ಸಾರಾಂಶ
ಕನ್ನಡಪ್ರಭ ವಾರ್ತೆ ಕೊಪ್ಪಳ
ವಾಲ್ಮೀಕಿ ನಿಗಮದ ಅವ್ಯವಹಾರ, ಭ್ರಷ್ಟಾಚಾರದ ನೈತಿಕೆ ಹೊಣೆ ಹೊತ್ತು ಸಿ.ಎಂ. ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾಡಳಿತ ಭವನದ ಎದುರು ಬಿಜೆಪಿ ನಡೆಸಿದ ಪ್ರತಿಭಟನೆಯಲ್ಲಿ ಹೈಡ್ರಾಮಾವೇ ನಡೆದು ಹೋಯಿತು. ಬ್ಯಾರಿಕೇಡ್ ಏರಿ ಒಳನುಗ್ಗಿದ ಬಿಜೆಪಿ ನಾಯಕರು, ಡಿಸಿ ಕಚೇರಿಗೆ ನುಗ್ಗಲು ಯತ್ನಿಸಿದಾಗ ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದರು.ನಗರದ ಅಶೋಕ ವೃತ್ತದಿಂದ ಪ್ರಾರಂಭವಾದ ಬೃಹತ್ ಪ್ರತಿಭಟನಾ ಮೆರವಣಿಗೆ, ಸರ್ಕಾರದ ವಿರುದ್ಧ ಮತ್ತು ಸಿ.ಎಂ. ವಿರುದ್ಧ ಘೋಷಣೆ ಕೂಗುತ್ತಾ ಜಿಲ್ಲಾಡಳಿತ ಭವನದತ್ತ ತೆರಳಿತು. ಈ ಸಂದರ್ಭದಲ್ಲಿ ಹೆದ್ದಾರಿಯಲ್ಲಿ ಗಂಟೆಗಟ್ಟಲೇ ಪ್ರತಿಭಟನೆ ನಡೆಸಿದ್ದರಿಂದ ಟ್ರಾಫಿಕ್ ಜಾಮ್ ಆಯಿತು.
ಹೆದ್ದಾರಿಯಲ್ಲಿಯೇ ಟೈರ್‌ಗೆ ಬೆಂಕಿ ಹಾಕಿ, ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರ ಆಕ್ರೋಶದ ಕಟ್ಟೆಯೊಡೆದಿತ್ತು. ಪೊಲೀಸರು ಪರಿಸ್ಥಿತಿ ತಿಳಿಗೊಳಿಸುವ ಯತ್ನಿಸಿದಾಗ ಪ್ರತಿಭಟನಾಕಾರರ ಜೊತೆ ಮಾತಿನ ಚಕಮಕಿ ನಡೆಯಿತು.ಹಲವು ನಾಯಕರು ಬ್ಯಾರಿಕೇಡ್ ಏರಿ ಒಳನುಗ್ಗಿದರು. ಇತ್ತ ಹೆದ್ದಾರಿಯಲ್ಲಿ ಪ್ರತಿಭಟನೆ ಮಾಡುತ್ತಿದ್ದವರೂ ಸಹ ನಾಯಕರ ಭಾಷಣ ಮುಗಿಯುತ್ತಿದ್ದಂತೆಯೇ ಜಿಲ್ಲಾಡಳಿತದ ಒಳ ನುಗ್ಗಲು ಯತ್ನಿಸಿದರು. ಗೇಟ್ ಎದುರು ಹಾಕಿದ್ದ ಬ್ಯಾರಿಕೇಡ್ ಏರಲು ಮುಂದಾದಾಗ ಪೊಲೀಸರು ಅವಕಾಶ ನೀಡಲಿಲ್ಲ. ಆಗ ಪೊಲೀಸರು- ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ, ತಳ್ಳಾಟ, ನೂಕಾಟ ನಡೆಯಿತು.
