ಸಾರಾಂಶ
ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಇನ್ನೆರಡು ದಿನದಲ್ಲಿ ಅಂತಿಮಗೊಳಿಸುತ್ತೇವೆ. ಪಟ್ಟಿ ಅಂತಿಮವಾಗುವ ಮೊದಲು ಕೇಂದ್ರ ಚುನಾವಣಾ ಸಮಿತಿಯನ್ನು ಭೇಟಿ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕನ್ನಡಪ್ರಭ ವಾರ್ತೆ ಶಿರಸಿ/ಬೆಳಗಾವಿ
ಲೋಕಸಭಾ ಚುನಾವಣೆಗೆ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯನ್ನು ಇನ್ನೆರಡು ದಿನದಲ್ಲಿ ಅಂತಿಮಗೊಳಿಸುತ್ತೇವೆ. ಪಟ್ಟಿ ಅಂತಿಮವಾಗುವ ಮೊದಲು ಕೇಂದ್ರ ಚುನಾವಣಾ ಸಮಿತಿಯನ್ನು ಭೇಟಿ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಶಿರಸಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು, ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರ ಅಭಿಪ್ರಾಯ ಪಡೆದು ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸುತ್ತೇವೆ ಎಂದರು.
ಬಿಜೆಪಿಯವರು ಆಪರೇಷನ್ ಕಮಲ ಮಾಡುವುದರಲ್ಲಿ ನಿಸ್ಸೀಮರು. ಜನರ ಆಶೀರ್ವಾದ ಇಲ್ಲದೇ ಅಧಿಕಾರಕ್ಕೆ ಬರುತ್ತಾರೆ. ಬಿಜೆಪಿಯವರಿಗೆ ಪ್ರಜಾಪ್ರಭುತ್ವ, ಸಂವಿಧಾನದ ಮೇಲೆ ನಂಬಿಕೆ ಇಲ್ಲ.
ಬಾಯಿಗೆ ಬಂದ ಹಾಗೇ ಮಾತನಾಡುವುದು ಬಿಜೆಪಿ ಸಂಸ್ಕೃತಿ. ಆದರೆ, ಕಾಂಗ್ರೆಸ್ ಪಕ್ಷದಲ್ಲಿ ಹಣ ತೆಗೆದುಕೊಂಡು ಟಿಕೆಟ್ ನೀಡುವ ಪದ್ಧತಿ ಇಲ್ಲ ಎಂದರು.
ಶಿವರಾಮ ಹೆಬ್ಬಾರ್ ಕಾಂಗ್ರೆಸ್ ಸೇರ್ಪಡೆ ಕುರಿತು ನನ್ನ ಜತೆ ಮಾತನಾಡಿಲ್ಲ. ಕಾಂಗ್ರೆಸ್‌ಗೆ ಯಾರು ಬಂದರೂ ಮುಕ್ತ ಸ್ವಾಗತವಿದೆ. ಆದರೆ, ಕಾಂಗ್ರೆಸ್ ತತ್ವ-ಸಿದ್ಧಾಂತ ಒಪ್ಪಿ ಬರಬೇಕು. ಜಿಲ್ಲಾ ಕಾಂಗ್ರೆಸ್ ಅಭಿಪ್ರಾಯ ಪಡೆದು ಪಕ್ಷಕ್ಕೆ ತೆಗೆದುಕೊಳ್ಳುತ್ತೇವೆ ಎಂದು ಪ್ರತಿಕ್ರಿಯಿಸಿದರು.
ಪಾಕ್ ಪರ ಘೋಷಣೆ ಕೂಗಿದವರ ಬಂಧನ: ವಿಧಾನಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಕೂಗಿದ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದ್ದು, ಪೊಲೀಸ್ ಇಲಾಖೆಯ ಎಫ್‌ಎಸ್‌ಎಲ್ ವರದಿ ಆಧಾರದ ಮೇಲೆ ತನಿಖೆ ಮಾಡುತ್ತೇವೆ.
