ಗದಗ: ಗುತ್ತಿಗೆದಾರನಿಗೆ ಜೀವಬೆದರಿಕೆ ಹಾಕಿ ಶೇ. 12ರಷ್ಟು ಹಣಕ್ಕೆ ಡಿಮ್ಯಾಂಡ್ ಇಟ್ಟಿದ್ದ ಆರೋಪದಡಿ ಶಿರಹಟ್ಟಿ ಕ್ಷೇತ್ರದ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ ಹಾಗೂ ಅವರ ಆಪ್ತ ಸಹಾಯಕರನ್ನು ಶನಿವಾರ ತಡರಾತ್ರಿ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ.
ಶನಿವಾರ ಮಧ್ಯಾಹ್ನವೇ ನಡೆದ ದಾಳಿಯ ನಂತರ, ಸತತ 11 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದು, ತಡರಾತ್ರಿ 1.35ಕ್ಕೆ ಲಕ್ಷ್ಮೇಶ್ವರದಲ್ಲಿರುವ ಶಾಸಕರ ಒಡೆತನ ಆಸ್ಪತ್ರೆಯಿಂದಲೇ ಅವರನ್ನು ಬಂಧಿಸಲಾಗಿದೆ. ಬಂಧಿತ ಶಾಸಕರನ್ನು ಗದಗ ನಗರದಲ್ಲಿರುವ ಜಿಲ್ಲಾ ಆಸ್ಪತ್ರೆಯಲ್ಲಿ ಬೆಳಗಿನ ಜಾವ 3.30ರ ವರೆಗೂ ಆರೋಗ್ಯ ತಪಾಸಣೆ ನಡೆಸಿದ ಆನಂತರ ಲೋಕಾಯುಕ್ತ ಪೊಲೀಸರು ಅವರನ್ನು ಬೆಂಗಳೂರಿನಲ್ಲಿರುವ ಜನಪ್ರತಿನಿಧಿಗಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ಈ ಪ್ರಕರಣದಲ್ಲಿ ಕೇವಲ ಶಾಸಕರಷ್ಟೇ ಅಲ್ಲದೆ, ಅವರ ಪ್ರತಿಯೊಂದು ವ್ಯವಹಾರದ ಕೊಂಡಿಯಾಗಿದ್ದ ಆಪ್ತ ಸಹಾಯಕರಾದ ಮಂಜುನಾಥ ವಾಲ್ಮೀಕಿ ಮತ್ತು ಗುರು ಲಮಾಣಿ ಅವರನ್ನೂ ಬಂಧಿಸಲಾಗಿದೆ. ಶಾಸಕ ಚಂದ್ರು ಲಮಾಣಿ ಹಾಗೂ ಅವರ ಆಪ್ತ ಸಹಾಯಕರನ್ನು ಪ್ರತ್ಯೇಕ ವಾಹನಗಳಲ್ಲಿ ಬೆಳಗಿನ ಜಾವ ಕರೆದುಕೊಂಡು ಹೋಗಲಾಯಿತು.
