ಬಿಜೆಪಿ ಸಂಸದರು ಶೋ ಪೀಸ್‌ಗಳು: ಶಾಸಕ ಬಾಲಕೃಷ್ಣ

| Published : Feb 06 2024, 01:31 AM IST

ಸಾರಾಂಶ

ರಾಮನಗರ: ದಕ್ಷಿಣ ಭಾರತದ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸದಿದ್ದರೆ ಪ್ರತ್ಯೇಕ ದೇಶದ ಧ್ವನಿ ಏಳುತ್ತದೆ ಅಂತ ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ. ಅನ್ಯಾಯವಾದಾಗ ಪ್ರತಿಭಟಿಸೋದು ತಪ್ಪಾ. ಇಲ್ಲ ಬಿಜೆಪಿ ಸಂಸದರಂತೆ ಶೋ ಪೀಸ್ ಆಗಿರಬೇಕಾ ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ. ಬಾಲಕೃಷ್ಣ ವ್ಯಂಗ್ಯವಾಡಿದರು.

ರಾಮನಗರ: ದಕ್ಷಿಣ ಭಾರತದ ರಾಜ್ಯಗಳಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸದಿದ್ದರೆ ಪ್ರತ್ಯೇಕ ದೇಶದ ಧ್ವನಿ ಏಳುತ್ತದೆ ಅಂತ ಸಂಸದ ಡಿ.ಕೆ. ಸುರೇಶ್ ಹೇಳಿದ್ದಾರೆ. ಅನ್ಯಾಯವಾದಾಗ ಪ್ರತಿಭಟಿಸೋದು ತಪ್ಪಾ. ಇಲ್ಲ ಬಿಜೆಪಿ ಸಂಸದರಂತೆ ಶೋ ಪೀಸ್ ಆಗಿರಬೇಕಾ ಎಂದು ಮಾಗಡಿ ಕ್ಷೇತ್ರ ಶಾಸಕ ಎಚ್.ಸಿ. ಬಾಲಕೃಷ್ಣ ವ್ಯಂಗ್ಯವಾಡಿದರು.

ಮಾಗಡಿ ಕ್ಷೇತ್ರ ವ್ಯಾಪ್ತಿಯ ಕೂಟಗಲ್ ಹೋಬಳಿಯ ನಾಗರಕಲ್ಲುದೊಡ್ಡಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದೇಶ ವಿಭಜನೆ ಆಗಬೇಕು ಅಂತ ಸಂಸದ ಡಿ.ಕೆ. ಸುರೇಶ್ ಹೇಳಿಲ್ಲ. ದೇಶ ಒಡೆಯಬೇಕು ಅನ್ನುವ ಉದ್ದೇಶ ಯಾರಿಗೂ ಇಲ್ಲ. ಸುರೇಶ್ ಹೇಳಿಕೆಯನ್ನು ಬಿಜೆಪಿಯವರು ಮತ್ತು ಮಾಧ್ಯಮಗಳು ಅದನ್ನು ತಿರುಚಿವೆ ಎಂದರು.

ದೇಶ ಕಟ್ಟಿದ್ದು ಇದೇ ಕಾಂಗ್ರೆಸ್ ಪಕ್ಷ. ಆದರೆ, ನಮಗಾಗುತ್ತಿರುವ ಅನ್ಯಾಯವನ್ನು ಸರಿಮಾಡಬೇಕು. ಅದಕ್ಕಾಗಿ ಹೋರಾಟ ಮಾಡಬೇಕಿದೆ. ಅನುದಾನದ ವಿಚಾರವಾಗಿ ಬಹಿರಂಗ ಚರ್ಚೆಗೆ ಬರಲಿ ಎಂದು ಬಿಜೆಪಿ ನಾಯಕರಿಗೆ ಆಹ್ವಾನ ನೀಡಿದರು.