ಬಿಜೆಪಿ ನೀಡಿದ ಖಾಸಗಿ ಎಫ್‌ಎಸ್‌ಎಲ್ ವರದಿಯನ್ನು ಒಪ್ಪುವುದಿಲ್ಲ ಎಂದು ಸಿಎಂ ಸ್ಪಷ್ಟಪಡಿಸಿದರು. ಬಿಜೆಪಿ ಆರೋಪಕ್ಕೆ ಪ್ರತಿಕ್ರಿಯಿಸಿ, ಮಂಡ್ಯದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದವರನ್ನು ಬಿಜೆಪಿಯವರು ಬಂಧಿಸಿದ್ದರಾ? ಎಂದು ಪ್ರಶ್ನಿಸಿದರು.
ಬಿಜೆಪಿಯವರು ಯಾರಾದರೂ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದಾರಾ?. ಹುತಾತ್ಮರಾಗಿದ್ದಾರಾ?. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದು ಕಾಂಗ್ರೆಸ್.
ಹೊನ್ನಾವರದ ಯುವಕ ಪರೇಶ ಮೇಸ್ತಾ ಸಾವಾದಾಗ ಬಿಜೆಪಿಯವರು ಗಲಾಟೆ ಮಾಡಿದ್ದರು. ಕೇಂದ್ರ ಸರ್ಕಾರದ ಅಧೀನದಲ್ಲಿರುವ ಸಿಬಿಐ ವರದಿ ಏನು ಬಂದಿದೆ. ಸಹಜ ಸಾವು ಎಂದು ವರದಿ ಬಂತು, ಅನಂತಕುಮಾರ ಹೆಗಡೆ ಹೇಳುವಂತದ್ದು ಒಂದೂ ಸತ್ಯ ಇಲ್ಲ ಎಂದು ಹರಿಹಾಯ್ದರು.
ಕರ್ನಾಟಕದಲ್ಲಿ ₹4.30 ಲಕ್ಷ ಕೋಟಿ ತೆರಿಗೆ ಸಂಗ್ರಹವಾಗುತ್ತದೆ. ತೆರಿಗೆ ಹಣದಲ್ಲಿ ಕರ್ನಾಟಕಕ್ಕೆ ಬಹಳ ದೊಡ್ಡ ಅನ್ಯಾಯವಾಗಿದ್ದು, ಪ್ರಧಾನಿ ನರೇಂದ್ರ ಮೋದಿಯವರು ನಮ್ಮ ತೆರಿಗೆ ಹಣವನ್ನು ನಮಗೆ ನೀಡಲಿ ಎಂದರು.
ಅನಂತನನ್ನು ಮನೆಗೆ ಕಳುಹಿಸಿ: ಕಳೆದ ನಾಲ್ಕೂವರೆ ವರ್ಷದಿಂದ ನಿದ್ರೆಯಲ್ಲಿದ್ದು ಇದೀಗ ಎಚ್ಚರಗೊಂಡಿರುವ ಸಂಸದ ಅನಂತಕುಮಾರ ಹೆಗಡೆಯನ್ನು ಮನೆಗೆ ಕಳುಹಿಸಿ ಎಂದು ಏಕ ವಚನದಲ್ಲಿ ವಾಗ್ದಾಳಿ ನಡೆಸಿದರು.
ಜಿಲ್ಲೆಯಲ್ಲಿ ಸಾಕಷ್ಟು ಜ್ವಲಂತ ಸಮಸ್ಯೆಯಿದೆ. ಅವರು ಜಿಲ್ಲೆಗೆ ಏನು ಕೊಡುಗೆ ನೀಡಿದ್ದಾರೆ ಎಂಬುದನ್ನು ಹೇಳಲಿ. ಇಂತಹ ಸಂಸದ ಜಿಲ್ಲೆಗೆ ಅಯೋಗ್ಯ ಎಂದು ಕಿಡಿಕಾರಿದರು.
