ಸಾರಾಂಶ
ಸಭೆಯೊಂದರಲ್ಲಿ ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿದ್ದಾರೆ ಎನ್ನಲಾದ ಮಾತೊಂದು ಈಗ ವೈರಲ್ ಆಗಿದ್ದು, ಬಿಜೆಪಿಗರ ಕೆಂಗಣ್ಣಿಗೆ ಗುರಿಯಾಗಿದೆ. ಹೀಗಾಗಿ ಶಾಸಕರ ದೂರು ನೀಡಲು ಹಾಗೂ ಅವರ ಗೃಹ ಕಚೇರಿಗೆ ಮುತ್ತಿಗೆ ಹಾಕಲು ಬಿಜೆಪಿ ಕಾರ್ಯಕರ್ತರು ತೀರ್ಮಾನಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಚನ್ನಮ್ಮನ ಕಿತ್ತೂರು
ಸಭೆಯೊಂದರಲ್ಲಿ ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿದ್ದಾರೆ ಎನ್ನಲಾದ ಮಾತೊಂದು ಈಗ ವೈರಲ್ ಆಗಿದ್ದು, ಬಿಜೆಪಿಗರ ಕೆಂಗಣ್ಣಿಗೆ ಗುರಿಯಾಗಿದೆ. ಹೀಗಾಗಿ ಶಾಸಕರ ದೂರು ನೀಡಲು ಹಾಗೂ ಅವರ ಗೃಹ ಕಚೇರಿಗೆ ಮುತ್ತಿಗೆ ಹಾಕಲು ಬಿಜೆಪಿ ಕಾರ್ಯಕರ್ತರು ತೀರ್ಮಾನಿಸಿದ್ದಾರೆ.ಶಾಸಕ ಬಾಬಾಸಾಹೇಬ ಪಾಟೀಲ ಮಾತನಾಡಿರುವ ವಿಡಿಯೋ ವೈರಲ್ ಆಗಿದ್ದು ಆ ವಿಡಿಯೋದಲ್ಲಿ ಬಿಜೆಪಿ ಮಕ್ಳು ಎಂಬ ಪದ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿಯಲ್ಲಿ ಈ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಮಂಗಳವಾರ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಹಾಗೂ ಮುಖಂಡರು ಪತ್ರಿಕಾಗೋಷ್ಠಿ ನಡೆಸಿ ಕಾನೂನು ಹೋರಾಟಕ್ಕೆ ಅಣಿಯಾಗಿರುವುದನ್ನು ಖಚಿತಪಡಿಸಿದ್ದಾರೆ.
ಮಂಗಳವಾರ ಬಿಜೆಪಿ ಗೃಹ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಪಾಟೀಲ, ಶಾಸಕರೊಬ್ಬರ ಬಾಯಲ್ಲಿ ಇಂತಹ ಪದಗಳು ಬಂದಿದ್ದು ದುರಾದೃಷ್ಟ. ಈ ಮಾತಿನಿಂದ ಬಿಜೆಪಿಯ ಸಾಮಾನ್ಯ ಕಾರ್ಯಕರ್ತರಾದಿಯಾಗಿ ದೊಡ್ಡಮಟ್ಟದ ಮುಖಂಡರ ಹಾಗೂ ಜನಪ್ರತಿನಿಧಿಗಳನ್ನು ನಿಂದಿಸಿದಂತಾಗಿದೆ. ಹೀಗಾಗಿ ಬುಧವಾರ ಕುರುಗುಂದ ಗ್ರಾಮದಿಂದ ನೇಗಿನಹಾಳ ಗ್ರಾಮದ ಕಾಂಗ್ರೆಸ್ ಕಚೇರಿಗೆ ಪಾದಯಾತ್ರೆ ಮೂಲಕ ತೆರಳಿ ಮುತ್ತಿಗೆ ಹಾಕಲಾಗುವುದು. ಅಲ್ಲದೆ ಶಾಸಕರ ವಿರುದ್ಧ ದೂರನ್ನು ಸಹ ನೀಡಲಾಗಿದೆ ಎಂದು ತಿಳಿಸಿದರು.