ಜಿಎಸ್‌ಟಿ ದರ ಇಳಿಕೆ ಸ್ವಾಗತಿಸಿದ ಬಿಜೆಪಿ ನಾಯಕರು

| Published : Sep 05 2025, 01:00 AM IST

ಜಿಎಸ್‌ಟಿ ದರ ಇಳಿಕೆ ಸ್ವಾಗತಿಸಿದ ಬಿಜೆಪಿ ನಾಯಕರು
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರವು ಜಿಎಸ್‌ಟಿ ತೆರಿಗೆ ದರವನ್ನು ಎರಡು ಸ್ಲ್ಯಾಬ್‌ಗಳಿಗೆ ಇಳಿಸಿರುವುದನ್ನು ಜಿಲ್ಲಾ ಬಿಜೆಪಿ ನಾಯಕರು ಸ್ವಾಗತಿಸಿದ್ದಾರೆ.

ಶಿವಮೊಗ್ಗ: ಕೇಂದ್ರ ಸರ್ಕಾರವು ಜಿಎಸ್‌ಟಿ ತೆರಿಗೆ ದರವನ್ನು ಎರಡು ಸ್ಲ್ಯಾಬ್‌ಗಳಿಗೆ ಇಳಿಸಿರುವುದನ್ನು ಜಿಲ್ಲಾ ಬಿಜೆಪಿ ನಾಯಕರು ಸ್ವಾಗತಿಸಿದ್ದಾರೆ.

ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕುರಿತು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೇಂದ್ರ ಸರ್ಕಾರವು ಜಿಎಸ್‌ಟಿ ತೆರಿಗೆ ದರವನ್ನು ಎರಡು ಸ್ಲ್ಯಾಬ್‌ಗಳಿಗೆ ಇಳಿಸಿರುವುದು ಒಂದು ಐತಿಹಾಸಿಕ ನಿರ್ಧಾರವಾಗಿದೆ. ಆದರೆ, ರಾಜ್ಯ ಸರ್ಕಾರವು ಇದರಿಂದ ರಾಜ್ಯಕ್ಕೆ 14000 ಕೋಟಿ ರು. ನಷ್ಟವಾಗಲಿದೆ ಎಂದು ಹೇಳುವುದನ್ನು ನಿಲ್ಲಿಸಿ, ರಾಜ್ಯದ ಆರ್ಥಿಕತೆಯನ್ನು ಸುಧಾರಿಸಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಜಿಎಸ್‌ಟಿ ಕುರಿತ ನಿರ್ಧಾರವು ದೇಶದ ಜನರಿಗೆ ದೀಪಾವಳಿ ಉಡುಗೊರೆ. ಜಿಎಸ್‌ಟಿ ಕಡಿತದಿಂದ ಅಗತ್ಯ ವಸ್ತುಗಳ ಬೆಲೆ ಇಳಿಯಲು ಸಹಾಯವಾಗಲಿದ್ದು, ಇದು ಉತ್ಪಾದನಾ ಕ್ಷೇತ್ರಕ್ಕೆ ದೊಡ್ಡ ಶಕ್ತಿಯನ್ನು ತುಂಬಿ ಬಡವರು ಮತ್ತು ಮಧ್ಯಮ ವರ್ಗದವರಿಗೆ ಹೆಚ್ಚು ಅನುಕೂಲ ಮಾಡಿಕೊಡಲಿದೆ ಎಂದು ತಿಳಿಸಿದರು.ಕೇಂದ್ರದ ಈ ನಿರ್ಧಾರವು 2047ರ ವೇಳೆಗೆ ಭಾರತವನ್ನು ವಿಕಸಿತ ರಾಷ್ಟ್ರವನ್ನಾಗಿ ಮಾಡುವ ಗುರಿಗೆ ಪ್ರಮುಖ ಹೆಜ್ಜೆಯಾಗಿದೆ. ಕಳೆದ ಹತ್ತು ವರ್ಷಗಳಲ್ಲಿ ಭಾರತವು ವಿಶ್ವದ ಆರ್ಥಿಕತೆಯಲ್ಲಿ 11ನೇ ಸ್ಥಾನದಿಂದ 4ನೇ ಸ್ಥಾನಕ್ಕೆ ಏರಿದ್ದು, ಮುಂದಿನ ಕೆಲವೇ ವರ್ಷಗಳಲ್ಲಿ ಎರಡನೇ ಅತಿದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಹೇಳಿದರು.

