿಲ್ಲಯ್ಯ, ಮನೋಜ್, ಓಂ ಶ್ರೀನಿವಾಸ್, ನಿಶಾಂತ್, ಜಯರಾಂ, ಜೈಶಂಕರ್, ವಿನಯ್, ರಾಜೇಶ್, ಜೋಗಿ ಮಂಜು, ಹೇಮಂತ, ವಿಶ್ವ, ಮಂಜುನಾಥ್, ಹರೀಶ್, ಅಂಕಿತ್, ರವಿ, ಗಿರೀಶ್ ಗೌಡ, ಸರ್ವಮಂಗಳಾ, ಕಾವೇರಿ, ರೂಪಾ, ರೇಖಾ, ಲತಾ, ಜ್ಯೋತಿ, ನಂದಾ ಸಿಂಗ್, ಸುಮಿತ್ರಾ, ಜಯಂತಿ ಮೊದಲಾದವರು ಇದ್ದರು.