ಈ ಮಧ್ಯೆ ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ, ಶಾಸಕರಾದ ಗಾಲಿ ಜನಾರ್ದನರೆಡ್ಡಿ, ದೊಡ್ಡನಗೌಡ, ಮಾಜಿ ಶಾಸಕ ಪರಣ್ಣ ಮುನುವಳ್ಳಿ ಹಾಗೂ ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಅವರು ಬ್ಯಾರಿಕೇಡ್ ಎದುರು ಹೈಡ್ರಾಮಾ ನಡೆಸಿದರು.ಗಾಲಿ ಜನಾರ್ದನರೆಡ್ಡಿ ಮತ್ತು ನವೀನ್ ಗುಳಗಣ್ಣವರ ಬ್ಯಾರಿಕೇಡ್ ಏರಿ ಪ್ರತಿಭಟನೆ ನಡೆಸಿದ್ದು ಅಲ್ಲದೆ ಒಳನುಗ್ಗಿದ್ದರು. ಇವರು ಒಳನುಗ್ಗುತ್ತಿದ್ದಂತೆ ಅನೇಕರು ಒಳನುಗ್ಗಿದರು.
ಜಿಲ್ಲಾಡಳಿತ ಭವನದ ಎದುರು ಕೆಲಕಾಲ ಭಾರಿ ಗಲಾಟೆಯೇ ನಡೆದಿದ್ದರಿಂದ ಪರಿಸ್ಥಿತಿ ಕೈಮಿರುತ್ತದೆ ಎಂದು ಪೊಲೀಸರು ಪ್ರತಿಭಟನಾಕಾರರನ್ನು ಚದುರಿಸುವ ಯತ್ನ ನಡೆಸಿದರು. ಜಿಲ್ಲಾಡಳಿತ ಭವನದ ಒಳಗೆ ನುಗ್ಗಿದವರು, ಡಿಸಿ ಕಚೇರಿಯ ಒಳಗೆ ಹೋಗಲು ಪ್ರಯತ್ನ ಮಾಡಿದ್ದರಿಂದ ಬಾಗಿಲು ಬಂದ್ ಮಾಡಲಾಯಿತು. ಆದರೆ ವಿಪ ಸದಸ್ಯೆ ಹೇಮಲತಾ ನಾಯಕ ಡಿಸಿ ಕಚೇರಿಯ ಒಳಗೂ ನುಗ್ಗಿ ಕಚೇರಿಯ ಎದುರೇ ಕೆಲ ಕಾಲ ಒಬ್ಬಂಟಿಯಾಗಿ ಪ್ರತಿಭಟನೆ ನಡೆಸಿದರು. ಡಿಸಿ ಕಚೇರಿಯ ಬಾಗಿಲ ಬಳಿ ಪ್ರತಿಭಟನೆ ನಡೆಸುತ್ತಿದ್ದವರನ್ನು ಬಂಧಿಸಿ ಕರೆದೊಯ್ಯಲಾಯಿತು.ವಾಗ್ದಾಳಿ
ಸಿ.ಎಂ. ಸಿದ್ದರಾಮಯ್ಯ ಅವರು ಕೂಡಲೇ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ನಾಯಕರು ತೀವ್ರ ವಾಗ್ದಾಳಿ ನಡೆದಿರು.₹187 ಕೋಟಿ ಅಕ್ರಮ ನಡೆಯುವುದಕ್ಕೆ ಕೇವಲ ಸಚಿವರ ಸಮ್ಮತಿ ಸಾಲದು, ಸಿ.ಎಂ. ಅವರ ಬೆಂಬಲ ಇಲ್ಲದೆ ದೊಡ್ಡಮಟ್ಟದ ಹಣ ವರ್ಗಾವಣೆ ಸಾಧ್ಯವೇ ಇಲ್ಲ. ಆದ್ದರಿಂದ ಸಚಿವ ನಾಗೇಂದ್ರ ಅವರ ರಾಜೀನಾಮೆ ನೀಡಿದರೆ ಸಾಲದು ಸಿ.ಎಂ. ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುವಂತೆ ವಾಗ್ದಾಳಿ ಮಾಡಿದರು.
ಮುಖಂಡರಾದ ರಾಜು ನಾಯಕ, ವಿರೂಪಾಕ್ಷಪ್ಪ ಸಿಂಗನಾಳ, ಗಿರಿಗೌಡ ಎಚ್., ತಿಪ್ಪೇರುದ್ರಸ್ವಾಮಿ, ಕೆ.ಜಿ. ಕುಲಕರ್ಣಿ, ಗಣೇಶ ಹೊರತಟ್ನಾಳ, ಸೋಮಶೇಖರಗೌಡ, ಪ್ರದೀಪಕುಮಾರ, ಮಹಾಲಕ್ಷ್ಮೀ ಕಂದಾರಿ, ಕೀರ್ತಿ ಪಾಟಿಲ್ ಮೊದಲಾದವರು ಇದ್ದರು.