ಜಿಎಸ್‌ಟಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಕನಸಿನ ಕೂಸು. ಅದನ್ನು ನನಸು ಮಾಡಿದ್ದು ನರೇಂದ್ರ ಮೋದಿ ಸರ್ಕಾರ. ಇದರಲ್ಲಿ ಯಾವುದೇ ರಾಜಕೀಯ ದುರಾಲೋಚನೆ ಇಲ್ಲ. ಜಿಎಸ್‌ಟಿ ಇಳಿಕೆಯಿಂದ ರಾಜ್ಯಕ್ಕೆ 14000 ಕೋಟಿ ರು. ನಷ್ಟವಾಗುತ್ತದೆ ಎಂದು ಟೀಕಿಸುವುದನ್ನು ಬಿಟ್ಟು ರಾಜ್ಯದ ಆರ್ಥಿಕತೆಯನ್ನು ಸುಧಾರಿಸಲು ಕ್ರಮಗಳನ್ನು ತೆಗೆದುಕೊಳ್ಳುವಂತೆ ಅವರು ರಾಜ್ಯ ಸರ್ಕಾರಕ್ಕೆ ಸಲಹೆ ನೀಡಿದರು.

''''''''ವಿಕಸಿತ ಭಾರತ'''''''' ದತ್ತ ದಿಟ್ಟ ಹೆಜ್ಜೆ: ಬಿವೈಆರ್‌

ದಸರಾ ಮತ್ತು ದೀಪಾವಳಿ ಹಬ್ಬಗಳು ಸಮೀಪಿಸುತ್ತಿರುವ ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರ, ದೇಶದ ಜನತೆಗೆ ಮಹತ್ವದ ತೆರಿಗೆ ಸುಧಾರಣೆಗಳ ಮೂಲಕ ಬೃಹತ್ ಕೊಡುಗೆಯನ್ನು ನೀಡಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.

ಈ ಸಂಬಂಧ ಪತ್ರಿಕಾ ಹೇಳಿಕೆ ನೀಡಿರುವ ಅವರು, ದೇಶದ ತೆರಿಗೆ ವ್ಯವಸ್ಥೆಯಲ್ಲಿ ಐತಿಹಾಸಿಕ ಬದಲಾವಣೆಗಳಿಗೆ ಅನುಮೋದನೆ ನೀಡಲಾಗಿದ್ದು, ಸಾಮಾನ್ಯ ನಾಗರಿಕರ ಜೀವನವನ್ನು ಮತ್ತಷ್ಟು ಸುಗಮಗೊಳಿಸುವ ನಿಟ್ಟಿನಲ್ಲಿ ಹಾಗೂ ವಿಕಸಿತ ಭಾರತ ನಿರ್ಮಾಣದತ್ತ ಇದೊಂದು ಮಹತ್ವಪೂರ್ಣ ನಿರ್ಣಯವಾಗಿದೆ ಎಂದಿದ್ದಾರೆ.ಈ ಬಾರಿಯ ಸ್ವಾತಂತ್ರ್ಯೋತ್ಸವ ಭಾಷಣದ ಸಂದರ್ಭದಲ್ಲಿ, ಪ್ರಧಾನಿ ನರೇಂದ್ರ ಮೋದಿಯವರು ಜಿಎಸ್‌ಟಿಯಲ್ಲಿ ಮುಂದಿನ ಪೀಳಿಗೆಯ ಸುಧಾರಣೆಗಳನ್ನು ಜಾರಿಗೆ ತರುವ ಬಗ್ಗೆ ಉಲ್ಲೇಖಿಸಿದಂತೆ, ಜಿಎಸ್‌ಟಿ ಮಂಡಳಿಯ 56ನೇ ಸಭೆಯಲ್ಲಿ ಶ್ರೀಸಾಮಾನ್ಯರ ಜೀವನ ಮಟ್ಟ ಸುಧಾರಣೆ ಮತ್ತು ಅವರ ಮೇಲಿನ ತೆರಿಗೆ ಭಾರ ಇಳಿಸುವ ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ಅನುಮೋದನೆ ನೀಡಿದೆ. ಜಾಗತಿಕ ಸವಾಲುಗಳ ನಡುವೆಯೂ ಕೂಡ ನಮ್ಮ ಅನ್ನದಾತ ರೈತರು, ಸಣ್ಣ ಮತ್ತು ಮಾಧ್ಯಮ ಕೈಗಾರಿಕೆಗಳು, ಮಹಿಳೆಯರು ಮತ್ತು ನಮ್ಮ ಯುವ ಜನತೆಗೆ ಹೆಚ್ಚಿನ ಪ್ರಯೋಜನ ಒದಗಿಸುವ ಜಿಎಸ್‌ಟಿ ದರ ಕಡಿತ ಮತ್ತು ಸುಧಾರಣೆಗಳು, ದಸರಾ ಹಬ್ಬದ ಮೊದಲ ದಿನದಿಂದಲೇ ಜಾರಿಗೆ ಬರಲಿದೆ ಎಂದು ತಿಳಿಸಿದ್ದಾರೆ.