ಮಹದಾಯಿ, ಮೇಕೆದಾಟುಗೆ ಕೇಂದ್ರ ಸಹಕರಿಸುತ್ತಿಲ್ಲ: ಬಳಿಕ, ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಟ್ಟಲಗಿಯ (ಅಮ್ಮಾಜೇಶ್ವರಿ) ಏತ ನೀರಾವರಿ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದ ಸಿದ್ದು, ಕೇಂದ್ರ ಸರ್ಕಾರ ಮತ್ತು ರಾಜ್ಯದಲ್ಲಿ ಈ ಹಿಂದೆ ಇದ್ದ ಬಿಜೆಪಿ ಸರ್ಕಾರ ರಾಜ್ಯದ ಯಾವ ನೀರಾವರಿ ಯೋಜನೆಗಳಿಗೂ ಬೆಂಬಲ ನೀಡಲಿಲ್ಲ.
ಕೃಷ್ಣ ಮೇಲ್ದಂಡೆ, ಮಹದಾಯಿ, ಭದ್ರಾ ಮೇಲ್ದಂಡೆ, ಮೇಕೆದಾಟು ಯೋಜನೆಗಳಿಗೆ ಕೇಂದ್ರ ಸಹಕಾರ ನೀಡುತ್ತಿಲ್ಲ ಎಂದು ಆರೋಪಿಸಿದರು.
ಬೆಳಗಾವಿಯಲ್ಲಿ ಗೆದ್ದಿರುವ ಇಬ್ಬರು ಸಂಸದರು ಸೇರಿ ಬಿಜೆಪಿಯ ಒಬ್ಬನೇ ಒಬ್ಬ ಸಂಸದ ಸಂಸತ್ತಿನಲ್ಲಿ ಈ ಬಗ್ಗೆ ಧ್ವನಿ ಎತ್ತಲಿಲ್ಲ. ಇದು ಬೆಳಗಾವಿ ಜನತೆಗೆ, ರಾಜ್ಯದ ಜನತೆಗೆ ಬಿಜೆಪಿ ಸಂಸದರು ಬಗೆದ ದ್ರೋಹ ಅಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು.
ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಎಂಎಸ್‌ಪಿ ಜಾರಿ: ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕಾಯ್ದೆ ಜಾರಿಗೊಳಿಸುವಂತೆ ರೈತರು ದೇಶಾದ್ಯಂತ ಹೋರಾಟ ನಡೆಸುತ್ತಿದ್ದಾರೆ.
ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದರೆ ಎಂಎಸ್‌ಪಿ ಕಾಯ್ದೆ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.
ಇಲ್ಲಿನ ಸುವರ್ಣ ವಿಧಾನಸೌಧದ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಗಾವಿ ವಿಭಾಗದ ಫಲಾನುಭವಿ ರೈತರಿಗೆ ವಿವಿಧ ಕೃಷಿ ಸಲಕರಣೆಗಳು ಮತ್ತು ಸೌಲಭ್ಯಗಳನ್ನು ವಿತರಿಸಿ ಅವರು ಮಾತನಾಡಿದರು.
ದೇಶದ ಆಹಾರ ಸ್ವಾವಲಂಬನೆಗೆ ಶ್ರಮಿಸುತ್ತಿರುವ ರೈತರಿಗೆ ಬೆಂಬಲ ಬೆಲೆ ಕೊಡುವುದು ಸರ್ಕಾರದ ಕರ್ತವ್ಯವಾಗಿದೆ. ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಎಂಎಸ್‌ಪಿ ಜಾರಿಗೊಳಿಸುತ್ತೇವೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಭರವಸೆ ಕೊಟ್ಟಿದ್ದಾರೆ.