ದೇಶದಲ್ಲಿ ಅತಿಹೆಚ್ಚು ತೆರಿಗೆ ಸಂಗ್ರಹಿಸುವ ರಾಜ್ಯಗಳ ಪೈಕಿ ಕರ್ನಾಟಕ 2ನೇ ಸ್ಥಾನದಲ್ಲಿದೆ. ಆ ತೆರಿಗೆ ಹಣವನ್ನು ಎಲ್ಲ ರಾಜ್ಯಗಳಿಗೂ ಹಂಚಿಕೆ ಮಾಡುತ್ತಿದೆ. ಈ ಬಗ್ಗೆ ನಮಗೆ ತಕರಾರು ಇಲ್ಲ. ಆದರೆ, ಕರ್ನಾಟಕಕ್ಕೆ ಸಿಗಬೇಕಾದ ಅನುದಾನವನ್ನು ಕೇಂದ್ರ ಸರ್ಕಾರ ನೀಡುತ್ತಿಲ್ಲ. ಅದಕ್ಕಾಗಿ ಒತ್ತಾಯ ಮಾಡುತ್ತಿದ್ದೇವೆ ಎಂದು ಹೇಳಿದರು.

ಕರ್ನಾಟಕದಿಂದ ಆಯ್ಕೆಯಾಗಿರುವ ಹೋಗಿರುವ ಬಿಜೆಪಿ ಸಂಸದರು ಪ್ರಧಾನಿ ಮೋದಿ ಎದುರು ಎದ್ದೆಳುವುದು ಇಲ್ಲ, ಕೂರುವುದು ಇಲ್ಲ. ಕೇವಲ ಬಸ್ಕಿ ಹೊಡೆದು ಬರುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ನಾವಿದ್ದೀವಿ. ಇವರೆಲ್ಲರು ಮೋದಿ ಹೆಸರಿನಲ್ಲಿ ಗೆಲ್ಲುತ್ತಾರೆಯೋ ಹೊರತು ಯಾರಿಗೂ ವೈಯಕ್ತಿಕ ವರ್ಚಸ್ಸು ಎಂಬುದಿಲ್ಲ.

ಶೋ ಪೀಸ್ ಗಳಾಗಿರುವ ಸಂಸದರು:

ತಮಿಳುನಾಡಿನ ಸಂಸದರು ತಮ್ಮ ರಾಜ್ಯದ ಹಕ್ಕಿಗಾಗಿ ಹೋರಾಟ ಮಾಡುತ್ತಾರೆ. ಅಂತಹ ಮನೋಭಾವನೆಯನ್ನು ಬೆಳೆಸಿಕೊಳ್ಳದ ಬಿಜೆಪಿ ಸಂಸದರು ದೆಹಲಿಯಲ್ಲಿ ಶೋ ಪೀಸ್ ಗಳಾಗಿದ್ದಾರೆ. ಟಿಎ - ಡಿಎ ತೆಗೆದುಕೊಂಡು ಬರುವುದನ್ನು ಬಿಟ್ಟರೆ ಬೇರೇನೂ ಮಾಡುತ್ತಿಲ್ಲ. ಮುಂಬರುವ ಸಂಸತ್ ಚುನಾವಣೆಯಲ್ಲಿ ಇಂತಹವರಿಗೆ ಜನರು ತಕ್ಕ ಪಾಠ ಕಲಿಸಬೇಕು ಎಂದರು.

ಸಂಸದರು - ಸಚಿವರಿಗೆ ಕರ್ನಾಟಕದ ಬಗ್ಗೆ ಕಾಳಜಿ ಇಲ್ಲ. ಈವರೆಗೆ ಯಾರೊಬ್ಬರು ನಾಡಿನ ಬಗ್ಗೆ ಧ್ವನಿ ಎತ್ತಿಲ್ಲ. ನಮ್ಮ ಹೋರಾಟವನ್ನಾದರು ನೋಡಿ ಬಿಜೆಪಿಯಲ್ಲಿರುವ ಗಂಡಸರಾದರು ಧ್ವನಿ ಎತ್ತುತ್ತಾರೆ ಅಂದು ಕೊಂಡಿದ್ದೇವೆ. ಯಾವ ಬಿಜೆಪಿ ಸಂಸದ ರಾಜ್ಯದ ಸಮಸ್ಯೆ ಬಗ್ಗೆ ಪ್ರಶ್ನೆ ಕೇಳಿದ್ದಾರ ಹೇಳಲಿ ಎಂದು ಸವಾಲು ಹಾಕಿದರು.