ಈ ಪಾದಯಾತ್ರೆಯಲ್ಲಿ ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಮಂಡಲ ಅಧ್ಯಕ್ಷ ಶ್ರೀಕರ ಕುಲಕರ್ಣಿ, ಮಾಜಿ ಮಂಡಲ ಅಧ್ಯಕ್ಷ ಡಾ.ಬಸವರಾಜ ಪರವಣ್ಣವರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಂದೀಪ ದೇಶಪಾಂಡೆ, ಮುಖಂಡರಾದ ಲಕ್ಷ್ಮೀ ಇನಾಂದಾರ, ಸರಸ್ವತಿ ಹೈಬತ್ತಿ, ಉಳವಪ್ಪ ಉಳ್ಳೆಗಡ್ಡಿ ಸೇರಿದಂತೆ ಇತರರು ಇದ್ದರು.ಇಂದು ಕಿತ್ತೂರು ಶಾಸಕರ ವಿರುದ್ಧ ಪ್ರತಿಭಟನೆ
ಬೆಳಗಾವಿ: ಭಾರತೀಯ ಜನತಾ ಪಾರ್ಟಿ ಕಾರ್ಯಕರ್ತರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ ಕಿತ್ತೂರಿನ ಕಾಂಗ್ರೆಸ್ ಶಾಸಕ ಬಾಬಾಸಾಹೇಬ್ ಪಾಟೀಲ ವಿರುದ್ಧ ಜು.16 ರಂದು ಬೃಹತ್ ಪತ್ರಿಭಟನೆ ಹಾಗೂ ಶಾಸಕರ ಕಚೇರಿಗೆ ಮುತ್ತಿಗೆ ಹಾಕಲು ಬಿಜೆಪಿ ಜಿಲ್ಲಾ ಘಟಕ ಕರೆ ಕೊಟ್ಟಿದೆ. ಬಿಜೆಪಿ ಕುರಗುಂದ ಗ್ರಾಮದಿಂದ ನೇಗಿನಾಳವರೆಗೆ ಜು.16 ರಂದು ಪಾದಯಾತ್ರೆಗೆ ನಿರ್ಧಾರ ಮಾಡಲಾಗಿದ್ದು, ಶಾಸಕರ ಕಚೇರಿಗೆ ಮುತ್ತಿಗೆ ಹಾಕಲು ಬಿಜೆಪಿ ಜಿಲ್ಲಾ ಘಟಕ ಕರೆ ನೀಡಿದೆ. ನೇಗಿನಹಾಳ ಗ್ರಾಮದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಶಾಸಕ ಪಾಟೀಲ ಅವರು, ಆ ಬಿಜೆಪಿ ಮಕ್ಕಳು ನೋಡು ಹೆಂಗ ಬೈದಾಡುತ್ತಾನಾ ಅಂತಾರು. ಕಾಂಗ್ರೆಸ್ ಕಾರ್ಯಕರ್ತರ ಮೇಲೆ ನನಗಿರುವ ಆತ್ಮೀಯತೆಗೆ ಬಯ್ಯುತ್ತೇನೆ. ಆದರೆ, ಬಿಜೆಪಿ ಮಕ್ಕಳು ಶಾಸಕ ಹೇಗೆ ಬಯ್ಯುತ್ತಾನೆ ಎಂದು ಬಿಂಬಿಸುತ್ತಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಇದು ಬಿಜೆಪಿ ಕಾರ್ಯಕರ್ತರನ್ನು ಕೆರಳಿಸುವಂತೆ ಮಾಡಿದೆ. ಈ ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರು, ಮಾಜಿ ಶಾಸಕರು, ಜಿಲ್ಲೆಯ ಬಿಜೆಪಿ ಪಕ್ಷದ ಮುಖಂಡರು, ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿರಲಿದ್ದಾರೆ.