ಜಿಎಸ್‌ಟಿ ಸುಧಾರಣೆಯ ಐತಿಹಾಸಿಕ ಘೋಷಣೆ

ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಜನಾಕಾಂಕ್ಷೆಯಲ್ಲಿದ್ದ ಜಿಎಸ್‌ಟಿ ಸುಧಾರಣೆಗಳನ್ನು ಜಾರಿಗೆ ತಂದಿರುವುದು ದೇಶಾದ್ಯಂತ ಹರ್ಷ ಹಾಗೂ ಆಶಾಭಾವನೆ ಮೂಡಿಸಿದೆ. ಈ ನಿರ್ಧಾರವು ಕೇವಲ ತೆರಿಗೆ ವ್ಯವಸ್ಥೆಯ ಬದಲಾವಣೆಯಲ್ಲ, ಇದು ಆರ್ಥಿಕ ಪಾರದರ್ಶಕತೆ, ವ್ಯವಹಾರ ಸುಲಭತೆ ಮತ್ತು ಜನಸ್ನೇಹಿ ಆಡಳಿತದ ಹೊಸ ಅಧ್ಯಾಯವಾಗಿದೆ ಎಂದು ಶಾಸಕ ಚನ್ನಬಸಪ್ಪ ಹೇಳಿದ್ದಾರೆ.

"ಒಂದು ರಾಷ್ಟ್ರ-ಒಂದು ತೆರಿಗೆ – ಒಂದು ಮಾರುಕಟ್ಟೆ " ಎಂಬ ಪ್ರಧಾನಮಂತ್ರಿಯವರ ದೃಷ್ಟಿಕೋನವನ್ನು ಮತ್ತಷ್ಟು ಬಲಪಡಿಸುವ ಈ ನಿರ್ಧಾರ, ಭಾರತದ ಆರ್ಥಿಕತೆಗೆ ಶಕ್ತಿ ನೀಡಿ ಜಾಗತಿಕ ಮಟ್ಟದಲ್ಲಿ ನಮ್ಮ ದೇಶದ ಆರ್ಥಿಕತೆಯನ್ನು ಬಲಿಷ್ಠಗೊಳಿಸುವಲ್ಲಿ ಇದು ಐತಿಹಾಸಿಕ ಹೆಜ್ಜೆಯಾಗಿದೆ ಎಂದು ತಿಳಿಸಿದ್ದಾರೆ.