ಮನಮೋಹನ್ ಸಿಂಗ್ ಅವಧಿಯಲ್ಲಿ ಬಜೆಟ್ ಗಾತ್ರ ಎಷ್ಟಿತ್ತು. ಈಗ ಮೋದಿ ಅವಧಿಯಲ್ಲಿ ಎಷ್ಟಾಗಿದೆ ಎಂಬುದನ್ನು ನೋಡಲಿ. ಅದನ್ನು ತುಲನೆ ಮಾಡಲಿ. ಆನಂತರ ಅನುದಾನ ಹಂಚಿಕೆ ವಿಚಾರವಾಗಿ ಚರ್ಚೆಗೆ ಬರಲಿ ಎಂದು ಬಾಲಕೃಷ್ಣ ಪಂಥಾಹ್ವಾನ ನೀಡಿದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರಕ್ಕೆ ಮೈತ್ರಿ ಅಭ್ಯರ್ಥಿ ಹುಡುಕಾಟ ವಿಚಾರಕ್ಕೆ ಪ್ರತಿಕ್ರಿಯಿಸಿದ ಬಾಲಕೃಷ್ಣ, ಕಾಂಗ್ರೆಸ್ ಅಭ್ಯರ್ಥಿ ಸುರೇಶ್ ಅವರನ್ನು ಎದುರಿಸುವಂತ ಅಭ್ಯರ್ಥಿ ಅವರಲ್ಲಿ ಇಲ್ಲ ಎಂದರು.

ಲೋಕಸಭಾ ಸದಸ್ಯ ಜನಸಾಮಾನ್ಯರ ಜೊತೆ ಬೆರೆತು ಕೆಲಸ ಮಾಡಬಹುದು ಎಂಬುದನ್ನು ಸುರೇಶ್ ತೋರಿಸಿಕೊಟ್ಟಿದ್ದಾರೆ. ಈ ವಿಚಾರವಾಗಿ ಬೇಕಿದ್ದರೆ ಸಾರ್ವಜನಿಕವಾಗಿ ಚರ್ಚೆಗೆ ಬರಲಿ ಎಂದು ಸವಾಲು ಹಾಕಿದರು.

ಅವರಿಗೆ ಅಭ್ಯರ್ಥಿನೆ ಇಲ್ಲ. ಡಿ.ಕೆ ಸುರೇಶ್ ವಿರುದ್ಧ ಮೈತ್ರಿ ವರ್ಕೌಟ್ ಆಗುವುದಿಲ್ಲ. ಮಾಜಿ ಸಿಎಂ ಕುಮಾರಸ್ವಾಮಿ , ಮಾಜಿ ಸಚಿವ ಯೋಗೇಶ್ವರ್ ಮೊದಲು ಸ್ಪರ್ಧೆ ಮಾಡುವ ಧೈರ್ಯ ತೋರಿಸಲಿ ಆನಂತರ ಮಾತನಾಡುತ್ತೇನೆ ಎಂದು ಹೇಳಿದರು.

ಕೋಟ್ .............

ಯಾವ ಭಾಗ್ಯನು ನಮ್ಮಪ್ಪನ ಮನೆಯಿಂದಾಗಲಿ ಅಥವಾ ಕುಮಾರಸ್ವಾಮಿರವರ ಅಪ್ಪನ ಮನೆಯಿಂದಾಗಲಿ ತಂದುಕೊಡುವುದಿಲ್ಲ. ಅಧಿಕಾರಕ್ಕೆ ಬಂದ ಒಂದೊಂದು ಸರ್ಕಾರಗಳು ಕಾರ್ಯಕ್ರಮ ನೀಡುತ್ತವೆ. ಅದಕ್ಕೆಲ್ಲ ಯಾರಪ್ಪನ ಮನೆಯಿಂದಲೂ ಹಣ ತಂದು ಖರ್ಚು ಮಾಡುವುದಿಲ್ಲ. ಆ ರೀತಿ ಮಾತನಾಡುವುದು ಕುಮಾರಸ್ವಾಮಿ ಘನತೆಗೆ ತಕ್ಕದಲ್ಲ. ಪಾಪ ಅವರು ಮಾನಸಿಕ ಸ್ಥಿಮಿತತೆ ಕಳೆದುಕೊಂಡಂತಿದೆ.

- ಎಚ್.ಸಿ. ಬಾಲಕೃಷ್ಣ, ಶಾಸಕರು, ಮಾಗಡಿ ಕ್ಷೇತ್ರ5ಕೆಆರ್ ಎಂಎನ್ 3.ಜೆಪಿಜಿ

ಶಾಸಕ ಬಾಲಕೃಷ್ಣ