ಜನಪರ ಕಾರ್ಯಕ್ರಮಗಳನ್ನು ಜಾರಿಗೆ ತರುವುದು ಕಾಂಗ್ರೆಸ್‌ನ ಮೂಲ ಉದ್ದೇಶ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಕರ್ನಾಟಕಕ್ಕೆ ಸೇರಿಸಿಕೊಳ್ಳಲು ಸಿಎಂಗೆ ಮಹಾ ಜನರ ಒತ್ತಾಯ:ಮಹಾರಾಷ್ಟ್ರದಲ್ಲಿದ್ದರೂ ಅನೇಕ ಮೂಲಸೌಲಭ್ಯಗಳಿಂದ ನಮ್ಮ ಗ್ರಾಮಗಳು ವಂಚಿತವಾಗಿವೆ. ಹೀಗಾಗಿ, ನಮ್ಮನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳಿ ಎಂದು ಮಹಾರಾಷ್ಟ್ರದ ಗಡಿ ಭಾಗದ ಜನರು ಅಥಣಿಯಲ್ಲಿ ಬುಧವಾರ ನಡೆದ ಕಾರ್ಯಕ್ರಮಕ್ಕೆ ಬಂದು ಸಿಎಂಗೆ ಆಗ್ರಹಿಸಿದರು.
ಬುಧವಾರ ನಡೆದ ಏತ ನೀರಾವರಿ ಯೋಜನೆಯ ಶಂಕುಸ್ಥಾಪನೆ ಸಮಾರಂಭದಲ್ಲಿ ಮಹಾರಾಷ್ಟ್ರದ ಜತ್ತ ತಾಲೂಕಿನ ನೂರಾರು ಕನ್ನಡಿಗರು ನಾಮಫಲಕಗಳನ್ನು ಹಿಡಿದುಕೊಂಡು ಭಾಗವಹಿಸಿದ್ದರು.
ಗಡಿಭಾಗದ ಅನೇಕ ಹಳ್ಳಿಗಳು ಮೂಲಭೂತ ಸೌಲಭ್ಯಗಳಿಂದ ವಂಚಿತವಾಗಿವೆ. ಆದ್ದರಿಂದ ನಮ್ಮನ್ನು ಕರ್ನಾಟಕಕ್ಕೆ ಸೇರಿಸಿಕೊಳ್ಳಬೇಕು. ಗಡಿ ಭಾಗದ ಕನ್ನಡ ಶಾಲೆಗಳಿಗೆ ವಿಶೇಷ ಅನುದಾನ ಒದಗಿಸಬೇಕು ಎಂದು ಆಗ್ರಹಿಸಿದರು.
ಜತೆಗೆ, ಬೇಸಿಗೆ ಸಂದರ್ಭದಲ್ಲಿ ನಮಗೆ ಕುಡಿಯುವ ನೀರಿನ ಸಮಸ್ಯೆ ಇದ್ದು, ಕೊಟ್ಟಲಗಿ ಏತ ನೀರಾವರಿ ಯೋಜನೆ ಮೂಲಕ ನಮ್ಮ ಭಾಗದ ಕೆರೆಗಳಿಗೆ ನೀರು ತುಂಬಿಸಬೇಕು ಎಂದು ಅಥಣಿ ಶಾಸಕ ಲಕ್ಷ್ಮಣ ಸವದಿ ಅವರಿಗೆ ಮನವಿ ಸಲ್ಲಿಸಿದರು.
ಶಾಸಕ ಲಕ್ಷ್ಮಣ ಸವದಿ ಅವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಗಡಿನಾಡಿನ ಕನ್ನಡಿಗರ ಸಮಸ್ಯೆ ಕುರಿತು ಪ್ರಸ್ತಾಪಿಸಿದಾಗ, ಮಹಾರಾಷ್ಟ್ರದ ಜತ್ತ ತಾಲೂಕಿನ ನೂರಾರು ಕನ್ನಡಿಗರು ನಾಮಫಲಕಗಳನ್ನು ಕೈಯಲ್ಲಿ ಹಿಡಿದು ಎದ್ದು ನಿಂತು ಘೋಷಣೆಗಳನ್ನು ಕೂಗುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನ ಸೆಳೆದರು.