ಆಡಿಯೋಗಳು ಬಹಿರಂಗ: ಗುತ್ತಿಗೆದಾರರಿಂದ ₹5 ಲಕ್ಷ ಲಂಚ ಪಡೆಯುತ್ತಿದ್ದ ವೇಳೆ ಸಿಕ್ಕಿ ಬಿದ್ದಿರುವ ಶಾಸಕ ಡಾ. ಚಂದ್ರು ಲಮಾಣಿ ಅವರದ್ದು ಎನ್ನಲಾದ ಆಡಿಯೋಗಳು ಭಾನುವಾರ ಬೆಳಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದ್ದು, ಆಡಿಯೋದಲ್ಲಿ ಶಾಸಕರು ಗುತ್ತಿಗೆದಾರರ ವಿಜಯರಾಜ ಪೂಜಾರ ಅವರಿಗೆ ಧಮ್ಕಿ ಹಾಕಿರುವುದು, ಹಣಕ್ಕಾಗಿ ಬೇಡಿಕೆ ಇಟ್ಟಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಆದರೆ ಇದನ್ನು ಶಾಸಕರು ಹಾಗೂ ಅವರ ಪರ ವಕೀಲರು ಅಲ್ಲಗಳೆಯಬಹುದು, ಆದರೆ ವಿಧಿ ವಿಜ್ಞಾನ ಪ್ರಯೋಗಾಲಯದಲ್ಲಿ ಧ್ವನಿ ಪರೀಕ್ಷೆ ನಡೆದಾಗಲೇ ಖಚಿತತೆ ಬರುತ್ತದೆ ಎನ್ನುವ ಚರ್ಚೆ ಜಿಲ್ಲೆಯ ರಾಜಕೀಯ ವಲಯದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ.ಬಿಕೋ ಎನ್ನುತ್ತಿದೆ ಶಾಸಕರ ಮನೆ ಶಾಸಕರ ಬಂಧನವಾಗುತ್ತಿದ್ದಂತೆ ಅವರ ಲಕ್ಷ್ಮೇಶ್ವರದ ಬಾಡಿಗೆ ಮನೆಯಲ್ಲಿ ಮೌನ ಆವರಿಸಿದೆ. ಯಾವಾಗಲೂ ನೂರಾರು ಕಾರ್ಯಕರ್ತರಿಂದ ತುಂಬಿರುತ್ತಿದ್ದ ಮಂಜುನಾಥ ಬಡಾವಣೆಯ ನಿವಾಸದಲ್ಲಿ ಈಗ ಕೇವಲ ಕೆಲಸಗಾರರು ಉಳಿದಿದ್ದಾರೆ. ಲೋಕಾಯುಕ್ತ ದಾಳಿಯ ಸುಳಿವು ಸಿಗುತ್ತಿದ್ದಂತೆ ಶಾಸಕರ ಪತ್ನಿ ಸರೋಜಾ ಅವರು ಆಸ್ಪತ್ರೆಯ ನೆಪ ಹೇಳಿ ಮಗುವಿನೊಂದಿಗೆ ಕಾರಿನಲ್ಲಿ ಬೇರೆಡೆ ತೆರಳಿದ್ದಾರೆ. ಮನೆಯ ಮುಂದೆ ಶಾಸಕರ ಪ್ರೀತಿಯ ಫಾರ್ಚುನರ್ ವಾಹನ ಅನಾಥವಾಗಿ ನಿಂತಿದೆ. ಸ್ವಾಮೀಜಿ ಎಂಟ್ರಿಶನಿವಾರ ಸ್ವಾಮೀಜಿಯೊಬ್ಬರು ನಮ್ಮ ಶಾಸಕರ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ ಎಂದು ಬಿಜೆಪಿ ಮುಖಂಡರು ಆರೋಪಿಸಿ ಬಿಡುಗಡೆ ಮಾಡಿದ ಆಡಿಯೋದಲ್ಲಿ ಮಾತನಾಡಿದ್ದ ಸ್ವಾಮೀಜಿ ಭಾನುವಾರ ಆಡಿಯೋ ಮೂಲಕವೇ ಸ್ಪಷ್ಟನೆ ನೀಡಿದ್ದು, ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಅವರು ಕೂಡಾ ಆಡಿಯೋದಲ್ಲಿ ಶಾಸಕರ ವಿರುದ್ಧ ಮಾತನಾಡಿದ್ದು ಸತ್ಯ. ಆದರೆ ಈ ಲೋಕಾಯುಕ್ತ ಟ್ರ್ಯಾಪ್‌ಗೂ ನನಗೂ ಸಂಬಂಧವಿಲ್ಲ ಎಂದು ಸ್ವಾಮೀಜಿ ಸ್ಪಷ್ಟನೆ ನೀಡಿದ್ದಾರೆ. ಶಾಸಕರು ನನಗೆ ತೊಂದರೆ ಮಾಡಿದ ವೇಳೆ ಸಿಟ್ಟಿನ ಭರದಲ್ಲಿ ಮಾತನಾಡಿದ್ದೇನೆ. ಆದರೆ ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಅವಶ್ಯವಿದ್ದರೆ ತನಿಖೆಗಾಗಿ ತಮ್ಮ ಎರಡು ಮೊಬೈಲ್ ಫೋನ್‌ಗಳನ್ನು ನೀಡಲು ಸಿದ್ಧವಿರುವುದಾಗಿ ಹೇಳಿದ್ದಾರೆ.ಶಾಸಕರದ್ದು ಎನ್ನಲಾದ ಆಡಿಯೋದಲ್ಲೇನಿದೆ?ಗುತ್ತಿಗೆದಾರ ವಿಜಯರಾಜ ಪೂಜಾರ ಮತ್ತು ಶಾಸಕರ ನಡುವಿನ ಸಂಭಾಷಣೆ ಈಗ ರಾಜ್ಯಾದ್ಯಂತ ವೈರಲ್ ಆಗಿದೆ. ಆಡಿಯೋದಲ್ಲಿರುವ ಶಾಸಕರ ರೌಡಿಸಂ ಶೈಲಿಯ ಮಾತುಗಳು ಇಲ್ಲಿವೆ.
ಶಾಸಕ: ಪ್ರೀತಿ ವಿಶ್ವಾಸಕ್ಕೆ ಹೇಳಿದ್ರೆ ಹೀಗೆಲ್ಲ ನಾಟಕ ಮಾಡ್ತೀಯಾ? ಯಲ್ಲಮ್ಮಗೆ ಹೋಗಿದ್ದೆ, ಮಲ್ಲಮ್ಮಗೆ ಹೋಗಿದ್ದೆ ಅಂತ ಕಥೆ ಹೇಳ್ತೀಯಾ? ನಿಮ್ಮ ತಾಲೂಕಿನಲ್ಲಿ ಮಾಡಿದ ಹಾಗೆ ಇಲ್ಲಿ ಮಾಡಿದ್ರೆ ನಡ ಮುರೀತಿನಿ ಎಚ್ಚರಿಕೆ!ಗುತ್ತಿಗೆದಾರ: ಸ್ವಲ್ಪ ಅಮೌಂಟ್ ಪ್ರಾಬ್ಲಂ ಇತ್ತು ಸರ್. ಇದೊಂದು ಸಾರಿ ತಪ್ಪಾಗಿದೆ.. ಎರಡು (ಶೇ. 2) ಅಂತ ಅಂದಿದ್ರಿ.
ಶಾಸಕ: ಹೇ ಬಿಡೋ. ನನಗೇನು ಗೊತ್ತಿಲ್ವಾ? ಕನ್ಪೂಷನ್ ಮಾಡ್ತಿಯಾ? ಹೇ ಅದು (ಹಣ) ಕೊಡದಿದ್ರೆ ವರ್ಕ್ ಆರ್ಡರ್ ಕ್ಯಾನ್ಸಲ್ ಮಾಡು, ರೀ- ಟೆಂಡರ್ ಮಾಡು ಅಂತ ಮಂಜುನಾಥ್‌ಗೆ (ಪಿಎ) ಈಗಲೇ ಹೇಳ್ತೀನಿ.
ಹೀಗೆ ಗುತ್ತಿಗೆದಾರನಿಗೆ ಶಾಸಕರು ಅವಾಜ್ ಹಾಕಿದ ಆಡಿಯೋ ಸಂಭಾಷಣೆ ಸಾಗುತ್ತಲೇ ಹೋಗುತ್ತದೆ. ಇದು ಜಿಲ್ಲೆಯ ರಾಜಕೀಯ ವಲಯದಲ್ಲಿ ಮಾತ್ರವಲ್ಲ, ರಾಜ್ಯ ರಾಜಕಾರಣದಲ್ಲಿಯೇ ಸಂಚಲನಕ್ಕೆ ಕಾರಣವಾಗಿದೆ.